ಕಡಲತಡಿಯಲ್ಲಿ ಭೋರ್ಗರೆದ ಯುವಜನ ಮಹಾಸಾಗರ

Reshma Mangalore

ಮಂಗಳೂರು :  ನೆಹರೂ ಮೈದಾನದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಭೋರ್ಗರೆದ ಯುವಜನ ಮಹಾಸಾಗರ ವೈಭವದ ಬೃಹತ್ ಸಾಂಸ್ಕ್ರತಿಕ ಮೆರವಣಿಗೆ ಉದ್ಘಾಟನೆಗೊಳ್ಳುವ ಮೂಲಕ ಐದು ದಿನಗಳ 17ನೇ ರಾಷ್ಟ್ರೀಯ ಯುವಜನೋತ್ಸವ ಚಾಲನೆ ಪಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಮೆರವಣಿಗೆಗೆ ಚಾಲನೆ ನೀಡಿದರು.

ಕರ್ನಾಟಕ ಮುಖ್ಯಮಂತ್ರಿ ಡಿ. ಸದಾನಂದ ಗೌಡ, ಉನ್ನತ ಶಿಕ್ಷಣ ಸಚಿವ ಡಾ| ವಿ. ಎಸ್. ಆಚಾರ್ಯ, ಕೇಂದ್ರ ಸಚಿವರಾದ ಅಜಯ್ ಮಾಕನ್, ವೀರಪ್ಪ ಮೊಲಿ, ಧರ್ಮದರ್ಶಿ ವಿರೇಂದ್ರ ಹೆಗ್ಗಡೆ, ಶಾಸಕರಾದ ಯೋಗೀಶ್ ಭಟ್, ರಮಾನಾಥ ರೈ, ಅಭಯಚಂದ್ರ ಜೈನ್, ಮಲ್ಲಿಕಾ ಪ್ರಸಾದ್, ಯು. ಟಿ. ಖಾದರ್ , ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ,  ಕಸಾಪ ಜಿಲ್ಲಾ ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ್ ಕಲ್ಕೂರ ಸೇರಿದಂತೆ ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಡಮಾನ್‌ ನಿಕೋಬಾರ್‌, ಆಂಧ್ರಪ್ರದೇಶ, ಅಸ್ಸಾಂ, ಅರುಣಾಚಲ ಪ್ರದೇಶ, ಬಿಹಾರ್‌, ಚಂಡೀಗಢ, ದಾದ್ರಾ  ನಗರಹವೇಲಿ, ದಾಮನ್‌ ಆ್ಯಂಡ್‌ ದಿಯು, ದಿಲ್ಲಿ, ಗೋವಾ, ಗುಜರಾತ್‌, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಕೇರಳ, ಮಿಜೋರಾಂ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರಿ, ಮೇಘಾಲಯ, ಒಡಿಶಾ, ಪುದುಚೇರಿ, ಪಂಜಾಬ್‌, ರಾಜಸ್ಥಾನ್‌, ಉತ್ತರಾಂಚಲ್‌, ಸಿಕ್ಕಿಂ, ತಮಿಳುನಾಡು, ಪಶ್ಚಿಮ ಬಂಗಾಲ ಹಾಗೂ ಕರ್ನಾಟಕದ ಪ್ರತಿನಿಧಿಗಳು, ಜಾನಪದ ಕಲಾ ತಂಡಗಳು ತಮ್ಮ ಸಾಂಪ್ರದಾಯಿಕ ಧಿರಿಸುಗಳೊಂದಿಗೆ ಪಾಲ್ಗೊಳ್ಳುವ ಮೂಲಕ ಇಡೀ ಭಾರತದ ವೈವಿಧ್ಯತೆಯಲ್ಲಿ ಏಕತೆ ಸಾರುವ ಕಾರ್ಯಕ್ರಮಕ್ಕೆ ಮಂಗಳೂರು ಜ್ವಲಂತ ಸಾಕ್ಷಿಯಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಹಾದು ಉದ್ಘಾಟನಾ ಕಾರ್ಯಕ್ರಮ ನಡೆಯುವ ಮಂಗಳಾ ಕ್ರೀಡಾಂಗಣ ಕಡೆಗೆ ಸಾಗಿತು.

ರಾಜ್ಯದ ಮಹಿಳಾ ಡೊಳ್ಳು ಕುಣಿತ, ಗೊಂಬೆಗಳು, ಪೂಜಾ ಕುಣಿತ, ಕಂಗೀಲು ಕುಣಿತ ಗೊರವರ ಕುಣಿತ, ನಂದೀ ಧ್ವಜ, ತಾಲೀಮ್‌, ಕೊಡೆ, ತುಳುನಾಡ ತಾಸೆ, ವೀರಗಾಸೆ, ಹಾಲಕ್ಕಿ ಕುಣಿತ, ಪುರವಂತಿಕೆ, ದಪ್ಪು, ಡೊಳ್ಳು ಕುಣಿತ, ಪಟದ ಕುಣಿತ,  ದುಡಿ ಕುಣಿತ, ಚೆಂಡೆ, ಮರಗಾಲು ಕುಣಿತ,  ಪೂಜಾ ಕುಣಿತ, ಸಾಕ್ಸ್‌ಫೋನ್‌, ಬೆಳಗಾವಿ ಪೇಟ, ಕೀಲು ಕುದುರೆ, ಯಕ್ಷಗಾನ (ತೆಂಕುತಿಟ್ಟು ಮತ್ತು ಬಡಗುತಿಟ್ಟು), ವೀರಭದ್ರ ಕುಣಿತ, ಆಟಿ ಕಳಂಜ, ಕಂಸಾಳೆ,  ಬ್ಯಾಂಡ್‌ಸೆಟ್‌,  ಕರಗ ನೃತ್ಯ, ಗೊಂಬೆ ಬಳಗ, ಶಂಖ, ಕೊಂಬು, ತ್ರಿವರ್ಣ ಧ್ವಜ, ಪೊಲೀಸ್‌ ಬ್ಯಾಂಡ್‌, ಜೊತೆಗೆ ಕೇರಳದ ಮಹಿಳಾ ಚಂಡೆ, ಪಂಚವಾದ್ಯ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದವು. ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಮವಸ್ತ್ರಗಳಲ್ಲಿ ಭಾಗವಹಿಸಿದ್ದರು.ಯುವಜನೋತ್ಸವ ಪಥಸಂಚಲನ ಕಾರ್ಯಕ್ರಮದಲ್ಲಿ ಪ್ರಥಮವಾಗಿ 100 ಶಂಖ, 100 ಕೊಂಬು, 100 ಚೆಂಡೆ ವಾದನ ತಂಡ ಸಾಗಿತು.

ಮಂಗಳಾ ಕ್ರೀಡಾಂಗಣದ ಮೇಲೆ ಆಗಸದಲ್ಲಿ 3 ವರ್ಣರಂಜಿತ ಪ್ಯಾರಾಸೈಲಿಂಗ್‌ ಜನಮನ ರಂಜಿಸಿತು. ಕಿರುವಿಮಾನದಿಂದ ಪುಷ್ಪವೃಷ್ಟಿ, ಮಂಗಳಾ ಕ್ರೀಡಾಂಗಣದ ಸುತ್ತ ಜಗಮಗಿಸುವ ಗೂಡು ದೀಪಗಳು, 5,000 ಬೆಲೂನ್‌ಗಳ ಹಾರಾಟ, 17 ತುಪಾಕಿಗಳು ಮೊಳಗಿ 17ನೇ ಯುವಜನೋತ್ಸವಕ್ಕೆ ಚಾಲನೆ ದೊರಕಿತು

ಯುವಜನೋತ್ಸವದ ವೇದಿಕೆಯಲ್ಲಿ ತುಳುನಾಡಿನ ಪರಂಪರೆಯ ಗುತ್ತಿನ ಮನೆಯ ಚಾವಡಿ  ಅನಾವರಣಗೊಂಡಿತ್ತು. ಮುಂಭಾಗದಲ್ಲಿ ಕಂಚಿನ 105 ದೀಪಗಳಲ್ಲಿ ಜ್ಯೋತಿ ಪ್ರಜ್ವಲಿಸುತ್ತಿದೆ. ಬಲ ಹಾಗೂ ಎಡ ಬದಿಗಳ ಅಂಚಿನಲ್ಲಿ ಸುಮಾರು 8 ಅಡಿ ಎತ್ತರದ ಎರಡು ಕಂಚಿನ ದೀಪಗಳು. ಶ್ವೇತವಸ್ತ್ರ ಹೊದೆಸಿದ ಗೋಡೆ. ಗೋಡೆ ಮೇಲ್ಭಾಗದಲ್ಲಿ ಉದ್ದಕ್ಕೂ ಯಕ್ಷಗಾನದ ಕಿರೀಟ ಜಡೆ, ತೂಗು ಹಾಕಲಾಗಿದೆ. ಗೋಡೆಗಳಲ್ಲಿ ಶಿಲಾಬಾಲಿಕೆಯರು ನರ್ತಿಸುತ್ತಿದ್ದಾರೆ. ಅಲ್ಲಲ್ಲಿ ವಿಘ್ನ ವಿನಾಶಕ ಗಣೇಶನ ವಿಗ್ರಹಗಳು. ಚಾವಡಿಯಲ್ಲಿ ಕೆತ್ತನೆ ಕಂಬಗಳು. ಕುಸುರಿ ಕೆಲಸದ ಬಾಗಿಲುಗಳು. ಕಂಬಗಳಿಗೆ ಅಡಿಕೆ ಅಲಂಕಾರ. ವೇದಿಕೆಯ ಅಂಚಿನಲ್ಲಿ ಸಮೃದ್ಧಿ ಸಂಕೇತವಾಗಿ ಭತ್ತದ ತೆನೆ, ಹಾದಿಯ ಇಕ್ಕೆಲಗಳಲ್ಲಿ ವಿದ್ಯುತ್‌ ದೀಪಗಳಿಂದ ಜಗಮಗಿಸುವ ಬಣ್ಣದ ಕೊಡೆಗಳು, ಅಲ್ಲದೆ ಭತ್ತದ ತೆನೆ, ಅಡಿಕೆಯಿಂದ ಅಲಂಕೃತ ಪೋಡಿಯಂ ಎಲ್ಲರ ಗಮನ ಸೆಳೆಯುತ್ತಿದ್ದವು.

Comments

comments

Leave a Reply