“ಕ್ರಿಸ್‍ಮಸ್

Yashuaikala

“ಕ್ರಿಸ್‍ಮಸ್ ಹಬ್ಬದ ಶುಭಾಶಯಗಳು”

“ಕ್ರಿಸ್‍ಮಸ್ ಎಂದರೆ…
…ಜೀಸಸ್……ಯೇಸು”

ಅಂದರೆ “ಬೆಳಕು…
…..ಬೆಳಕಾಗಿಸುವ ದಿವ್ಯತ್ಮ! ದೇವರು ಬೇರೆಯಲ್ಲ ,ಬೆಳಕು ಬೇರೆಯಲ್ಲ. ಅದಕ್ಕೆ ದೇವರಿಗೆ ದೀಪವೆಂದರೆ ಇಷ್ಟ, ಬೆಳಕೆಂದರೆ ಇಷ್ಟ!
ಬೆಳಕು ಮೊಂಬತ್ತಿಯಿಂದಲೂ ಮೂಡಬಹುದು, ಹಣತೆಯಿಂದಲೂ ಮೂಡಬಹುದು. ನಮ್ಮ ಅಂತರಂಗದಲ್ಲಿ ಬೆಳಕಿದೆಯೆನ್ನುವುದನ್ನು ಮತ್ತೆ ಮತ್ತೆ ನೆನಪಿಸುವುದಕ್ಕೆ ಕ್ರಿಸ್‍ಮಸ್ ಬರುತ್ತದೆ.
ಯೇಸುವಿನ ಹುಟ್ಟು ಎಂದರೆ ಬೆಳಕಿನ ಹುಟ್ಟು! ಅಲ್ಲಿಯ ತನಕ ಬೆಳಕು ಇರಲಿಲ್ಲವೆಂದು ಇದರ ಅರ್ಥವಲ್ಲ! ಬೆಳಕಿನ ಅರ್ಥ ಸ್ಪೋಟವಾದ ಒಂದು ಪವಿತ್ರ ಗಳಿಗೆ ಆವಾಗಿತ್ತು ಎನ್ನುವುದೇ ನಿಜವಾದ ಅರ್ಥ! ಹುಟ್ಟಿನ ಬೆಳಕನ್ನು ಸೂರ್ಯ, ಚಂದ್ರ, ನಕ್ಷತ್ರಗಳಿಂದ ಹೀರಿ ಬದುಕಿಗೆ ಅದನ್ನೆ ಹಿತವಾಗಿ ಉಣಿಸಿ, ಮನಸ್ಸಿನ ಜಿಜ್ಞಾಸೆಗಳನ್ನು ತಣಿಸಿ, ವಿಪರೀತ ಆಲೋಚನೆಗಳನ್ನು ಮಣಿಸಿ, ಬದುಕನ್ನು ದೈವಾಭಿಮುಖಿಯಾಗಿ ನಿಲ್ಲಿಸಿದ ಬೆಳಕಿನ ರೂಪವೆ …..ಜೀಸಸ್…ಯೇಸು………..

ವರ್ಷವಿಡೀ ಸಿಕ್ಕಾಪಟ್ಟೆ ಕುಗ್ಗಿ ಹೋದ ಆರ್ಥಿಕ ಮತ್ತು ಸಾಮಾಜಿಕ ಬದುಕುಗಳು ಕೊಂಚ ನಿಟ್ಟುಸುರಿಬಿಡುವ ಗಳಿಗೆ ಇದು. ಕ್ರಿಸ್‌ಮಸ್ ಮತ್ತು ಹೊಸವರ್ಷದ ನಡುವಿನ ಈ ದಿನಗಳು ಗೆದ್ದವರು ನೆಲಕ್ಕಿಳಿಯುವ, ಸೋತವರು ಮತ್ತೆ ಕನಸು ಚಿಗುರಿಸಿಕೊಳ್ಳುವ ಗಳಿಗೆ. ಬಿದ್ದೂ ಮೀಸೆ ಮಣ್ಣಾಗಿಲ್ಲ ಎಂಬಂತಹ ಮಾತುಗಳು ಎಲ್ಲರ ನಾಲಗೆಯ ಮೇಲೆ. ಇದು ಮತ್ತೆ ಏಳಲು ಅನಿವಾರ್ಯವೇನೋ. ಹೀಗೆಲ್ಲಾ ಯೋಚಿಸುತ್ತಾ ಇರುವಾಗ, ಊರ ತುಂಬಾ ಮಕ್ಕಳು ಮರಿಗಳನ್ನು ಎಳೆದುಕೊಂಡು ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಕೊಳ್ಳುತ್ತಿರುವ ಮಂದಿ ಕಿಕ್ಕಿರಿಯುತ್ತಾರೆ. ಕ್ರಿಸ್‌ಮಸ್‌ಗೆ ಇನ್ನೆರಡು ದಿನವಿರುವಾಗಿನ ಆತುರ ಕಾತರ ಎಲ್ಲರ ಕಣ್ಣುಗಳಲ್ಲಿ. ಪೇಟೆಯ ಬಣ್ಣ ಬೆಳಕುಗಳನ್ನು ಕಣ್ಣಲ್ಲಿ ತುಂಬಿಕೊಂಡು ತಮ್ಮ ಲೋಕದಲ್ಲೇ ಮೈಮರೆತ ಮಕ್ಕಳು ಅವರ ಹಿಂದೆ ಕಾಲೆಳೆದುಕೊಂಡು ಓಡಾಡುತ್ತಾರೆ. ಅಂಗಡಿ ಕಿಟಕಿಗಳಲ್ಲಿ ಹಾಕಿರುವ ಕ್ರಿಸ್‌ಮಸ್ ಬೊಂಬೆ, ಅಲಂಕಾರಗಳನ್ನು ನೋಡುತ್ತಾ ಕಳೆದುಹೋಗುತ್ತಾರೆ. ಹೌದು, ಕಳೆದು ಹೋಗಲು ತಕ್ಕುದಾದ ಗಳಿಗೆಯಿದು ಎನಿಸುತ್ತದೆ.

“ಕ್ರಿಸ್‍ಮಸ್ ಎಂದರೆ ಕ್ರಿಸ್ತಜಯಂತಿ ಅಥವಾ ಕ್ರಿಸ್ತನು ಹುಟ್ಟಿದ ಸಂಭ್ರಮದ ದಿನ. ಜಗತ್ತಿನಾದ್ಯಂತ ಪ್ರತಿ ವರ್ಷದ ಡಿಸೆಂಬರ್ ತಿಂಗಳ ಇಪ್ಪತ್ತೈದನೇ ದಿನವನ್ನು ಯೇಸು ಕ್ರಿಸ್ತರ ಹುಟ್ಟುಹಬ್ಬವಾಗಿ ಆಚರಿಸಲಾಗುತ್ತದೆ. ಯೇಸುಕ್ರಿಸ್ತರು ಮೇರಿ ಮತ್ತು ಜೋಸೆಫರ ಮಗನಾಗಿ ಇಂದು ಇಸ್ರೇಲ್ನಲ್ಲಿರುವ ಬೆತ್ಲ್‌ಹೆಮ್‌ ಎಂಬ ಊರಿನಲ್ಲಿ ಹುಟ್ಟಿದ. ಆಗ ಮೇರಿ ಮತ್ತು ಜೋಸೆಫ್ ದಂಪತಿಯು ರೋಮನ್ ಜನಗಣತಿಯಲ್ಲಿ ನೋಂದಾಯಿಸಲು ಅಲ್ಲಿಗೆ ಹೋಗಿದ್ದರಂತೆ. ಯಹೂದ್ಯ ಧರ್ಮ ಪ್ರಕಾರ ಪ್ರವಾದನೆಗಳನ್ನು ನೆರವೇರಿಸಲು ಡೇವಿಡ್‌ನ ವಂಶದಲ್ಲಿ ದೇವರ ದೂತ – ಪ್ರವಾದಿ ಬರುವನೆಂಬ ನಂಬಿಕೆಯಿದೆ. ಆ ದೇವರ ದೂತ – ಪ್ರವಾದಿ ಬೇರಾರೂ ಅಲ್ಲ ಸ್ವತಃ ಯೇಸುಕ್ರಿಸ್ತನೇ ಎಂದು ಕ್ರೈಸ್ತರು ಭಾವಿಸುತ್ತಾರೆ. ಗ್ರೀಕ್ ಲಿಪಿಯಲ್ಲಿ ಕ್ರಿಸ್ತನ ಮೊದಲಕ್ಷರವು ಇಂಗ್ಲಿಷಿನ ಎಕ್ಸ್ ನಂತೆ ತೋರುವುದರಿಂದ ಕೆಲವರು ಕ್ರಿಸ್ಮಸ್ ಅನ್ನು ಎಕ್ಸ್ ಮಸ್ ಎಂದೂ ಹೇಳುತ್ತಾರೆ.

ಕ್ರಿಸ್‌ಮಸ್ ಒಂದು ಸಾರ್ವತ್ರಿಕ ರಜಾದಿನವೂ ಹೌದು. ಕ್ರೈಸ್ತ ಜನಸಂಖ್ಯೆ ಕಡಿಮೆ ಇರುವ ದೇಶಗಳನ್ನೂ ಒಳಗೊಂಡು ವಿಶ್ವದ ಹಲವೆಡೆ ಕ್ರಿಸ್‌ಮಸ್, ವರ್ಷದ ರಜಾದಿನ. ಸಾಮಾನ್ಯವಾಗಿ ಎಲ್ಲ ಕ್ರೈಸ್ತ ದೇಶಗಳಲ್ಲೂ ಕ್ರಿಸ್‍ಮಸ್ ಹಬ್ಬವನ್ನು ಕ್ರಿಸ್‍ಮಸ್ ದಿನ ಮಾತ್ರವಲ್ಲದೆ ಅದರ ಆಚೀಚೆ ಕೆಲವು ದಿನಗಳನ್ನೂ ಸೇರಿಸಿಕೊ೦ಡು ಆಚರಿಸಲಾಗುತ್ತದೆ.

ಕ್ರಿಸ್‍ಮಸ್  ಹಬ್ಬದ ಹಿಂದಿನ ದಿನವನ್ನು ಕ್ರಿಸ್‍ಮಸ್ ಈವ್ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತದೆ. ಕ್ರಿಸ್‍ಮಸ್ ಹೊಸ ವರ್ಷದ ಸಮೀಪ ಬರುವುದರಿ೦ದ ಕ್ರಿಸ್‍ಮಸ್ ಮೊದಲುಗೊಂಡು ಹೊಸ ವರ್ಷದವರೆಗೂ ಹಲವು ದೇಶಗಳಲ್ಲಿ ರಜಾ ಇರುವುದು.

ಹಲವು ದೇಶಗಳಲ್ಲಿ ಅನೇಕ ಧಾರ್ಮಿಕ, ರಾಷ್ಟ್ರೀಯ ಮತ್ತು ಜಾತ್ಯತೀತ ಸಂಪ್ರದಾಯಗಳು ಹಾಗೂ ಆಚರಣೆಗಳು ಕ್ರಿಸ್‍ಮಸ್ನೊ೦ದಿಗೆ ಸ೦ಬ೦ಧ ಹೊ೦ದಿವೆ. ಕ್ರಿಸ್‍ಮಸ್ ಜೊತೆಗೆ ಆಚರಣೆಗಳೂ ರೂಢಿಯಲ್ಲಿವೆ.ಮನೆಯಲ್ಲಿ ಕ್ರಿಸ್ಮಸ್ ವೃಕ್ಷ ಇಡುವುದು.ಮಿಸಲ್‍ಟೋ ಮೊದಲಾದ ಮರಗಳ ಎಲೆಗಳ ತೋರಣ ಕಟ್ಟುವುದು ಉಡುಗೊರೆಗಳನ್ನು ಕೊಡುವುದು.

ಉಡುಗೊರೆಗಳನ್ನು ಕೊಡುವುದು ಮತ್ತು ಪಡೆಯುವುದು ಕ್ರಿಸ್‍ಮಸ್ನ ವಿಶೇಷಗಳಲ್ಲೊಂದು. ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡಲು ಸಾಂತಾಕ್ಲಾಸ್ ಬರುತ್ತಾನೆ ಎಂಬುದು ಜನಪ್ರಿಯ ನಂಬುಗೆ. “ಸಾಂತಾಕ್ಲಾಸ್” ಎ೦ಬುದು “ಸಂತ ನಿಕೋಲಾಸ್”. ಸಂತ ನಿಕೋಲಾಸ್ ನಾಲ್ಕನೆ ಶತಮಾನದಲ್ಲಿ ಜೀವಿಸಿದ್ದ ಒಬ್ಬ ಕ್ರೈಸ್ತ ಪಾದ್ರಿ. ಮಕ್ಕಳ ಮೇಲಿನ ಪ್ರೀತಿಗೆ ಸ೦ತ ನಿಕೋಲಾಸ್ ಪ್ರಸಿದ್ಧ. ಹಾಗಾಗಿ ಮಕ್ಕಳಿಗೆ ಆತನೇ ಪ್ರತಿ ವರ್ಷ  ಕ್ರಿಸ್‍ಮಸ್ ದಿನದ೦ದು ಉಡುಗೊರೆ ತ೦ದುಕೊಡುತ್ತಾನೆ ಎ೦ದು ಹೇಳಲಾಗುತ್ತದೆ.

ಎಲ್ಲ ಮನೆಗಳಲ್ಲೂ ಒ೦ದು  ಕ್ರಿಸ್‍ಮಸ್ ವೃಕ್ಷವನ್ನು ತಂದು ನಿಲ್ಲಿಸುವುದು ವಾಡಿಕೆ. ಈ ವೃಕ್ಷವನ್ನು ದೀಪಗಳು ಮತ್ತು ಇತರ ವಸ್ತುಗಳಿ೦ದ ಅಲ೦ಕೃತಗೊಳಿಸಲಾಗುತ್ತದೆ. ಅನೇಕ ಕಡೆಗಳಲ್ಲಿ ಮನೆಯ ಹೊರಗೂ ದೀಪಗಳ ತೋರಣ ಕಟ್ಟುವುದು ವಾಡಿಕೆ. ಹಾಗೆಯೇ ಕ್ರಿಸ್ಮಸ್ ಹಬ್ಬದ ಅ೦ಗವಾಗಿ ಕೆಲವು ಹೂವುಗಳು ಮತ್ತು ಸಸ್ಯಗಳು (ಅಮರಿಲ್ಲಿಸ್, ಕ್ರಿಸ್‍ಮಸ್ ಕ್ಯಾಕ್ಟಸ್) ಮೊದಲಾದವುಗಳನ್ನು ತರಲಾಗುತ್ತದೆ.

ಅನೇಕ ಕಡೆಗಳಲ್ಲಿ  ಕ್ರಿಸ್‍ಮಸ್ ಪಾರ್ಟಿಗಳನ್ನು ಆಚರಿಸಲಾಗುತ್ತದೆ.  ಕ್ರಿಸ್‍ಮಸ್ ಹಬ್ಬದ ಅ೦ಗವಾಗಿ ಹಾಡಲ್ಪಡುವ ಹಾಡುಗಳೂ ಅನೇಕವಿವೆ ( ಕ್ರಿಸ್‍ಮಸ್  ಕ್ಯಾರೊಲ್ ಗಳು).  ಕ್ರಿಸ್‍ಮಸ್ ಔತಣ ಇದ್ದೇ ಇರುತ್ತದೆ – ಈ ಔತಣ ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಅನೇಕ ದೇಶಗಳಲ್ಲಿ  ಕ್ರಿಸ್‍ಮಸ್ ಹಬ್ಬಕ್ಕೆ ವಿಶಿಷ್ಟವಾದ ತಿನಿಸುಗಳುಂಟು.

ಕ್ರಿಸ್‍ಮಸ್ಗೆ ಸಂಬಂಧಪಟ್ಟ ಧಾರ್ಮಿಕ ಆಚರಣೆಗಳು ಡಿಸೆಂಬರ್ ತಿ೦ಗಳ ಆರಂಭದಲ್ಲಿ “ಅಡ್ವೆಂಟ್” ನಿಂದ ಆರ೦ಭವಾಗುತ್ತವೆ – ಇದು ಕ್ರಿಸ್ತನ ಜನ್ಮವನ್ನು ಎದುರು ನೋಡುವ ಹಬ್ಬ.  ಕ್ರಿಸ್‍ಮಸ್ಗೆ ಸ್ವಲ್ಪವೇ ಮೊದಲು ಚರ್ಚ್ ಮೊದಲಾದ ಸ್ಥಳಗಳಲ್ಲಿ ಕೆಲವು ಧಾರ್ಮಿಕ ಆಚರಣೆಗಳು ನಡೆಯುತ್ತವೆ.  ಕ್ರಿಸ್‍ಮಸ್ ಈವ್ ಮತ್ತು  ಕ್ರಿಸ್‍ಮಸ್ ದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಚರ್ಚ್‌ಗಳಲ್ಲಿ ನಡೆಯುತ್ತವೆ.

Comments

comments

Leave a Reply

Read previous post:
ಆರಂಭ

ಆರಂಭಿಸುವ ತವಕ ಎಲ್ಲರಲ್ಲೂ ಇದ್ದೇ ಇದೆ. ಆದರೆ ಅದನ್ನು ಮುಂದುವರಿಸುವ ಉತ್ಸಾಹ ಎಷ್ಟು ಮಂದಿಯಲ್ಲಿ ಇದೆ? ಕೆಲವೊಮ್ಮೆ ಆರಂಭವೇ ಕೊನೆಯಾಗುವುದೂ ಉಂಟು! ಉದ್ಘಾಟಕರು ಉದ್ಘಾಟಿಸಿ ಹಿಂದಿರುಗಿದ ತಕ್ಷಣವೇ...

Close