ಹೊಸ ವರ್ಷದ ಶುಭಾಶಯಗಳು.

Yashuaikala

ತಿ೦ಗಳಿಗೊಮ್ಮೆ ಪುಟ ಮಗುಚಿ ಹಾಕುತ್ತಿದ್ದ ಕ್ಯಾಲೆ೦ಡರನ್ನು ಸ೦ಪೂರ್ಣವಾಗಿ ಬದಿಗಿಟ್ಟು ಹೊಚ್ಚ ಹೊಸ ಕ್ಯಾಲೆ೦ಡರನ್ನು ಗೋಡೆಗೆ ತೂಗುಹಾಕಿ ಮನಸಿನಲ್ಲಿ ಹೊಸ ಹೊಸ ಭಾವನೆಗಳ ಕನಸಿನ ಗುಚ್ಚಗಳನ್ನು ತು೦ಬುವ ಸಮಯ. ನಿಜವಾಗಿಯೂ 2011 ಕಳೆದು ಹೊಸ ವರ್ಷ ಬಂದಿದೆ. ಇಲ್ಲ, ಇದು ಹೊಸ ವರ್ಷ ಅಲ್ಲ, ಹೊಸ ವರ್ಷ ಆರ೦ಭವಾಗುವುದು ಯುಗಾದಿಯ೦ದು ಎ೦ದು ಸನಾತನ ಭಾರತೀಯ ಸ೦ಸ್ಕ್ರತಿಯು ತಿಳಿಹೇಳಿದರೂ ನಮ್ಮ ಕಲಿಯುಗದ ಬದುಕಿನಲ್ಲಿ ಇ೦ಗ್ಲಿಷ್ ಕ್ಯಾಲೆ೦ಡರ್ ವರ್ಷವೇ ಬಹುತೇಕ ಎಲ್ಲ ದೇಶದ ಜನರು ಅನುಸರಿಸುವುದರಿಂದ, ಹೊಸ ವರುಷ ಎ೦ದಾಕ್ಷಣ ಅದರದೇ ಮೇಲುಗೈ.

ಕಳೆದು ಹೋದ ದಿನಗಳನ್ನು ಮರೆತು ದುಮ್ಮಿಕ್ಕಿ ಬರುವ ಅಮೃತಘಳಿಗೆಯನ್ನು ಸದ್ವಿನಿಯೋಗ ಮಾಡಿದರೆ ಭವಿತವ್ಯದ ಭದ್ರ ಬುನಾದಿಯಾದೀತು. ಈ ಯಾ೦ತ್ರಿಕ ಯುಗದಲ್ಲಿ ಹಗಲು ರಾತ್ರಿ ಸರಿಯುವುದೇ ತಿಳಿಯುತ್ತಿಲ್ಲ, ದಿನ, ವಾರ, ತಿಂಗಳು, ವರ್ಷ, ಎಲ್ಲವೂ ಆತುರಾತುರದಲ್ಲಿ ಮುನ್ನಡೆಯುತ್ತಿವೆ, ನಿನ್ನೆ ಮೊನ್ನೆಯ೦ತೆ ತೋರುವ, ನೆನಪಿನ೦ಗಳದಲ್ಲಿ ಹಚ್ಚ ಹಸಿರಾಗಿರುವ ದೃಶ್ಯಗಳೆಲ್ಲ ಹಳೆಯವು ಎ೦ದರೆ ನ೦ಬಲಾಗುತ್ತಿಲ್ಲ, ಕಾಲ ಓಡುತ್ತಿದೆ, ಯಾರಿಗೂ ಬಿಡುವಿಲ್ಲ, ಬದುಕಿನ ಉತ್ಕರ್ಷದ ಹುಡುಕಾಟದಲ್ಲಿ ಎಲ್ಲರೂ ವ್ಯಸ್ತವಾಗಿದ್ದಾರೆ. ಆದರೆ ಈ ಸುತ್ತಲ ಸಮಾಜ ಅದೆಷ್ಟು ಅಸ್ತವ್ಯಸ್ತ ಎ೦ಬುದರತ್ತ ಗಮನಹರಿಸಲು ಸಮಯದ ಅಭಾವ. ಹೊಸ ವರ್ಷದಲ್ಲಿ ತಾನು ಏನು ಮಾಡಬೇಕು, ಹೇಗಿರಬೇಕು, ಯಾವ ಸಾಧನೆಗೈಯ್ಯಬೇಕು ಎ೦ಬ ಜಿಜ್ಞಾಸೆ ಮಾಡುವ ನಾವು, ಕಳೆದ ಸಾಲಿನಲ್ಲಿ ಕೈಗೊ೦ಡ ತೀರ್ಮಾನ ಎಷ್ಟರ ಮಟ್ಟಿಗೆ ಸಾಧಕವಾಯಿತು ಎ೦ಬುದರ ಮೌಲ್ಯಮಾಪನವನ್ನೇ ಮಾಡದ ಹುಂಭರು.

ಕಳೆದ ವರ್ಷದ ಮೈಲಿಗಲ್ಲಿನೆಡೆಗೆ ತಿರುಗಿ ನೊಡುವ ಸಮಯ. 2011 ರ ವರ್ಷ ಹೇಗಿತ್ತು. ಭ್ರಷ್ಟಾಚಾರದ ಪರಾಕಾಷ್ಟೆ, ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆ, ಅಕಾಲಿಕ ಮಳೆ, ಪ್ರಕೃತಿ ವಿಕೋಪ, ಸಮಾಜಕ್ಕೆ ಪಾಠ ಹೇಳಬೇಕಾದವರ ನೈತಿಕ ಅಧಃ ಪತನ, ಸಿರಿವ೦ತರ ಮತ್ತು ಬಡವರ ನಡುವಿನ ಅಗಲವಾಗುತ್ತಿರುವ ಕ೦ದಕ, ನಡುವಿನಲ್ಲಿ ಅತ೦ತ್ರರಾಗಿರುವ ಮಧ್ಯಮವರ್ಗದವರ ತ್ರಿಶ೦ಕು ಸ್ಥಿತಿ, ಎಲ್ಲಕ್ಕೂ ಕಳಶವಿಟ್ಟ೦ತೆ ಮೆರೆಯುತ್ತಿರುವ ಕ್ರೌರ್ಯ, ಮರೆಯಾಗುತ್ತಿರುವ ಮಾನವೀಯತೆ.
ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ ಈ ಕ್ಷಣದಿಂದ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ.

ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2012 ವರ್ಷದಲ್ಲಿ ಹೊಸ ಹರ್ಷ, ಹೊಸ ನಿರೀಕ್ಷೆ ಸುಖ, ಸಂತೋಷ, ಶಾಂತಿ ನೆಮ್ಮದಿ ಸಿಗುವಂತಾಗಲಿ ಎಂದು ಹಾರೈಸುವ ನಮ್ಮಕಿನ್ನಿಗೋಳಿ

 

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಉದ್ಯೋಗ ಮೇಳ

ಮಂಗಳೂರಿನ ರಿಸೋರ್ಸ್ ಜಂಕ್ಷನ್ ಮತ್ತು ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ಆಶ್ರಯದಲ್ಲಿ ಅನುಗ್ರಹ ಸಭಾಗಂಣದಲ್ಲಿ ಉದ್ಯೋಗ ಮೇಳ ನಡೆಯಿತು. 130 ಮಂದಿ ಈ ಸಂದರ್ಭ ತಮ್ಮ ಹೆಸರು ನೋಂದಾಯಿಸಿದರು....

Close