ಆರಂಭ

ಆರಂಭಿಸುವ ತವಕ ಎಲ್ಲರಲ್ಲೂ ಇದ್ದೇ ಇದೆ. ಆದರೆ ಅದನ್ನು ಮುಂದುವರಿಸುವ ಉತ್ಸಾಹ ಎಷ್ಟು ಮಂದಿಯಲ್ಲಿ ಇದೆ? ಕೆಲವೊಮ್ಮೆ ಆರಂಭವೇ ಕೊನೆಯಾಗುವುದೂ ಉಂಟು! ಉದ್ಘಾಟಕರು ಉದ್ಘಾಟಿಸಿ ಹಿಂದಿರುಗಿದ ತಕ್ಷಣವೇ ಬಿದ್ದು ಹೋದ ಸೇತುವೆಗಳಿಲ್ಲವೇ? ಅದಕ್ಕೆ ಕಾರಣ ಕಟ್ಟುವಾತನ ಸ್ವಾರ್ಥ ಮತ್ತು ಕರ್ತವ್ಯ ನಿಷ್ಠೆಯಿಲ್ಲದ ಆತನ ಮನಸ್ಸು.
ಯಾವುದೇ ಕೆಲಸವನ್ನು ಆರಂಭಿಸುವ ಮೊದಲು ವಿಘ್ನಗಳು ಬಾರದೆ ಇರಲಿ ಎಂದು ವಿಘ್ನೇಶ್ವರನನ್ನು ಪ್ರಾರ್ಥಿಸಿ ಕಾರ್ಯಾರಂಭ ಮಾಡುತ್ತೇವೆ. ಆದರೂ ನಮ್ಮ ಕೆಲಸ ಕಾರ್ಯಗಳು ಅರ್ಧದಲ್ಲೆ ನಿಂತು ಹೋಗುತ್ತವೆ ಯಾಕೆ? ಆರಂಭಿಸಿದ ನಾವು ತ್ರಿಕರಣಪೂರ್ವಕ ದುಡಿಯದಿದ್ದರೆ ಆ ದೇವರಾದರೂ ಏನು ಮಾಡುತ್ತಾನೆ? ಗದ್ದಗೆ ಪೂಜೆ ಮಾಡಿಬಿಟ್ಟರೆ ಫಸಲು ದೊರೆಯುವುದಿಲ್ಲ. ಗದ್ದೆಯನ್ನು ಚೆನ್ನಾಗಿ ಉತ್ತು, ಬಿತ್ತಿ, ಗೊಬ್ಬರ ಹಾಕಿ ಕಾಲ ಕಾಲಕ್ಕೆ ನೀರುಣಿಸಿ ನೋಡಿಕೊಂಡರೆ, ಉತ್ತಮ ಫಲ ದೊರೆಯಬಹುದು. ಉತ್ತು ಬಿತ್ತಿದಂದಿನಿಂದ ಬೆಳೆಬೆಳೆದು ಅದು ಮನೆ ಸೇರುವ ತನಕ ರೈತ ಪ್ರಕೃತಿಯ ಅನೇಕ ಸವಾಲುಗಳನ್ನು ಸ್ವೀಕರಿಸಬೇಕಾಗುತ್ತದೆ. ಅತೀ ವೃಷ್ಠಿ, ಅನಾವೃಷ್ಠಿಗಳಂತಹ ಅಡೆತಡೆಗಳ ವಿರುದ್ಧ ಹೋರಾಡಿ ಅಥವಾ ಹೊಂದಾಣಿಕೆ ಮಾಡಿಕೊಂಡು ಅವನು ಸಾಗಬೇಕಾಗುತ್ತದೆ. ಒಟ್ಟಿನಲ್ಲಿ ಕೃಷಿಯ ಸಾಧಕ ಬಾಧಕಗಳನ್ನು ಅರಿತವ ಮಾತ್ರ ಇಲ್ಲಿ ಸಾಧಿಸುತ್ತಾನೆ. ಬದುಕುತ್ತಾನೆ.
ಯಾವುದೇ ಕೆಲಸವನ್ನು ಅರಂಭಿಸುವಾಗ ಫಲದ ಬಗ್ಗೆಯೇ ನಮ್ಮ ಲಕ್ಷವಿರುತ್ತದೆ. ಆದರೆ ಹಿಂದಿರುವ ಸವಾಲುಗಳೇನು ಎಂದು ನಾವು ಯೋಚಿಸದಿರುವುದರಿಂದ ಆರಂಭವು ಅರ್ಧದಲ್ಲೇ ಅಂತ್ಯವನ್ನು ಕಾಣುತ್ತದೆ.
ಒಬ್ಬ ಹೊಟೇಲ್ ಮಾಲಿಕ ವಿರಾಮಾಸನದಲ್ಲಿ ಕುಳಿತು ಅಂದಿನ ಆದಾಯವನ್ನಷ್ಟೇ ಲೆಕ್ಕಹಾಕುವ ಬದಲು ಅಡುಗೆ ಕೋಣೆಗೆ ಹೋಗಿ ಅಲ್ಲಿ ದಿನಕ್ಕೆ ಪದಾರ್ಥಗಳು ಎಷ್ಟು ನಷ್ಟವಾಗುತ್ತದೆ ಎಂದು ಲೆಕ್ಕ ಹಾಕಿ ಅದನ್ನು ತಪ್ಪಿಸಿ ತಿಂಡಿಗಳ ಗುಣಮಟ್ಟವನ್ನು ಹೆಚ್ಚಿಸುವತ್ತಲೂ ಲಕ್ಷ ವಹಿಸಿದರೆ ಉತ್ಪತ್ತಿ ಹೆಚ್ಚುತ್ತದೆ. ಆದ್ದರಿಂದ ವಸ್ತುವಿನ ಗುಣಮಟ್ಟವನ್ನು ಉತ್ತಮಗೊಳಿಸದ ಸಂಕಲ್ಪದಿಂದ ಆರಂಭಗೊಂಡ ವ್ಯಾಪಾರವೂ ಒದ್ದು ಹೋಗುತ್ತದೆ.
ಕೆಲವರಿಗೆ ಒಂದು ಕೆಲಸವನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಇನ್ನೊಂದರಲ್ಲಿ ಲಾಭವಿದೆ ಅನ್ನಿಸಿ ಇದ್ದುದನ್ನು ಮುಚ್ಚಿ ಅಧಿಕ ಲಾಭವಿದೆಯೆಂದು ಬಗೆದದ್ದನ್ನು ಆರಂಭಿಸಲು ಮನಸ್ಸಾಗುವುದು. ಅದನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಮತ್ತೊಂದರಲ್ಲಿ ಲಾಭವಿದೆಯೆಂದು ಮನಗಂಡು ಅದನ್ನೇ ಆರಂಭಿಸುತ್ತಾರೆ. ಆದರೆ ಅವರ ಬದುಕು ಅರಂಭಿಸುವ ಮುಚ್ಚುವ ಕೆಲಸದಲ್ಲೇ ಕೊನೆಗಾಣುತ್ತದೆ. ದುಃಖವೇ ಅದರ ಫಲಶ್ರುತಿಯಾಗುತ್ತದೆ. ಇಂತವರು ಡಿ.ವಿ.ಜಿ.ಯವರ ಈ ಮಾತನ್ನು ಗಮನಿಸಬೇಕು.


ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದು ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡ ಕರೆಬರಲ್- ಮಂಕುತಿಮ್ಮ
ಇರುವ ಕೆಲಸವನ್ನು ಸಣ್ಣದೆಂದು ಭಾವಿಸದೆ ಮನಸಿಟ್ಟು ಮಾಡಬೇಕು. ಮನಸಿಟ್ಟು ಮಾಡದ ಯಾವ ದೊಡ್ಟ ಕೆಲಸವೂ ಸಣ್ಣಫಲವನ್ನೂ ಕೊಡಲಾರದು. ನಾವು ಮನಸಿಟ್ಟು ಮಾಡಿದ ಕೆಲಸಕ್ಕೆ ಭಗವಂತ ಫಲವನ್ನು ಕೊಟ್ಟೇ ಕೊಡುತ್ತಾನೆ. ಹಾಗೆ ಬಂದ ಪ್ರಾಪ್ತಿಯನ್ನು ದೇವರ ಪ್ರಸಾದವೆಂದು ಸ್ವೀಕರಿಸಬೇಕು. ಅದಕ್ಕೆ ಗೊಣಗಾಟ ಯಾಕೆ?
ಯಾವ ಒಳ್ಳೆಯ ಕೆಲಸವನ್ನು ಆರಂಭಿಸುತ್ತೇವೆಯೊ ಅವೆಲ್ಲಾ ದೇವರ ಕೆಲಸಗಳೇ ಆಗಿವೆ. ಇಲ್ಲಿ ನಾವು ಮಾಡುವ ಕರ್ಮದಲ್ಲಿ ಪರಮಾರ್ಥವನ್ನು ಕಾಣಬೇಕು. ಆದ್ದರಿಂದ ಯಾವುದೇ ಆರಂಭವು ನೀಡಬೇಕಾದದ್ದು ಆತ್ಮಾನಂದವನ್ನು; ಅದು ಮುಟ್ಟಬೇಕಾದುದು ಅನಂತವನ್ನು. ಅವನ ಕರೆಬಂದ ಮೇಲೆ ನಮಗೆ ಮತ್ತೊಂದರ ಆರಂಭವಿರುತ್ತದೆ. ಆದರೆ ಅದು ನಮ್ಮ ನಿರೀಕ್ಷೆಯಲ್ಲ ಅವನ ಕೊಡುಗೆ ಅದಕ್ಕೂ ಮೊದಲಲ್ಲಿ ಮಾಡಬೇಕಾದ್ದನ್ನು ಮಾಡಲೇ ಬೇಕಲ್ಲವೇ?

 

Comments

comments

Leave a Reply

Read previous post:
ದಕ್ಷಿಣ ಕನ್ನಡಕ್ಕೆ ಅನ್ಯಾಯ, ಕೇರಳಕ್ಕೆ ಮಣೆ – ನಳಿನ್‌ಕುಮಾರ್

Narendra Kerekadu ಮುಲ್ಕಿ : ಈವರೆಗೆ ಕೇಂದ್ರ ರೈಲ್ವೇ ಯೋಜನೆಗಳಲ್ಲಿ ಪಕ್ಕದ ಕೇರಳ ರಾಜ್ಯಕ್ಕೆ ಭಾರಿ ಮನ್ನಣೆ ನೀಡಿ ಯಾವುದೇ ಯೋಜನೆಗಳು ಜಾರಿ ಆಗುತ್ತದೆ ಆದರೆ ಕರ್ನಾಟಕದಲ್ಲಿ...

Close