ಮಕ್ಕಳ ಎಪ್ರಿಲ್ ರಜಾ ಮಜ ಸಜಾ?

ಇಂದಿನ ಬಾಲ್ಯದಿನ ಮಕ್ಕಳಿಗೆ ಗಗನ ಕುಸುಮವಾಗಿದೆ. ಬೇಸಿಗೆಯಲ್ಲಿ ಸೂರ್ಯನ ತಾಪಮಾನದೊಂದಿಗೆ ಪರೀಕ್ಷೆಯ ಬಿಸಿ ಮುಗಿದು ತಂಪಾದ ರಜೆಯ ಸವಿ ಉಣ್ಣೋಣವೆಂದರೆ ಬಾಲ್ಯದ ಚಿಗುರು ಹೊಸಕಿ ಹಾಕುವ ವಿವಿಧ ಜಾಹೀರಾತುಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಎರಡು ತಿಂಗಳ ಕೋರ್ಸುಗಳ, ಒಂದು ತಿಂಗಳ ಸಮ್ಮರ್ ಕ್ಯಾಂಪ್ ಗಳು ಹೀಗೆ ಹಲವಾರು ಆಕರ್ಷಕ ಜಾಹೀರಾತುಗಳು ಮಕ್ಕಳ ಹೆತ್ತವರನ್ನು ಎಪ್ರಿಲ್ ನಲ್ಲೇ ಬೇಸ್ತು ಬೀಳಿಸುತ್ತಾರೆ. ಮನಸ್ಸಿಲ್ಲದ ಮನಸ್ಸಿನಿಂದ ಮಕ್ಕಳು ಹೆತ್ತವರ ಕಟ್ಟುಪಾಡಿಗೆ, ಒತ್ತಾಯಕ್ಕೆ ಕೋರ್ಸುಗಳಿಗೆ ಸೇರುತ್ತಾರೆ. ಕೆಲವು ಮಕ್ಕಳೇ ತಾವು ಕೋರ್ಸ್‌ಗೆ ಸೇರುತ್ತೇವೆ ಎಂದು ದುಂಬಾಲು ಭೀಳುತ್ತಾರೆ. ಆದರೆ ಇದರಿಂದ ಮಕ್ಕಳು ಮಾನಸಿಕ ಖಿನ್ನತೆಗೊಳಗಾಗುವುದು ಈಗೀಗ ಸಾಮಾನ್ಯವಾಗುತ್ತಿದೆ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸದರೆ ಮುಂದೊಂದು ದಿನ ಸಮಾಜ ಗುರುತಿಸುವಂತಹ ಪ್ರಜೆಗಳಾಗುತ್ತಾರೆ.

ರಜಾ ದಿನ ಮಕ್ಕಳ ಪಾಲಿಗೆ ಸಂಭ್ರಮ ವಾತಾವರಣ .ಇತರ ಕೋರ್ಸುಗಳ ಕಲಿಯುವಿಕೆಯ ನೆಪದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸುವ ಬದಲು ಅವರಿಗೆ ರಜಾ ದಿನವನ್ನು ಅನುಭವಿಸಲು, ಸವಿಯಲು ಬಿಡಬೇಕು. ದಿನಲೂ ಶಾಲೆಗೆ ಹೋಗುವ ಮುಂಚೆ ಅಥವಾ ಸಂಜೆ ಟ್ಯೂಷನ್ ಎಂಬುದರ ಮೂಲಕ ಮಕ್ಕಳನ್ನು ಒತ್ತಡದಲ್ಲಿರಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ರಾತ್ರಿ ಬಂದು ಮನೆಯಲ್ಲಿ ಪುನರಾವರ್ತನೆ. ವಾಸ್ತವದಲ್ಲಿ ಹೆತ್ತವರು ಕೇವಲ ಬಯಸುವುದು ಒಳ್ಳೆಯದೇ ಹೊರತು ಕೆಟ್ಟದ್ದಲ್ಲ. ಹೀಗೆ ವಿಶ್ರಾಂತಿಯಿಲ್ಲದ ಜೀವನ ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಆದರೆ ಇದರ ಹಿಂದೆ ಉಂಟಾಗುವ ಅನಾಹುತವನ್ನು ಕೊನೆ ಕಾಲದವರೆಗೂ ಅನುಭವಿಸಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಬಾಲ್ಯವನ್ನು ಪೋಷಕರು ಕಸಿಯುತ್ತಿದ್ದಾರೆ ಎಂದೆನಿಸುತ್ತಿದೆ.
ಹಿಂದೆ ಎಲ್ಲಾ ಮಕ್ಕಳು ಶಾಲಾ ವಾರ್ಷಿಕ ರಜೆ ದಿನದಂದು ಅಜ್ಜ ಅಥವಾ ಸಂಬಂಧಿಕರ ಮನೆಗೆ ಹೋಗುತ್ತಿದ್ದರು. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಶಾಲೆ ಬಿಟ್ಟ ನಂತರದ ಉಳಿದ ಸಮಯದಲ್ಲಿ ಸಹ ರಜಾ ಸಮಯವನ್ನು ನಿಜವಾಗಿಯು ಅಸ್ವಾದಿಸಲು ಸಾಧ್ಯವಾಗುತ್ತಿಲ್ಲ. ಸಹೋದರ-ಸಹೋದರಿಯರಿಯರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ.
ಹೀಗಾದರೆ ಮುಂದೆ ಮಕ್ಕಳ ಮನಸ್ಸಿನಲ್ಲಿ ಮುಂದೆ ಮಾನವೀಯತೆ, ಮನುಷ್ಯತ್ವವೆಂಬುದು ಉಳಿಯಲಾರದು ? ಇದೀಗ ರಜಾ ದಿನ ಬಂದಿದೆ. ರಜೆಯ ಸವಿಯನ್ನು ಸವಿಯುವುದು ಮಕ್ಕಳ ಪಾಲಿಗೆ ಸಂಭ್ರಮ ತವಕ. ಮನೆಯಾಟ, ಗೊಂಬೆಯಾಟ, ಮರಕೋತಿಯಾಟ, ಕಣ್ಣಾಮುಚ್ಚಾಲೆಯಾಟ, ಡೊಂಕ, ಗೋಲಿಯಾಟ, ಕಳ್ಳ ಪೊಲೀಸ್ ಹೀಗೆ ಹೀಗೆ ವಿವಿಧ ರೀತಿಯ ಆಟಗಳನ್ನು ಆಡುವುದು ಮಕ್ಕಳಿಗೆ ಸಂಭ್ರಮ.
ಮುಂಜಾನೆಯಿಂದ ಮಧ್ಯಾಹ್ನದವರೆಗೆ ಆಟವಾಡಿ ಸೂರ್ಯನು ನೆತ್ತಿಯ ಮೇಲೆ ಬಂದಾಗ ಸೆಖೆಯ ಬೇಗೆಯಿಂದ ಆಟಕ್ಕೆ ವಿರಾಮ ನೀಡಿ, ಹಣ್ಣುಹಂಪಲು ತೋಟಕ್ಕೆ ದಾಳಿ ಮಾಡಿ ನಿಸರ್ಗದ ತಂಪಾದ ಪಾನಿಯ ಸವಿದು (ಉದಾ : ಮಾವು, ಗೇರು, ನೇರಳೆ ಹಣ್ಣು ) ಕೆರೆಯಲ್ಲ್ಲೊ, ನದಿಯಲ್ಲೊ ಸ್ನಾನ ಮಾಡಿ, ಮನೆಗೆ ಹೋದಾಗ ಅಪ್ಪನ ಬೆತ್ತದ ರುಚಿ,ತಾಯಿ ನೀಡಿದ ಪಾನೀಯ, ಉಪದೇಶ ಇವೆಲ್ಲಾ ಮಕ್ಕಳ ಮನಸ್ಸಿಗೆ ಸಂತೋಷ ನೀಡುತ್ತದೆ.
ಇದೆಲ್ಲಾ ಇವತ್ತು ನಮ್ಮ ಪಾಲಿಗೆ ಕೇವಲ ಸವಿ ನೆನಪು ಅಷ್ಟೇ. ಶಾಲಾ ಪ್ರವಾಸ ಬಿಟ್ಟರೆ ಮತ್ತೆ ನಮ್ಮ ಮಕ್ಕಳಿಗೆ ಇಡೀ ವರ್ಷ ಕಲಿಕೆ ಎಂಬುದು ಹೊರೆಯಾದರೆ ಅವರ ಮನಸ್ಸು ಖಿನ್ನತೆಗೊಳಗಾಗದೇ ಇರದೇ? ರಜಾ ದಿನ ಶಿಬಿರಕ್ಕೆ ಮಕ್ಕಳನ್ನು ಕಲಿಸಬೇಡವೆಂದಲ್ಲ. ಕಳುಹಿಸಬೇಕು. ರಜಾ ದಿನದಲ್ಲಿ ವ್ಯಕ್ತಿತ್ವ ವಿಕಸನಗೈಯ್ಯುವಂತಹ ಶಿಬಿರಗಳಿಗೆ ಹೆತ್ತವರ ಜೊತೆ ಮಕ್ಕಳು ಪಾಲ್ಗೊಳ್ಳುವುದು ಒಳಿತೆ.
ಜೊತೆಗೆ ಸಂಬಂಧಿಕರ ಮನೆಗೆ ಭೇಟಿ, ಪ್ರವಾಸಿ ತಾಣಗಳಿಗೆ ಹೋಗಬೇಕು. ಮಕ್ಕಳನ್ನು ನಾವು ಒತ್ತಡದ ವಾತಾವರಣದಲ್ಲಿ ಬೆಳೆಸುವುದಕ್ಕಿಂತ ವಿಶಾಲವಾದ ವಾತಾವರಣದಲ್ಲಿ ಬೆಳೆಸಬೇಕು. ಮಕ್ಕಳಲ್ಲೂ ಪ್ರೀತಿ ಅರಳುವಂತೆ ಮಾಡಿ, ಒಂಟಿತನಕ್ಕೆ ಆಸ್ಪದ ನೀಡಬಾರದು.

ಇನ್ನು ನಗರಗಳಲ್ಲಿ ವಾಸಿಸುವ ಕುಟುಂಬದ ಪರಿಸ್ಥಿತಿ ಹೇಳುವಂತಿಲ್ಲ. ಮಕ್ಕಳನ್ನು ಬೇಬಿ ಸಿಟ್ಟಿಂಗ್‌ಗಳಲ್ಲಿ ಇರಿಸಲಾಗುತ್ತಿದೆ. ರಜೆ ಬಂತೆಂದರೆ ಇವರಿಗೆ ಕಿರಿಕಿರಿ.ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ತಂದೆ ತಾಯಿ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳು ಹೆಚ್ಚಾಗಿ ವಿಶಾಲವಾದ ವಾತವರಣದಲ್ಲಿ ಬದುಕಲು ಬಯಸುವ ಕಾರಣ, ಅವರನ್ನು ಮುಕ್ತವಾಗಿ ಆಟವಾಡಲು ಬಿಡಬೇಕು.
ಗ್ರಾಮೀಣ ಪ್ರದೇಶದ ಮಕ್ಕಳಂತೂ ಇವರಿಗಿಂತ ಭಿನ್ನ. ಯಾವುದಾದರೂ ಕೂಲಿ ಕೆಲಸಕ್ಕೊ ಅಥವಾ ಇನ್ನಾವುದೊ ಕೆಲಸಕ್ಕೊ ಹೋಗುತ್ತಾರೆ. ಇದೆಲ್ಲಾ ಸಾಮಾನ್ಯ. ಪ್ರತಿಭೆಯನ್ನು ಪೋಷಿಸಲು ಸೂಕ್ತ ವಾತವರಣ ಕಲ್ಪಿಸಬೇಕು. ಜೊತೆಗೆ ತಮ್ಮ ಮಕ್ಕಳ ಅಭಿರುಚಿಯನ್ನು ಗಮನಿಸಿ ಸೂಕ್ತ ವೇದಿಕೆ ಕಲ್ಪಿಸಿ ಕೊಡುವುದು ಹೆತ್ತವರ ಆದ್ಯ ಕರ್ತವ್ಯವಾಗಿದೆ.

Comments

comments

Leave a Reply

Read previous post:
ವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಿತ್ರಾಪೌರ್ಣಮಿ

Bhagyavan Sanil ಮುಲ್ಕಿವಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಚಿತ್ರಾಪೌರ್ಣಮಿ ಪ್ರಯುಕ್ತ ಶ್ರೀ ದೇವರುಗಳಿಗೆ ಸೀಯಾಳ, ಗಂಗಾ, ಸಿಂಧು,ಯಮುನಾ,ಸರಸ್ವತಿ ಸಹಿತ ಭಾರತದಾದ್ಯಂತ 16 ಪುಣ್ಯ ನದಿಗಳ ನೀರನ್ನು ವಿವಿಧ...

Close