ಹೊಸ ವರುಷ-ಪ್ರಕೃತಿಗೆ ಶುಭಾಶಯ

 ಎಲ್ಲರಿಗೂ ಹೊಸವರುಷದ ಶುಭಾಶಯಗಳು. ಅಬ್ಬಾ 2012ಬಂದೇ ಬಿಟ್ಟಿತು. 2011 ಕಳೆದೇ ಹೋಯಿತು! ವರುಷಗಳು ಹಾಗೆಯೇ, ಉರುಳುತ್ತವೆ. ಆದರೆ ಅದರೊಂದಿಗೆ ನಾವು ಉರುಳಬಾರದಷ್ಟೆ. ವರುಷದೊಂದಿಗೆ ಅರಳುತ್ತಾ ನಾವು ಸತ್ತರೂ ಅನೇಕ ವರುಷಗಳ ಅನಂತ ಗರ್ಭದಲ್ಲಿ ನಾವು ಮತ್ತೆ ಬದುಕಿರಬೇಕು. ಸಜೀವಿಗಳ ಸವಿನೆನಪಾಗಬೇಕು. ಗಾಂಧೀಜಿ, ಮದರ್ ತೆರೆಸಾ, ವಿವೇಕಾನಂದರಂತಹ ಅನೇಕ ಮಹಾನ್ ಚೇತನಗಳು ಕಾಯಮಾಸಿ ಹಲವು ಸಂವತ್ಸರಗಳೇ ಸಂದರೂ ಅವರ ಸಾಧನೆಯಿಂದ ಇನ್ನೂ ನಮ್ಮೊಡನೆ ಸತ್ಕೀರ್ತಿಯಾಗಿ, ಸವಿನೆನಪುಗಳಾಗಿ ಜೀವಂತವಾಗಿದ್ದಾರಲ್ಲವೇ? ಆದ್ದರಿಂದ ಹೊಸ ವರುಷದ ಆರಂಭದಲ್ಲಿ ಆ ಮಹಾಪುರುಷರಂತೆ ಸುಶೀಲರಾಗಿ ಮಹತ್ತರ ಸಾಧನೆಯನ್ನು ಮಾಡಲು ಸಂಕಲ್ಪಿಸಿ ಅದರಂತೆ ನಡೆದರೆ ನಮಗೆ ಸಾವಿಲ್ಲ ಎಂಬ ಸತ್ಯವನ್ನು ಮೊದಲು ಮನಗಂಡು ಮುಂದಿನ ವಿಚಾರಗಳನ್ನು ಹೇಳ ಬಯಸುತ್ತೇನೆ.
ವರುಷ ಕಳೆದು ಹೋದರೂ ಕಳೆದ ವರುಷ ನೆನಪುಗಳು ನಮ್ಮೊಂದಿಗೆ ಜೀವಂತವಾಗಿರುತ್ತದೆ, ಆ ನೆನಪುಗಳು ಅನಂತ. ಅದರಲ್ಲಿ ಸಿಹಿಯೂ ಇರಬಹುದು, ಕಹಿಯೂ ಇರಬಹುದು. ನಮಗೆ ಮರೆವು ಬೇಕೆಂದು ಯಾರೂ ಬಯಸುವುದಿಲ್ಲ. ಯಾಕೆಂದರೆ ಅದೊಂದು ದೌರ್ಬಲ್ಯ, ಆದರೆ ಕಹಿನೆನಪುಗಳನ್ನು ಕಳೆದುಕೊಳ್ಖಲು ನಮಗೆ ಮರೆವು ಬೇಕು”, ಒಬ್ಬ ನಮಗೆ ಮಾಡಿದ ಅನ್ಯಾಯವನ್ನು ಕ್ಷಮಿಸಿ ನಿರಾಳವಾಗಿ ಬದುಕುವುದಕ್ಕೆ ನಮಗೆ ಮರೆವು ಬೇಕು. ಒಳ್ಳೆದನ್ನು ಇಟ್ಟುಕೊಳ್ಳುದಕ್ಕೆ ನೆನಪುಬೇಕು ಯಾಕೆಂದರೆ ಆ ಒಳ್ಳೆಯ ನೆನಪೇ ಸದಾ ಆನಂದದಿಂದಿರಲು ಸಹಕಾರಿಯಾಗುತ್ತದೆ. ನಾವು ೨೦೧೧ರಲ್ಲಿ ಅಥವಾ ಅದಕ್ಕೂ ಹಿಂದೆ ಅನೇಕ ಸಲ ತಪ್ಪು ಹೆಜ್ಜೆಗಳನ್ನಿಟ್ಟು ಎಡವಿದ್ದಿರಬಹುದು ಅದು ಈ ವರುಷದಲ್ಲಿ ಮತ್ತೆ ಘಟಿಸದಿರುವುದಕ್ಕೆ ಹಿಂದೆ ಬಿದ್ದು ಆದ ಅನುಭವದ ನೆನಪಿರಬೇಕು, ಅನುಭವದ ಆಸರೆಯಿಂದ ನಮ್ಮ ಬದುಕು ಮತ್ತೆ ಅರಳುತ್ತದೆ. ಹಾಗಾಗಿ ಹಿಂದೆಕಳೆದ ದಿನಗಳೂ ಬೇಕು, ಮುಂಬರುವ ದಿನಗಳೂ ಬೇಕು, ಇಂದಿರುವ ದಿನಗಳೂ ಬೇಕು. ಗಿqದಬೇರು ಆಳಕ್ಕಿಳಿಯುತ್ತದೆ ಹೂ ಗಿಡದ ತಲೆಯಲ್ಲಿ ಅರಳುತ್ತದೆ. ಬೇರಿಲ್ಲದೆ ಹೂವಿಲ್ಲ, ಹೂವಿದ್ದರೆ ಬೇರಿಗೂ ಮತ್ತೊಂದು ಕಳೆ, ಬೆಲೆ, ಇತಿಹಾಸದ ಪುಟದಲ್ಲಿ ವರ್ತಮಾನದ ಬೇರುಗಳಿವೆ. ವರ್ತಮಾನದ ಒಡಲಲ್ಲೇ ಭವಿಷ್ಯದ ಬದುಕು ಮತ್ತು ಇತಿಹಾಸದ ಹುಟ್ಟಿರುತ್ತದೆ. ಹೀಗೆ ಎಲ್ಲದರ ಒಳಗೂ ಒಂದರ್ಥವಿದೆ. ಇಂತಹ ವಿಶಾಲ ದೃಷ್ಟಿಕೋನದಿಂದ ನೋಡಿದಾಗ ೨೦೧೨ ಸುಖಪ್ರದವಾಗುತ್ತದೆ.
ಹೊಸತ್ತು ಎಲ್ಲರಿಗೂ ಬೇಕು, ಆದ್ದರಿಂದಲೇ ಹೊಸ ವರುಷದ ಆರಂಭದಲ್ಲಿ ಎಲ್ಲರಲ್ಲೂ ಉಲ್ಲಾಸ, ಸಡಗರ ಮನೆಮಾಡುತ್ತದೆ. ಹೊಸಹೊಸ ಬಯಕೆಗಳು ಗರಿಕೆದರುತ್ತವೆ. ಶುಭಾಶಯಗಳ ಸುರಿಮಳೆಯೇ ಸುರಿದು ನಿಜವಾದ ಪ್ರೀತಿ, ವಂಚನೆ, ದ್ವೇಷ, ಅಸೂಯೆ ಮುಂತಾದ ಗುಣಾವಗುಣಗಳು ಕಾಣಿಸದಷ್ಟು ಹಿತವಾಗಿರುತ್ತದೆ. ಎಲ್ಲರಿಗೂ ಶುಭಾಶಯವನ್ನು ಕೋರುವ ನಾವು ಮುಂದೆ ಅವರಿಗೆ ಶುಭವನ್ನೇ ಮಾಡಬೇಕು. ಆ ಶುಭಾಶಯ ಬಂಜೆಯಾದ ಮಾತಾಗದೆ ಕೃತಿಗಿಳಿದು ಉಸಿರಾಡಬೇಕು. ಕಾಯೇನ ವಾಚಾ ಮನಸಾ ಅದು ಸಾಕಾರಗೊಳ್ಳಬೇಕು. ಅದು ಸಾವಿನಿಂದ ಅಮೃತತ್ತ್ವದೆಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಸಂಪನ್ನವಾಗಬೇಕು.
ಹೊಸ ವರುಷದ ಆರಂಭಕ್ಕೆ ಎಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುವ ನಾವು ನಿಸರ್ಗದ ದೇವಿಯನ್ನು ಮರೆತ್ತಿದ್ದೇವೆ. ನಾವು ಯಾಕೆ ಅವಳಿಗೆ ಶುಭಾಶಯಗಳನ್ನು ಸಲ್ಲಿಸಲಿಲ್ಲ? ನಿಜವಾಗಿ ನಾವು ಈ ಪ್ರಕೃತಿ ಮಾತೆಯ ಮಕ್ಕಳು ಪ್ರಕ್ರತಿಯಿಲ್ಲದೆ ನಮ್ಮ ಅಸ್ತಿತ್ವವಿಲ್ಲ. ನಾವು ೨೦೧೧ನ್ನು ಕಳೆದು 2012ಕ್ಕೆ ಕಾಲಿಟ್ಟಿದಿದ್ದರೆ ಅದು ಪ್ರಕೃತಿ ಮಾತೆಯ ಕೊಡುಗೆ. ಅವಳು ಮುನಿದರೆ ಜೀವವಿಲ್ಲ-ಜೀವನವಿಲ್ಲ. ಹಾಗಾಗಿ ಇಗಲಾದರೂ ಅವಳಿಗೆ ಅನ್ಯಯ ಮಾಡುವುದಿಲ್ಲ, ವಿರೂಪಗೊಳಿಸುವುದಿಲ್ಲ, ಮಲಿನಗೊಳಿಸುವುದಿಲ್ಲ ಎಂದು ಪ್ರತಿಜ್ಞೆಯನ್ನು ಮಾಡಿ ಅವಳಿಗೆ ಶುಭಾಶಯಗಳನ್ನು ಸಲ್ಲಿಸೋಣ, ಶರಣೆನ್ನೊಣ.

Comments

comments

Leave a Reply

Read previous post:
ಶುದ್ಧ ಹಾಲು ಉತ್ಪಾದಕರಿಗೆ ತರಬೇತಿ

ಕೇಂದ್ರ ಪುರಸ್ಕ್ರತ ಶುದ್ಧ ಹಾಲು ಉತ್ಪಾದನೆ ಯೋಜನೆಯಡಿ ಗುಚ್ಛ ಸಂಘಗಳ ಹಾಲು ಉತ್ಪಾದಕರಿಗೆ ತರಬೇತಿ ಕಾರ್ಯಗಾರ ಶುಕ್ರವಾರ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಳದ ಭಾರ್ಗವಿ ಸಮುದಾಯ ಭವನದಲ್ಲಿ...

Close