ಮುಲ್ಕಿ ಹೆದ್ದಾರಿ ವಿಸ್ತರಣೆ – ವಿಶೇಷ ಸಭೆ

Narendra Kerekadu

ರಾಷ್ಟ್ರೀಯ ಹೆದ್ದಾರಿ ಮುಲ್ಕಿಯಲ್ಲಿ ನಡೆಸಲು ಉದ್ದೇಶಿಸಿರುವ ನೂತನ ರಸ್ತೆ ವಿಸ್ತರಣೆ ಕಾಮಗಾರಿಯ ಬಗ್ಗೆ ಜನರಲ್ಲಿ ಸ್ಪಷ್ಟವಾಗಿ ಮಾಹಿತಿ ತಿಳಿಸಲು ಎಲ್ಲಾ ಯೂನಿಯನ್ ಹಾಗೂ ಸ್ಥಳೀಯ ಸಂಘ ಸಂಸ್ಥೆಯರ ನಡುವೆ ವಿಶೇಷ ಸಭೆಯನ್ನು ನಡೆಸಲಾಗುವುದು ಎಂದು ಮುಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಶಶಿಕಾಂತ ಶೆಟ್ಟಿ ಹೇಳಿದರು.
ಸುರತ್ಕಲ್ ಕುಂದಾಪುರದ ನಡುವೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿಗೆ ಮುಲ್ಕಿಯಲ್ಲಿ ಹೆದ್ದಾರಿ ವಿಸ್ತರಣೆಯ ಬಗ್ಗೆ ಬೈಪಾಸ್ ಅಥವ ಹೆದ್ದಾರಿಯನ್ನೇ ವಿಸ್ತರಣೆ ಮಾಡುವ ಬಗ್ಗೆ ಆಕ್ಷೇಪ ಇದ್ದ ಕಾರಣ ಮುಂದಿನ ಹಂತದ ಕಾಮಗಾರಿಯ ಬಗ್ಗೆ ಅತಂಕ ಇದ್ದು ಈಗ ಬದಲಿ ಪ್ರಸ್ತಾವನೆಯ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಮುಲ್ಕಿ ನಗರ ಪಂಚಾಯಿತಿಯಲ್ಲಿ ಹೆದ್ದಾರಿ ವಿಸ್ತರಣೆಯ ಬಗ್ಗೆ ಚರ್ಚಿಸುವ ಸಲುವಾಗಿ ನಡೆಸಿದ ಸಭೆಯಲ್ಲಿ ಮಾತನಾಡಿದರು ಮುಲ್ಕಿ ಹೆದ್ದಾರಿ ವಿಸ್ತರಣೆಯಿಂದ ಪೇಟೆಯ ಚಿತ್ರಣ ಸಂಪೂರ್ಣವಾಗಿ ಬದಲಾಗಲಿದೆ ಹಾಗೂ ಇಲ್ಲಿನ ಬಸ್ಸು ನಿಲ್ದಾಣ, ಕಾರು, ರಿಕ್ಷಾ, ಟೆಂಪೋ ಇನ್ನಿತರ ನಿಲುಗಡೆಗೆ ಅಡ್ಡಿ ಆಗಲಿದ್ದು ಈ ಬಗ್ಗೆ ಸಂಸದ ಮತ್ತು ಶಾಸಕರ ನೇತೃತ್ವದಲ್ಲಿ ವಿಶೇಷ ಸಭೆಯನ್ನು ನಡೆಸಿ ಸೂಕ್ತ ವ್ಯವಸ್ಥೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದರು.

ಕಾಮಗಾರಿಯ ಪ್ರಸ್ತಾವನೆ;
ಪ್ರಸ್ತುತ ಕಾಮಗಾರಿಯೂ ಮುಲ್ಕಿಯಲ್ಲಿ ಅಂಡರ್ ಪಾಸ್ ಹೈವೆಯ ನಿರ್ಮಾಣ ಆಗಲಿದೆ. ಮುಲ್ಕಿಯ ಕ್ಷೀರ ಸಾಗರದ ಮುಂಭಾಗದಿಂದ 8.75 ಮೀಟರ್ ಅಗಲದಲ್ಲಿ ಎರಡು ಹೆದ್ದಾರಿ ರಸ್ತೆಯು ನಿರ್ಮಾಣ ಆಗಲಿದ್ದು ಇದು 20 ಅಡಿ ಆಳದಿಂದ ಆರಂಭವಾಗಿ ಮುಲ್ಕಿ ಆರ್.ಆರ್.ಟವರ್‌ನ ಮುಂಭಾಗದಲ್ಲಿ ಸರ್ವಿಸ್ ರಸ್ತೆಯ ಸಮಭಾಗದಲ್ಲಿ ಸೇರಿಕೊಳ್ಳಲಿದೆ.
ಈ ರಸ್ತೆಯ ಎರಡೂ ಬದಿಯಲ್ಲಿ 9ಮೀಟರ್‌ನ ಸರ್ವಿಸ್ ರಸ್ತೆ ಮಾತ್ರ ನೆಲ ಮಟ್ಟದಲ್ಲಿಯೇ ಇದ್ದು ಎರಡೂ ಕಡೆಯಲ್ಲಿ ಒಂದು ಮೀಟರ್‌ನ ಮೋರಿ ರಚನೆಯಾಗಿ ಅದರ ಮೇಲೆ ಸಿಮೆಂಟ್ ಸ್ಲಾಬ್ ಬಂದು ಅದನ್ನು ಸಾರ್ವಜನಿಕರು ಪಾದಚಾರಿ ರಸ್ತೆಯನ್ನಾಗಿ ಉಪಯೋಗಸಬಹುದು ಎಂದು ನವಯುಗ ಕನ್ಸ್‌ಟ್ರಕ್ಷನ್‌ನ ಈ ಯೋಜನೆಯ ಪ್ರಬಂಧಕ ರವೀಂದ್ರನಾಥ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ಸರ್ವಿಸ್ ರಸ್ತೆಗೆ ಸಂಪರ್ಕಿಸಲು ಈಗಿರುವ ಲಯನ್ಸ್ ಪಾರ್ಕನ ಬಳಿಯಲ್ಲಿ ಕಿನ್ನಿಗೋಳಿ ಸಂಪರ್ಕದ ರಸ್ತೆಯಲ್ಲಿ ಒಂದು ಓವರ್ ಬ್ರಡ್ಜ್ ಬರಲಿದೆ ಹಾಗೂ ಈಗಿನ ಗೌರವ್ ಬಾರ್‌ನ ಬಳಿಯಲ್ಲಿ ಸರ್ವಿಸ್ ರಸ್ತೆಗೆ ಸಂಪರ್ಕಿಸುವ ರಸ್ತೆ ಬರಲಿದೆ. ಮುಲ್ಕಿ ಪೇಟೆಯಲ್ಲಿ ಯಾವುದೇ ಕಟ್ಟಡಗಳಿಗೆ ಹಾನಿ ಆಗದೇ ಈ ರಸ್ತೆಯನ್ನು ನಿರ್ಮಿಸಲಾಗುವುದು ಎಂದಿದ್ದಾರೆ.
ಪ್ರಾಮುಖ್ಯವಾಗಿರುವ ಬಪ್ಪನಾಡು ದೇವಳದ ದ್ವಾರ ಉಳಿಸಲಾಗುವುದು, ರಥೋತ್ಸವಕ್ಕೂ ಅಡ್ಡಿ ಆಗುವುದಿಲ್ಲ ಬಸ್ ನಿಲ್ದಾಣಕ್ಕೆ ಅನುಕೂಲವಾಗುವ ಹಾಗೇ ನಕ್ಷೆಯನ್ನು ರಚಿಸಲಾಗಿದೆ ಆದರೆ ಕೇವಲ ನಿಲುಗಡೆಗೆ ಅವಕಾಶ ಇದ್ದು ಬಸ್ ನಿಲ್ದಾಣದ ಸ್ಥಳಾಂತರ ಅಗತ್ಯವಿದೆ ಹಾಗೂ ಕಾರು, ರಿಕ್ಷಾ, ಟೆಂಪೋ ಪಾರ್ಕುಗಳಿಗೂ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ, ಉದ್ಯಮಿಗಳಿಗೆ ಪಾರ್ಕಿಂಗ್ ಮಾಡಲು ಸರ್ವಿಸ್ ರೋಡನ್ನೇ ಬಳಸಬೇಕು ಎಂದಿದ್ದಾರೆ.
ಬದಲಾದ ಕಾಮಗಾರಿಯನ್ನು ಬಪ್ಪನಾಡು ಜಾತ್ರಾ ಮಹೋತ್ಸವ ಮುಗಿದ ನಂತರ ಕೈಗೆತ್ತಿಕೊಳ್ಳಲಾಗುವುದು, ಹಂತ ಹಂತವಾಗಿ ಮಣ್ಣನ್ನು ತುಂಬಿಸುವ ಕೆಲಸ ಮೊದಲು ಪ್ರಾರಂಭವಾಗಿ ಸರ್ವಿಸ್ ರಸ್ತೆಯ ನಿರ್ಮಾಣ ಆದ ನಂತರ ಹೆದ್ದಾರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಹೆದ್ದಾರಿಗಾಗಿ ಸರ್ವೇ ಮಾಡಿರುವ ರಸ್ತೆಯಲ್ಲಿ ಮಾತ್ರ ಈ ಯೋಜನೆ ರಚನೆ ಆಗಲಿದ್ದು ಯಾವುದೇ ಹೆಚ್ಚುವರಿಯಾಗಿ ಭೂಮಿ ಬಳಕೆ ಇಲ್ಲ ಎಂದು ತಿಳಿಸಿದ್ದಾರೆ.
ಹಳೆಯಂಗಡಿಯಲ್ಲಿಯೂ ರಸ್ತೆಯನ್ನು ಮಾತ್ರ ವಿಸ್ತರಣೆ ಮಾಡಲಿದ್ದು ರಿಕ್ಷಾ ಮತ್ತು ಕಾರು ಪಾರ್ಕುಗಳನ್ನು ಸ್ಥಳಾಂತರ ಮಾಡಬೇಕು ಹಾಗೂ ಹೆದ್ದಾರಿಯವರು ನಿರ್ಮಿಸುವ ಬಸ್ ನಿಲ್ದಾಣಗಳನ್ನು ಅಲ್ಲಲ್ಲಿ ನಿರ್ಮಿಸಲಾಗುವುದು ಮಳೆಗಾಲಕ್ಕೆ ಮೊದಲು ಯೋಜನೆಗೆ ಒಂದು ಹಂತಕ್ಕೆ ಬರಲಿದೆ ಎಂದಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಬಿ.ಎಂ.ಆಸಿಫ್ ಮಾತನಾಡಿ ಯಾವುದೇ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಬಪ್ಪನಾಡು ಜಾತ್ರಾ ಮಹೋತ್ಸವವನ್ನು ಗಮನದಲ್ಲಿಟ್ಟುಕೊಂಡು ಪ್ರಾರಂಭಿಸಬೇಕು, ಕಾಮಗಾರಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಜನರಿಗೆ ತಿಳಿಸಿಕೊಂಡೇ ಶಾಂತಿಯುತವಾಗಿ ನಡೆಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ಮುಲ್ಕಿಯಲ್ಲಿ ಕಾಮಗಾರಿ ನಡೆಸುವ ಮೊದಲು ಪಂಚಾಯತ್‌ನ ಗಮನಕ್ಕೆ ತಂದು ಕಾಮಗಾರಿ ಪ್ರಾರಂಭಿಸಬೇಕು ಅಲ್ಲದೇ ಜನರು ತಮ್ಮ ಬಳಿ ವಿಚಾರಿಸುವಾಗ ಮೊದಲು ನಮಗೆ ಮಾಹಿತಿ ತಿಳಿಸಿದರೇ ಉತ್ತಮ ಎಂದು ಸಲಹೆ ನೀಡಿದರು.
ವಿಪಕ್ಷದ ಸುನಿಲ್ ಆಳ್ವಾ ಮಾತನಾಡಿ ಈ ಕಾಮಗಾರಿಯನ್ನು ನವಯುಗ ಕನ್ಸ್‌ಟ್ರಕ್ಷನ್‌ನವರು ಮಾಡುತ್ತಿದ್ದರು ಬದಲಾವಣೆ ಬೇಕಾದರೆ ನಾವು ಹೆದ್ದಾರಿಯನ್ನು ಒತ್ತಾಯಿಸಲು ಸಂಸದ, ಶಾಸಕರ ಮೂಲಕ ಪ್ರಯತ್ನಿಸೋಣ ಎಂದರು.
ಕಾರು ಚಾಲಕರ ಸಂಘದ ಅಧ್ಯಕ್ಷ ದೇವಣ್ಣ ನಾಯಕ್, ಮಧು ಆಚಾರ್ಯ, ಕಿನ್ನಿಗೋಳಿ ಗ್ರಾ.ಪಂ ಅಧ್ಯಕ್ಷ ದೇವಪ್ರಸಾದ್ ಪುನರೂರು, ಉದ್ಯಮಿಗಳಾದ ಹರಿಶ್ಚಂದ್ರ ಕೋಟ್ಯಾನ್, ತಾರನಾಥ ಅಡ್ವೆ, ಬಾಲಚಂದ್ರ ಸನಿಲ್, ಉದಯ ಶೆಟ್ಟಿ ಶಿಮಂತೂರು. ಸದಸ್ಯರಾದ ಪುತ್ತುಬಾವ, ಪುರುಷೋತ್ತಮರಾವ್, ಕಂದಾಯ ನಿರೀಕ್ಷಕ ಹೂವಯ್ಯ ಶೆಟ್ಟಿ, ಉಪಸ್ಥಿತರಿದ್ದರು.

Comments

comments

Leave a Reply

Read previous post:
ಮುರುಕಾವೇರಿ ರಿಕ್ಷಾ ಚಾಲಕ ಮಾಲಕರಿಂದ ಸಮಾಜ ಸೇವೆ

ಮುರುಕಾವೇರಿ ರಿಕ್ಷಾ ಚಾಲಕ ಮಾಲಕರಿಂದ ಮುರುಕಾವೇರಿ ಬಸ್ಸು ನಿಲ್ದಾಣ ಶುಚಿತ್ವ ಸಮಾಜ ಸೇವೆಗೆ ಮುನ್ನುಡಿ

Close