ಸ್ವಾಮಿ ವಿವೇಕಾನಂದ – ರಾಷ್ಟ್ರೀಯ “ಯುವ ದಿನ

ಸನಾತನ ಧರ್ಮದ ಭಾರತೀಯ ಸಂಸ್ಕೃತಿಯ ಆರಾಧಕರಾಗಿ, ವಿಶ್ವದಲ್ಲಿ ವಿಶ್ವಮಾನವ ಸಂದೇಶವನ್ನು ನೀಡಿದ ಪ್ರತಿಭಾವಂತರದ ಸ್ವಾಮಿ ವಿವೇಕಾನಂದರು ಹಿಂದುತ್ವ ಮತ್ತು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಿ ಕೊಟ್ಟ ಮಹಾನುಭಾವರು.  ಇವರ ಮಾತುಗಳು, ಪುಸ್ತಕಗಳು ಈಗಲೂ ಅನೇಕ ಜನರಿಗೆ ಒಂದು ಸ್ಪೂರ್ತಿ ಹಾಗೂ ಆತ್ಮವಿಶ್ವಾಸ ಮೂಡಿಸುತ್ತದೆ.

ಸ್ವಾಮಿ ವಿವೇಕಾನಂದರು 1862ರಲ್ಲಿ 12ನೇ ಜನವರಿ ಮಕರಸಂಕ್ರಾಂತಿಯ ಶುಭದಿನದಂದು ಕಲ್ಕತ್ತದಲ್ಲಿ ಜನಿಸಿದರು.   ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ಅವರು ಪರಿಗಣಿತರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ರಾಷ್ಟ್ರೀಯ “ಯುವ ದಿನ”ವೆಂದು ಆಚರಿಸಲಾಗುತ್ತದೆ.

ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು. ಕಲ್ಕತ್ತೆಯ ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ತತ್ವಶಾಸ್ತ್ರಅಧ್ಯಯನ ಮಾಡಿದರು.

ಸ್ವಾಮೀಜಿಯವರದು ಅದೊಂಥರ ಡೈನಮಿಕ್ ಚಿಂತನೆ. ಹಳೆಯ ಮೌಲ್ಯಗಳನ್ನು ಚೂರೂ ಮಾಸದಂತೆ ಹೊಸ ಜನರಿಗೆ ತಲುಪಿಸುವುದು ಹೇಗೆಂಬ ಪಾಠವನ್ನು ಅವರಿಂದಲೇ ಕಲಿಯಬೇಕು. ಹಳೆಯ ಆದರ್ಶಗಳನ್ನೇ ಇಟ್ಟುಕೊಂಡು ಬಲಿಷ್ಠ ರಾಷ್ಟ್ರವನ್ನು ನಿರ್ಮಾಣ ಮಾಡುವ ಅವರ ಕಲ್ಪನೆ ಅಪರೂಪದ್ದು. ಹೀಗಾಗಿಯೇ ಸ್ವಾಮೀಜಿ ತಮ್ಮ ಜೀವನದ ಬಹುಮೂಲ್ಯ ಸಮಯವನ್ನು ವ್ಯಕ್ತಿ ನಿರ್ಮಾಣದ ಚಿಂತನೆಗೆ ಕೊಟ್ಟರು. ಅವರು ಶಿಕ್ಷಣದ ಕುರಿತೇ ಮಾತಾಡಲಿ, ಅಧ್ಯಾತ್ಮದ ಕುರಿತೇ ಮಾತನಾಡಲಿ, ಅವರು ಬೆರಳು ತೋರಿಸಿ ಮಾತನಾಡಿದಿದ್ದರೆ ಅದು ವ್ಯಕ್ತಿ ನಿರ್ಮಾಣದ ಬಗೆಗೇ.

 ‘ಸ್ವಾತಂತ್ರ್ಯವನ್ನು 24 ಗಂಟೆಗಳೊಳಗೆ ಕೊಡಿಸುತ್ತೇನೆ, ಆದರೆ ಆ ಜವಾಬ್ದಾರಿಯನ್ನು ನಿಭಾಯಿಸಬಲ್ಲ ನಿಭಾಯಿಸಬಲ್ಲ ಪುರುಷರೆಲ್ಲಿದ್ದಾರೆ? ಎಂಬಲ್ಲಿ ಅವರ ಕಳಕಳಿಯೂ ಅದೇ. ಬಹುಶಃ ಅವರ ಮಾತುಗಳ  ಒಳಾರ್ಥ ಹಿಂದೆಂದಿಗಿಂತಲೂ ಈಗ ನಮಗೆ ಚೆನ್ನಾಗಿ ಆಗುತ್ತಿದೆ. ವ್ಯಕ್ತಿಗಳನ್ನು ನಿರ್ಮಾಣ ಮಾಡುವಲ್ಲಿ ಅವರದ್ದೇ ಆದ ವಿಧಾನವೊಂದಿತ್ತು. ಅದು ಆತ್ಮವಿಶ್ವಾಸದ ಜಾಗೃತಿಯ ಮಾರ್ಗ. ಶತಶತಮಾನಗಳಿಂದ ಅಮರಿಕೊಂಡಿದ್ದ ಗುಲಾಮಿ ಮಾನಸಿಕತೆಯನ್ನು ‘ಆತ್ಮವಿಸ್ಮೃತಿ ಎಂದೇ ಕರೆದ ಸ್ವಾಮೀಜಿ ಆ ವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮವಿಸ್ಮೃತಿಯಿಂದ ಬಡಿದೆಬ್ಬಿಸಲು ಆತ್ಮಜಾಗೃತಿ ಉಂಟುಮಾಡಲು ಟೊಂಕ ಕಟ್ಟಿ ನಿಂತುಬಿಟ್ಟಿದ್ದರು. ಕೊಲಂಬೋದಿಂದ ಆಲ್ಮೊರದವರೆಗೆ ನಿರಂತರ ಪ್ರವಾಸ ಮಾಡುತ್ತ, ಉದ್ಬೋಧಕರ ಭಾಷಣ ಮಾಡುತ್ತ, ಮಲಗಿರುವ ಆತ್ಮಗಳನ್ನು ಬಡಿದೆಬ್ಬಿಸಿದರು ಸ್ವಾಮೀಜಿ.
ಸ್ವತಃ ಅತ್ಯಂತ ಸ್ವಾಭಿಮಾನದ, ಯಾರಿಗೂ ಬಾಗದ ಬದುಕು ಅವರದು. ಇಂತಹ ಸ್ವಾಭಿಮಾನಿ ಯುವಕ, ತನ್ನ ದೇಶವಾಸಿಗಳು ನಿರಭಿಮಾನಿಗಳಾಗಿ, ಆಂಗ್ಲರ ಅಡಿಯಾಳಾಗಿ ಕುಳಿತಿದ್ದರು ಅದು ಹೇಗೆಸಹಿಸಿಯಾನು ಹೇಳಿ? ಸ್ವಾಮೀಜಿ ವಿದೇಶ ಪ್ರವಾಸ ಮುಗಿಸಿ ಭಾರತಕ್ಕೆ ಬಂದಮೇಲೆ ಇಲ್ಲಿನ ಯುವಕರನ್ನು ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಅವರಲ್ಲಿನ ಪಶ್ಚಿಮದ ಮೋಹದ ಪೊರೆಯನ್ನು ಕಳಚಿ ಬಿಸುಟರು. ಆತ್ಮಹೀನತೆಯಿಂದ ನಿಸ್ತೆಜವಾಗಿದ್ದ ಯುವ ಜನಾಂಗಕ್ಕೆ ಚುರುಕು ಮುಟ್ಟಿಸಿ ಜಾಗೃತಿಯ ಹೊಸ ಪರ್ವ ಬರೆದರು. ಪಶ್ಚಿಮಕ್ಕೆ ಭಾರತ ಯಾವ ನಿಟ್ಟಿನಿಂದಲೂ ಕಡಿಮೆಯಿಲ್ಲವೆಂಬುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು.  ದೀರ್ಘ ನಿದ್ರೆಯಿಂದ ಹಿಂದೂ ಸಮಾಜ ಮೈ ಕೊಡವಿ ಏಳುವ ಕಾಲ ಬಂದೇಬಿಟ್ಟಿತು. ಅಲ್ಲದೆ ಮತ್ತೆನು?  ಆಂಗ್ಲರ ಬೂಟು ನೆಕ್ಕುತ್ತಿದ್ದ ಭಾರತೀಯರಲ್ಲಿ ಚೈತನ್ಯ ಮೂಡಿಸಿದ್ದರಲ್ಲಿ ಅತಿಶಯೋಕ್ತಿ ಖಂಡಿತ ಇಲ್ಲ.
ಆಂಗ್ಲ ಪ್ರಭುತ್ವವು ಸ್ವಾಮೀಜಿಯ ಹಿಂದೆ ಬಿತ್ತು. ಗಲ್ಲಿಗಲ್ಲಿಗಳಲ್ಲೂ ಸ್ವಾಮೀಜಿಯವರನ್ನು ಹಿಂಬಲಿಸುವ ಆಂಗ್ಲ ಗುಪ್ತಚರರನ್ನು ಕಂಡು ಸೋದರಿ ನಿವೇದಿತೆಗೇ ಅಸಹ್ಯವಾಗಿತ್ತು. ಅದರೂ ಅವರು ಸ್ವಾಮೀಜಿಯನ್ನು ಹಿಡಿದು ಜೈಲಿಗೆ ತಳ್ಳುವಂತಿರಲಿಲ್ಲ. ಆತ್ಮವಿಶ್ವಾಸದ ಕುರಿತು ಅವರಾಡಿದ್ದ ಮಾತುಗಳು ಹೊಸತೇನಲ್ಲ. ಅವೆಲ್ಲವೂ ಶಾಸ್ತ್ರಗಳಿಂದ ಸ್ವೀಕರಿಸಿದ್ದಸೇ ಅಗಿತ್ತು. ‘ಅಭೀಃ (ಹೆದರದಿರು) ಎನ್ನುವ ಉಪನಿಷತ್ ವಾಕ್ಯವನ್ನು ಅವರು ಪದೇಪದೇ ನೆನಪಿಸುತ್ತಿದ್ದರು. ಹೀಗಾಗಿಯೇ ಅವರಾಡುವ ಮಾತುಗಳು ಕೇಳುಗರಿಗೆ ಸರಿಯಾದ ದಿಕ್ಕು ತೋರಿದರೆ, ಆಳುವ ಸರ್ಕಾರ ಮಾತ್ರ ಅವರನ್ನು ಬಂಧಿಸಲಾಗದೆ ಚಡಪಡಿಸುತ್ತಿತ್ತು.
ಸ್ವಾಮೀಜಿಯವರ ಆ ಸಂದೇಶ ಇಂದು ಭಾರತಕ್ಕೆ ಮತ್ತೆ ಬೇಕಿದೆ. ಅವರ ಸ್ವಾಭಿಮಾನದ, ಆತ್ಮವಿಶ್ವಾಸದ ಕಿಚ್ಚು ನಮಗೂ ತಾಕಬೇಕಿದೆ. ಭಾರತ ಜಗತ್ತಿನ ಯಾವ ರಾಷ್ಟ್ರಗಳಿಗೂ ಕಡಿಮೆಯಿಲ್ಲ ಎನ್ನುವುದನ್ನು ನಾವು ಸಾಬೀತುಪಡಿಸಿ ತೋರಬೇಕಿದೆ . ಭಾರತದ ಕೀರ್ತಿಪತಾಕೆ ಹಾರಾಡದ ಜಾಗವೇ ಇಲ್ಲ ಎಂಬುದು ಜಗತ್ತಿಗೆ ತಿಳಿಯಲು ನಾವು ಶ್ರಮಿಸಬೇಕಿದೆ. ಸ್ವಾಮೀಜಿ ಹೇಳುತ್ತಾರಲ್ಲ, ಭಾರತವೆಂಬ ಹಡಗು ಶತಶತಮಾನಗಳಿಂದ ಜನರನ್ನು ದಡ ಸೇರಿಸುತ್ತಿದೆ. ಈಗ ಈ ಹಡಗಿಗೆ ತೂತು ಬಿದ್ದಿದೆ. ಹಾಗೆಂದು ಅದನ್ನು ಬಯ್ಯುತ್ತ ಕೂತರೆ ಪ್ರಯೋಜನವಿಲ್ಲ. ನಮ್ಮ ರಕ್ತಹರಿಸಿಯಾದರೂ ಈ ತೂತು ಮುಚ್ಚಬೇಕು. ಈ ಮಾತುಗಳಲ್ಲಿನ ಕಳಕಳಿ ಗಮನಿಸಿ. ಬಹುಶಃ ಇನ್ನು ಎಂಟು ಹತ್ತು ಶತಮಾನಗಳವರೆಗಾದರೂ ಈ ಮಾತಿನ ಬಿಸಿ ತಾಕುತ್ತಲೇ ಇರುತ್ತದೆ. ಇಷ್ಟನ್ನು ಅರಿತು ಸರಿಯಾಗಿ ನಡೆದರೆ ಭಾರತ ಪುರೋಗಾಮಿಯಾಗಲೆಬೇಕು.
ಸ್ವಾಮೀಜಿ  ಬರೀ ಆತ್ಮವಿಶ್ವಾಸ ತುಂಬುವ ಮಾತುಗಳಷ್ಟೇ ಆಡುತ್ತ ಉಳಿಯಲಿಲ್ಲ. ಅಂತಹವರಿಗೆಮುಂದಿನ ಕೆಲಸಗಳೇನು ಎಂಬುದನ್ನೂ ಹೇಳಿದರು. ಅಸ್ಪೃಶ್ಯತೆಯ ಕೊಳಕು ರಾಡಿಯಲ್ಲಿ ಬಿದ್ದು ಗುದ್ದಾಡುತ್ತಿದ್ದವರಿಗೆ ಎಚ್ಚರಿಕೆಯ ಸಂದೇಶ ಕೊಟ್ಟರು.  ‘ದೀನ ದಲಿತರ ಸೇವೆ ಮಾಡಿ, ಇಲ್ಲವೆ ಸಮುದ್ರಕ್ಕೆ ಬಿದ್ದು ಸಾಯಿರಿ ಎಂಬ ಕಟು ಮಾತುಗಳಿಂದ ಮೇಲ್ವರ್ಗವನ್ನು ತಿವಿದರು. ಸ್ವತಃ ಬದುಕಿನಲ್ಲಿ ಬಡಬಗ್ಗರೊಂದಿಗೆ, ತುಳಿತಕ್ಕೊಳಗಾದವರೊಂದಿಗೆ ನಿಂತು, ಅವರ ಜೀವನ ಮಟ್ಟವನ್ನು ಸುಧಾರಿಸುವ ಯತ್ನವನ್ನು ಸ್ವಾಮೀಜಿ ಮಾಡಿದರು.
ಸ್ವಾಮೀಜಿ ಅದಕ್ಕೇ ಅಷ್ಟೊಂದು ಇಷ್ಟವಾಗೋದು. ಅವರ ಮಾತುಗಳು ಬರಿಯ ಮಾತುಗಳಷ್ಟೇ ಆಗಿರಲಿಲ್ಲ. ಅವು ಕಾರ್ಯ ರೂಪಕ್ಕಿಳಿದ ಸಂತನ ಸಂಕಲ್ಪಗಳಾಗಿದ್ದವು. ಅವರೇ ಹೇಳಿದ್ದಾರಲ್ಲ, ‘ನಾನಾಡಿರುವ ಮಾತುಗಳು ಮುಂದಿನ ಸಾವಿರ ವರ್ಷಗಳವರೆಗೂ ದಾರಿತೋರಬಲ್ಲವು ಅಂತ. ಅವರ ಮಾತುಗಳು ಇಮದಿಗೂ ಸತ್ವಯುತವಾಗಿ ಕಾಣಲು ಅದೆ ಕಾರಣ. ಅನಿಸಿದ್ದನ್ನು ನೇರವಾಗಿ ಹೇಳುವ, ಮಾಡಬೇಕೆನಿಸಿದ್ದನ್ನು ಮಾಡುವ ಅವರ ಆ ಛಾತಿ ಇಂದಿನ ಯುವಜನತೆಗೆ ಪರಮಶ್ರೇಷ್ಠ ಆದರ್ಶ.
ನಾವು ಮಾಡಬೇಕಿರೋದು ಇಷ್ಟೇ. ಅವರು ನಡೆದುತೋರಿದ ಆ ಹಾದಿಯಲ್ಲಿ ಹೆಜ್ಜೆ ಹಾಕುವ ಯತ್ನ ಮಾಡಬೇಕು. ವಿವೇಕಾನಂದರ ಜಯಂತಿಯೆಂದರೆ ಹೂಹಾರ ಹಾಕಿ ಪೂಜಿಸಿ, ಸರಕಾರಿ ಕಾರ್ಯಕ್ರಮ ಎಂಬ ಭಯಭಕ್ತಿಯಿಂದ ಸುಮ್ಮನಾಗಿಬಿಡೋದಲ್ಲ. ಅವರ ಚಿಂತನೆಗಳನ್ನು ಸಾಕ್ಷಾತ್ಕರಿಸಿಕೊಂಡು ಅವರ ಆಶಯಕ್ಕೆ ತಕ್ಕಂತೆ ಬದುಕುವುದು ಇಂದಿನ ಅಗತ್ಯ. ಅದು ಸಾಧ್ಯವಾಗುವುದಾದರೆ, ಆ  ಜಯಂತಿಯ ಆಚರಣೆ  ಸಾರ್ಥಕ.
ಹಾಗಾದಲ್ಲಿ, ನಿಮಗಿದೋ, ವಿವೇಕಾನಂದ ಜಯಂತಿಯ ಹಾರ್ದಿಕ ಶುಭ ಕಾಮನೆಗಳು.

 

Comments

comments

Leave a Reply

Read previous post:
ಅಸಂಘಟಿತ ಕಾರ್ಮಿಕರಿಗೆ 1 ಕೋಟಿ ರೂ. ಅಪಘಾತ ವಿಮೆ

ರೋಟರಾಕ್ಟ್ ಕ್ಲಬ್ ಸಹಯೋಗದಲ್ಲಿ ಸ್ಥಳೀಯ ಅಸಂಘಟಿತ ನೂರು ಮಂದಿ ಕಾರ್ಮಿಕರಿಗೆ ಮಾಡಲಾಗಿರುವ ಒಂದು ಕೋಟಿ ರೂ. ಮೌಲ್ಯದ ಅಪಘಾತ ವಿಮೆಯನ್ನು ಮುಖ್ಯಮಂತ್ರಿ ಸದಾನಂದ ಗೌಡ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಸಚಿವ...

Close