ಕಟೀಲು ದೇಗುಲದಿಂದ 400 ಮಕ್ಕಳಿಗೆ ಊಟ ಪೂರೈಕೆ

By Mithuna Kodethoor

ಪುರಾಣ ಪ್ರಸಿದ್ಧ ಕಟೀಲು ಶ್ರೀ ಭ್ರಾಮರೀ ದುರ್ಗಾಪರಮೇಶ್ವರೀ ದೇಗುಲ ಕಾರ್ಣಿಕ, ಶಾಲೆಗಳು, ಯಕ್ಷಗಾನದಷ್ಟೇ ಪ್ರಸಿದ್ಧಿ ಹೊಂದಿರುವುದು ಅನ್ನದಾನಕ್ಕೆ. ದೇಗುಲದಲ್ಲಿ ದಿನಂಪ್ರತಿ ಐದರಿಂದ ಹತ್ತು ಸಾವಿರದಷ್ಟು ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಾರೆ. ಇಲ್ಲಿನ ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಎರಡೂವರೆ ಸಾವಿರ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ದೇವಸ್ಥಾನದಿಂದಲೇ ನಡೆಯುತ್ತಿದೆ. ವಾರ್ಷಿಕ ಎರಡು ಕೋಟಿ ರುಪಾಯಿಗಳನ್ನು ಅನ್ನಪ್ರಾಸಾದಕ್ಕಾಗಿಯೇ ದೇಗುಲ ವೆಚ್ಚ ಮಾಡುತ್ತಿದೆ. ಹಾಗಾಗಿ ಇಲ್ಲಿನ ಅನ್ನದಾನ ಸೇವೆಗೆ ಹೆಚ್ಚು ಮಹತ್ವವಿದೆ. ದೇಗುಲದ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಸಾವಿರಾರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿರುವ ಕಾರಣಕ್ಕಾಗಿ ತಾವು ನೀಡಿದ ಕಾಣಿಕೆಯಿಂದಾಗಿ ಆತ್ಮ ಸಂತೃಪ್ತಿಯನ್ನು ಪಡೆಯುತ್ತಿದ್ದರು.
ಇದೀಗ ಅನ್ನದಾನ ಸೇವೆಗೆ ಕಾಣಿಕೆ ನೀಡುವವರು ಇನ್ನಷ್ಟು ಖುಷಿ ಹಾಗೂ ಕೃತಾರ್ಥ ಭಾವವನ್ನು ಹೊಂದಬಹುದು. ಕಾರಣ ಕಟೀಲು ದೇಗುಲ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಿಶೇಷ ಶಾಲೆಗಳ ನಾಲ್ಕು ನೂರು ವಿದ್ಯಾರ್ಥಿಗಳಿಗೆ ಊಟ ನೀಡುತ್ತಿದೆ. ಪ್ರತಿ ತಿಂಗಳು ಇದ್ದಕ್ಕಾಗಿ ಸುಮಾರು 1,25,000 ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.
ಕ್ರೈಸ್ತ ಸಂಸ್ಥೆಗಳು ನಡೆಸುವ ವಿಶೇಷ ಶಾಲೆಗಳ ಮಕ್ಕಳಿಗೂ ಊಟದ ಖರ್ಚು ಸಂದಾಯವಾಗುತ್ತಿರುವುದು ಕಟೀಲು ದೇಗುಲದಿಂದ ಎಂಬುದು ಮಹತ್ವದ, ಸಾಮರಸ್ಯದ ಸಂಗತಿಯಾಗಿದೆ.
ಮಂಗಳೂರಿನ ಸೈಂಟ್ ಆಗ್ನೇಸ್ ವಿಶೇಷ ಶಾಲೆ, ಚೇತನಾ ವಿಶೇಷ ಶಾಲೆ, ಸಾನಿಧ್ಯ ವಸತಿಯುತ ವಿಶೇಷ ಶಾಲೆ, ಸುರತ್ಕಲ್‌ನ ಲಯನ್ಸ್ ವಿಶೇಷ ಶಾಲೆ, ಕಿನ್ನಿಗೋಳಿ ಚರ್ಚ್ ನಡೆಸುವ ಸೈಂಟ್ ಮೇರೀಸ್ ವಿಶೇಷ ಶಾಲೆ, ಬೆಳ್ತಂಗಡಿ ವೇಣೂರಿನ ಕ್ರಿಸ್ತರಾಜ್ ನವಚೇತನ ಶಾಲೆ, ಸುಳ್ಯದ ಸಾಂದೀಪ ವಿಶೇಷ ಶಾಲೆಗಳ ಸುಮಾರು 400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಊಟಕ್ಕೆ ತಲಾ ರೂ.10ರಂತೆ ಕಟೀಲು ದೇಗುಲ ವ್ಯಯಿಸುತ್ತಿದೆ. ಕಳೆದ ಮೂರೂವರೆ ವರ್ಷಗಳಿಂದ ಕಟೀಲು ದೇಗುಲ ಜಿಲ್ಲೆಯ ವಿಶೇಷ ಶಾಲೆಗಳ ಮಕ್ಕಳ ಮಧ್ಯಾಹ್ನದ ಭೋಜನದ ಖರ್ಚು ವಹಿಸುತ್ತಿದೆ.


 

 

Comments

comments

Leave a Reply

Read previous post:
ಪುಂಡರೀಕ್ಷಾ ಉಪಾಧ್ಯಾಯ ಸನ್ಮಾನ

ಕಿನ್ನಿಗೋಳಿ ಸಾರ್ವಜನಿಕ ಬಯಲಾಟ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಷಷ್ಠಿಯ ಅಂಗವಾಗಿ ನಡೆದ ಕಟೀಲು ಮೇಳದ ವತಿಯಿಂದ ನಡೆದ ಬಯಲಾಟ ಸಂದರ್ಭ ಮೇಳದ ಹಿರಿಯ ಸ್ತ್ರೀ...

Close