ಆಚಾರ-ವಿಚಾರ

Wilson Kinnigoli
ಹಬ್ಬದ ಸಂದರ್ಭಕ್ಕೆ ಬರೆಯುವ ಲೇಖನದಲ್ಲಿ, ಹಬ್ಬದ ವಿಶೇಷತೆಯ ಬಗ್ಗೆ, ಅದರ ಹಿನ್ನೆಲೆ, ಆಚಾರ ವಿಚಾರ, ಮುಂತಾದವುಗಳನ್ನು ಕೊರೆದು ಹತ್ತಾರು ಹಿತನುಡಿಗಳನ್ನು ನೀಡಿ ಕೊನೆಗೊಳಿಸಲು ನನಗೇಕೋ ಅಸಹ್ಯವೆನಿಸುತ್ತದೆ. ಅದೆಷ್ಟೋ ವರ್ಷಗಳಿಂದ ಹೆಚ್ಚು ಕಮ್ಮಿ ಎಲ್ಲಾ ಪತ್ರಿಕೆಗಳಲ್ಲಿ ಪ್ರತಿವರ್ಷವೆಂಬಂತೆ ಒಂದಲ್ಲ ಒಂದು ರೀತಿಯಲ್ಲಿ ಇದು ಪುನರಾವರ್ತಿಸುತ್ತಿರುತ್ತದೆ. ಇದೇ ವಿಚಾರ ಮನಸ್ಸಿನಲ್ಲಿ ವಿಹರಿಸುತ್ತಿದ್ದಾಗ ’ನಮ್ಮ ಕಿನ್ನಿಗೋಳಿ’ – ಗೆಂದು ಬರೆದ ಲೇಖನ ಕೊಂಚ ಈ ರೀತಿ  ಹೊರ ಹೊಮ್ಮಿತು.
 ನಮ್ಮ ಹಬ್ಬಗಳ (ರಾಷ್ಟ್ರೀಯ ಹಬ್ಬಗಳನ್ನು ಹೊರತುಪಡಿಸಿ) ಹುಟ್ಟು ಅದರ ಜಾತಿ ಅಥವಾ ಧರ್ಮ. ಇವುಗಳ ಆಚರಣೆಯಿಂದ ಜಾತ್ಯಾತೀತ ಭಾವನೆ ಬೆಳೆಸಲು ಸಾದ್ಯವಿದೆಯೆಂಬುದನ್ನು ಮಾತ್ರ ನಿರ್ಲಕ್ಷಿಸುವಂತಿಲ್ಲ. ಇವುಗಳಿಗೆ ಪುರಾವೆಗಳೂ ಇವೆ. ಎಲ್ಲಾ ಧರ್ಮದವರು ಯಾವುದೇ ಒಂದು ಹಬ್ಬವನ್ನು ಜೊತೆಯಾಗಿ ಆಚರಿಸುವುದು ಅಥವಾ ಒಬ್ಬರಿಗೊಬ್ಬರು ಸಹಕರಿಸುವುದು ಇವೆಲ್ಲ ಬಹಳಷ್ಟು ಕಾಲದಿಂದ ನಡೆದು ಬಂದಿರುವಂತಹದ್ದೆ. ಇದು ವೈಯಕ್ತಿಕವಾಗಿದ್ದರೂ ಹೆಚ್ಚು ಕಮ್ಮಿ ಎಲ್ಲರೂ ಆಚರಿಸುತ್ತಾ ಬಂದಿರುವುದರಿಂದ ಮೌನವಾಗಿಯೇ ಸಾರ್ವತ್ರಿಕವಾಗಿತ್ತು. ಆದರೆ ಬದಲಾದ ಇವತ್ತಿನ ಸಮಾಜದಲ್ಲಿ ಇವನ್ನೇ ಮಾಡುತ್ತೆವೆಂದು ಹೇಳಲು ನಮಗೆ ವೇದಿಕೆ ಅಗತ್ಯವೆನಿಸಿದೆ. (ಇಷ್ಟಕ್ಕೂ ಅದನ್ನು ಪಲಿಸುತ್ತೇವೊ ಇಲ್ಲವೋ ಎಂಬುದು ಬೇರೆ ವಿಚಾರ!) ಇವಕ್ಕೆಲ್ಲ ಪರೋಕ್ಷವಾಗಿ ಕಾರಣವಾಗಿರುವುದು ನಮ್ಮ ರಾಜಕೀಯ ವ್ಯವಸ್ಥೆ. ವ್ಯವಸ್ಥೆಗಿಂತ ರಾಜಕಾರಣಿಗಳೆಂದರೆ ಸೂಕ್ತವೆನಿಸಬಹುದು. ಈ ದೇಶದ ರಾಜಕೀಯಕ್ಕೂ ನಮ್ಮ ಧರ್ಮಕ್ಕೂ ಒಂದು ಅನೈತಿಕ ಸಂಬಂದ ಇದ್ದೇ ಇದೆ. ಇದು ಬ್ರಿಟಿಷರಿಂದಲೇ ನಡೆದು ಬಂದದ್ದು. ಒಡೆದು ಆಳುವ ವ್ಯವಸ್ಥೆ. ಅದಿರಲಿ. ಆದರೆ ಇದರ ಪರಿಣಾಮ ಸಮಾಜದಲ್ಲಿ, ಜನಸಾಮಾನ್ಯರಲ್ಲಿ ಮಾತ್ರ ಬಹಳಷ್ಟು ಬೀರಿದೆ. ಇದರ ಪರಿಣಾಮವೇ ಇತ್ತೀಚಿನ ವರ್ಷಗಳಲ್ಲಿ ಧಾರ್ಮಿಕ ಆಚರಣೆಗಳು ಬೇರೆನೆ ರಂಗು ಕಂಡಿವೆ. ಹಬ್ಬಗಳ ಅತಿರೇಕ ಆಚರಣೆ, ಇದರಿಂದ ತನ್ನ ಧರ್ಮವೇ ಉತ್ತಮವೆಂದು ಬಿಂಬಿಸುವ ಪ್ರಯತ್ನ, ಇವೆಲ್ಲ ಸಾರ್ವಜನಿಕವಾಗಿ ಧಾರ್ಮಿಕ ಸಾಮರಸ್ಯ ಬೆಳೆಸುವಂತೆ ಕಂಡರೂ ಮನಸಿನಾಳದಲ್ಲಿ ವೈಯಕ್ತಿಕವಾಗಿ ಯಾವ ಭಾವನೆಯನ್ನು ಹುಟ್ಟಿಹಾಕುತ್ತದೆಂದು ನಾವಂತೂ ವಿಚಾರ ಮಾಡಬಹುದು. ನಮ್ಮ ಹಬ್ಬಗಳ ಕೆಲ ಆಚರಣೆಗಳಲ್ಲಿ ಅದೆಷ್ಟೋ ನಂಬಿಕೆಗಳು ಬೇರು ಬಿಟ್ಟಿದ್ದರೂ ಅದನ್ನು ಸಂಸ್ಕೃತಿ, ಪರಂಪರೆಯ ಹೆಸರಲ್ಲಿ ನಾವುಗಳು ಸಮರ್ಥಿಸುವುದೇ ಹೆಚ್ಚು. ಅದನ್ನೆಲ್ಲ ನಮ್ಮ ಭವ್ಯ ಪರಂಪರೆಯೆಂದು ಕೊಂಡಾಡಿ, ನಮ್ಮ ಬೆನ್ನನ್ನು ನಾವೇ ತಟ್ಟುವುದರಲ್ಲಿ ನಮಗದೇನೋ ವಿಕೃತ ಸಂತೋಷ. ಇದರ ಬೆನ್ನಲ್ಲಿ ಎದ್ದು ಕಾಣುವುದು ತನ್ನ ಹಬ್ಬವನ್ನು, ಇದರಿಂದಾಗಿ ತನ್ನ ಜಾತಿಯನ್ನು ಎತ್ತಿ ಹಿಡಿಯಲು ಮಾಡುವ ಅಪ್ರತ್ಯಕ್ಷ ಪ್ರಯತ್ನ. ಇದರಿಂದ ಯಾವ ರೀತಿಯ ಒಳಿತು, ಸಾಮರಸ್ಯ ಹುಟ್ಟಿಬರಬಹುದು ಎಂಬುದನ್ನು ಶಿಕ್ಷಿತ ಇಂಟರ್‌ನೆಟ್, ವೆಬ್‌ಸೈಟ್ ಓದುಗರಾದ ನಾವು, ಅಂದಾಜು ಮಾಡಬಹುದು.
ಈ ಎಲ್ಲಾ ಬೆಳವಣಿಗೆಯಿಂದ ಈಗ ನಮಗೆ ಧಾರ್ಮಿಕ ಸಾಮರಸ್ಯದ ಅಗತ್ಯವಿದೆಯೆಂದು ಕಂಡುಬಂದರೆ ಅದೇ ನಮ್ಮ ಸೋಲು. ಏಕೆಂದರೆ ಅಗತ್ಯ ಎನಿಸುವುದು ಇಲ್ಲವಾದಾಗ ಮಾತ್ರ! ಹಾಗಾದರೆ ಈ ಹಬ್ಬಗಳು ಧಾರ್ಮಿಕ ಸಾಮರಸ್ಯವನ್ನು ಘಟಿಸುವುದಕ್ಕಿಂತ ಕೆಡಿಸುವುದನ್ನು ಅರಿತರೆ ಇವೆಲ್ಲ ಇಲ್ಲದೆ ಹೋಗಿದ್ದರೆ ಚೆನ್ನಗಿರುತ್ತಿತ್ತು ಅನ್ನಿಸುವುದುಂಟು. ಅದಕ್ಕಾಗಿ ಪ್ರತಿ ಹಬ್ಬವು ಹಿಂದುಗಳ, ಮುಸ್ಲಿಮರ ಅಥವಾ ಕ್ರಿಶ್ಚನ್ನರ ಹಬ್ಬ ಎನಿಸುವ ಬದಲು ಅದು “ಹಬ್ಬ” ಮಾತ್ರ ಎಂದು  ಅನಿಸಿಕೊಂಡರೆ ಸೂಕ್ತವೆಂದು ನನ್ನ ಅಭಿಪ್ರಾಯ. ಹಬ್ಬಗಳ ಸೂಕ್ತ ಆಚರಣೆಯಾಗಲಿ. ಅತಿರೇಕವಲ್ಲ.
ಈಗ ಕ್ರಿಸ್‌ಮಸ್ ಸಂದರ್ಭ. “ನಮ್ಮ ಕಿನ್ನಿಗೋಳಿ” ವೆಬ್‌ಸೈಟ್ ಈ ಸಂದರ್ಭದಲ್ಲೇ ಉದ್ಘಾಟನೆಯಾಗುತ್ತಿರುವುದು ಹೆಮ್ಮೆಯ ವಿಚಾರ. ಯೇಸುವಿನ ಆಶೀರ್ವಾದ ಸದಾ ಇದರ ಮೇಲಿರಲಿ! . . . . ಕೊನೆಯ ಎರಡು ವಾಕ್ಯಗಳು ನಾನು ಮೇಲೆ ಬರೆದ ವಿಚಾರಕ್ಕೇ ವ್ಯತಿರಿಕ್ತವಾದಂತೆ ಕಂಡಿಲ್ಲವೆ? ಎಲ್ಲೋ ಒಂದು ತುದಿಯಿಂದ ನಾನೂ ನನ್ನ ಧರ್ಮವನ್ನು ಬಿಂಬಿಸಲು ಪ್ರಯತ್ನಿಸುವಂತೆ ಕಾಣುತ್ತಿಲ್ಲವೆ? ನಿಮಗೆ ಹಾಗನಿಸಿದ್ದರೆ ಸರಿಯಾಗಿಯೇ ಊಹಿಸಿದ್ದೀರ. ನನ್ನ ಲೇಖನದ ತಿರುಳನ್ನು ತಿಳಿಸಿ ಹೇಳಲೆಂದೆ ಇದನ್ನು ಬರೆದೆ. ಇಂತಹ ಅಪ್ರತ್ಯಕ್ಷ ಪ್ರಯತ್ನ ಆರೋಗ್ಯಕರವಲ್ಲ ಎಂಬುದು ನನ್ನ ಅಭಿಪ್ರಾಯ. ನಮ್ಮ ವೈಯಕ್ತಿಕ ಧಾರ್ಮಿಕ ನಂಬಿಕೆ ಅಥವಾ ಆಚಾರವನ್ನು ಬೇರೆಯವರ ತಲೆಗೆ ಪರ‍ೊಕ್ಷವಾಗಿ, ಮಂದ ರೀತಿಯಲ್ಲಿ ಜಡಿಯುವುದು ಕೂಡ ಹಬ್ಬಗಳ ಅತಿರೇಕ ಆಚರಣೆಯೇ ಆಗಿರುತ್ತದೆ. ತಮ್ಮ ಹಬ್ಬದ ಬಗ್ಗೆ ಹೇಳಿಕೊಳ್ಳುವುದು ಬೇರೊಬ್ಬನ ಮನಸ್ಸಿನಲ್ಲಿ ‘ಇಗೋ ಫೀಲಿಂಗ್’ ಸೃಷ್ಟಿಸಬಾರದು. ಹಾಗಾದರೆ ಮಾತ್ರ ಆಚರಣೆ ಆರೋಗ್ಯಕರ.
ಇರಲಿ, ಇಷ್ಟಕ್ಕೂ ’ನಮ್ಮ ಕಿನ್ನಿಗೋಳಿ’ ಯ ಹುಟ್ಟು ಒಂದು ಸಂದರ್ಭದಲ್ಲಿ ಅನಿರ್ವಾಯವೆನಿಸುವಷ್ಟು ಅಗತ್ಯವಾಯಿತು. ಇದನ್ನು ಭರಿಸುವುದರೊಂದಿಗೆ “ನಮ್ಮ ಕಿನ್ನಿಗೋಳಿ” ಜನ್ಮ ತಾಳಿದೆ. ಇದೊಂದು ದಿಟ್ಟ ಜಾತ್ಯಾತೀತ ಮಾಧ್ಯಮವಾಗಿ ಬೆಳೆಯಲೆಂದು ನನ್ನ ಸದಾಶಯ.
ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.

Comments

comments

Leave a Reply

Read previous post:
ಕ್ರಿಸ್‌ಮಸ್ ಗೋದಲಿಗಳು

ಕಿನ್ನಿಗೋಳಿ ಚರ್ಚ್ ಗೋದಲಿ ಕಿರೆಂ ದಾಮಸ್ಕಟ್ಟೆ ಚರ್ಚ್ ಗೋದಲಿ ಪಕ್ಷಿಕೆರೆ ಚರ್ಚ್ ಗೋದಲಿ ಪಕ್ಷಿಕೆರೆ ಚರ್ಚ್ ಗೋದಲಿ ಪದ್ಮನೂರು ಗೋದಲಿ ವಿಲಿಯಂ ಕಿನ್ನಿಗೋಳಿ ಗೋದಲಿ ಲಾರೆನ್ಸ್ ಭಟ್ಟಕೋಡಿ ಗೋದಲಿ

Close