ಕಾರ್ಮಿಕರ ದಿನಾಚರಣೆಯಂದು ದುರ್ಘಟನೆ

Photos by Narendra Kerekadu  & Sunil Haleyangadi
ಹಳೆಯಂಗಡಿ: ಮೇ 01 : ಮನೆ ನಿವೇಶನದ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿಯನ್ನು ತೋಡುತ್ತಿದ್ದಾಗ ಮಣ್ಣಿನ ಅಡಿಯಲ್ಲಿ ಸಿಲುಕಿ ಇಬ್ಬರು ಕಾರ್ಮಿಕರು ದುರ್ಮರಣ ಹೊಂದಿದ ದಾರುಣ ಘಟನೆ ಮಂಗಳವಾರ ಮುಲ್ಕಿ ಬಳಿಯ ಹಳೆಯಂಗಡಿಯಲ್ಲಿ ನಡೆದಿದೆ.
ಮೃತರನ್ನು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಗೋಳಿಯ ಹನುಮಂತ ಹುನಗುಂದ ಎಂಬುವವರ ಮಗನಾದ ಮದನಪ್ಪ (22) ಹಾಗೂ ಮುಕ್ಕದ ನಿವಾಸಿ ಸಯ್ಯದ್ ಬ್ಯಾರಿ (65) ಎಂದು ಗುರುತಿಸಲಾಗಿದೆ.
ಹಳೆಯಂಗಡಿ ರವಿ ಎಂಬುವವರ ಜಮೀನಿನಲ್ಲಿ ಕುಡಿಯುವ ನೀರಿನ ಬಾವಿಗಾಗಿ ಎಂಟು ಜನ ಕಾರ್ಮಿಕರು ಕಳೆದ ಒಂದು ವಾರದಿಂದ ಕೆಲಸ ಮಾಡುತ್ತಿದ್ದು ಮುಕ್ಕದ ಪುರಂದರ ಎಂಬುವವರು ಕಾಂಟ್ರಾಕ್ಟ್ ವಹಿಸಿದ್ದರು.
ಸುಮಾರು ಇಪ್ಪತ್ತು ಅಡಿಯ ಬಾವಿಯನ್ನು ತೋಡಿದ ನಂತರ ಮಂಗಳವಾರದಿಂದ ಕಲ್ಲುಗಳನ್ನು ಕಟ್ಟಲು ಪ್ರಾರಂಭಿಸಿದ್ದರಲ್ಲದೆ ಮೇಸ್ತ್ರಿಯಾಗಿ ಸಯ್ಯದ್ ಬ್ಯಾರಿ ಬೆಳಿಗ್ಗೆ 9 ಕ್ಕೆ ಕಾಮಗಾರಿ ಪ್ರಾರಂಭಿಸಿದ್ದರು. ಸುಮಾರು ಬೆಳಿಗ್ಗೆ 10.30ಕ್ಕೆ ಮೇಲಿನಿಂದ ಏಕಾಏಕಿ ಮಣ್ಣು ಕುಸಿಯಲು ಪ್ರಾರಂಭವಾದಾಗ ಕೆಳಗೆ ಕೆಲಸ ಮಾಡುತ್ತಿದ್ದ 6ಜನ ಕಾರ್ಮಿಕರಲ್ಲಿ ನಾಲ್ವರು ಮೇಲೆ ಬಂದರು ಇಬ್ಬರು ಮಣ್ಣಿನಲ್ಲಿ ಸಿಲುಕಿಕೊಂಡರಲ್ಲದೇ ನಮ್ಮ ಕಣ್ಣೆದುರೇ ಮಣ್ಣಿನಲ್ಲಿ ಹೂತುಹೋದರು ಎಂದು ಘಟನೆಯನ್ನು ಹನುಮಂತ ಎಂಬುವವರು ವಿವರಿಸಿದರು.
ಕಾರ್ಮಿಕರಲ್ಲಿ ಮೃತ ಮದನಪ್ಪನ ತಮ್ಮ ಲೋಕೇಶ್, ಹಾಲಪ್ಪ, ಯಮುನಪ್ಪ, ನಾಗಪ್ಪ ಎಂಬುವವರು ಮೇಲೆ ಬಂದರೇ ಮದನಪ್ಪ ಮತ್ತು ಮಂಗಳವಾರವಷ್ಟೇ ಕಾಮಗಾರಿ ಪ್ರಾರಂಭಿಸಿದ ಸಯ್ಯದ್ ಬ್ಯಾರಿ ಮಣ್ಣಿನಡಿ ಸಿಲುಕಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಹನುಮಂತ ಮತ್ತು ಯೋಗಪ್ಪ ಎಂಬುವವರು ಮೇಲೆ ಕೆಲಸ ಮಾಡುತ್ತಿದ್ದರು.
ಘಟನೆ ನಡೆದ ತಕ್ಷಣ ಮುಲ್ಕಿ ಪೊಲೀಸರು ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ಸ್ಥಳೀಯರ ಸಹಕಾರದಿಂದ ಇಬ್ಬರ ಮೃತ ಶರೀರವನ್ನು ಹೊರ ತೆಗೆಯಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪಣಂಬೂರು ಎಸಿಪಿ ಪುಟ್ಟಮಾದಯ್ಯ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರತಿ ವರ್ಷ ಬರಗಾಲದಿಂದಾಗಿ ಆರು ತಿಂಗಳು ಕರಾವಳಿ ಜಿಲ್ಲೆಗೆ

ಮಂಗಳವಾರ ರಾಜ್ಯದೆಲ್ಲೆಡೆ ಕಾರ್ಮಿಕರ ದಿನಾಚರಣೆಯ ಆಚರಣೆ ನಡೆಯುತ್ತಿದ್ದರೆ ಇಲ್ಲಿನ ಹಳೆಯಂಗಡಿಯಲ್ಲಿ ಸುಮಾರು 60 ಜನ ಕೂಲಿ ಕಾರ್ಮಿಕರು ತಮ್ಮ ಸಹೋದ್ಯೋಗಿಯ ದಾರುಣ ಮರಣಕ್ಕೆ ಕಂಬನಿ ಮಿಡಿಯುತ್ತಿದ್ದರು.
ಮೃತಪಟ್ಟ ಮದನಪ್ಪ ಸಹಿತ ಸುಮಾರು 60 ಜನ ಕೂಲಿ ಕಾರ್ಮಿಕರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಗೋಲಿಯ ಗ್ರಾಮದಿಂದ ಹಳೆಯಂಗಡಿ ಗ್ರಾಮಕ್ಕೆ ಕೆಲಸಕ್ಕಾಗಿ ವಲಸೆ ಬಂದಿದ್ದು ಕಳೆದ ಐದು ವರ್ಷದಿಂದ ಪ್ರತಿ ಜನವರಿ ತಿಂಗಳಿನಲ್ಲಿ ಊರು  ಬಿಡುವ ಇವರು ಅಲ್ಲಿನ ಬರಗಾಲಕ್ಕೆ ಹೆದರಿ ಕೆಲಸಕ್ಕಾಗಿಯೇ ಆರು ತಿಂಗಳು ಕರಾವಳಿ ಜಿಲ್ಲೆಗೆ ಬರುತ್ತಾರೆ.
ಮನೆ ಕೆಲಸ, ಗಾರೆ, ಸೆಂಟ್ರಿಂಗ್, ಪೈಂಟಿಂಗ್, ತೋಟದ ಕೆಲಸ, ಬಾವಿ ಕೆಲಸ, ಒಟ್ಟಾರೆ ಸಿಕ್ಕ ಕೂಲಿ ಕೆಲಸಕ್ಕೆ ಸೈ ಎನ್ನುವ ಇವರು ಭಾನುವಾರವೂ ಕೆಲಸ ಮಾಡುತ್ತಾರೆ ಕಾರಣ ಊರಿನಲ್ಲಿ ಹೆಂಡತಿ, ಮಕ್ಕಳು, ತಂದೆ, ತಾಯಿಯ ಜವಬ್ದಾರಿ ಇವರ ಹೆಗಲ ಮೇಲೆ ಇದೆ ಎಂದು ಕೂಲಿ ಕಾರ್ಮಿಕ ಹನುಮಂತ ಮಾಹಿತಿ ನೀಡುತ್ತಾನೆ.
ಪ್ರತಿ ವರ್ಷ ಮೇ ತಿಂಗಳವರೆಗೆ ಕೆಲಸ ಮಾಡಿ ಊರಿಗೆ ಹೋಗುವಾಗ ಇಲ್ಲಿ ಸಂಪಾದಿಸಿದ ಹಣವನ್ನು ಊರಿನಲ್ಲಿ ಕೃಷಿ ಕೆಲಸಕ್ಕೆ ವಿನಿಯೋಗಿಸುವ ಪರಿಪಾಠ ಇವರದ್ದು ಆದರೆ ಮಂಗಳವಾರ ಹಳೆಯಂಗಡಿಯಲ್ಲಿ ನಡೆದ ದುರ್ಘಟನೆಯಿಂದ ಅತಂತ್ರರಾಗಿರುವ ಇವರಿಗೆ ಇಂತಹ ಘಟನೆ ಇದುವರಗೆ ನಮ್ಮಲ್ಲಿ ನಡೆದಿಲ್ಲ ಎಂದು ಕಣ್ಣಿರು ಹಾಕುತ್ತಾ ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ. ಮೇ ಒಂದರಂದು ಕಾರ್ಮಿಕರ ದಿನಾಚರಣೆ ಅಲ್ಲವೇ ಎಂದು ಪ್ರಶ್ನಿಸಿದಾಗ ಸಾರ್ ದಿನ ಕೆಲಸ ಮಾಡದಿದ್ದರೇ ಹೊಟ್ಟೆಗೆ ತಣ್ಣಿರೇ ಗತಿ ಅಂತವರಿಗೆ ಯಾವ ರಜೆ ಮತ್ತು ದಿನಾಚರಣೆ ಯಾಕೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸುತ್ತಾರೆ.

ಐದು ತಿಂಗಳ ಮಗು ಅನಾಥ…
ಮೃತ ಮದನಪ್ಪ ಒಂದು ವರ್ಷದ ಹಿಂದೆಯಷ್ಟೇ ಮದುವೆ ಆಗಿದ್ದು ತನ್ನ ಗ್ರಾಮದ ದೂರದ ಸಂಬಂದಿಕಳಾದ ಹೂವಮ್ಮ ಎಂಬುವವರನ್ನು ಮದುವೆ ಆಗಿದ್ದು ಐದು ತಿಂಗಳ ಹೆಣ್ಣು ಮಗುವನ್ನು ಇವರ ದಾಂಪತ್ಯ ಜೀವನದಲ್ಲಿ ಪಡೆದಿದ್ದು. ಮೇ ಹತ್ತರಂದು ಊರಿಗೆ ತೆರಳುವವನಿದ್ದ ಅಲ್ಲಿ ಮಗುವಿನ ನಾಮಕರಣದ ಸಂಭ್ರಮವನ್ನು ಆಚರಿಸುವವನಿದ್ದ ಎಂದು ಆತನ ಸಹೋದರ ಘಟನೆಯನ್ನು ವಿವರಿಸುತ್ತ ತನ್ನ ಕಣ್ಣೆದುರೇ ಅಣ್ಣನ ಸಾವನ್ನು ಕಣ್ಣಾರೆ ಕಂಡಿರುವ ಲೋಕೇಶ ವಿವರಿಸುವಾಗ ಎಂತವರ ಮನಸ್ಸು ತಲ್ಲಣಗೊಳಿಸುವಂತಿತ್ತು.

 

Comments

comments

Leave a Reply

Read previous post:
Cloud Magic

Close