ಸರಿಯಿಲ್ಲವೆಂದು ಭಾವಿಸುವುದೇ ಸರಿಯಲ್ಲ

ಇದೊಂದು ಕಥೆ. ಒಬ್ಬ ದಾರಿಯಲ್ಲಿ ನಡೆದು ಬರುತ್ತಿದ್ದ. ಬಿಸಿಲಲ್ಲಿ ಬಹಳ ದೂರ ಕ್ರಮಸಿದ್ದರಿಂದ ಅವನು ಕೊಂಚ ವಿಶ್ರಾಂತಿಯನ್ನು ಬಯಸಿ ಅನತಿ ದೂರದಲ್ಲಿ ಕಾಣುತ್ತಿದ್ದ ಆಲದ ಮರದಡಿಗೆ ಬಂದು ಅದರ ನೆರಳಲ್ಲಿ ವಿಶ್ರಮಿಸಿಸುತ್ತಾನೆ. ಅಲ್ಲಿ ಕುಳಿತು ಅಲ್ಲೇ ಸಮೀಪದ ಗದ್ದೆಯಲ್ಲಿ ಯಾರೊ ಬೆಳೆಸಿದ ಕುಂಬಳಕಾಯಿಯ ಬಳ್ಳಿಯಲ್ಲಿ ಬೆಳೆದ ಬೃಹತ್ ಗಾತ್ರದ ಕುಂಬಳ ಕಾಯಿಯನ್ನು ನೋಡುತ್ತಾನೆ. ಅದನ್ನು ಕಂಡು ಅವನಿಗೆ ನಗು ಬರುತ್ತದೆ. ಸಣ್ಣ ಬಳ್ಳಿಯಲ್ಲಿ ದೇವರು ದೊಡ್ಡಗಾತ್ರದ ಕಾಯಿಗಳನ್ನು ಇಟ್ಟಿದ್ದಾನೆ. ಗಗನ ಚುಂಬಿಯಾಗಿ ಬೆಳೆದ ಈ ದೈತ್ಯ ಆಲದಲ್ಲಿ ಗೋಳಿಯಾಕಾರದ ಸಣ್ಣ ಸಣ್ಣ ಕಾಯಿಗಳನ್ನಿಟ್ಟಿದ್ದಾನೆ. ಒಂದಕ್ಕೊಂದು ಹೊಂದಾಣಿಕೆಯೆ ಇಲ್ಲ. ದೇವರಿಗೆ ತಲೆ ಸರಿ ಇಲ್ಲ. ಹಾಗಾಗಿ ಅವನ ಸೃಷ್ಟಿಯೂ ವಿಚಿತ್ರವಾಗಿದೆ ಎನ್ನುತ್ತಾ ಮೇಲೆ ನೋಡುವಾಗ ಅವನ ಮುಖದ ಮೇಲೆ ಆಲ ಒಂದು ಕಾಯಿ ಬೀಳುತ್ತದೆ. ಆಗ ಅವನು ಹೇಳುತ್ತಾನೆ. ದೇವರು ನಿಜವಾಗಿಯೂ ಬುದ್ಧಿವಂತ ಒಂದು ವೇಳೆ ಕುಂಬಳ ಕಾಯಿಯ ಗಾತ್ರದ ಕಾಯಿಗಳನ್ನು ದೇವರು ಆಲದ ಮರಕ್ಕೆ ಕೊಟ್ಟಿದ್ದರೆ ಈಗ ನಾನು ಸತ್ತೇ ಹೋಗುತ್ತಿದ್ದೆ. ದೇವರು ದೊಡ್ಡವನು ಎಂದು ಹೇಳುತ್ತಾ ತನ್ನ ಮನೆಗೆ ನಡೆಯುತಾನೆ.

ನಾವೂ ಕೂಡ ಹಾಗೆ ಅದು ಸರಿ ಇಲ್ಲ, ಇದು ಸರಿ ಇಲ್ಲ, ಅದು ಹೀಗಿದ್ದರೆ ಚೆನ್ನಾಗಿತ್ತು; ಇದು ಹಾಗಿದ್ದರೆ ಚೆನ್ನಾಗಿತ್ತು ಎಂದು ಗೊಣಗುತ್ತಲೇ ಇರುತ್ತೇವೆ. ನಮಗೆ ಎರಡೂ ಕಣ್ಣಗಳೂ ಮುಖದ ಮೇಲೆ ಯಾಕೆ; ಎದೆಯಲ್ಲೊಂದು ಬೆನ್ನಲ್ಲಿ ಒಂದು ಇರುತ್ತಿದ್ದರೆ ನೋಡಲು ತುಂಬಾ ಅನುಕೂಲವಾಗುತ್ತಿತ್ತು ಎಂದೂ ಯೋಚಿಸುವವರಿದ್ದಾರೆ. (ಹಾಗಿರುತ್ತಿದ್ದರೆ ನಾವು ಧರಿಸುವ ಬಟ್ಟೆಯ ವಿನ್ಯಾಸವೂ ಬದಲಾಗುತ್ತಿತ್ತು!) ನಮಗೆ ಹಕ್ಕಿಗಳ ಹಾಗೆ ರೆಕ್ಕೆಗಳು ಯಾಕಿಲ್ಲ? ಇರುತ್ತಿದ್ದರೆ ಚೆನ್ನಾಗಿತ್ತಲ್ಲವೆ? (ಪೆಟ್ರೋಲಿನ ಬೆಲೆ ಏರಿಕೆಯೇ ಇರುತ್ತಿರಲಿಲ್ಲ!) ಹೀಗೆ ಒಂದೇ ಎರಡೇ? ಅನೇಕ ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತಾ ನಾವು ವಾಸ್ತವವನ್ನು ಪ್ರೀತಿಸದೆ ನಿರ್ಲಕ್ಷ ವಹಿಸುತ್ತೇವೆ. ಆಗ ಆನಂದ ನಮಗೆ ಕನಸಿನ ಮಾತಾಗುತ್ತದೆ. ಕಪ್ಪಗಿರುವವರು ನಾವು ಬಿಳಿಯಾಗಲಿಲ್ಲ ಎಂಬ ಕೊರಗಿನಲ್ಲೇ ತಮ್ಮ ಕಪ್ಪಿನಲ್ಲಿರುವ ಸೌಂದರ್ಯವನ್ನು ಅರಿಯದೆ ಖಿನ್ನರಾಗುತ್ತಾರೆ. ಬಿಳಿ ಇದ್ದವರು ತಮ್ಮ ಮೊಂಡು ಮೂಗಿನ ಬಗೆಗೂ, ದಪ್ಪ ತುಟಿಯ ಬಗೆಗೊ ಮರುಗಿ ಅವರ ಸಹಜ ಸೌಂದರ್ಯವನ್ನು ತಿಳಿಯದೆ ದುಃಖಿಗಳಾಗುತ್ತಾರೆ.
ಈ ಸೃಷ್ಟಿ ವಿಚಿತ್ರ ಹೌದು. ಸಣ್ಣ ದೃಷ್ಟಿಯಿಂದ ನೋಡಿದಾಗ ಇಲ್ಲಿ ವಿಕಾರಗಳು ಕಾಣಬಹುದು. ಲೋಕವನ್ನು, ನಮ್ಮನ್ನು ನಾವು ಯಾವ ರೀತಿ ನೋಡಬೇಕು ಎಂಬುವುದರ ಬಗ್ಗೆ ಡಿ.ವಿ.ಜಿಯವರ ಈ ಕಗ್ಗವನ್ನು ಗಮನಿಸೋಣ.
ಅಸಮದಲಿ ಸಮತೆಯನು ವಿಷಯದಲಿ ಮೈತ್ರಿಯನು
ಅಸಮಂಜಸದಿ ಸಮನ್ವಯ ಸೂತ್ರದ ನಯವ
ವೆಸನಮಯ ಸಂಸಾರದಲಿ ವಿನೋದವ ಕಾಣ್ಬ
ರಸಿಕತೆಯ ಯೋಗವೆ- ಮಂಕುತಿಮ್ಮ
ಅಸಮದಲ್ಲಿ ಸಮತೆಯನ್ನು, ವಿಷಯದಲ್ಲಿ ಮೈತ್ರಿಯನ್ನು ಸಮಂಜಸವಲ್ಲದ್ದರಲ್ಲಿ ಸಮನ್ವಯ ಸೂತ್ರದ ನಯದ ಮಹತ್ತ್ವವನ್ನು ಕಾಣುವುದು. ದುಃಖಮಯ ಸಂಸಾರದಲ್ಲಿ ಆನಂದವನ್ನು ಕಾಣುವ ರಸಿಕತೆಯ ಯೋಗವೆಂದು ಡಿ.ವಿ.ಜಿಯವರು ಅಭಿಪ್ರಾಯ ಪಡುತ್ತಾರೆ.
ಸೃಷ್ಟಿ ಸರಿ ಇಲ್ಲ ಎನ್ನುವ ನಮ್ಮ ದೃಷ್ಟಿ ಬದಲಾಗಬೇಕು. ಅಲ್ಲಿ ಸಮತೆಯನ್ನು ಕಾಣಬೇಕು. ದನಹುಲ್ಲು ಮೇಯುತ್ತದೆ. ಹುಲಿ ಮಾಂಸ ಮೆಲ್ಲುತ್ತದೆ. ಎಷ್ಟೇ ಹಸಿವಾಗಿ ಸಾಯುವ ಸ್ಥಿತಿ ಬಂದರೂ ಹುಲಿ ಹುಲ್ಲನ್ನಾಗಲಿ, ದನ ಮಾಂಸವನ್ನಾಗಲಿ ಮೆಲ್ಲಲಾರದು ಇದು ಪ್ರಕೃತಿಯ ನಿಯಮ. ಎಲ್ಲವೂ ನಮ್ಮ ಮೂಗಿನ ನೇರಕ್ಕೆ ಇರಬೇಕೆಂದು ಭಾವಿಸುವುದು ತಪ್ಪು. ನಮ್ಮ ದೇಹವು ತೆಳ್ಳಗೆಯೊ, ಬೆಳ್ಳಗೆಯೊ, ದಪ್ಪವೊ, ಕಪ್ಪಗೆಯೊ ಇರಬಹುದು. ಅದು ದೇವರ ಕೊಡುಗೆ. ಅದನ್ನುಕೀಳಾಗಿ ಕಾಣಲು ನಾವಾರು? ಅದಕ್ಕಾಗಿ ಚಿಂತಿಸದೆ ನಮ್ಮ ಪಾಲಿಗೆ ಬಂದದ್ದನ್ನು ಆನಂದದಿಂದ ಸ್ವೀಕರಿಸಬೇಕು. ಆಗ ಮಾತ್ರ ಬದುಕು ಸುಂದರವಾಗುತ್ತದೆ.
ಈ ಪ್ರಕೃತಿ ವೈವಿಧ್ಯಮಯವಾಗಿದೆ. ಇಲ್ಲಿರುವ ಪ್ರತಿಯೊಂದು ಕೂಡ ಮತ್ತೊಂದರಂತಿಲ್ಲ. ಇಲ್ಲಿ ವಿಷವೂ ಇದೆ; ಅಮೃತವೂ ಇದೆ. ಈ ಎಲ್ಲಾ ವೈವಿಧ್ಯಮಯ ನಡುವೆ ಪ್ರಕೃತಿ ಒಂದು ಭವ್ಯ ಮೈತ್ರಿಯನ್ನು ಸಾದಿಸಿದೆ. ಇದನ್ನು ನಾವರಿತು ತಾರತಮ್ಯವನ್ನು ಕಾಣದೆ ಎಲ್ಲರಲ್ಲೂ ಎಲ್ಲದರಲ್ಲೂ ಮೈತ್ರಿಯನ್ನು ಸಾದಿಸಬೇಕು. ಯಾಕೆಂದರೆ ಪ್ರಕೃತಿಯಲ್ಲಿ ಯಾವುದು ಅಸಮಂಜಸವೆಂದು ನಾವು ಬಗೆಯುತ್ತೇವೆಯೊ ಅಲ್ಲಿ ಸಮನ್ವಯತೆಯ ನಯವಾದ ಏಕಸೂತ್ರವಿದೆ. ಅದು ಸಮಂಜಸವಾಗಿ ಪರಿಪೂರ್ಣವಾಗಿದೆ.
ಸಂಸಾರದಲ್ಲಿ ಸುಖವಿದ್ದಾಗ ಆನಂದವನ್ನು ಕಾಣುವುದು ದೊಡ್ಡ ವಿಷಯವಲ್ಲ. ವ್ಯಸನದಲ್ಲಿ ರಸಿಕತೆಯನ್ನು ಕಾಣುವುದರಲ್ಲಿ ಜೀವನವಿದೆ. ಅದನ್ನೇ ಯೋಗವೆಂದು ಡಿ.ವಿ.ಜಿ. ಹೇಳಿದ್ದಾರೆ. ಯೋಗವೆಂದರೆ ಕೂಡಿಸುವುದು ಎಂದರ್ಥ. ನಮ್ಮಲ್ಲಿ ದುಃಖವಿದ್ದರೂ ಈ ಪ್ರಕೃತಿಯ ಸಹಜವಾದ ಆನಂದದಲ್ಲಿ ನಮ್ಮ ಮನಸ್ಸನ್ನು ಕೂಡಿಸಿ ಆನಂದವನ್ನು ಪಡಬೇಕು. ಆದ್ದರಿಂದ ಇಲ್ಲವೆಂಬುದ ಬಗ್ಗೆ ದುಃಖಿಸುತ್ತಾ ಇರುವುದನ್ನು ಮರೆಯುವ ಬದಲು, ಮತ್ತಾರಲ್ಲೊ ಇಲ್ಲದ್ದನ್ನು ಪ್ರತಿಯೊಬ್ಬರಲ್ಲೂ ದೇವರು ಕೊಟ್ಟಿರುತ್ತಾನೆ. ಅದನ್ನು ಕಂಡುಕೊಂಡು ಅದರಲ್ಲಿ ಆನಂದವನ್ನು ಕಾಣಬೇಕು. ಹೊರಗಿರುವ ಸುಖವನ್ನು ಕಂಡು ಅದು ನಮಗಿಲ್ಲ ಎಂದು ಕೊರಗುವ ಬದಲು ನಮ್ಮೊಳಗಿರುವ ಸುಖವನ್ನು ಹುಡುಕಿ ತೃಪ್ತರಾಗಬೇಕು. ತೃಪ್ತಿಯಲ್ಲೇ ಜೀವನದ ಯಶಸ್ಸು ಇದೆ. ಅತೃಪ್ತನಿಗೆ ಅಮರ ಲೋಕವೂ ಆನಂದವನ್ನು ನೀಡಲಾರದು. ತೃಪ್ತನಿಗೆ ತನ್ನ ಮನೆಯೇ ಸ್ವರ್ಗವಾಗುತ್ತದೆ.

Comments

comments

Leave a Reply

Read previous post:
ಕಟೀಲು ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ

ಕಟೀಲು : ಶ್ರೀದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ನಡೆಯಿತು. ಸಾಂಸದ ನಳಿನ್ ಕುಮಾರ್, ಹಳೆ ವಿದ್ಯಾರ್ಥಿನಿ, ಪತ್ರಕರ್ತೆ ವಿಜಯಲಕ್ಷೀ ಶಿಬರೂರು, ಕಟೀಲು ದೇವಳ ಅರ್ಚಕ...

Close