ಜಪಾನ್ ಪ್ರವಾಸಕ್ಕೆ ಆಯ್ಕೆಯಾದ ಗ್ರಾಮೀಣ ಪ್ರದೇಶದ ಬಾಲಕ

Photos by Bhagyavan Sanil 

ಮುಲ್ಕಿ ಮೇ 05: ಪ್ರತಿಭಾ ಕಾರಂಜಿ ಸ್ಫರ್ಧೆಯನ್ನು ಸವಾಲಾಗಿ ಸ್ವೀಕರಿಸಿ ಕಠಿಣ ತರಬೇತಿ ಪಡೆದು ಸ್ಪರ್ಧೆಗೆ ಆಯ್ಕೆಯಾಗಿ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ಇದೀಗ ಜಪಾನ್ ಪ್ರವಾಸಕ್ಕೆ ಆಯ್ಕೆಯಾದ ಗ್ರಾಮೀಣ ಪ್ರದೇಶದ ಬಾಲಕನೊಬ್ಬನ ಸಾಹಸಗಾಧೆ ಇದು.
ಮುಲ್ಕಿಯ ಸಮೀಪದ ಕಿಲ್ಪಾಡಿ – ಪಂಜಿನಡ್ಕ ಕೆಪಿಎಸ್‌ಕೆ ಸ್ಮಾರಕ ಫ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಅಕ್ಷಯರಾಜ್ ಕುಮಾರ್ ಶೆಟ್ಟಿ (15) ಈ ಸಾಧಕ. ಕೊಲಕಾಡಿ ಜಯರಾಜ್ ಶೆಟ್ಟಿ -ಸುನೀತಾ ದಂಪತಿಯ 3 ಮಕ್ಕಳಲ್ಲಿ ಏಕೈಕ ಪುತ್ರ ಈ ಅಕ್ಷಯರಾಜ್.
ಪಂಜಿನಡ್ಕ ಶಾಲೆ ಸೃಜನಶೀಲ ಚಿತ್ರಕಲಾ ಶಿಕ್ಷಕ ವೆಂಕಿ ನಾಮಾಂಕಿತ ವೆಂಕಟರಮಣ ಕಾಮತ್ ರವರು ಪ್ರತಿವರ್ಷದಂತೆ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಕ್ಲೇ ಮಾಡೆಲಿಂಗ್‌ಗಾಗಿ 3 ಮಕ್ಕಳನ್ನು ಆಯ್ಕೆ ಮಾಡಿ ತರಬೇತು ನೀಡಿದ್ದರು. ಆದರೆ ಮೂವರೂ ವಿಫಲರಾದಾಗ ಮೊದಲ ಸ್ಪರ್ದೆಗೆ ಆಯ್ಕೆಯಾಗದಿದ್ದ ಅಕ್ಷಯರಾಜ್  ಶಿಕ್ಷಕರ ಬಳಿಗೆ ತೆರೆಳಿ “ಸರ್ ನನಗೆ ತರಬೇತಿ ನೀಡಿ ಎಂದು ಹೇಳಿದ್ದು ಮಾತ್ರವಲ್ಲದೆ ಶಿಕ್ಷಕರ ಕಠಿಣ ತರಬೇತಿಯಿಂದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾನೆ.
ಹೋಬಳಿಮಟ್ಟ, ತಾಲೂಕುಮಟ್ಟ , ಜಿಲ್ಲಾಮಟ್ಟದಲ್ಲಿ ಡೊಳ್ಳುಕುಣಿತ, ಜುಮಾದಿಕೋಲ ಪ್ರಾತ್ಯಕ್ಷಿಕೆಗಳ ಕ್ಲೇ ಮಾಡೆಲಿಂಗ್ ನಡೆಸಿ ಪ್ರಥಮ ಪ್ರಶಸ್ತಿಗಳಿಸಿದ ಅಕ್ಷಯ ಕಳೆದ ಜನವರಿಯಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ ಕ್ಲೇ ಮಾಡೆಲಿಂಗ್ ಸ್ಫರ್ಧೆಯಲ್ಲಿ ಸಾಂಪ್ರಾದಯಿಕ ಭಜನಾ ತಂಡದ ಮಾಡೆಲಿಂಗ್ ಮಾಡಿ ಪ್ರಥಮ ಪ್ರಶಸ್ತಿ ಗಳಿಸಿದ್ದಾನೆ.
ಜಪಾನ್‌ಗೆ ಆಯ್ಕೆ : ರಾಜ್ಯಮಟ್ಟದ ವೈಯಕ್ತಿಕ ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನಿ ಗಳಿಸಿದ 50 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಈ ತಿಂಗಳಾಂತ್ಯಕ್ಕೆ ಜಪಾನ್‌ನಲ್ಲಿ ನಡೆಯುವ (ಜೆಇಎನ್‌ಇಎಸ್‌ವೈಎಸ್) ಯುವ ಸಮ್ಮೇಳನಕ್ಕೆ ಕಳುಹಿಸಲಾಗುತ್ತಿದೆ. ಈ ಸಮ್ಮೇಳನಕ್ಕೆ ಅಕ್ಷಯರಾಜ್ ಆಯ್ಕೆಯಾಗಿದ್ದು , ಆತನ ಜತೆಗೆ ಜಿಲ್ಲೆಯ ಶೈಲೇಶ್ ಮೇಲಾಡು ಮತ್ತು ಅಖಿಲ ಪುತ್ತೂರು ಸಹ ಆಯ್ಕೆಯಾಗಿದ್ದಾರೆ. ಕೇಂದ್ರ ಸರಕಾರದ ಸಹಯೋಗದೊಂದಿಗೆ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಆರ್ಥಿಕ ಬಡತನದ ಹಿನ್ನೆಲೆ : ಅಕ್ಷಯರಾಜ್‌ನದ್ದು ತೀರಾ ಬಡತನದ ಹಿನ್ನೆಲೆ, ತಂದೆ ಜಯರಾಜ್ ಶೆಟ್ಟಿ ಕೂಲಿ ಕೆಲಸ ಮಾಡಿ ಜೀವನ ನಡೆಸಿಕೊಂಡಿದ್ದರೂ ಇವರೂ ಬಹು ಸೃಜನಶೀಲ ವ್ಯಕ್ತಿತ್ವ ಮತ್ತು ಎಲ್ಲರೊಡನೆಯೂ ಬೆರೆತು ಬಾಳುವ ಸಹೃದಯಿ. ತಾಯಿ ಸುನೀತಾ ಬೀಡಿ ಕಟ್ಟಿ ಸಂಸಾರದ ಬಂಡಿ ಎಳೆಯಲು ಸಹಕರಿಸುತ್ತಿದ್ದಾರೆ. ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಳದ ಹಿಂಭಾಗ ರಸ್ತೆ ಪಕ್ಕ ಇದ್ದ ಇವರ ಮನೆ ಮೇಲೆ ವರ್ಷದ ಹಿಂದೆ ಲಾರಿ ಹರಿದು ಮನೆ ಸಂಪೂರ್ಣ ನಾಶಗೊಂಡಿತ್ತು. ಬಳಿಕ ಸ್ಥಳೀಯ ದಾನಿಗಳ ನೆರವಿನಿಂದ ಸಣ್ಣ ಮನೆಯೊಂದನ್ನು ನಿರ್ಮಿಸಲಾಗಿದೆ. ಅದಕ್ಕಾಗಿ ದಾನಿಯೊಬ್ಬರು ಸ್ವಲ್ಪ ಜಾಗವನ್ನು ಉದಾರವಾಗಿ ನೀಡಿದ್ದಾರೆ. ಅಕ್ಷಯನ ಸಹೋದರಿಯರದ ಸೌಮ್ಯ (ಪ್ರಥಮ ಪಿಯುಸಿ), ಅಶ್ವಿನಿ (9ನೇ ತರಗತಿ) ಯವರೂ ವಿದ್ಯಾರ್ಜನೆಗೈಯುತ್ತಿದ್ದು ಕುಟುಂಬ ಫೋಷಣೆ ಪೋಷಕರ ಕಠಿಣ ದುಡಿಮೆಯಿಂದ ನಡೆಯುತ್ತಿದೆ. ಹಲವು ಸಹೃದಯಿಗಳ ನೆರವಿನಿಂದ ಈಗಷ್ಟೇ ಅಕ್ಷಯನ ಪಾಸ್‌ಫೋರ್ಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ.

…………………
ಓರ್ವ ಫ್ರೌಡಶಾಲಾ ವಿದ್ಯಾರ್ಥಿಯಾಗಿ ಒರ್ವ ಅನುಭವಿ ಕಲಾಕಾರನಂತೆ ಆವೆ ಮಣ್ಣಿನ ಮೂರ್ತಿಗಳನ್ನು ರಚಿಸಿರುವ ಅಕ್ಷಯರಾಜ್‌ನಿಗೆ ಸೂಕ್ತ ತರಬೇತಿ ಹಾಗೂ ಆರ್ಥಿಕ ಸಂಪನ್ಮೂಲ ಒದಗಿಸಿಕೊಟ್ಟಲ್ಲಿ ಅಪೂರ್ವ ಕಲಾವಿದನೊಬ್ಬನ ಉದಯವಾಗುವುದರೊಂದಿಗೆ ಮುಲ್ಕಿಯ ಹೆಸರು ಬೆಳಗಲು ಸಾದ್ಯವಿದೆ.

– ಭಾಗ್ಯವಾನ್ ಮುಲ್ಕಿ.
…………………
ಅಕ್ಷಯನು ಮಾಡುವ ಪ್ರತಿಯೊಂದು ಕೆಲಸಕಾರ್ಯದಲ್ಲೂ ಅಚ್ಚುಕಟ್ಟುತನವಿದೆ. ಹೇಳಿದ ಯಾವುದೇ ಕೆಲಸವನ್ನು ಕ್ರಮಬದ್ದವಾಗಿ ಮಾಡುವುದು ಆತನಿಗೆ ಸಿದ್ದಿಸಿದ ಕಲೆ ಆತನಿಗೆ ಉಜ್ವಲ ಭವಿಷ್ಯವಿದೆ.

– ವೆಂಕಿ (ವೆಂಕಟರಮಣ ಕಾಮತ್) , ಚಿತ್ರಕಲಾ ಶಿಕ್ಷಕರು, ಪಂಜಿನಡ್ಕ
…………………
ಬಡತನದ ಹಿನ್ನೆಲೆಯಲ್ಲಿ ಅಕ್ಷಯರಾಜ್‌ನಿಗೆ ಸೂಕ್ತ ನೆರವಿನ ಅಗತ್ಯವಿದೆ. ಆತನ ಸೃಜನಶೀಲತೆ ನೋಡಿ ನಾವೆಲ್ಲಾ ಮುಂದೆ ನಿಂತು ಆತನಿಗೆ ಜಪಾನ್ ಪ್ರವಾಸಕ್ಕೆ ಸಹಕಾರ ನೀಡುತ್ತಿದ್ದೇವೆ.
–  ಕೆ.ಎಚ್.ನಾಯಕ್, ದೈಹಿಕ ಶಿಕ್ಷಕ, ಪಂಜಿನಡ್ಕ ಶಾಲೆ.
………………..
ಆತ ನಮ್ಮ ಕುಟುಂಬದ ಆಧಾರವಾಗಬೇಕೆಂಬುದೇ ನಮ್ಮ ಮಹದಾಸೆ. ಅದಕ್ಕಾಗಿ ಸಾಧ್ಯವಾದಷ್ಟು ಆತನಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದೇವೆ. ತೀವ್ರ ಹಣಕಾಸಿನ ಕೊರತೆ ನನ್ನನ್ನು ಕಾಡುತ್ತಿದೆ.

– ಜಯರಾಜ್ ಶೆಟ್ಟಿ, ಅಕ್ಷಯರಾಜ್‌ನ ತಂದೆ.
…………………
ವೆಂಕಿ ಸರ್ ರಂತೆ ಅದ್ಭುತ ಕಲಾವಿದನಾಗುವಾಸೆ, ಅದಕ್ಕಾಗಿ ದಿನನಿತ್ಯ ಮನೆಯಲ್ಲಿಯೇ ಪ್ರಯತ್ನ ಪಡುತ್ತಿದ್ದೇನೆ. ತಂದೆ ತಾಯಿಗೆ ಸಹಾಯ ವಾಗಲು ನಾವು 3 ಮಕ್ಕಳು ರಜೆಯಲ್ಲಿ ಕೆಲಸಕ್ಕೂ ಹೋಗುತ್ತಿದ್ದೇವೆ.

– ಅಕ್ಷಯರಾಜ್ ಶೆಟ್ಟಿ
…………………
ಅತ್ಯುತ್ತಮ ಕಲಾಕಾರನಾದ ಅಕ್ಷಯನಿಗೆ ಪ್ರೋತ್ಸಾಹಿಸಿ ಸಹಕಾರ ನೀಡುವುದು ಸಮಾಜದ ಆದ್ಯ ಕರ್ತವ್ಯವಾಗಿದೆ ಈ ನಿಟ್ಟಿನಲ್ಲಿ ಅವನಿಗೆ ಸೂಕ್ತ ಪ್ರೋತ್ಸಾಹ ನೀಡುತ್ತೇವೆ

– ಸಂತೋಷ್ ಹೆಗ್ಡೆ ಅಧ್ಯಕ್ಷರು ಮುಲ್ಕಿ ಬಂಟರ ಸಂಘ

 

 

Comments

comments

Leave a Reply

Read previous post:
ಬೆಳಪು – ಪ್ರಾಯೋಗಿಕ ಘನತ್ಯಾಜ್ಯ ವಿಲೇವಾರಿ ಘಟಕ

Bhagyavan Sanil ಪಡುಬಿದ್ರಿ, ಮೇ03: ಪ್ರತಿಯೊಂದು ಸ್ಥಳಿಯಾಡಳಿತವು ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದ ಬಳಲುತ್ತಿದ್ದು ಬೆಳಪು ಗ್ರಾಮದಲ್ಲಿ ಅಳವಡಿಸಲಾದ ಪ್ರಾಯೋಗಿಕ ಘನತ್ಯಾಜ್ಯ ವಿಲೇವಾರಿ ಘಟಕವು ಇತರ ಗ್ರಾಪಂ ಗಳಿಗೆ ಮಾದರಿಯಾಗಿದೆ...

Close