ಹಕ್ಕಿಗಾಗಿ ಹಕ್ಕಿಗಳ ಹೋರಾಟ

Mithuna Kodethoor

ಗುಬ್ಬಚ್ಚಿ, ಗಿಳಿ, ನವಿಲು, ಕಾಗೆ, ಗೂಬೆ, ಪಾರಿವಾಳ, ಕೊಕ್ಕರೆ, ಹಂಸ,ಗಿಡುಗ, ಗೀಜಗ, ಹದ್ದು, ಮರಕುಟಿಕ, ಕೋಗಿಲೆ, ಕೋಳಿ, ಬಾತು ಕೋಳಿ, ಮರ ಬಾತು, ಮಿಂಚುಳ್ಳಿ, ತರಗೆಲೆ ಪಕ್ಷಿ ಎಂಬ ಹಕ್ಕಿಗಳಂತೆ ನೀಲಕಂಠ, ಶೃಂಗ ಚಂಚು, ತಂತು ಬಾಲ ಭುಜಂಗ, ಮಾಲಿ ಕೋಳಿ, ನವಿಲ ಕೆಂಬೂತ,  ರಾಜ ಹಂಸ, ಕಡಲ ಕಾಗೆ, ಚಮಚ ಕೊಕ್ಕು, ಗಂಧರ್ವ ಪಕ್ಷಿ, ಬೂದು ಗೌಜಲಕ್ಕಿ, ರಾಜ ಪಾರಿವಾಳ, ಚಂದ್ರ ಮುಕುಟ, ಮಾಸಲು ಗೂಬೆ, ಗುಬುಟು ಬಾತು, ರಾಜ ಹಕ್ಕಿ, ಬೆಟ್ಟ ಗೊರವಂಕ, ಬಸ್ಟರ್‍ಡ್ ಹಕ್ಕಿ, ರಕ್ತ ಕೆಂಬೂತ, ಬುಲ್‌ಬುಲ್, ಮೈನಾ, ಬೂದು ಕಳಿಂಗ, ಹೊನ್ನಕ್ಕಿ, ಬಡಗಿ ಹಕ್ಕಿ, ಮರಕುಟಿಕ, ಉಷ್ಟ್ರ ಪಕ್ಷಿ ಪಟ್ಟಿ ಮಾಡುತ್ತ ಹೋದರೆ ನೂರಾರು, ಸಾವಿರಾರು ಹಕ್ಕಿಗಳ ಲೆಕ್ಕ ಸಿಗಬಹುದು.

ಕೋಗಿಲೆ ಇಂಪಾಗಿ ಹಾಡುತ್ತದೆ, ಕುಹೂ ಕುಹೂ ಎಂದು. ನಮ್ಮ ರಾಷ್ಟ್ರ ಪಕ್ಷಿ ನವಿಲು ಕುಣಿಯುತ್ತದೆ ಥೈತಕ ಥೈತಕವೆಂದು. ಹಂಸ ಈಜಾಡುತ್ತದೆ, ನೋಡಲೆಷ್ಟು ಚಂದ ಆಹಾ! ಬನ್ನಿ, ಅತಿಥಿಗಳೇ ಅಂತ ಗಿಳಿ ಮಾತಾಡುತ್ತದೆ ಗೊತ್ತಾ? ಎಂಬಂತಹ ಅಚ್ಚರಿಗಳು ಹಕ್ಕಿಗಳ ಪ್ರಪಂಚದಲ್ಲಿ ನಮಗೆ ಮಾಮೂಲು. ಗಿಳಿಗಳಲ್ಲಿ ಹೆಚ್ಚಿನವು ಹಸಿರು ಬಣ್ಣದವಾದರೂ ಬಿಳಿ, ಕಪ್ಪು, ಕೆಂಪು, ಹಳದಿ, ಪಂಚವರ್ಣ ಮುಂತಾದ ಬಣ್ಣದ ಗಿಳಿಗಳೂ ಕಾಣಸಿಗುತ್ತವೆ. ಭಾರತದಲ್ಲಿ ಸುಮಾರು ಇಪ್ಪತ್ತು ಪ್ರಭೇದದ ಗಿಳಿಗಳಿವೆಯಂತೆ. ಗಿಣಿಶಾಸ್ತ್ರ ಎಂದು ಹೇಳಿಕೊಂಡು ಗೂಡೊಳಗೆ ಗಿಳಿಗಳನ್ನಿಟ್ಟು ಜ್ಯೋತಿಷ್ಯ ಹೇಳಿ ಹೊಟ್ಟೆ ತುಂಬಿಸಿಕೊಳ್ಳುವವರಿಗೇನೂ ಕಡಿಮೆಯಿರಲಿಲ್ಲ. ಗಿಣಿಗಳು ಕಡಿಮೆಯಾದಂತೆ ಶಾಸ್ತ್ರದವರೂ ಕಾಣೆಯಾಗುತ್ತಿದ್ದಾರೆ. ಅದೇ ರೀತಿ ಕುಕ್ಕುಟ ಶಾಸ್ತ್ರ ಅಂತಲೂ ಇದೆ. ಬೆಳಿಗ್ಗೆಯಾಗುವುದೇ ಕೋಳಿ ಕೂಗುವುದರಿಂದ ಎಂಬ ಮಾತಿದೆ. ಕೋಳಿಗಳನ್ನು ಆಧರಿಸಿಯೇ ಇವತ್ತು ಸಾವಿರಾರು ಮಂದಿ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಸುತ್ತಿಲ್ಲವೆ? ಆಹಾರವಾಗಿ ಕೋಳಿ, ಮಾಂಸದ ರೂಪದಲ್ಲೂ, ಮೊಟ್ಟೆಯ ವಿಧದಲ್ಲೂ ಲಭ್ಯ. ಅದರ ಹಿಕ್ಕೆ ಒಳ್ಳೆಯ ಗೊಬ್ಬರ! ಕೋಳಿ ಅಂಕಗಳಲ್ಲಿ ಕೋಳಿ ಕದನ ನೋಡಲು ಸೇರುವ ನೂರಾರು ಮಂದಿ ಕಟ್ಟುವ ಬಾಜಿ ಸಾವಿರ, ಲಕ್ಷ ರೂಪಾಯಿಗಳ ಲೆಕ್ಕದಲ್ಲಿರುತ್ತದೆ. ಪಾರಿವಾಳಿಗೆ ಟ್ರೈನಿಂಗ್ ಕೊಟ್ಟು ಆಕಾಶದೆತ್ತರ ಹಾರಿಸಿ ಬೆಟ್ಟಿಂಗ್ ಕಟ್ಟಿ ದುಡ್ಡೆಣಿಸುವವರೂ ಇದ್ದಾರೆ.ಕಾಳಿದಾಸನ ಕಾವ್ಯದಲ್ಲಿ ನಳ ದಮಯಂತಿ ನಡುವೆ ಹಂಸ ಪ್ರೇಮ ಪತ್ರ ರವಾನಿಸಿದ ಪರಿಣಾಮವೇ ಅಲ್ಲವೇ ಇವತ್ತು ಪತ್ರ ಬಟಾವಾಡೆ ಮಾಡುವ ಇಲಾಖೆ ಅಂಚೆ(ಹಂಸ) ಇಲಾಖೆಯಾಗಿರುವುದು. ಹಾಗೆಯೇ ಪಾರಿವಾಳವೂ ಪ್ರೇಮ ಪತ್ರ ಕೊಂಡೊಯ್ಯುವ ಕಥೆ ಇದೆ. ಮೇಘಸಂದೇಶದಲ್ಲಿ ಪಾರಿವಾಳ ಪ್ರೇಮ ಪತ್ರ ಕೊಂಡೊಯ್ಯುವಂತೆ ರಾಮಾಯಣದಲ್ಲೂ ಪಕ್ಷಿಗಳ ಪ್ರಸ್ತಾಪ ಬರುತ್ತದೆ. ರಾಮಾಯಣದಲ್ಲಿ ಜಟಾಯು ಪಕ್ಷಿ, ಸೀತೆಯನ್ನು ಕದ್ದೊಯ್ಯುತ್ತಿದ್ದ ರಾವಣನೊಂದಿಗೆ ಹೋರಾಡಿ, ರಾಮನಿಗೆ ಈ ವಿಚಾರ ಹೇಳಿ ಸತ್ತುಹೋದ ಕಥೆ ನೀವು ಕೇಳಿರಬಹುದು.ಶನಿದೇವನಿಗೆ ಕಾಗೆ, ಸುಬ್ರಹ್ಮಣ್ಯನಿಗೆ ನವಿಲು, ವಿಷ್ಣುವಿಗೆ ಗರುಡ, ಸರಸ್ವತೀಗೆ ಹಂಸ ಹೀಗೆ ಅನೇಕ ದೇವರಿಗೆ ಪಕ್ಷಿಗಳೇ ವಾಹನಗಳು. ಗಿಳಿಯೊಂದರ ಮರಿಗಳೆರಡರಲ್ಲಿ ಒಂದು ಸನ್ಯಾಸಿಯ ಮನೆ ಸೇರಿ, ಅಲ್ಲಿಗೆ ಬರುವ ಅತಿಥಿಗಳನ್ನು, ಬನ್ನಿ, ನಿಮಗೆ ಸ್ವಾಗತ ಎಂದು ಉಪಚರಿಸಿದರೆ, ಡಕಾಯಿತನ ಮನೆ ಸೇರಿದ ಮತ್ತೊಂದು ಗಿಳಿ ಮರಿ, ಬಂದ ಅತಿಥಿಗಳಲ್ಲಿ ಕಡಿಯಿರಿ, ಕೊಲ್ಲಿರಿ ಎಂದು ಹೇಳುವ ನೀತಿ ಕಥೆಯನ್ನು ನಾವು ಶಾಲಾ ದಿನಗಳಲ್ಲಿ ಓದಿದ್ದೇವೆ. ಅದೇ ರೀತಿ ಒಗ್ಗಟ್ಟಿನಲ್ಲಿ ಬಲವಿದೆ ಮಾತಿಗೂ ಹಕ್ಕಿಗಳ ಕಥೆಯೇ ಉದಾಹರಣೆ. ಬೇಟೆಗಾರನೊಬ್ಬ ಕಾಳುಗಳನ್ನು ಹಾಕಿ ಬಲೆ ಬೀಸಿದಾಗ, ಬಲೆಯೊಳಗೆ ಸಿಕ್ಕಿ ಹಾಕಿಕೊಂಡ ಪಾರಿವಾಳಗಳೆಲ್ಲ ಒಗ್ಗಟ್ಟಿನಿಂದ ಹಾರಿ ಹೋಗಿ ಬಚಾವಾದವು!ಬುದ್ಧಿವಂತಿಕೆಗೆ; ಕಾಗೆ ಹೂಜಿಗೆ ಕಲ್ಲುಗಳನ್ನು ಹಾಕಿ ನೀರು ಕುಡಿದ ಕಥೆಯೇ ಉದಾಹರಣೆ! ನವಿಲು, ಕೊಕ್ಕರೆ ಮುಂತಾದ ಹಕ್ಕಿಗಳ ಗರಿಗಳಿಂದ ಚಾಮರ ಮಾಡಿಕೊಂಡು ಗಾಳಿ ಬೀಸಿಕೊಂಡು ಹಾ……ಅನ್ನುವ ನಾವು, ರಸ್ತೆಯಲ್ಲಿ ಸತ್ತು ಬಿದ್ದು ವಾಸನೆ ಬರುವ ನಾಯಿ, ಬೆಕ್ಕು, ಇಲಿಗಳ ಹೆಣಗಳನ್ನು ಹೊತ್ತೊಯ್ದು, ನಿರ್ಮಲಗೊಳಿಸುವ ಕಾಗೆ, ಹದ್ದು, ರಣಹದ್ದುಗಳ ಸೇವೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ ಅಲ್ಲವೇ?

ಶಾಂತಿ ಸೂಚಕವಾಗಿ ಪಾರಿವಾಳವನ್ನು ಬಳಸುವ ನಾವು ಸ್ವಾತಂತ್ರ್ಯ ಸೂಚಕವಾಗಿಯೂ ಆ ಹಕ್ಕಿಯನ್ನು ಕ್ರೀಡಾಕೂಟ ಮುಂತಾದೆಡೆ ಹಾರಿ ಬಿಡುತ್ತೇವೆ. ಪ್ರಪಂಚದಲ್ಲಿ ಇನ್ನೂರು ಜಾತಿಯ ಪಾರಿವಾಳಗಳಿವೆಯಂತೆ. ಪಾರಿವಾಳಗಳು ನಿರಂತರ ಹದಿನೇಳು ತಾಸು ಹಾರಬಲ್ಲವಂತೆ.ಉಳಿದೆಡೆ ಬಿಡಿ, ಕರ್ನಾಟಕದಲ್ಲೇ ರಂಗನತಿಟ್ಟು, ಗುಡವಿ, ಘಟಪ್ರಭಾ, ಕೂಕೆ ಬೆಳ್ಳೂರು, ಮಂಡ ಗದ್ದೆಯಂತಹ ಹತ್ತಾರು ಪಕ್ಷಿಧಾಮಗಳಿವೆ. ಕೇವಲ ಸಂತಾನೋತ್ಪತ್ತಿಗಾಗಿಯೇ ಪಕ್ಷಿಧಾಮಗಳಿಗೆ ಬಂದು ಹೋಗುವ ಹಕ್ಕಿಗಳಿರುವಲ್ಲಿ ಪರಿಸರ ಚೆನ್ನಾಗಿರುತ್ತದೆ. ಇವತ್ತು ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಗುಬ್ಬಿ ಹಾಡು ಹಾಡಿದರೂ ಗುಬ್ಬಿಗಳು ಬಾರವು. ಕಾಂಕ್ರೀಟು ಕಟ್ಟಡಗಳು ಹೆಚ್ಚುತ್ತಿದ್ದಂತೆ, ಹಂಚಿನ ಮನೆಗಳಲ್ಲಿರುವಂತೆ ಫೋಟೋಗಳನ್ನಿಡುವುದಿಲ್ಲ. ಆ ಫೋಟೊಗಳ ಹಿಂಬದಿಯಲ್ಲಿ ಗೂಡು ಕಟ್ಟಿ ಚಿಂವ್‌ಚಿಂವ್ ಅನ್ನುವ ಗುಬ್ಬಿಗಳ ಕಾಲ ಅಜ್ಜಿಕಥೆಯಂತೇ ಮುಗಿದು ಹೋಗುತ್ತಿದೆ. ಮೊಬೈಲು ಭರಾಟೆಗೆ, ಅವುಗಳಿಂದ ಹೊರಡುವ ಕಾಣದ ಅಲೆಗಳಿಗೆ ಗುಬ್ಬಿಗಳು ಪತರಗುಟ್ಟುತ್ತಿವೆ. ಹೀಗೆ ಹಕ್ಕಿಗಳ ಬಗ್ಗೆ ಬರೆಯುತ್ತ ಕೂತರೆ ಮಹಾಗ್ರಂಥವೇ ರಚನೆಯಾಗಬಹುದು. ಪಂಜರದಲ್ಲಿ ಹಕ್ಕಿಗಳನ್ನು ಕೂಡಿ ಹಾಕಿ, ಅವುಗಳ ಕೂಗು, ಹಾರಲಾಗದಿದ್ದರೂ ಅವುಗಳ ಹಾರಾಟ, ನಾವು ಹಾಕಿದ ಕಾಳು, ತಿಂಡಿಗಳನ್ನು ತಿನ್ನುವ ಪರಿಗಳನ್ನೆಲ್ಲ ನೋಡುತ್ತ ಕೂತರೆ, ಅಕ್ವೇರಿಯಂನಲ್ಲಿ ಬಣ್ಣ ಬಣ್ಣದ ಮೀನುಗಳ ಬಂಧನದೊಳಗಿನ ಆಟದಂತೆಯೇ ಕಾಣುತ್ತದೆ. ಪಕ್ಷಿವೀಕ್ಷಣೆಗೆ ಅಂತ ಕೂರುವುದು ಕಷ್ಟ. ಆದರೂ ಪ್ರಯತ್ನಿಸಿ. ಹಾರಿ ಬಂದು ಕೂರುವ ಹಕ್ಕಿ, ಕ್ರಿಮಿಕೀಟ, ಹುಳ ಹುಪ್ಪಟೆಗಳನ್ನು ಪಟಕ್ಕೆಂದು ಹೊತ್ತೊಯ್ಯುವ ರೀತಿ, ಕಷ್ಟಪಟ್ಟು ಕಟ್ಟಿದ ಗೂಡೊಗಳಗಿನಿಂದ ಬಾಯಿತೆರೆದು ತಲೆ ಹೊರಹಾಕುವ ಮರಿಗಳಿಗೆ ಆಹಾರ ಉಣಿಸುವ ಪರಿಯನ್ನು ನೀವೆಲ್ಲಾದರೂ ನೋಡಿದ್ದೀರಾ? ಹುಲ್ಲುಕಡ್ಡಿಗಳನ್ನು ಹೆಕ್ಕಿ ಹೆಕ್ಕಿ ತಂದು ಗೂಡು ಕಟ್ಟುವುದನ್ನು ನೋಡುವ ಅವಕಾಶ ನಿಮಗೆಲ್ಲಾದರೂ ಸಿಕ್ಕಿದೆಯೇ? ಅವುಗಳ ಕೂಗಾಟ, ಚೀರಾಟ, ಹಾಡು, ಮಾತು ನಮಗೆ ಅರ್ಥೈಸಲು ಸಾಧ್ಯವಾಗಿದೆಯೇ? ಮೊನ್ನೆ ಒಂದೆಡೆ ಭಾಷಣಕಾರರೊಬ್ಬರು, ಪಕ್ಷಿಗಳು ಹೇಗೆ ರೈತನ ಮಿತ್ರ ಎಂಬುದನ್ನು ವಿವರಿಸುತ್ತಿದ್ದರು; ಒಂದು ಇಲಿ ಜೋಡಿ ವರುಷಕ್ಕೆ ನಾಲ್ಕು ಲಕ್ಷದಷ್ಟು ಇಲಿಗಳ ಹುಟ್ಟಿಗೆ ಕಾರಣವಾಗುತ್ತವೆ. ಈ ಇಲಿಗಳನ್ನು ಹದ್ದು, ಕಾಗೆ, ರಣಹದ್ದು, ಗಿಡುಗಗಳಂತಹ ಹಕ್ಕಿಗಳು ತಿಂದು ರೈತನನ್ನು ಉಳಿಸುತ್ತವೆ ಅಂತ ! ಪರಾಗ ಸ್ಪರ್ಶ, ಬೀಜಗಳ ಪ್ರಸರಣದಲ್ಲೂ ಹಕ್ಕಿಗಳ ಪಾತ್ರ ಮಹತ್ತರ. ಆ ಮೂಲಕ ಅವು ಕಾಡಿನ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡುತ್ತವೆ. ಛಾಯಾಗ್ರಾಹಕರಿಗೆ ಹಕ್ಕಿಗಳು ದೊಡ್ಡ ಸಂಪತ್ತು. ಇವತ್ತು ವಿಮಾನದ ಕಲ್ಪನೆಯ ಹಿಂದೆ ಹಕ್ಕಿಗಳ ಹಾರಾಟದ ಸ್ಫೂರ್ತಿಯಿದ್ದಂತೆ ನಮ್ಮ ನೂರಾರು ಕವಿಗಳ ಕವನಗಳಿಗೆ ಹಕ್ಕಿಗಳೇ ಸ್ಫೂರ್ತಿ. ಹಕ್ಕಿ ಹಾರುತಿದೆ ನೋಡಿದಿರಾ ಅಂತ ಪ್ರಸಿದ್ಧ ಕವಿಯ ಕವನ ನಮಗೆಲ್ಲ ಗೊತ್ತಿದೆ. ಚೆನ್ನಾಗಿ ಹಾಡುವವರನ್ನು ಹಾಡು ಹಕ್ಕಿ ಅಂತ ಕರೆಯುತ್ತೇವೆ. ಚೆನ್ನಾಗಿ ಕುಣಿಯುವವರನ್ನು ನವಿಲು ಅನ್ನುತ್ತೇವೆ. ಚೆಂದದ ಹುಡುಗಿಯರನ್ನು ಹಕ್ಕಿ ಎಂದೇ ಯುವಕರು ಕರೆಯುತ್ತಾರೆ. ಗಬಗಬ ತಿನ್ನುವವನಿಗೆ ಬಕ ಪಕ್ಷಿ ಅನ್ನುತ್ತೇವೆ. ಒಂದು ಕೈಗಾರಿಕೆಗಾಗಿ, ವಿಮಾನ ನಿಲ್ದಾಣಕ್ಕಾಗಿ ಇತ್ಯಾದಿ ಅಭಿವೃದ್ಧಿ ಕಾರ್‍ಯಗಳ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಪ್ರತಿಭಟಿಸುತ್ತೇವೆ. ಪುನರ್‌ವಸತಿಗಾಗಿ ಹೋರಾಡುತ್ತೇವೆ. ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ. ಆದರೆ ಹಕ್ಕಿಗಳ ಜೀವಾಳ ಆಗಿರುವ ಕಾಡನ್ನು, ಮರಗಳನ್ನು ಕಡಿಯುವ ನಾವು ಹಕ್ಕಿಗಳ ಆವಾಸ ಸ್ಥಾನವನ್ನೇ ನಾಶಗೈಯುತ್ತಿದ್ದೇವಲ್ಲ? ಆ ಹಕ್ಕಿಗಳು ಹೇಗೆ ಪ್ರತಿಭಟಿಸಬೇಕು? ಯಾರಲ್ಲಿ ತಮ್ಮ ಅಳಲನ್ನು ಹೇಳಿಕೊಳ್ಳಬೇಕು? ಅವುಗಳು ತಮ್ಮ ಆವಾಸ ಸ್ಥಾನದ ಹಕ್ಕಿಗಾಗಿ ಹೋರಾಟ ಮಾಡಿದ್ರೆ ಅದು ನಮಗೆ ಅರ್ಥವಾದೀತೆ? ಹಕ್ಕಿಗಳಿಗೆ ಪುನರ್ ವಸತಿ ಕಲ್ಪಿಸುವವರು ಯಾರು? ಈಗಾಗಲೇ ಕೊಳಕು ನೀರು, ಗಾಳಿ, ಆಧುನಿಕತೆಯ ಭರಾಟೆ, ವಿಮಾನಗಳ ಹಾರಾಟದ ಸದ್ದು, ಮರಗಳ ನಾಶ, ಕಾರ್ಖಾನೆಗಳ ಹೊಗೆ, ಮೊಬೈಲು ಮುಂತಾದ ಉಪಕರಣಗಳ ಕಾಣದ ವಿದ್ಯುದಲೆಗಳ ಪರಿಣಾಮ ಅನೇಕ ಹಕ್ಕಿಗಳ ಸಂತತಿಯೇ ನಾಶವಾಗಿದೆ. ಕೆಲ ಜಾತಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ನಾವಿನ್ನೂ ಎಚ್ಚರಗೊಳ್ಳದಿದ್ದರೆ ಹೇಗೆ? ಅಲ್ಲವೇ?ನೆನಪಿರಲಿ; ಪಕ್ಷಿ ಪ್ರೀತಿ ನಮ್ಮ ನಾಡಿನ ಸ್ವಾಸ್ಥ್ಯಕ್ಕೆ ಪೂರಕ.

Comments

comments

Leave a Reply

Read previous post:
ಜಾತ್ರೆ

Mithuna Kodethoor ಆಚಾರ್ಯ ತಪಸಾಮ್ನಾಯ ಜಪೇನ ನಿಯಮೇನ ಚ ಉತ್ಸವೇನಾನ್ನ ದಾನೇನ ಕ್ಷೇತ್ರ ವೃದ್ಧಿಸ್ತು ಪಂಚಧಾ ದೇವಳದಲ್ಲಿ ಪ್ರತಿಷ್ಟೆ ಮಾಡಿದ ತಂತ್ರಿ, ಅರ್ಚಕರ ತಪೋಬಲದಿಂದ ವೇದಪಾರಾಯಣದಿಂದ, ನಿಯಮ...

Close