ನಂಬಿಕೆ

 ’ನಂಬಿ ಕೆಟ್ಟವರಿಲ್ಲವೊ ಜಗದಲಿ ನಂಬದೆ ಕೆಟ್ಟರು?’ ಎಂದು ಪುರಂದರ ದಾಸರು ಅಂದು ಹೇಳಿದ ಮಾತು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ಯ,.
ನಂಬಿಕೆಯ ಮೇಲೆ ಈ ಜಗತ್ತು ನಿಂತಿದೆ. ಒಬ್ಬ ತಂದೆ ತನ್ನ ಮಕ್ಕಳನ್ನು ತನ್ನದೇ ಮಕ್ಕಳೆಂದು ಬಗೆದು ಸುಖವಾದ ಸಂಸಾರವನ್ನು ಸಾಗಿಸಬೇಕಾದರೆ ಅದಕ್ಕೆ ಕಾರಣ ಅವನು ತನ್ನ ಹೆಂಡತಿಯ ಮೇಲಿಟ್ಟಿರುವ ಬಲವಾದ ನಂಬಿಕೆ. ಕಾಮೇಚ, ಅರ್ಥೇಚ, ನಾತಿಚರಾಮಿ ಎಂದು ಕೈ ಹಿಡಿದ ಗಂಡನಿಗೆ ಹೆಂಡತಿ ತನ್ನ ಮೈ ಮನಗಳನ್ನು ಅರ್ಪಿಸಬೇಕಾದರೆ ಅದಕ್ಕೂ ಕಾರಣ ಅವಳು ಅವನ ಮೇಲಿಟ್ಟಿರುವ ನಂಬಿಕೆ. ಪರಸ್ಪರ ನಂಬಿಕೆಯಿಲ್ಲದ ಸಂಸಾರದಲ್ಲಿ ಸಾನಂದ, ಸಂಪ್ರೀತಿ, ಸೌಂದರ್ಯಗಳ ಸಮಾರಾಧನೆಯಿರದೆ, ಅತೃಪ್ತಿ, ಅಸಮಾಧಾನ, ಅಕ್ರೋಶಗಳಿಂದ ಬದುಕು ಅಶಾಂತಿಯ ಆಡುಂಬೊಲವಾಗಿ ಸುಖವು ಸಮಾಧಿಯಾಗುತ್ತದೆ.
ಕೆಲವರು ದೇವರನ್ನು ನಂಬುವವರು, ಕೆಲವರು ದೇವರನ್ನು ನಂಬದವರು, ಕೆಲವರು ಎರಡೂ ಕಡೆಗೆ ಸಲ್ಲುವವರು. ದೇವರನ್ನು ನಂಬದೆ ಇದ್ದವನಿಗೆ ಕಷ್ಟಬಂದಾಗ ಅದಕ್ಕೆ ಪರಿಹಾರವೇ ಇಲ್ಲ, ಅನುಭವಿಸಿಯೇ ತೀರಬೇಕೆಂದು ಗೊತ್ತಾದಾಗ, ಅವನಿಗೆ ಕೊನೆಗೆ ಉಳಿವುದು ನಿರಾಶೆ, ಅಶಾಂತಿ, ದುಃಖ ಮಾತ್ರ. ಇಂತಹ ಸ್ಥಿತಿ ದೇವರನ್ನು ನಂಬುವವನಿಗೆ ಬಂದರೆ ಅದು ಪರಿಹಾರ ಇಲ್ಲದ ಕಷ್ಟವೆಂದು ಗೊತ್ತಿದ್ದರೂ ಅದನ್ನು ದೇವರು ಪರಿಹಾರ ಮಾಡುತ್ತಾನೆ ಎಂದು ನಂಬುತ್ತಾನೆ. ಆ ನಂಬಿಕೆಯೇ ಆ ದುಸ್ಥಿತಿಯ ನಡುವೆ ಅವನಿಗೆ ಧೈರ್ಯವನ್ನು ತುಂಬಿ ಸುಖವನ್ನು ನೀಡುತ್ತದೆ. ಇನ್ನು ದೇವರು ಇದ್ದಾನೆ, ಇಲ್ಲ ಎಂಬುವುದೆರಡನ್ನೂ ನಂಬಿದವರ ಬದುಕು ಕೆಸರಲ್ಲಿ ನೆಟ್ಟ ಕಂಬದಂತೆ ಅಸ್ಥಿರವಾಗಿರುತ್ತದೆ. ಅದನ್ನೇ ಡಿ.ವಿ.ಜಿಯವರು ಈ ರೀತಿ ಹೆಳುತ್ತಾರೆ.
ನಂಬುದಿರ್ದನು ತಂದೆ ನಂಬಿದನು ಪ್ರಹ್ಲಾದ
ನಂಬಿಯು ನಂಬದಿರುವಿಬ್ಬಂದಿ ನೀನು||
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು
ಸಿಂಬಳದ ನೊಣ ನೀನು ಮಂಕುತಿಮ್ಮ
ಪ್ರಹ್ಲಾದ ನಂಬಿದವ. ಅವನ ತಂದೆ ನಂಬದಿದ್ದವ, ಕಂಬದಿಂದಲೊ, ಬಿಂಬದಿಂದಲೊ ಅವರಿಗೆ ಮೋಕ್ಷ ದೊರಕಿತು. ಪ್ರಹ್ಲಾದ ಸತ್ಯವನ್ನು ನಂಬಿದ್ದ. ಆತನ ತಂದೆಗೆ ಅದರ ಮೇಲೆ ಅನುಮಾನವಿತ್ತು. ಅದರ ಬಗ್ಗೆ ಅಸಹ್ಯ ಭಾವವಿತ್ತು. ಆದರೆ ಸತ್ಯಾಸ್ವೇಷಣೆಯಲ್ಲಿ ಅನುಮಾನಕ್ಕೆ ಮೊದಲ ಸ್ಥಾನವಿದೆಯಲ್ಲವೆ? ಅಂದರೆ ಅನುಮಾನದ ಹಾದಿಯಲ್ಲಿ ನಡೆದು ಸುಳ್ಳಿನ ಆವರಣವನ್ನು ಮುರಿದು ಸತ್ಯದರ್ಶನವಾದಾಗ ನಂಬಿಕೆ ಬಲವಾಗುತ್ತದೆ. ಹೀಗೆ ಅನುಮಾನದಿಂದಲೇ ಹಿರಣ್ಯ ಕಶ್ಯಪನಿಗೆ ಮುಕ್ತಿ ದೊರಕಿತು. ಪ್ರಹ್ಲಾದನಿಗೆ ಬೇಕಾದದ್ದು ದೊರಕಿತು. ಆದ್ದರಿಂದಲೇ ಡಿ.ವಿ.ಜಿಯವರು, ಅವರಾದರೂ ಆದೀತು, ನಂಬಿಯೂ ನಂಬದಿರುವ ಇಬ್ಬಂದಿ ಸಿಂಬಳದ ನೊಣದಂತೆ ಎಂದು ವಿಡಂಬಿಸುತ್ತಾರೆ. ಅವರು ಸ್ವಾತಂತ್ರ ಮತ್ತು ಸ್ವಾಸ್ಥವಿಲ್ಲದ ಭಾವನೆಗಳಿಂದ ಸುಳ್ಳಿನಲ್ಲೇ ಇರಲಿಕ್ಕೆ ಆಗದೆ ಸತ್ಯವನ್ನು ಮುಟ್ಟಲಿಕ್ಕೂ ಆಗದ ಶೋಚನೀಯ ಸ್ಥಿತಿಯಲ್ಲಿರುತ್ತಾರೆ.
ಪ್ರಕೃತಿಯ ಕೂಸಾದ ಮಾನವ ಈ ಪ್ರಕೃತಿಯನ್ನು ನಂಬಿಯೇ ತನ್ನ ಬದುಕನ್ನು ಕಟ್ಟಿಕೊಂಡ. ಕ್ಷಣಕ್ಷಣಕ್ಕೂ ಪ್ರಶ್ನಾತೀತವಾಗಿಯೇ ಉಳಿಯುತ್ತೆ, ಮನದಾಳದಲ್ಲಿ ಅನಂತ ಭಾವನೆಗಳನ್ನು ಮೂಡಿಸುತ್ತಾ, ಮನಸೆಳೆಯುತ್ತಾ ಮಹತ್ತಾಗಿ ಕಾಣುವ ಈ ಪ್ರಕೃತ್ತಿಯೇ ಮಾನವನ ಅಪಾರ ನಂಬಿಕೆಗಳ ಆಶ್ರಯದಾಣವಾಯಿತು. ಅದರಿಂದಲೇ ಆರಾಧನೆ ಹುಟ್ಟಿತು. ಇದೇ ಹಲವು ಆಚರಣೆಗಳಿಗೆ ನಾಂದಿಹಾಡಿತು. ಹಿಂದೆ ಆಚರಣೆ, ಆರಾಧನೆ, ಸಂಸ್ಕೃತಿ ಕಾಲದಿಂದ ಕಾಲಕ್ಕೆ ಬೆಳೆದ ಜ್ಞಾನದ ದೆಸೆಯಿಂದ ಮರದಲ್ಲೇ ಹಣ್ಣಾಗುವ ಹಣ್ಣಿನಂತೆ ಸಹಜವಾಗಿ ಪೂರಕ ಬದಲಾವಣೆಯನ್ನು ಕಾಣುತಿತ್ತು. ಅದಕ್ಕೆ ಯಾರದ್ದೂ ಒತ್ತಡವಿರಲಿಲ. ಯಾವ ಮುಷ್ಕರದ ಅಗತ್ಯವೂ ಇಲ್ಲ. ಅದು ಹಾಗೆಯೇ ಆಗಬೇಕು, ರಾಸಾಯನಿಕಗಳನ್ನು ಸಿಂಪಡಿಸಿ ಅರೆಬೆಳೆದ ಕಾಯಿಯನ್ನು ಹಣ್ಣಾಗಿಸುವ ತಂತ್ರದಿಂದ ಅಪಾಯವಲ್ಲದೆ ಒಳ್ಳೆಯ ಪರಿಣಾಮಗಳಿಲ್ಲ.
ನಂಬಿಕೆ ಆಚರಣೆ ಆರಾಧನೆಗಳನ್ನು ಕೀಳಾಗಿ ಕಾಣಲು ನಮಗೆ ಕಣ್ಣು ಕೊಟ್ಟದ್ದು ವಿಜ್ಞಾನ, ವೈಜ್ಞಾನಿಕ ಮುದ್ರೆಗಳಿಲ್ಲದೆ ಯಾವುದೇ ವಸ್ತು, ವೈಶಿಷ್ಟಗಳನ್ನು ನಾವು ಒಪ್ಪುವುದಿಲ್ಲ. ಆದ್ದರಿದಲೇ ವಿಜ್ಞಾನದ ಅರಿವಿರದೇ, ತಮ್ಮ ಭಾವನೆಗಳೊಂದಿಗೆ ಸುಖಗಳಾಗಿರುವ ಜನರು ನಮಗೆ ಮೂಡರಾಗಿ ಕಾಣುತ್ತಾರೆ. ಕೃತಕಗಣಿತದ ಅಳತೆಗೋಲಿನಿಂದ ಪ್ರಪಂಚವನ್ನು ಅಳೆಯುತ್ತಾ ಸದಾ ಧಾವಂತದಿಂದ ಬದುಕುತ್ತಿರುವ ನಾವು ನಾಗರಿಕರು, ಸುಸಂಸ್ಕೃತರು ಅಲ್ಲವೇ? ನಿಜವಾಗಿ ಯಾರು ಅನಾಗರಿಕರು? ಯಾರು ಜ್ಙಾನಿಗಳು ಯಾರು ಮುಢರು?
ಬಾಳೆಯ ಹಣ್ಣನ್ನು ಹಿಂದಿನ ಕಾಲದ ಜನರು ಸಿಪ್ಪೆ ಸಹಿತ ತಿನ್ನುತಿದ್ದರು. ಅದನ್ನು ನಾವು ಅನಾಗರಿಕತೆ ಎಂದು ನಾವು ಹೇಳುತ್ತೇವೆ. ನಂತರ ಜ್ಙಾನ ಬೆಳವಣಿಗೆಯಾಯಿತು. ಸಿಪ್ಪೆಯನ್ನು ಬಿಸಾಡಿ ತಿರುಳನ್ನು ಜನ ತಿನ್ನಲಾರಂಭಿಸಿದರು. ಇದು ಸಂಸ್ಕೃತಿ, ನಾಗರೀಕತೆಯೆಂದು ಗುರುತಿಸಪ್ಪಟ್ಟಿತು. ಈಗ ಅದೇ ಬಾಳೆಹಣ್ಣನ್ನು ಸಿಪ್ಪೆಯ ಸಹಿತ ಕೊಳೆಯಿಸಿ ವಿಶೇಷ ತಂತ್ರ ಜ್ಞಾನದ ಮುಲಕ ಮದ್ಯವನ್ನು ತಯಾರಿಸಿ ಜನ ಕುಡಿಯುತ್ತಾರೆ. ಇದರ ತಯಾರಿಕಾ ವಿಧಿ ವಿಧಾನ ಒಂದು ವಿಜ್ಞಾನವೇ ಆದರೂ ಇದೆ ಮದ್ಯ ವಿಕೃತಿಗೆ ಕಾರಣವಾಯಿತಲ್ಲ? ಮುಗ್ಧ ಜನರ ಆಚರಣೆ ಆರಾಧನೆ, ನಂಬಿಕೆಗಳನ್ನು ನಮ್ಮ ಒತ್ತಡಗಳಿಂದ ಕೊಳೆಯಿಸುವುದರಿಂದ ಅಲ್ಲಿ ಉತ್ಪತ್ತಿಯಾಗುವುದು ವಿಕೃತಿಯಲ್ಲದೆ ಸಂಸ್ಕೃತಿಯಲ್ಲ.
ಹಳ್ಳಿಯವನೊಬ್ಬನ ನಂಬಿಕೆಯನ್ನು ನಾವು ಮುಢ ನಂಬಿಕೆ ಎಂದು ಕರೆಯುತ್ತೇವೆ. ಆ ನಂಬಿಕೆಯ ಹಿನ್ನಲೆಯಲ್ಲಿ ಸಾಗುವ ಅವನ ಬದುಕಿಗೆ ಭ್ರಮೆ ಎನ್ನುತ್ತೇವೆ. ಆದರೆ ಇದು ಸರಿಯೆ? ನಂಬಿಕೆ ಇರದಿದ್ದರೆ ಯಾವ ವಿಜ್ಞಾನಿಯೂ ಯು ಏನನ್ನೂ ಸಾಧಿಸಲಾರ. ಒಂದು ನಂಬಿಕೆಯ ಆಧಾರದಲ್ಲಿ ಸಾಗಿ ಅವನು ಕಂಡು ಹಿಡಿದದ್ದು ನಮಗೆ ಸತ್ಯವೆನಿಸುತ್ತದೆ. ಸಾಧನೆಯೆನಿಸಲ್ಪಡುತ್ತದೆ. ಹಾಗಾದರೆ ವಿಜ್ಞಾನಿಗಳ ನಂಬಿಕೆ ಸುಳ್ಳಾಗಲಿಲ್ಲವೇ? ಹಾಗೆ ವಿಜ್ಞಾನಿಗಳ ನಂಬಿಕೆಗಳನ್ನು ಏನೆನ್ನಬೇಕು?
ಒಂದು ಕಾಲದಲ್ಲಿ ಒಬ್ಬ ವಿಜ್ಞಾನಿ ಒಂದು ಮುಲ ವಸ್ತುವಿನ ಅತೀ ಚಿಕ್ಕ ಕಣ ಅಣು ಎಂದು ಹೇಳಿದ . ನಂತರ ಅದು ಸುಳ್ಳಾಯಿತು. ಒಂದು ಮುಲ ವಸ್ತುವಿನ ಅತೀ ಚಿಕ್ಕ ಕಣ ಪರಮಾಣುವೆಂದಾಯಿತು. ಮುಂದೆ ಅದೂ ನಿಲ್ಲಲಿಲ್ಲ ಈ ಪರಮಾಣುವಿನ ಒಳಗೆ ಎಲೆಕ್ಟ್ರಾನ್, ಪ್ರೋಟಾನ್, ನ್ಯೂಟ್ರಾನ್ ಎಂಬ ಫಟಕಗಳಿವೆ. ಅವು ಬರಿಗಣ್ಣಿಗೆ ಕಾಣುವುದಿಲ್ಲ. ಮುಲ ವಸ್ತುವಿನ ಗುಣವೇ ಅವುಗಳಿಗಿಲ್ಲ ಎಂದಾಯಿತು. ಇಲ್ಲಿ ಕೊನೆಗೆ ಕಣ್ಣಿಗೆ ಕಾಣದ ನಿರ್ಗುಣದಿಂದ ಮುಲ ವಸ್ತುವೆಂಬ ಸಗುಣದ ಸೃಷ್ಟಿಯಾಗುತ್ತಿದೆ ಎಂದರ್ಥವಾಗುತ್ತದೆ. ಆದ್ದರಿಂದ ಅನಾದಿ ಕಾಲದಿಂದಲೂ ವಿಜ್ಞಾನ ಹೇಳುವ ಮೊದಲೇ ನಿರಾಕಾರದಿಂದ ಸಾಕಾರವೂ ಅವ್ಯಕ್ತದಿಂದ ವ್ಯಕ್ತವೂ ನಿರ್ಗುಣದಿಂದ ಸಗುಣವು ಸೃಷ್ಟಿಯಾಗುತ್ತದೆ ಎಂದು ಹೇಳಿದ ವೇದವಾಣಿಯನ್ನು ಮುಢ ನಂಬಿಕೆಯೆಂದು ಕರೆಯುವುದು ಅಪಚಾರವಲ್ಲವೇ?
ಬ್ರಾಹ್ಮೀ ಮಹೂರ್ತದಲ್ಲಿ ಅಶ್ವಥ್ಥ ಮರ ಸುತ್ತುವುದರಿಂದ ದೇಹಕ್ಕೆ ದೊರಕುವ ಗರಿಷ್ಠ ಆಮ್ಲಜನಕ, ಸೆಗಣಿಯನ್ನು ಅಂಗಳಕ್ಕೆ ಸಾರಿಸುವುದರಿಂದ ಅದು ರೋಗಾಣುಗಳನ್ನು ನಾಶಪಡಿಸುತ್ತದೆ ಎಂಬ ಸತ್ಯ, ಮನೆಯಂಗಳದಲ್ಲಿ ನೆಡುವ ತುಳಸೀ ಗಿಡದ ಗಾಳಿ ಸೇವನೆಯಿಂದ ಆರೋಗ್ಯವೃದ್ದಿ, ದೀಪಾವಳಿ ಸಂದರ್ಭದಲ್ಲಿ ಗದ್ದೆಗಳಲ್ಲಿ ಹಚ್ಚುವ ದೀಪಗಳು ಕೃಷಿಗೆ ಹಾನಿಕಾರಕವಾದ ಕೀಟಗಳನ್ನು ಕೊಲ್ಲುತ್ತವೆ ಎಂಬ ವಿಚಾರ ಹೀಗೆ ಒಂದಲ್ಲ ಎರಡಲ್ಲ ಜನಪದರ ನಂಬಿಕೆಗಳ ಹಿಂದೊಂದು ಮೌಲ್ಯವಿದೆ. ಅರ್ಥವಿದೆ. ನಾವು ಬೆಳೆದ ಜ್ಞಾನದ ದೆಸೆಯಿಂದ ಅವರ ನಂಬಿಕೆಗಳನ್ನು ಆಚರಣೆಗಳನ್ನು ನಮ್ಮ ಮುಗಿನ ನೇರಕ್ಕೆ ವ್ಯಾಖ್ಯಾನಿಸಿ ಅವರನ್ನು ಬಂಧಿಸಲು ಯತ್ನಿಸುತ್ತೇವೆ. ಆದರೆ ಇದು ಕಾಡಿನಲ್ಲಿ ಆನಂದವಾಗಿ ಹಾರಾಡುತಿದ್ದ ಗಿಳಿಯೊಂದನ್ನು ಬಂಧಿಸಿ ತಂದು ಪಂಜರದಲ್ಲಿ ತಂದಿಟ್ಟಂತೆ ಆದೀತಲ್ಲದೆ ಅದಕ್ಕಿಂತ ಹೆಚ್ಚಿನ ಒಳ್ಳೆಯ ಪರಿಣಾಮವಾಗಲಾರದ್ದು.
ಜನರ ಎಲ್ಲಾ ನಂಬಿಕೆ ಆಚರಣೆಗಳು ಸರಿಯೆಂದು ವಾದಿಸುವುದು ನನ್ನ ಉದ್ದೇಶವಲ್ಲ. ಸತೀ ಪದ್ಧತಿ, ಬೆತ್ತಲೆ ಸೇವೆ, ಪ್ರಾಣಿಬಲಿಯಂತಹ ಆಂಧಾಚರಣೆಗಳನ್ನು ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ನಾನು ಹೇಳುವುದು ಇಷ್ಟೆ ರೋಗವೊಂದನ್ನು ಹಿಡಿದು ವಾದಿಸುವುದು ಸರಿಯಲ್ಲ. ರೋಗದ ಮುಲವನ್ನು ಕಂಡು ಹಿಡಿದು ಸಾಧಿಸಿದರೆ ಮಾತ್ರ ಫಲ ಸಿಗಬಹುದು. ಜನರಲ್ಲಿ ಮುಢನಂಬಿಕೆ ಇದ್ದರೆ ಅದಕ್ಕೆ ಕಾರಣ ಅವರನ್ನು ಆವರಿಸಿರುವ ಅಜ್ಞಾನದ ಆಂಧಕಾರ ಹಾಗಂತ ಅವರನ್ನು ಬೆಳಕಿಗೆ ಎಳೆದು ತರುವುದು ಬಲತ್ಕಾರವಾಗುತ್ತದೆ. ಈ ಬಲತ್ಕಾರದಿಂದ ಬಾಹ್ಯ ಕತ್ತಲೆಯನ್ನು ಕಳೆಯಬಹುದಲ್ಲದೆ ಅಂತರಂಗದ ಕತ್ತಲೆಯನ್ನು ಕಳೆಯಲು ಸಾಧ್ಯವೇ? ಆದ್ದರಿಂದ ಬೆಳಕು ಅವರ ಒಳಗೆ ಮುಡಬೇಕು. ಬಲತ್ಕಾರದಿಂದ ಅವರ ಭಾವನೆಗಳನ್ನು ಕೊಲ್ಲುವುದರಿಂದ ಆ ಬೆಳಕನ್ನು ಮುಡಿಸಲಾಗದು. ಅನಾದಿಕಾಲದಿಂದ ಒಂದು ಜನಾಂಗದಲ್ಲಿ ಬಲವಾಗಿ ಬೇರೂರಿದ್ದ ನಂಬಿಕೆಗಳನ್ನು ಕದಲಿಸಬೇಕಾದರೆ ಮೊದಲು ನಾವು ಅವರ ವಿಶ್ವಾಸವನ್ನು ಗಳಿಸಬೇಕು. ಮಾನವೀಯ ಮೌಲ್ಯ ಸೌಹಾರ್ದಭಾವ ಎಲ್ಲರೂ ಎಲ್ಲರನ್ನು ಪ್ರೀತಿ ಗೌರವಗಳಿಂದ ಕಾಣುವ ಶಿಕ್ಷಣ ಸಾರ್ವತ್ರಿಕವಾಗಬೇಕು. ಅದಿಲ್ಲದೆ ಜನರನ್ನು ಬದಲಿಸುತ್ತೇವೆ ಎಂದು ಹೊರಟ ನಮ್ಮ ಸಂಬಿಕೆಗಳೂ ಮುಢನಂಬಿಕೆಗಳಾಗುತ್ತವೆ. ಆದ್ದರಿಂದ ಜನರ ಮುಢನಂಬಿಕೆಗಳೇ ಅದನ್ನು ಬಿಟ್ಟು ಮೇಲೇರುವುದಕ್ಕೆ ಮೊದಲ ಮೆಟ್ಟಿಲೆಂದು ಬಗೆದು ನಾವು ಅವರೊಳಗೆ ಬೆಳಕನ್ನು ತುಂಬಬೇಕು.

Comments

comments

Leave a Reply

Read previous post:
ಮಾರ್ಚ್‌ನಲ್ಲೇ ಮಳೆ ಆರಂಭ !?!

ಸಾಮಾನ್ಯವಾಗಿ ಏಪ್ರಿಲ್ ಎರಡನೇ ವಾರದಲ್ಲಿ ಸುರಿಯುವ ಬೇಸಿಗೆ ಮಳೆ ಈ ಬಾರಿ ಮಾರ್ಚ್ 15ರ ವೇಳೆಗೆ ಒಂದು ತಿಂಗಳು ಮೊದಲೇ ಭೂಮಿಯನ್ನು ತುಸು ತಂಪಾಗಿಸಲಿದೆ ಎನ್ನುತ್ತಿದೆ ಹವಾಮಾನ...

Close