ಕೋಣ ಕೊಳ್ಳುವವರಿಲ್ಲ!

Mithuna Kodethoor

ಮಹಿಷ, ರಕ್ತಾಕ್ಷ ಎಂದೆಲ್ಲ ಕರೆಯಲ್ಪಡುವ ಕೋಣಗಳನ್ನು ಕೇಳುವವರಿಲ್ಲ!

ಕಂಬಳದ ಸಂದರ್ಭ ಬಿಟ್ಟರೆ ಕೋಣಗಳು ಇತ್ತೀಚಿನ ದಿನಗಳಲ್ಲಿ ಗದ್ದೆಗಳಿಂದಲೇ ದೂರವಾಗುತ್ತವೆ. ಇನ್ನು ಹಟ್ಟಿಯಲ್ಲಿ ಕಂಡು ಬರುವುದಾದರೂ ಹೇಗೆ?ಕೊಂಚ ಬುದ್ದಿ ಮಂದ ಎಂದು ಹೇಳಲ್ಪಡುವ ಕೋಣಗಳು ಗದ್ದೆ ಉಳುವುದಕ್ಕೆ ಬಳಸಲ್ಪಡುವುದು ಜಾಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಕೃಷಿ ಬಿಟ್ಟು, ಕಂಗು, ತೆಂಗು, ರಬ್ಬರು ಅಂತ ತೋಟಗಳೆಡೆಗೆ ಬದಲಾವಣೆ ಹೊಂದಿದ ಮೇಲೆ ಕೋಣಗಳ  ಮಹತ್ವ ಹೊರಟು ಹೋಗತೊಡಗಿತು. ಭತ್ತದ ಕೃಷಿ ಮಾಡುವ ಮಂದಿಯೂ ಹದಗೊಳಿಸಲು ಟಿಲ್ಲರ್, ಟ್ರಾಕ್ಟರ್‌ಗಳಂತಹ ಯಂತ್ರ ಗಳನ್ನು ಗದ್ದೆಗಳಿಗೆ ಇಳಿಸಿದ ಮೇಲೆ ಕೋಣಗಳಿಗೆಲ್ಲಿದೆ ಕೆಲಸ?ಪರಿಣಾಮ ಹತ್ತು ವರುಷಗಳ ಹಿಂದೆ ದಿನವೊಂದಕ್ಕೆ ಹತ್ತು ಹದಿನೈದು ಜೋಡಿ ಕೋಣಗಳನ್ನು ಮಾರುತ್ತಿದ್ದ ವ್ಯಾಪಾರಿ ಈಗ ತಿಂಗಳಿಗೆ ಐದು ಜೋಡಿಗಳನ್ನು ಮಾರಿದರೆ ದೊಡ್ಡದು. ಹಿಂದೆ ದಿನವೊಂದಕ್ಕೆ ಹತ್ತರಿಂದ ಹದಿನೈದು ಜೋಡಿ ಕೋಣಗಳು ಮಾರಲ್ಪಡುತ್ತಿದ್ದರೆ ಈಗ ತುಂಬ ಕಡಿಮೆ. ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಹತ್ತಿಪ್ಪತ್ತು ಜೋಡಿ ಮಾರಲ್ಪಡುತ್ತವೆ. ಉಳಿದ ತಿಂಗಳು ನಾಲ್ಕೈದು ಹೋದರೇ  ಅನ್ನುತ್ತಾರೆ ವ್ಯಾಪಾರಿಗಳು. ಜೋಡಿ ಕೋಣಗಳಿಗೆ 20 ರಿಂದ 30 ಸಾವಿರ ರೂಪಾಯಿಗಳಷ್ಟು ಬೆಲೆಯಿರುತ್ತದೆ. ಕಂಬಳದ ಕೋಣಗಳಾದರೆ ಒಂದಕ್ಕೇ ಇಪ್ಪತ್ತೈದು ಸಾವಿರ ರೂಪಾಯಿ ಇರುವುದೂ ಇದೆ. ಕೋಣಗಳಲ್ಲಿ ಘಟ್ಟದ(ಮಲೆನಾಡು) ಕೋಣಗಳು, ಊರ ಕೋಣಗಳು ಅಂತಿವೆ. ಘಟ್ಟದ ಕೋಣಗಳು ಊರಿನ(ಕರಾವಳಿಯ) ಕೋಣಗಳಷ್ಟು ಚಲಾಕು ಅಲ್ಲ. ಹಲ್ಲುಗಳು ಮೂಡಿದ ಬಳಿಕ ಕೋಣಗಳನ್ನು ಉಳಲು ಆರಂಭಿಸುತ್ತಾರೆ. ಆಗ ಅವು ಜೋರಾಗದಂತೆಅವುಗಳ ಬೀಜ ಕೊಟ್ಟ ಗುದ್ದುವುದು ಅಂತಿದೆ. ಪಳಗಿಸಲು ಇದು ಸಹಾಯಕಾರಿ.ಓಟದ(ಕಂಬಳ) ಕೋಣಗಳನ್ನು ಮಳೆಗಾಲದಲ್ಲಿ ಒಂದೆರಡು ಸಲ ಮಾತ್ರ ಗದ್ದೆ ಉಳಲು ಬಳಸುತ್ತಾರೆ. ಈ ಕೋಣಗಳನ್ನು ಓಟಕ್ಕೆ ಎಣ್ಣೆ ಹಚ್ಚಿ, ಹುರುಳಿ ಕೊಟ್ಟು, ತರಬೇತಿ ನೀಡುತ್ತಾರೆ. ಇವುಗಳನ್ನು ನೋಡಲಿಕ್ಕೆಂದೇ ಜನ ನೇಮಿಸುತ್ತಾರೆ. ಕಂಬಳದ ಕೋಣಗಳು ಗೆಲ್ಲುವುದು ಆ ಯಜಮಾನನಿಗೆ ಪ್ರತಿಷ್ಟೆಯ ಸಂಗತಿ. ಉಳುವ ಕೋಣಗಳಿಗೆ ಹುರುಳಿ, ಗಂಜಿ ಕೊಟ್ಟು ತಯಾರು ಮಾಡುತ್ತಾರೆ.ಆದರೆ ಕೋಣಗಳನ್ನು ಕೊಳ್ಳುವವರಿಲ್ಲದ, ಪಾಲಿಸುವವರೂ ಇಲ್ಲದ ದಿನಗಳು ಬಂದಿವೆ. ಕಂಬಳಕ್ಕಷ್ಟೇ ಸೀಮಿತವಾಗುತ್ತಿರುವ ಕೋಣಗಳು ಕೃಷಿಯ ಬದಲು ಮೋಜಿನ ಕ್ರೀಡೆಯ ಪ್ರಾಣಿಗಳಾಗುತ್ತಿರುವುದು ವಾಸ್ತವ.

Comments

comments

Leave a Reply

Read previous post:
ಮುಲ್ಕಿ ಕಾರ್ನಾಡು ಮಸೀದಿಯಲ್ಲಿ ಈದ್-ಮಿಲಾದ್ ಆಚರಣೆ

Photo by: Prakash .M  Suvarna ಈದ್ ಮಿಲಾದ್ ಪ್ರಯುಕ್ತ ಕಾರ್ನಾಡಿನಿಂದ ಮಸೀದಿ ವರೆಗೆ ಸಂಭ್ರಮದ ಮೆರವಣಿಗೆ ನಡೆಯಿತು.

Close