ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣ ನಿಧನ

ಮುಲ್ಕಿ ಮುಡಬಿದಿರೆ ಕ್ಷೇತ್ರದ ಮಾಜಿ ಶಾಸಕ ಕಾರ್ನಾಡು ಸೋಮಪ್ಪ ಸುವರ್ಣ (83)ರವರು ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಸಮಾಜದಲ್ಲಿ ಅಧ್ಯಾಪಕರಾಗಿ, ಸಮಾಜದ ಸಂಘಟನೆಯ ಮುಲಕ ಸಂಘ ಶಕ್ತಿಯನ್ನು ಪ್ರತಿಬಿಂಬಿಸಿಕೊಂಡು ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯನ್ನು ಉನ್ನತೀಕರಣಗೊಳಿಸಿದ ಕೆ.ಸೋಮಪ್ಪ ಸುವರ್ಣರು ಅಖಿಲ ಭಾರತ ಕಾಂಗ್ರೇಸ್ ಪಕ್ಷದಿಂದ ವಿಧಾನ ಸಭೆಗೆ ಸ್ಪರ್ಧಿಸಿ ಗೆದ್ದು 1989ರಿಂದ 1994ರವರೆಗೆ ಮುಲ್ಕಿ ಮುಡಬಿದಿರೆ ಕ್ಷೇತ್ರದಲ್ಲಿ ಶಾಸಕರಾಗಿ ಜನಾನುರಾಗಿಯಗಿದ್ದರು.
ಬಿಲ್ಲವ ಸಮಾಜವನ್ನು ಬೆಳೆಸಲು ಅವಿರತವಾಗಿ ಶ್ರಮಿಸಿದ ಸೋಮಪ್ಪ ’ಮಾಸ್ಟರ್” ಮುಲ್ಕಿ ಗೋಕರ್ಣನಾಥ ಬ್ಯಾಂಕ್ ಸ್ಥಾಪನೆ, ಮೂರ್ತೆದಾರರ ಸಂಘ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಸ್ಥಾಪಕ ಕಾರ್ಯದರ್ಶಿ, ಮುಲ್ಕಿ ಹಾಲು ಸರಬರಾಜು ಸೊಸೈಟಿಯ ನಿರ್ಮಾಣ, ಮುಲ್ಕಿ ಸರ್ಕಾರಿ ಆಸ್ಪತ್ರೆಯ ಪೋಷಕರಾಗಿ ದುಡಿದು ನಿಸ್ವಾರ್ಥ ಸೇವೆಯಿಂದ ಗುರತಿಸಿಕೊಂಡಿದ್ದ ಸುವರ್ಣರು ಇಂದು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘವು ಇಷ್ಟೋಂದು ಎತ್ತರಕ್ಕೆ ಬೆಳೆಯಬೇಕಾದರೆ ಅವರ ಅವಿರತ ಶ್ರಮವೇ ಪ್ರತ್ಯಕ್ಷ ಸಾಕ್ಷಿ ಆಗಿದೆ.
ಸಮಾಜದ ಸೇವೆಗಾಗಿ ಸರ್ಕಾರಿ ಶಿಕ್ಷಕ ವೃತ್ತಿಯನ್ನು ಬಿಟ್ಟರು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುತ್ತ ನಾರಾಯಣಗುರು ಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭಿಸಿದ್ದು ಅವರ ದೂರ ದೃಷ್ಟಿತ್ವಕ್ಕೆ ಒಂದು ಉದಾಹರಣೆಯಷ್ಟೇ, ಮುಲ್ಕಿ ಯ ಲಯನ್ಸ್ ಕ್ಲಬ್‌ನ್ನು ಮುನ್ನಡೆಸಿಕೊಂಡು, ಮುಲ್ಕಿ ಯುವವಾಹಿನಿ, ರೋಟರಿ, ಜೇಸಿಯಂತಹ ಸಂಸ್ಥೆಗೂ ಆಸರೆ ಆಗಿ ಬೆಳೆಸಿಕೊಂಡು ಸಮಾಜದ ಸ್ಥಳೀಯ ಅನೇಕ ಸೇವಾ ಸಂಸ್ಥೆಗಳಿಗೆ ಕೊಡುಗೈದಾನಿ ಆಗಿದ್ದು ಮುಲ್ಕಿ ಬಿಲ್ಲವ ಸಂಘವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳು ತತ್ವ ಸಂದೇಶದಂತೆ ಎಲ್ಲಾ ಸಮಾಜಕ್ಕೆ ಮೀಸಲಾಗಿರಿಸಬೇಕು ಎಂಬ ಮನೋಧರ್ಮದಿಂದ ಕಟ್ಟಿ ಬೆಳೆಸಿದ್ದಾರೆ.
ಬಜಪೆಯ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದ ಎಲ್ಲಾ ಪ್ರಾಕರಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು, ಕೊಲ್ಲೂರ ಕಾಂತಾಬಾರೆ ಬೂದಾಬಾರೆ ಕ್ಷೇತ್ರವನ್ನು ಅಭಿವೃದ್ದಿಗೊಳಿಸಿ, ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿ, ಹತ್ತು ಹಲವು ಗೌರವಾನ್ವಿತ ಸಂಸ್ಥೆಯ ಸದಸ್ಯರಾಗಿ ಕೆಲಸ ಮಾಡುತ್ತಿದ್ದರು.
ಪ್ರಸ್ತುತ ಈ ಇಳಿವಯಸ್ಸಿನಲ್ಲಿಯೂ ಮುಲ್ಕಿ ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾಗಿದ್ದುಕೊಂಡು ಯುವಜನತೆಗೆ ದಾರಿ ದೀಪವಾಗಿದ್ದ ಸೋಮಪ್ಪ ಸುವರ್ಣರ ಮರಣದಿಂದ ಮುಲ್ಕಿ  ಜನತೆಯಲ್ಲದೇ ಕರಾವಳಿ ಭಾಗದ ಒರ್ವ ಉತ್ತಮ ಸಮಾಜ ಸುಧಾರಕನನ್ನು ಕಳೆದುಕೊಂಡಂತಾಗಿದೆ. ಕೆ.ಸೋಮಪ್ಪ ಸುವರ್ಣರು ಎ.ಪಿ.ಎಂ.ಸಿ.ಸದಸ್ಯ ಪ್ರಮೋದ್ ಕುಮಾರ್ ಸಹಿತ 3 ಗಂಡು ಮಕ್ಕಳು ಮತ್ತು 3 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಸೋಮಪ್ಪ ಸುವರ್ಣರ ನಿಧನಕ್ಕೆ ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ಸಂಸದ ಆಸ್ಕರ್ ಫೆರ್ನಾಂಡಿಸ್, ಶಾಸಕ ಅಭಯಚಂದ್ರ, ಕಾಂಗ್ರೇಸ್ ಜಿಲ್ಲಾದ್ಯಕ್ಷ ರಮಾನಾಥ ರೈ, ಕಾರ್ಯದರ್ಶಿ ಐವನ್ ಡಿಸೋಜಾ, ಮುಲ್ಕಿ ನ.ಪಂ. ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಬಿ.ಎಂ.ಆಸಿಫ್, ಇನಾಯತ್ ಆಲಿ ಮುಲ್ಕಿ , ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ, ಲಕ್ಷ್ಮೀ ನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಈಶ್ವರ ಕಟೀಲು, ಎಂ.ಬಿ.ನೂರ್‌ಮಹಮ್ಮದ್, ಇನ್ನಿತರರು ಸಂತಾಪ ಸೂಚಿಸಿದ್ದಾರೆ.

Comments

comments

Leave a Reply

Read previous post:
ರಂಗ ಮಂಟಪ ಉದ್ಘಾಟನೆ

 ಉಲ್ಲಂಜೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 3.5ಲಕ್ಷರೂ.ನಲ್ಲಿ ನಿರ್ಮಾಣವಾದ ನೂತನ ಕೊಠಡಿ ಹಾಗೂ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ.1.50ಲಕ್ಷದಲ್ಲಿ ನಿರ್ಮಾಣವಾದ ರಂಗಮಂಟಪದ ಉದ್ಘಾಟನೆಯನ್ನು ಜಿಲ್ಲಾ...

Close