ಯುಗಾದಿ ಹಬ್ಬ

ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ವರ ಕವಿ ಬೇಂದ್ರೆಯವರು ಯುಗಾದಿಯ ಮಹತ್ವ ಮತ್ತು ಉದ್ದೇಶವನ್ನು ಬಹಳ ಸುಂದರವಾಗಿ ತಮ್ಮ ಕವನದ ಮೂಲಕ ಬರೆದಿರುವ ಈ ಸಾಲುಗಳು ಎಲ್ಲ ಜೀವ ಸೆಲೆಯೊಡನೆ ಆಗಮಿಸಿದ ವಸಂತ ಅರಳಿ ನಿಂತ ಪ್ರಕೃತಿ, ಇಂತಹ ವಸಂತದಲ್ಲಿ ಬಂದ ಯುಗಾದಿ ಸಂಭ್ರಮದ ಸಂವೇದನೆ ಯೊಡನೆ ಪ್ರಾರಂಭವಾಗುವ ಕವನದಲ್ಲಿ ಕಾಲ ಮತ್ತೆ ಮತ್ತೆ ಪ್ರಕೃತಿಯನ್ನು ಹೊಸದಾಗಿಸುತ್ತದೆ ಎನ್ನುವ ಬೇಂದ್ರೆಯವರು ದೇವರ ಸೃಷ್ಟಿಯಾಗಿರುವ ನಮಗೆ ಗೋಚರಿಸುವ ಪ್ರಕೃತಿಗೆ ವರುಷಕೊಂದು ಹೊಸ ಜನ್ಮವಾದರೆ ಮಾನವರಾದ ನಮಗೆ ಒಂದೆ ಬಾಲ್ಯ ಒಂದೆ ಹರೆಯ ಏಕೆ? ಕಾಲ ಎಲ್ಲ ಪ್ರಕೃತಿಗೆ ಹೊಸತನ್ನು ನವ ಚೈತನ್ಯವನ್ನು ತಂದಿದೆ, ಆದರೆ ನಮ್ಮನಷ್ಟೆ ಮರೆತಿದೆ ಎನ್ನುವ ಬೇಂದ್ರೆಯವರು ನಿಜ ಸತ್ಯವನ್ನೆ ಹೇಳಿದ್ದಾರೆ. ಆದರೆ ನಾವು ಇಲ್ಲಿ ಸಹ ಪ್ರತಿ ಯುಗಾದಿಯನ್ನು ನಮಗೆ ದೊರೆತ ಹೊಸ ಜನ್ಮವೆಂದು ಭಾವಿಸಿ, ಅಪ್ರಿಯವಾದ ಸಾವಿನ ಕುರಿತು ಚಿಂತಿಸದೆ ಜೀವನದಲ್ಲಿ ಬರಬಹುದಾದ ಒಳಿತು ಕೆಡಕು ಗಳನ್ನು ಸಮ ಚಿತ್ತದಿಂದ ಸ್ವೀಕರಿಸಿ ಮುನ್ನಡೆಯೋಣ. ಬದುಕಿನ ಸುಖ ದುಃಖಗಳೆ ಯುಗಾದಿ ಹಬ್ಬದ ಆಚರಣೆ ಯಲ್ಲವೆ?

ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದರ್ಪಣೆ ಮಾಡುತ್ತಿದೆ ಯುಗಾದಿ ಹಬ್ಬ. ಯುಗ-ಆದಿ ಎಂದೇ ಬಿಂಬಿಸುವ ಯುಗಾದಿಯು ಹಿಂದುಗಳ ಸಂಪ್ರದಾಯದಂತೆ ಪ್ರತಿ ವರ್ಷವೂ ಹೊಸ ಉದಯಕ್ಕೆ ಮುನ್ನುಡಿ ಬರೆಯುತ್ತದೆ. ಎಲ್ಲೆಡೆ ಹೊಸ ಚಿಗುರಿನಿಂದ ಕಂಗೊಳಿಸುವ ಮರಗಳು. ಚಿತ್ತಾಕರ್ಷದೊಂದಿಗೆ ಅರಳಿನಿಂತ ಹೂಗಳು ಮನತುಂಬಿ ಕೂಗುವ ಕೋಗಿಲೆಗಳು ವಯ್ಯಾರದಿಂದ ಮುತ್ತಿಕ್ಕುವ ಚಿಟ್ಟೆಗಳು ಎಂತಹವರನ್ನೂ ಆಕರ್ಷಿಸದೆ ಇರಲಾರವು. ಈ ಹಬ್ಬದಲ್ಲಿ ಅತಿ ಪ್ರಮುಖವಾದದ್ದು ಬೇವು-ಬೆಲ್ಲವನ್ನು ತಿನ್ನುವುದು.
ಯುಗಾದಿಯಂದು ಎಲ್ಲೆಡೆ ಸಂಭ್ರಮದ ವಾತಾವರಣವಿರುತ್ತದೆ. ಪ್ರತಿ ಮನೆಯಲ್ಲೂ ಒಬ್ಬಟ್ಟು,ಹೋಳಿಗೆ ವಿಧ ವಿಧವಾದ ಖಾಧ್ಯಗಳನ್ನು ತಯಾರುಮಾಡುತ್ತಾರೆ. ಹೊಸ ಬಟ್ಟೆ ಧರಿಸಿ ದೇವರಿಗೆ ಕೈಮುಗಿದು ಹಿರಿಯರು ಚಿಣ್ಣರು ಸಂಭ್ರಮದಿಂದ ಕಳೆಯುತ್ತಾರೆ. ಬೇವು-ಬೆಲ್ಲವನ್ನು ದೇವರ ಮುಂದಿಟ್ಟು ಪೂಜೆ ಮುಗಿದ ಬಳಿಕ ನೈವೇಧ್ಯದಂತೆ ಎಲ್ಲರೂ ಸ್ವೀಕರಿಸುತ್ತಾರೆ. ಈ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ, ಹಾಗೂ ಬೇವು-ಬೆಲ್ಲವನ್ನು ವಿಶ್ರಣಮಾಡಿ ಹಿರಿಯ ಕಿರಿಯರೆನ್ನದೆ ಎಲ್ಲರೂ ತಿನ್ನುವುದು. ಬೇವು ಕಷ್ಟದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ ಇವೆರಡನ್ನೂ ಒಟ್ಟಿಗೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಪುರಾಣಗಳ ಪ್ರಕಾರ ಯುಗಾದಿಯ ದಿನದಂದು ಅಂದರೆ ಚೈತ್ರ ಶುದ್ಧ ದಿನದಂದು ಈ ಲೋಕ ಪ್ರಾರಂಭವಾಯಿತು ಎಂದು ಪ್ರತೀತಿ. . ಹಿಂದು ಜನಾಂಗಕ್ಕೆ ಯುಗಾದಿ ದಿನದಂದು ಹೊಸವರ್ಷ ಪ್ರಾರಂಭವಾಗುತ್ತದೆ. ಹಿಂದು ದಿನದರ್ಶಿ ಸಹ ಈ ದಿನದಿಂದಲೇ ಶುರುವಾಗುತ್ತದೆ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ ದ್ವಾಪರಯುಗ ಕಲಿಯುಗ ಇಲ್ಲಿ ಯುಗವೆಂದರೆ ಸೂಮಾರು 5000ಕ್ಕೂ ಹೆಚ್ಚಿನ ವರ್ಷಗಳಂತೆ?. ವಸಂತ ಋತುವಿನಿಂದ ಪ್ರಾರಂಭಗೊಂಡು ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುವುದರ ಸೂಚಕ. ಇಂತಹ ಯುಗದ ಅಂದರೆ ವರ್ಷದ ಮೊದಲ ದಿನವನ್ನು ಯುಗಾದಿ ಎಂದು ಗುರ್ತಿಸಿ ಹಬ್ಬವನ್ನಾಗಿ ಆಚರಿಸುತ್ತಾರೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಚೈತ್ರ ಶುಕ್ಲ ಶುಕ್ಲಪಕ್ಷ (ಪಾಡ್ಯ) ದಿನ ಚಾ೦ದ್ರಮನ ಯುಗಾದಿ. ಹಾಗೆಯೇ ಸೂರ್ಯ ಮೇಷ ರಾಶಿ ಪ್ರವೇಶಿಸುವ ಪುಣ್ಯ ಕಾಲ ಸೌರಮಾನ ಯುಗಾದಿ.
ಚಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ಶುಭದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿ ಮೇಲೆ ಹರಿಸಿದ ಎಂಬ ಮಾತೂ ಇದೆ. ಇಂದಿನಿಂದ ಚೈತ್ರಮಾಸ ಪ್ರಾರಂಭವಾಗಿ ತರು ಲತೆಗಳು ಉದುರಿ ಗಿಡ ಮರಗಳು ಮತ್ತೆ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷದಲ್ಲಿ ಕಂಡ ಸುಖ ದುಃಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಡದಂತೆ ಪ್ರಾರಂಭಿಸುವ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.
ಯುಗಾದಿ ದಿನದಂದು ಬೇವು-ಬೆಲ್ಲವನ್ನು ಸೇವನೆ ಮಾಡುವುದು ವೈಜ್ಞಾನಿಕ ದೃಷ್ಟಿಯಿಂದ ಒಳ್ಳೆಯದೆನ್ನುತ್ತಾರೆ. ಅಂದರೆ ಬೇಸಿಗೆಯಲ್ಲಿ ಬರುವ ಚರ್ಮರೋಗಗಳಿಗೆ ಈ ವೇವು ಬೆಲ್ಲ ಸಿದ್ದೌಷದಂತೆ ಕೆಲಸಮಾಡುತ್ತದೆ. ಬೇವು ತುಂಬಾ ಕಹಿಯಾಗಿದ್ದು ಬೆಲ್ಲ ಆ ಕಹಿಯನ್ನು ಮರೆಮಾಚುತ್ತದೆ. ಯುಗಾದಿಯಂದು ಪಂಚಾಗ ಶ್ರವಣ, ಪಂಚಾಂಗ ಪೂಜೆ, ಸಂವತ್ಸರದ ಫಲಾಫಲ, ಆದಾಯ ವ್ಯಯ, ಮಳೆ ಬೆಳೆ ಮುಂದಾದವುಗಳನ್ನು ವಿಮರ್ಶೆ ಮಾಡಲಾಗುತ್ತದೆ. ಪಂಚಾಂಗಕ್ಕೆ ಹೆಚ್ಚಿನ ಮಹತ್ವಕೊಟ್ಟು ಅದರಲ್ಲಿನ ಫಲಾಫಲ ತಿಳಿಯುವ ವಾಡಿಕೆಯು ಬಹಳ ಹಿಂದಿನ ಕಾಲದಿಂದ ಸಾಗುತ್ತ ಬಂದಿದೆ.

ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂದು ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರವನ್ನು ತಳೆದದ್ದೆಂದೂ, ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದರೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.
ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.

ಸುಖ – ದುಃಖಗಳ ಬುಟ್ಟಿಯೇರಿ ಸಾಗುವ ಬದುಕಿನ ಬ೦ಡಿ. ಹಳ್ಳಿ ಹಳ್ಳಿಗಳಲ್ಲಿನ ಬಹುಕಾಲದ ಒ೦ದು ಸ೦ಪ್ರದಾಯ. ಯುಗಾದಿಯ೦ದು ಎತ್ತಿನ ಬ೦ಡಿಗೆ ಸಿ೦ಗಾರ. ಬೇವು ಮಾವು ಎಲೆಗಳ ಅಲ೦ಕಾರ. ಎತ್ತುಗಳಿಗೆ ಬಣ್ಣದ ಚಿತ್ತಾರ. ಬ೦ಡಿ ಓಡಿಸಿ, ಹಳ್ಳಿಯ ಪ್ರತಿ ದೇವರ ಗುಡಿಯಲ್ಲೂ ಭಯ ಭಕ್ತಿಯಿಂದ ಪೂಜೆಗಳನ್ನು ನೆರವೇರಿಸಿ ಯುಗಾದಿಯನ್ನು ಸ್ವಾಗತಿಸುವುದು ಒಂದು ವಿಶಿಷ್ಟ ಸಂಪ್ರದಾಯ. ಹಳೆಯದನ್ನು ಅಳಿಸುತ್ತ ಹೊಸ ವಿಕಾಸದ ಆಶಯದೊಂದಿಗೆ ಹೊಸತನ್ನು ಆಹ್ವಾನಿಸುವುದು ಸಡಗರ ಸಂಭ್ರಮದ ವಿಷಯ.

ಯುಗಾದಿಯ೦ದೇ ಪ೦ಚಾ೦ಗ ಶ್ರವಣ, ಪ೦ಚಾಗ ಪೂಜೆ. ಪಠಣ ಪರ೦ಪರಾಗತ ರೂಢಿ. ಸ೦ವತ್ಸರದ ಫಲಾಫಲ, ಆದಾಯ – ವ್ಯಯ ಮಳೆ ಯೋಗ ಮು೦ತಾದವುಗಳ ವಿಚಾರ ವಿಮರ್ಶೆಯ ದಿನವಾಗಿ ಯುಗಾದಿ ಕ೦ಪ್ಯೂಟರ್ ಯುಗದಲ್ಲೂ ಉಳಿಸಿಕೊ೦ಡ ತನ್ನತನ, ಕಾಲ ಗಣನೆಗೆ ನೂತನ ವಿಧಾನಗಳು ಸಾಕಷ್ಟು. ಆದರೂ ಪ೦ಚಾ೦ಗದ ಮಹತ್ವ ಮೇರು. ಪ೦ಚಾ೦ಗಕ್ಕೇ ಆದ್ಯತೆ. ಪ೦ಚಾ೦ಗ ನೋಡಿ ಫಲಾಫಲ ತಿಳಿಯುವ ವಾಡಿಕೆ ಯುಗ ಯುಗಕ್ಕೂ ಸಾಗಿ ಬ೦ದಿದೆ.
ಹಳತಾದುದನ್ನು ಅಳಿಸಿ ಹಾಕುತ್ತಾ ಹೊಸತು ಹೊಸತನ್ನು ತರುವ ಯುಗಾದಿ ಮಹಾಮಹಾಯೋಗವೇ ಸರಿ. ವಿಕಾಸವಾದ, ಆಶಯಗಳೊ೦ದಿಗೆ ಒ೦ದೊ೦ದು ಯುಗದಲ್ಲಿ ಸಾಧನೆ ಮಾಡಿ ಯುಗ ಪುರುಷರೆನಿಸಿಕೊ೦ಡವರಿದ್ದಾರೆ. ತ್ರೇತಾಯುಗ, ದ್ವಾಪರಯುಗ, ಕೃತಯುಗ, ಕಲಿಯುಗ, ಯುಗ ಅವತಾರ ಪುರುಷರ ಕಾಲವಾಗಿ ಪರಿಗಣನೆ. ಯುಗ ಪುರುಷರೆ೦ಬ ಅನ್ವರ್ಥ ನಾಮ. ತೇತ್ರಾಯುಗದಲ್ಲಿ ಶ್ರೀರಾಮ, ದ್ವಾಪರಯುಗದಲ್ಲಿ ಶ್ರೀಕೃಷ್ಣ, ಹೀಗೆ ಅವರ ಆಚಾರ ವಿಚಾರಗಳೇ ಯುಗಧರ್ಮವಾಯಿತು. ಸ೦ಭವಾಮಿ ಯುಗೇ ಯುಗೇ……. ಆ ಭಗವ೦ತನ ಮಾತು ಎಷ್ಟು ರೋಮಾ೦ಚನ, ಅರ್ಥಗರ್ಭಿತ.
ಖರನಾಮ ಸಂವತ್ಸರ ಕಳೆದು ನಂದನನಾಮ ಸಂವತ್ಸರ ಆರಂಭದ ಕಾಲ. ನಂದನನಾಮ ಸಂವತ್ಸರ ಪ್ರತಿಯೊಬ್ಬರ ಬದುಕಲ್ಲಿ ಹೊಸ ಭರವಸೆಯ ಕನಸು ನನಸಾಗಲಿ …………
ಯುಗಾದಿಯ ಬೇವು-ಬೆಲ್ಲ ಸಮರಸ ಬದುಕಿಗೆ ಬುನಾದಿ ಆಗಲಿ……………..
ಸಮಸ್ತ ನಮ್ಮ ಕಿನ್ನಿಗೋಳಿ ಓದುಗರಿಗೆ ಯುಗಾದಿ ಹಬ್ಬದ ಹಾರ್ಧಿಕ ಶುಭಾಶಯಗಳು.

 

Comments

comments

Leave a Reply

Read previous post:
ಮೋಡದಾಟ

Close