ಮುಲ್ಕಿ ಬೈಪಾಸ್ ರದ್ದು ; ಬಪ್ಪನಾಡಿನಲ್ಲಿ ರಂಗಪೂಜೆ

Narendra Kerekadu

ಮುಲ್ಕಿ; ಕಳೆದ 3 ವರ್ಷಗಳಿಂದ ಅವಿರತವಾಗಿ ಹೋರಾಟ ನಡೆಸುತ್ತಿದ್ದ ಮುಲ್ಕಿ ಬೈಪಾಸ್ ರಸ್ತೆಯ ವಿರೋಧಿ ಸಂಘಟನೆಯಾದ ಬಪ್ಪನಾಡು ಹಿತರಕ್ಷಣಾ ವೇದಿಕೆಯು ತಮ್ಮ ಹೋರಾಟಕ್ಕೆ ಜಯ ಸಿಕ್ಕ ಸಂತಸದಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಸನ್ನಿಧಾನದಲ್ಲಿ ವಿಶೇಷ ರಂಗಪೂಜೆಯ ಸೇವೆಯನ್ನು ಮಾರ್ಚ್ 23ರಂದು ನೀಡಲು ನಿರ್ಧರಿಸಿದೆ.
ಸುರತ್ಕಲ್ ಕುಂದಾಪುರದ ನಡುವೆ ಹೆದ್ದಾರಿ ಇಲಾಖೆಯು ನಡೆಸಲು ಉದ್ದೇಶಿಸಿದ್ದ ಮುಲ್ಕಿ ಬೈಪಾಸ್ ರಸ್ತೆಯ ವಿರುದ್ಧ 2009 ರ ಆರಂಭದಲ್ಲಿಯೇ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಭಕ್ತರು ಒಂದು ಗೂಡಿ ವೇದಿಕೆಯ ಮೂಲಕ ಬೆಂಬಿಡದೇ ಹೋರಾಟ ನಡೆಸಿದ್ದರು. ಆರಂಭದಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿ, ದೇವಳದ ರಥೋತ್ಸವಕ್ಕೆ ಧಕ್ಕೆಯಾಗಿ ಪಾರಂಪರಿಕ ಉತ್ಸವಕ್ಕೆ ಅಡಚಣೆ ಆಗುತ್ತದೆ ಎಂಬ ಉದ್ದೇಶದಿಂದಲೇ ಹೋರಾಟ ನಡೆಸಿದ್ದರು.
ಬೈಪಾಸ್ ರಚನೆಯಿಂದ ಕೃಷಿ ಭೂಮಿಯನ್ನು ಕಳೆದುಕೊಂಡು ಬೀದಿಗೆ ಬೀಳುವ ಅನೇಕ ಕುಟುಂಬವು ಇದರೊಂದಿಗೆ ಸೇರಿಕೊಂಡರು ಅಲ್ಲದೇ ಅನೇಕ ಮನೆ ನಿವಾಸಿಗಳಿಗೂ ಈ ಹೋರಾಟವೇ ಆಸರೆ ಆಯಿತು. ಇದರೊಂದಿಗೆ ತಮ್ಮ ವ್ಯವಹಾರ ದೃಷ್ಠಿಯಿಂದ ಅಮೂಲ್ಯ ಆಸ್ಥಿ, ಕಟ್ಟಡಗಳನ್ನು ಉಳಿಸಿಕೊಳ್ಳುವ ಸ್ವಾರ್ಥಿಗಳಿಗೂ ಸಹ ಸಮಿತಿಯೇ ಅನಿವಾರ್ಯವಾಗಿ ನೆರಳಾಗಿ ಹೋಯಿತು.
ಹೋರಾಟದ ತೀವ್ರತೆಯಿಂದ ಅನೇಕ ಬಾರಿ ಸರ್ವೇ ಮಾಡಲು ಬಂದವರನ್ನು ಓಡಿಸುತ್ತಿದ್ದ ಗ್ರಾಮಸ್ಥರು ಒಂದು ಬಾರಿ ಅವರ ಉಪಕರಣವನ್ನೇ ಕಸಿದು ಮನೆಯಲ್ಲಿಟ್ಟಿದ್ದರು ಕೊನೆಗೆ ಅದು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಬಲವಂತವಾಗಿ ಪೊಲೀಸ್ ಬಲದಲ್ಲಿ ಸ್ಥಳೀಯ ಸರ್ವೇಯರ್ ಉದ್ದಟತನ ತೋರಿದ್ದರಿಂದ ಜನರ ನಿಂದನೆಗೆ ಗುರಿ ಆಗಬೇಕಾಯಿತು. ಆ ನಂತರ ಬಿ.ಎಂ.ಆಸಿಫ್ ಅಧ್ಯಕ್ಷತೆಯಲ್ಲಿ ಮುಲ್ಕಿನಗರ ಪಂಚಾಯತ್ ಸಹ ಪಕ್ಷಭೇಧ ಮರೆತು ಸಂಪೂರ್ಣ ಬೆಂಬಲ ಸೂಚಿಸಿದ್ದರಿಂದ ಅಂದಿನ ಜಿಲ್ಲಾಧಿಕಾರಿ ಪೊನ್ನುರಾಜ್ ಸ್ಥಳಕ್ಕೆ ಬಂದು ಯೋಜನೆಯ ವಿವಿಧ ಹಂತವನ್ನು ಜನರಲ್ಲಿ ತಿಳಿಸಿದರು.


ಸೇತುವೆ ರಚನೆ ಮಾಡಿದರೆ ಮತ್ತು ಪೇಟೆಯಲ್ಲಿನ ಕಟ್ಟಡ ಕೆಡವಿದರೆ ಯೋಜನೆಯು ವೆಚ್ಚದಾಯಕವಾಗುತ್ತದೆ ಬೈಪಾಸ್‌ಗೆ ಮಾತ್ರ ಕಡಿಮೆ ಖರ್ಚಾಗುತ್ತದೆ ಎಂದು ತಿಳಿಹೇಳಿದರು ಆ ಸಲಹೆಯನ್ನು ಸಮಿತಿ ಕೇಳದೆ ದೆಹಲಿಗೆ ತೆರಳಿ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡಿತು. ಈ ನಡುವೆ ಲೋಕಸಭಾ ಚುನಾವಣೆಯು ಬಂದು ಸಮಿತಿಯಲ್ಲಿದ್ದ ಬಿಜೆಪಿ ಪ್ರಮುಖರು ರಾಜಿನಾಮೆಯ ಬೆದರಿಕೆ ನೀಡಿದಾಗ ಕೊನೆಗೆ ನಳಿನ್‌ಕುಮಾರ್ ಕಟೀಲುರವರು ಗೆದ್ದ ನಂತರ ಬಪ್ಪನಾಡು ದೇವಳದಲ್ಲಿಯೇ ಜನಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯನ್ನು ಹೋರಾಟಗಾರರ ಮುಂದೆ ನಡೆಸಿದರು ಬೈಪಾಸ್ ಚೆಂಡನ್ನು ಜಿಲ್ಲಾಧಿಕಾರಿಯ ಅಂಗಳಕ್ಕೆ ಕಳುಹಿಸಲಾಯಿತು.
ಜಿಲ್ಲಾಧಿಕಾರಿಗಳಾದ ಚೆನ್ನಪ್ಪಗೌಡರು ಸ್ವತಹ ಅಧಿಕಾರಿಗಳ ಪಡೆಯೊಂದಿಗೆ ಮುಲ್ಕಿ ಪೇಟೆಯಲ್ಲಿ ಕಟ್ಟಡ ಮತ್ತು ರಸ್ತೆಯ ಎಲ್ಲಾ ವಿಧದಲ್ಲೂ ಅಳತೆ ಮಾಡಿಕೊಂಡು ಸ್ಪಷ್ಟ ನಿರ್ಧಾರಕ್ಕೆ ಬಂದದ್ದರಿಂದ ಈಗ ಅಂಡರ್ ಪಾಸ್ ಹೈವೆಯ ನೀಲನಕ್ಷೆ ತಯರಾಗಿ ನಿಂತಿದೆ. ಬೈಪಸ್ ಬೇಕು ಎಂಬ ಸಣ್ಣ ಹೋರಾಟದ ಧ್ವನಿಯೂ ಸಹ ಜನರ ಬೆಂಬಲ ಇಲ್ಲದೇ ಕ್ಷಿಣವಾಯಿತು.
ಬೈಪಾಸ್ ವಿರುದ್ದ ಹೋರಾಟ ನಡೆಸಲು ಶ್ರೀ ದುರ್ಗಾಪರಮೇಶ್ವರೀಯೇ ಪ್ರೇರಣೆಯ ಶ್ರೀ ರಕ್ಷೆ ನೀಡಿದ್ದರಿಂದ ಶುಕ್ರವಾರ ನೀಡುವ ರಂಗಪೂಜೆಯ ಸೇವೆಯನ್ನು ಹರಕೆಯ ರೂಪವಾಗಿ ನೀಡುತ್ತಿದ್ದೇವೆ ಎಂದು ಸಮಿತಿಯ ಪ್ರಮುಖರೊಬ್ಬರು ಹೇಳಿದ್ದಾರೆ. ಕ್ಷೇತ್ರದಲ್ಲಿ ವಾರ್ಷಿಕ ಉತ್ಸವದ ವಿಶೇಷ ಪೂಜೆಯು ನಡೆಯುತ್ತಿರುವ ಈ ಸಂಧರ್ಭದಲ್ಲಿ ರಂಗಪೂಜೆಯು ಸಹ ಮಹತ್ವ ಪಡೆದಿದ್ದು ಅದರಲ್ಲಿ ದೇವರ ಬಲಿಸೇವೆ, ಚಂಡೆ, ವಾದ್ಯ, ಸುಡುಮದ್ದು ಸೇವೆಯು ನಡೆಯಲಿದೆ.
ಬೈಪಾಸ್ ರದ್ದುಗೊಂಡಿದೆ ಎಂದು ಹೇಳಿದ್ದರೂ ಹೆದ್ದಾರಿ ಅಧಿಕಾರಿಗಳು ಹೇಳುವಂತೆ ಮುಲ್ಕಿ ಬೈಪಾಸ್ ಯೋಜನೆಯಲ್ಲಿ ಅಧಿಕೃತವಾಗಿ ರದ್ದಾಗಿಲ್ಲ ಪ್ರತಿಭಟನೆಯ ಕಾವಿನಿಂದ ತಾತ್ಕಾಲಿಕ ರದ್ದಾಗಿದೆ ಆದರೆ ಮುಂದಿನ 20 ವರ್ಷದಲ್ಲಿ ಇಲ್ಲಿ ಬೈಪಾಸ್ ರಚನೆ ಆಗಲೇಬೇಕು ಆಗದಿದ್ದಲ್ಲಿ ವಾಹನ ದಟ್ಟಣೆಗೆ ಅನಾನುಕೂಲ ಆಗಲಿದೆ ಎಂದು ಪ್ರತಿಕ್ರಿಯಿಸುತ್ತಾರೆ.

Comments

comments

Leave a Reply

Read previous post:
ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ ಅಧ್ಯಕ್ಷ ಕೇಶವ ಕೆ

Mithuna Kodethoor ಕಟೀಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್‌ನ ಅಧ್ಯಕ್ಷರಾಗಿ ಕೇಶವ ಕೆ, ಉಪಾಧ್ಯಕ್ಷರಾಗಿ ದೇವೀಪ್ರಸಾದ್ ಬಿ, ಕಾರ್ಯದರ್ಶಿಯಾಗಿ ದಾಮೋದರ ಆಚಾರ್ಯ, ಕೋಶಾಧಿಕಾರಿಯಾಗಿ ಪಿ.ವಿ.ಮಯ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ...

Close