M.R.P.L. ನಲ್ಲಿ ಆಕಸ್ಮಿಕ ಸ್ಫೋಟ

ಶನಿವಾರ ಸಂಭವಿಸಿದ ಆಕಸ್ಮಿಕ ಸ್ಫೋಟ ಪ್ರಕರಣದಲ್ಲಿ ಓರ್ವ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ್ದು, ಇತರ 5ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕುಳಾಯಿ ಬರ್ಕೆಯ ನಾಗೇಶ್(25) ಸಾವನಪ್ಪಿದವರು. ಕೃಷ್ಣಾಪುರದ ಬಶೀರ್(24) ಮತ್ತು ಸಿರಾಜುದ್ದೀನ್(23), ಕಾಟಿಪಳ್ಳ ಕೈಕಂಬದ ಜನತಾಕಾಲನಿಯ ಶ್ರೀನಿವಾಸ್(33), ಬೋಳಾರ ಆಶ್ವಿತ್(23), ಮತ್ತು ಬೆಳ್ತಂಗಡಿಯ ಮಹೇಶ್ ಕುಮಾರ್(35) ಗಾಯಗೊಂಡವರು.
ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹೇಶ್ ಕುಮಾರ್ ಎಂ.ಆರ್.ಪಿ.ಎಲ್.ಸಂಸ್ಥೆಯ ಉದ್ಯೋಗಿ(ಮೆಕ್ಯಾನಿಕಲ್ ಟೆಕ್ನೀಶಿಯನ್) ಆಗಿದ್ದು, ಉಳಿದ 5 ಮಂದಿಯಲ್ಲಿ ನಾಲ್ವರು ಗುತ್ತಿಗೆ ಸಂಸ್ಥೆ ಎನ್ ಟೆಕ್ ಕನ್‌ಸ್ಟ್ರಕ್ಷನ್ಸ್ ಕಂಪನಿಯಲ್ಲಿ ಹಾಗೂ ಇನ್ನೋರ್ವ ಕಾರ್ಮಿಕ ಶ್ರೀ ಗಣೇಶ್ ಕನ್‌ಸ್ಟ್ರಕ್ಷನ್ಸ್‌ನ ಗುತ್ತಿಗೆ ಕಾರ್ಮಿಕರಾಗಿದ್ದಾರೆ.
ಎಂ.ಆರ್.ಪಿ.ಎಲ್.ನ 2ನೇ ಹಂತದ ಯೋಜನೆಯ ಸಲ್ಫರ್ ರಿಕವರಿ ಘಟಕ(ಎಸ್ ಆರ್ ಯು)ದಲ್ಲಿ ಬೆಳಿಗ್ಗೆ 11.15ಕ್ಕೆ ತೈಲ ತ್ಯಾಜ್ಯ ದಾಸ್ತಾನು ಘಟಕದಲ್ಲಿ ಗುಂಡಿಯ ಕಾಂಕ್ರೀಟ್ ಸ್ಲ್ಯಾಬ್ ಮುಚ್ಚಳ ಮತ್ತು ಪಂಪ್ ಸೆಟ್ ಸ್ಫೋಟಗೊಂಡ ಈ ದುರಂತ ಸಂಭವಿಸಿದೆ.
ತೈಲ ತ್ಯಾಜ್ಯ ದಾಸ್ತಾನು ಘಟಕದ ಒಂದು ಪಂಪ್ ಸೆಟ್‌ನ ಚೌಕಟ್ಟು(ಬೇಸ್ ಫ್ರೇಮ್) ತುಕ್ಕು ಹಿಡಿದು ಹಾನಿಗೀಡಾಗಿದ್ದು, ಅದನ್ನು ಬದಲಾಯಿಸುವ ಕಾಯಗಾರಿ ನಡೆಯುತ್ತಿದ್ದು, ನಾಗೇಶ್ ಅವರು ಈ ಘಟಕದ ಗುಂಡಿಯ ಮೇಲೆ ಚೌಕಟ್ಟನ್ನು ಇರಿಸಿ ಬಳಿಕ ಅದರ ಮೇಲೆ ಪಂಪ್ ಸೆಟ್ ಅಳವಡಿಸಿ ಗುಂಡಿ ಮತ್ತು ಚೌಕಟ್ಟು ನಡುವಣ ಅಂತರವನ್ನು ನಿವಾರಿಸಲು ಪ್ಲೇಟ್ ಇರಿಸಿ ಎಲೆಕ್ಟ್ರಿಕ್ ಆರ್ಕ್ ವೆಲ್ಡಿಂಗ್ ಮಾಡುತ್ತಿದ್ದಾಗ ವೆಲ್ಡಿಂಗ್‌ನ ಕಿಡಿ ಗುಂಡಿಯಲ್ಲಿದ್ದ ತೈಲಕ್ಕೆ ಹಾರಿ ಅಲ್ಲಿ ರಾಸಾಯನಿಕ ಕ್ರಿಯೆ ಉಂಟಾಗಿ ಸ್ಫೋಟ ಸಂಭವಿಸಿತು. ಚೌಕಟ್ಟು ಮತ್ತು ಪಂಪ್ ಸೆಟ್ ಎರಡೂ ಸ್ಫೋಟಗೊಂಡಿದ್ದು, ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ 6ಮಂದಿ ಕಾರ್ಮಿಕರು ಗಾಯಗೊಂಡರು. ಗಾಯಾಳುಗಳ ಪೈಕಿ ಮಹೇಶ್ ಕುಮಾರ್ ಸೂಪರ್ ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಗಾಯಾಳುಗಳನ್ನು ಕೂಡಲೇ ಅಯಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ತೀವ್ರ ಗಾಯಗೊಂಡ ನಾಗೇಶ್ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸಾವನಪ್ಪಿದರು. ಅವರ ತಲೆ ಮತ್ತು ಮುಖಕ್ಕೆ ತೀವ್ರ ತರವಾದ ಗಾಯಗಳಾಗಿತ್ತು. ಸ್ಫೋಟದ ರಭಸಕ್ಕೆ ಕಾಂಕ್ರೀಟ್ ಮತ್ತು ಪಂಪ್ ಸೆಟ್‌ನ ತುಣುಕುಗಳು ನಾಗೇಶ್ ಅವರ ಮುಖಲ್ಲೆ ಬಡಿದಿವೆ. ಇನ್ನಳಿದ ಗಾಯಾಳುಗಳೀಗೆ ಬೆನ್ನು ಮತ್ತು ಇತರ ಭಾಗಗಳಿಗೆ ಸುಟ್ಟ ಮತ್ತು ಇತರ ಗಾಯಗಳಾಗಿವೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳ ಪೈಕಿ ಕೆಲವರಿಗೆ ಶಸ್ತ್ರಚಿಕಿತ್ಸೆಯ ಸವಶ್ಯಕತೆಯೂ ಬರಬಹುದು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಎಂ.ಆರ್.ಪಿ.ಎಲ್.ನಲ್ಲಿ ಗುತ್ತಿಗೆ ಕಾರ್ಮಿಕರು ವಿವಿಧ ಘಟಕಗಳಲ್ಲಿ ಗುಂಪು ಗುಂಪಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶನಿವಾರ ದುರಂತ ಸಂಭವಿಸಿದ ಕಡೆ ಆರೇಳು ಮಂದಿ ಕೆಲಸ ಮಾಡುತ್ತಿದ್ದರು. ಸ್ವಲ್ಪವೇ ದೂರದಲ್ಲಿದ್ದ ಕಾರ್ಮಿಕರಾದ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ. ಈ ಘಟಕದಲ್ಲಿ ಕೆಮಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಬಿ. ಮತ್ತು ಗಣೇಶ್ ಎಂ. ಅವರು ರಜೆಯಲ್ಲಿ ತೆರಳಿದ್ದು, ಇನ್ನೊಂದು ಘಟಕದ ದಿನೇಶ್ ಅವರು ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಮತ್ತು ಉತ್ಪಾದನಾ ಮೇಲ್ವಿಚಾರಕರಾಗಿ ಪ್ರವೀಣ್ ಅವರು ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸ್ಫೋಟಕ್ಕೆ ನೈಜ ಕಾರಣ ಏನೆಂದು ತಿಳಿದು ಬಂದಿಲ್ಲ, ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದಿರುವುದು ಕಾರಣ ಎಂದು ಗುತ್ತಿಗೆ ಕಾರ್ಮಿಕರು ಆರೋಪಿಸಿದ್ದಾರೆ. 6ವರ್ಷದ ಹಿಂದೆ ಇಂತಹ ಘಟನೆಯೊಂದು ಸಂಭವಿಸಿದ ಬಗ್ಗೆ ಅವರು ನೆನಪಿಸುತ್ತಾರೆ. ಎಂಜಿನಿಯರ್ ಮತ್ತು ಮೇಲ್ವಿಚಾರಕರ ಸೂಚನೆ ಬಳಿಕವೇ ವೆಲ್ಡಿಂಗ್ ಕಾಯಗಾರಿ ಆರಂಭಿಸಿದ್ದೇವೆ, ಹಾಗಾಗಿ ಘಟನೆಗೆ ಅವರೇ ಹೊಣೆಗಾರರು ಎಂದು ಕಾರ್ಮಿಕರು ಹೇಳುತ್ತಾರೆ. ಕಂಪನಿಯ 1ಮತ್ತು 2ನೇ ಹಂತದ ಘಟಕದಲ್ಲಿ 1552ಗುತ್ತಿಗೆ ಕಾರ್ಮಿಕರು ಹಾಗೂ 3ನೇ ಹಂತದ ಯೋಜನಾ ಘಟಕದಲ್ಲಿ ಸುಮಾರು 4500ಮಂದಿ ಗುತ್ತಿಗೆ ಕಾರ್ಮಿಕರಿದ್ದಾರೆ. ಸುರತ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಆಡಳಿತ ತನಿಖೆ
ಘಟನೆ ಬಗ್ಗೆ ಕಂಪೆನಿಯ ಆಡಳಿತ ತನಿಖೆ ನಡೆಸುತ್ತಿದೆ. ತನಿಖೆಗಾಗಿ ತಂಡವನ್ನು ರಚಿಸಲಾಗಿದೆ. ವರದಿ ಬಂದ ಬಳಿಕ ಅದರ ಆಧಾರದಲ್ಲಿ ಕ್ರಮ ಜರಗಿಸಲಾಗುವುದು ಎಂದು ಎಂ.ಆರ್.ಪಿ.ಎಲ್ ಪ್ರಕಟನೆ ತಿಳಿಸಿದೆ. ಕಂಪೆನಿಯು ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದು, ಇದೊಂದು ಸಣ್ಣ ಘಟನೆಯಾಗಿದ್ದರೂ ಗಂಭೀರವಾಗಿಪರಿಗಣಿಸಿದೆ, ಘಟಕದ ಆವರಣದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡಲಾಗುವುದು. ಗಾಯಾಳುಗಳಿಗೂ ಅತ್ಯುತ್ತಮ ಚಿಕಿತ್ಸೆ ಒದಗಿಸಲು ಆಡಳಿತವು ವ್ಯವಸ್ಥೆ ಮಾಡಿದೆ ಎಂದು ಪ್ರಕಟನೆ ವಿವರಿಸಿದೆ.

Comments

comments

Leave a Reply

Read previous post:
ಮೂಲ್ಕಿ ರೈಲಿನಡಿಗೆ ಬಿದ್ದು ಸಾವು

ಬೆಂಗಳೂರಿನಿಂದ ಬರುತ್ತಿದ್ದ ಯಶವಂತಪುರ - ಕಾರವಾರ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಮೂಲ್ಕಿ ರೈಲು ನಿಲ್ದಾಣ ಬಳಿ ಸಂಭವಿಸಿದೆ. ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು...

Close