ಅಗಲಿದ ಜನನಾಯಕನಿಗೆ ಸಾರ್ವತ್ರಿಕ ಅಂತಿಮ ನಮನ

Narendra Kerekadu

ಶಿಕ್ಷಣ, ಸಾಮಾಜಿಕ, ರಾಜಕೀಯದಲ್ಲಿ ಸಂಘಟನಾತ್ಮಕವಾಗಿ ಬೆಳೆದು ಜನರ ನಡುವೆಯೆ ಬೆರೆತು ಸಂಘ ಶಕ್ತಿಯಿಂದ ಬೆಳೆದು ಶನಿವಾರ ನಿಧನರಾದ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಭಾನುವಾರ ನೂರಾರು ಜನರು ಸೇರಿ ಜನನಾಯಕನಿಗೆ ಅಂತಿಮ ನಮನವನ್ನು ಸಲ್ಲಿಸಿದರು.
ಬೆಳಿಗ್ಗೆ ತಾನು ಹುಟ್ಟಿ ಸಮಾಜದಲ್ಲಿ ಮೇಲ್ಪಂಕ್ತಿಯಾಗಿ ಬೆಳೆಯಲು ಆಸರೆ ನೀಡಿದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿರುವ ಮುರತೊಟ್ಟು ಮನೆಯಿಂದ ವಿಶೇಷವಾಗಿ ಅಲಂಕೃತವಾದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆಯು ಕೊಲ್ನಾಡು, ಮುಲ್ಕಿ ಮುಖ್ಯ ಪೇಟೆ, ಬಪ್ಪನಾಡು ದೇವಸ್ಥಾನದ ದ್ವಾರದ ಬಳಿಯಿಂದ ವಿಜಯಾ ಕಾಲೇಜು ರಸ್ತೆಯಾಗಿ, ಪೊಲೀಸ್ ಠಾಣೆಯ ಮುಂಬಾಗದಲ್ಲಿ ಪಂಚ ಮಹಲ್ ರಸ್ತೆಯಾಗಿ ಬಿಲ್ಲವ ಸಮಾಜ ಸೇವಾ ಸಂಘದ ಬಳಿಯಿಂದ ರುಕ್ಕರಾಮ್ ಸಭಾಗೃಹವನ್ನು ದಾಟಿ ತನ್ನ ಅಚ್ಚು ಮೆಚ್ಚಿನ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಕಲ ರಾಷ್ಟ್ರೀಯ ಗೌರವದಿಂದ ಅಂತಿಮ ನಮನವನ್ನು ಸಲ್ಲಿಸಲಾಯಿತು.
ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸೋಮಪ್ಪ ಸುವರ್ಣರ ಪಾರ್ಥಿವ ಶರೀರಕ್ಕೆ ತಮ್ಮ ಹೆಗಲನ್ನು ನೀಡಿ ತಮ್ಮ ಪ್ರೀತಿಯನ್ನು ತೋರ್ಪಡಿಸಿದರು, ಸಂಸದ ನಳಿನ್‌ಕುಮಾರ್ ಕಟೀಲು, ಮಾಜಿ ರಾಜ್ಯ ಸಚಿವ ಅಮರನಾಥ ಶೆಟ್ಟಿ, ಸಾಗರದ ಶಾಸಕ ಬೇಲೂರು ಗೋಪಾಲಕೃಷ್ಣ, ಶಾಸಕ ಅಭಯಚಂದ್ರ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ, ಅಂತರಾಷ್ಟ್ರೀಯ ರಂಗಕರ್ಮಿ ಸದಾನಂದ ಸುವರ್ಣ, ರಾಷ್ಟ್ರೀಯ ಎನ್‌ಎಸಯುಐನ ಇನಾಯತ್ ಆಲಿ ಮುಲ್ಕಿ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಕಿಶೋರ್ ಬಿಜೈ, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು, ಸಮಾಜ ಸೇವಾಸಕ್ತರು, ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು, ಕಾಂಗ್ರೇಸ್ ಪಕ್ಷದ ಪ್ರಮುಖರು, ಕುಟುಂಬಿಕರು, ಆಪ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.
ಕಾರ್ನಾಡುವಿನ ಮನೆಯ ತೋಟದಲ್ಲಿ ಕೆ.ಸೊಮಪ್ಪ ಸುವರ್ಣರ ಸಕಲ ಧಾರ್ಮಿಕ ವಿಧಿ ವಿಧಾನದಿಂದ ಶವಸಂಸ್ಕಾರವನ್ನು ನಡೆಸಲಾಯಿತು. ಕಿನ್ನಿಗೋಳಿ, ಮುಲ್ಕಿ, ಹಳೆಯಂಗಡಿ, ಕಾರ್ನಾಡು ಪ್ರಮುಖ ಪೇಟೆಯಲ್ಲಿ ಮೃತರ ಶೋಕಾರ್ಥ ಒಂದು ತಾಸು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು.

Comments

comments

Leave a Reply

Read previous post:
ನಾರಾಯಣಗುರು ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ

 "ಯಾರೂ ದುರ್ಬಲರಲ್ಲ, ಸಬಲರು ಪ್ರಯತ್ನ ಶೀಲತೆಯಿಂದ ಯಶಸ್ಸನ್ನು ಪಡೆಯಬೇಕು" ಎಂದು ಸಾಹಿತಿ ಸುಮುಖನಾಂದ ಜಲವಳ್ಳ್ಳಿ ಕಿನ್ನಿಗೋಳಿ ನಾರಾಯಣಗುರು ವಿದ್ಯಾ ಸಂಸ್ಥೆ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇದೇ...

Close