ಏಳಿಂಜೆಯ “ನವಚೇತನ”ಕ್ಕೆ ರಜತ ಸಂಭ್ರಮ

Narendra Kerekadu

ಒಂದು ಕಡೆ ಶಾಂಭವಿ ನದಿಯ ತಟ, ನದಿಯ ಅಕ್ಕ ಪಕ್ಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶ. ಸುತ್ತಲೂ ಹಸಿರು ತುಂಬಿದ ಊರು ಕಿನ್ನಿಗೋಳಿ ಐಕಳದ ಬಳಿಯ “ಏಳಿಂಜೆ” ಎಂಬ ಸಣ್ಣ ಗ್ರಾಮ. ಆದರೆ ಈ ಗ್ರಾಮ ಈಗ ಕ್ರೀಡೆಯ ಸಂಯೋಜನೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ.
ಏಳಿಂಜೆ “ನವಚೇತನ ಯುವಕ ಮಂಡಲ” ಎಂಬ ಸಂಸ್ಥೆಯು ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆಯ ಪ್ರತಿಭೆಗಳಿಗೆ ವೇದಿಕೆಯನ್ನು ನೀಡಿ ಪ್ರೋತ್ಸಾಹಿಸಿದ ಸೇವಾ ಸಂಸ್ಥೆಗೆ ಈಗ ೨೫ರ ರಜತ ಹರೆಯ 1987ರಲ್ಲಿ ಸಮಾನ ಮನಸ್ಕರ ಯುವಕರ ಸಂಘಟನೆಯಿಂದ ಇಲ್ಲಿನ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಹುಟ್ಟಿದ ನವಚೇತನ ಯುವಕ ಮಂಡಲವನ್ನು ಅಂದು ಕಟ್ಟಿ ಬೆಳೆಸಿದವರು ಏಳಿಂಜೆ ಭಂಡಸಾಲೆ ದಿ.ಜಗದೀಶ ಶೆಟ್ಟಿಯವರು. ಅವರ ನಾಯಕತ್ವದಲ್ಲಿ ಬೆಳೆದ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ಪ್ರತಿ ವರ್ಷವು ಊರ ಪರವೂರ ದಾನಿಗಳ ಸಹಕಾರದಲ್ಲಿ ವಾರ್ಷಿಕ ಉತ್ಸವದಂತಹ ಸಮಾರಂಭದಲ್ಲಿ ಚಟುವಟಿಕೆಯನ್ನು ನೆನಪಿಸಿ ಸುಪ್ತ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಸಂಸ್ಥೆ ಆಗಿ ಗ್ರಾಮದಲ್ಲಿ ಗಟ್ಟಿಯಾಗಿ ಬೇರೂರಿದೆ.
ಕ್ರೀಡೆಯಲ್ಲಿ ಕ್ರಿಕೆಟ್, ವಾಲಿಬಾಲ್ ಜೊತೆಗೆ ಅಳಿದು ಹೋಗುತ್ತಿರುವ ಅನೇಕ ಗ್ರಾಮೀಣ ಕ್ರೀಡೆಗೆ ವಿಶೇಷ ಆದ್ಯತೆ ನೀಡಿದ್ದಾರೆ, ಸಾಂಸ್ಕೃತಿಕವಾಗಿ ಯಕ್ಷಗಾನ, ನಾಟಕ, ನೃತ್ಯಗಳಿಂದ ಪ್ರತಿಭಾನ್ವಿತ ಕಲಾವಿದರಿಗೆ ವೇದಿಕೆ ನಿರ್ಮಿಸಿದ್ದಾರೆ. ಸಾಮಾಜಿಕವಾಗಿ ಗ್ರಾಮೀಣ ಭಾಗದ ಬಡಜನತೆಗೆ ಸರ್ಕಾರಿ ಸವಲತ್ತುಗಳನ್ನು ಪಡೆಯುವಲ್ಲಿ ಸಹಕಾರ, ಉಚಿತವಾಗಿ ಆರೋಗ್ಯ ಶಿಬಿರ, ಕಾನೂನು ಮಾಹಿತಿ, ಕೃಷಿಗೆ ಪ್ರೇರಣೆ ನೀಡುವ ಕಾರ್ಯಕ್ರಮ, ಗ್ರಾಮದ ಬೆಳೆವಣಿಗೆಗೆ ಸಹಾಯ, ಸ್ವಯಂ ಸೇವಕರಾಗಿ ಜಾತ್ರೆ, ಕೋಲ, ನೇಮೋತ್ಸವಕ್ಕೆ ಸಹಕಾರ ನೀಡುವ ಸದಸ್ಯರ ಮೂಲಕ ಗ್ರಾಮದ ಅಭ್ಯದಯಕ್ಕೆ ನವಚೇತನವನ್ನು ನೀಡುವ ಸದಸ್ಯರು ಎಂಬ ಮಾತಿಗೆ ಕಾರಣರಾಗಿದ್ದಾರೆ.
ಶೈಕ್ಷಣಿಕವಾಗಿ ಪ್ರತಿ ವರ್ಷವು ಏಳಿಂಜೆ ಕೋಂಜಾಲುಗುತ್ತು ದಿ. ಅಕ್ಕಿ ಸಂಕು ಶೆಟ್ಟಿ ಸ್ಮರಣಾರ್ಥ 100 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿರುವುದು ಗ್ರಾಮದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶ ಯುವಕ ಮಂಡಲದ್ದು. ಏಳಿಂಜೆ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನವೇ ಇವರ ಚಟುವಟಿಕೆಗೆ ಕೇಂದ್ರ ಸ್ಥಾನ ಆಗಿದ್ದು ಅಲ್ಲಿನ ಪ್ರತಿಯೊಂದು ಚಟುವಟಿಕೆಗೂ ಸಂಘಟಿತರಾಗಿ ದುಡಿಯುತ್ತಿರುವ ಯುವಕರು ಅಲ್ಲಿನ ಆಡಳಿತ ಮಂಡಳಿಯ ಸಹಕಾರದಲ್ಲಿ ಅನೇಕ ಸಮಾಜ ಸೇವೆಯನ್ನು ನಡೆಸುತ್ತಿರುವುದರಿಂದ ಗ್ರಾಮದಲ್ಲಿ ಸಂಸ್ಥೆಯನ್ನು ಗೌರವಿಸುತ್ತಾರೆ ಎಂದು ಕಳೆದ 25 ವರ್ಷದಿಂದಲೂ ಸಕ್ರೀಯರಾಗಿ ದುಡಿಯುತ್ತಿರುವ ಲಕ್ಷ್ಮಣ್ ಬಿ.ಬಿ.ಯವರು ಹೇಳುತ್ತಾರೆ.
ಇಂತಹ ಸಂಸ್ಥೆಗೆ ಈಗ “ರಜತ ಸಂಭ್ರಮ”ದಲ್ಲಿ ವರ್ಷ ಪೂರ್ತಿ ಕಾಯಕ್ರಮ ಹಮ್ಮಿಕೊಂಡಿದ್ದು ಪ್ರತಿ ತಿಂಗಳೂ ಸುತ್ತಲಿನ ಗ್ರಾಮಗಳಾದ ಐಕಳ, ಪಟ್ಟೆ, ಶುಂಠಿಪಾಡಿ, ಸಂಕಲಕರಿಯ, ಕುಕ್ಕಟ್ಟೆ, ಉಳ್ಳೆಪಾಡಿ, ಕಿನ್ನಿಗೋಳಿಯ ಯುಗಪುರುಷದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹತ್ತಿರದ ಗ್ರಾಮಗಳೋಂದಿಗೆ ಪರಸ್ಪರ ಸ್ನೇಹ ಮಿಲನ ನಡೆಯುತ್ತಿದೆ.
ಕಳೆದ 2011ರ ಮಾರ್ಚ್‌ನಲ್ಲಿ “ರಜತ ಸಂಭ್ರಮ ವರ್ಷಾಚರಣೆ”ಯ ಮೂಲಕ ಪ್ರಾರಂಭವಾದ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಬಯಲಾಟ, ಕ್ರಿಕೆಟ್ನ ರಜತ ಟ್ರೋಫಿ, ಏಪ್ರಿಲ್‌ನಲ್ಲಿ ಗ್ರಾಮವರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ, ಮೇಯಲ್ಲಿ ಗ್ರಾಮದ ಕೋರ‍್ದಬ್ಬು ದೈವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಗ್ರಾಮ ಸಂಸ್ಕೃತಿ ಹಾಗೂ ನಾಟಕ ಪ್ರದರ್ಶನ, ಜೂನ್‌ನಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಸಮವಸ್ತ್ರ ವಿತರಣೆ, ಜುಲೈನಲ್ಲಿ ಉಚಿತ ಆರೋಗ್ಯ ಶಿಬಿರಗಳು, ಆಗಸ್ಟ್‌ನಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ಆಚರಣೆ, ಆಟಿ ಕೂಟದ ವೈಭವ, ಮುದ್ದು ಕೃಷ್ಣ ಸ್ಪರ್ಧೆ, ಸೆಪ್ಟಂಬರ್‌ನಲ್ಲಿ ಪೆರ್ಗುಂಡಿ ಗಣೇಶೋತ್ಸವದಲ್ಲಿ ಸ್ವಯಂ ಸೇವಕರಾಗಿ ವಿವಿಧ ಚಟುವಟಿಕೆ, ಅಕ್ಟೋಬರ್‌ನಲ್ಲಿ ಗಾಂಧಿ ಜಯಂತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ವಿಶೇಷ ಕಾರ್ಯಾಗಾರ, ನವೆಂಬರ್‌ನಲ್ಲಿ ಜಾನುವಾರು ಪ್ರದರ್ಶನ ಹಾಗೂ ಆರೋಗ್ಯ ಶಿಬಿರ, ಮಕ್ಕಳ ದಿನಾಚರಣೆಯ ಅಂಗವಾಗಿ ಅಂಗನವಾಡಿ ಮಕ್ಕಳಿಗೆ ವಿವಿಧ ಸ್ಪರ್ಧೆ, ಸಾರ್ವತ್ರಿಕ ದೀಪಾವಳಿ ಆಚರಣೆ, ಡಿಸೆಂಬರ್ ಪಟ್ಟೆ ಗ್ರಾಮಸ್ಥರೊಂದಿಗೆ ಗ್ರಾಮ ಸಾಂಸ್ಕೃತಿಕವಾಗಿ ಸ್ವ ಸಹಾಯ ಸಂಘ, ಸ್ತ್ರೀ ಶಕ್ತಿ, ಯುವಕ ಸಂಘದ ಸದಸ್ಯರ ಸಮಾವೇಷ, ಕ್ರಿಸ್ಮಸ್ ಆಚರಣೆ, 2012ರ ಜನವರಿಯಲ್ಲಿ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟ, ಫೆಬ್ರವರಿಯಲ್ಲಿ ರಜತ ವೈಭವದಲ್ಲಿ ಯುವಕ ಮಂಡಲದ ಹಿಂದಿನ ಶಕ್ತಿಯ ಅವಲೋಕನ, ನಾಟಕೋತ್ಸವ, ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ, ತುಳುವ ಸಂಸ್ಕೃತಿಯ ದರ್ಶನ, ಶಾಶ್ವತ ಯೋಜನೆ ಹಾಗೂ ನಮ್ಮೂರ ಜಾತ್ರೆ ಎಂಬ ವಿಭಿನ್ನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಪ್ರಸ್ತುತ ಸಾಲಿನ ಅಧ್ಯಕ್ಷ ಸುಧಾಕರ ಸಾಲ್ಯಾನ್ ಹೇಳಿದ್ದಾರೆ.

ಜಿಲ್ಲೆಯಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಯುವ ಆಟಗಾರರನ್ನು ಗೌರವಿಸಲಾಗುವುದು ಎಂದು ನವಚೇತನ ಯುವಕ ಮಂಡಲದ ಗೌರವಾಧ್ಯಕ್ಷ ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿಯವರು ತಿಳಿಸಿದ್ದಾರೆ. ಗ್ರಾಮೀಣ ಭಾಗದಲ್ಲಿನ ಪರಂಪರೆಯನ್ನು ಬಿಂಬಿಸುವ ಚಿತ್ರಣವನ್ನು ರಾಷ್ಟ್ರಮಟ್ಟದ ಕ್ರೀಡೆಗೆ ಸಹ ಅಳವಡಿಸಲಿದ್ದೇವೆ ಎಂದು ಕ್ರೀಡೆಯ ಸಂಚಾಲಕ ಮುಂಡ್ಕೂರು ದೊಡ್ಡಮನೆ ಶರತ್ ಶೆಟ್ಟಿ ಮಾಹಿತಿ ನೀಡಿದರು

ತೀರಾ ಗ್ರಾಮೀಣ ಭಾಗದಲ್ಲಿ ಗ್ರಾಮದ ಅಭ್ಯುದಯಕ್ಕಾಗಿ ಹುಟ್ಟಿಕೊಂಡ ಏಳಿಂಜೆ ನವಚೇತನ ಯುವಕ ಮಂಡಲ ಇಂದು ರಾಷ್ಟ್ರಮಟ್ಟದ ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಲ್ಲಿನ ಹಳ್ಳಿಯ ಸೊಗಡನ್ನು ಪಸರಿಸುವ ಮೂಲಕ ಒಂದು ದಿಟ್ಟ ಹೆಜ್ಜೆಯ ಗುರುತು ಮತ್ತೊಂದು ಸಂಘ, ಸಂಸ್ಥೆಗೆ ದಾರಿ ದೀಪವಾಗಿ ಕ್ರೀಡೆ, ಗ್ರಾಮ, ಸಮಾಜ ಸೇವೆ ಮತ್ತಷ್ಟು ಬೆಳೆದು ಗುರುತರವಾದ ಕೈಂಕರ್ಯಕ್ಕೆ ಸಮಾಜದಲ್ಲಿ ಉತ್ತಮ ಪ್ರೋತ್ಸಾಹದ “ನವಚೇತನ”ದ ಚೈತನ್ಯ ದೊರಕುವುದು ನಿಶ್ಚಿತ.

Comments

comments

Leave a Reply

Read previous post:
ಗಾಳಿಪಟ ಉತ್ಸವ ಶಾಂತಿ-ಸೌಹಾರ್ದಕ್ಕೆ ಪೂರಕ

Reshma Mangalore ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಆಶ್ರಯದಲ್ಲಿ ಪಣಂಬೂರು ಸಮುದ್ರ ಕಿನಾರೆಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ 4ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ-ವಿದೇಶಗಳ...

Close