ಆಸ್ಕರ್ ಫೆರ್ನಾಂಡಿಸ್‌ರ ಮುಲ್ಕಿ ಹೆದ್ದಾರಿ ವಿಸ್ತರಣೆ ಪರಿಶೀಲನೆ

Photos by PrakashM Suvarna & Narendra Kerekadu

ಮುಲ್ಕಿ ಮೇ 12: ಸುರತ್ಕಲ್ ಮತ್ತು ಕುಂದಾಪುರದ ನಡುವೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯ ಕಾಮಗಾರಿಯಲ್ಲಿ ಮುಲ್ಕಿಯಲ್ಲಿ ಉಂಟಾಗಿರುವ ಸಮಸ್ಯೆಗೆ ಶೀಘ್ರವಾಗಿ ಪರಿಹಾರ ಕಂಡುಕೊಂಡು ಕಾಮಗಾರಿಗೆ ತೊಡಕಾಗಿರುವ ಎಲ್ಲಾ ವಿವಾದಗಳಿಗೆ ತೆರೆ ಎಳೆಯಲಾಗುವುದು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್‌ರವರು ಹೇಳಿದರು.

ಮುಲ್ಕಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ತಂಡದೊಂದಿಗೆ ಆಗಮಿಸಿ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ಉಂಟಾಗಿರುವ ಸಮಸ್ಯೆಯ ಬಗ್ಗೆ ಚರ್ಚೆಯನ್ನು ಸ್ಥಳೀಯರೊಂದಿಗೆ ನಡೆಸಿದರು.
ಶಾಸಕ ಅಭಯಚಂದ್ರ ಮಾತನಾಡಿ ಮುಲ್ಕಿಯಲ್ಲಿ ಬೈಪಾಸ್ ರಚನೆಯಿಂದ ಬಪ್ಪನಾಡು ದೇವಸ್ಥಾನಕ್ಕೆ ಧಕ್ಕೆ, ಹೆದ್ದಾರಿ ವಿಸ್ತರಣೆಯಿಂದ ಅಂಗಡಿಗಳ ಮಾಲೀಕರಿಗೆ ಪಾರ್ಕಿಂಗ್ ಸಮಸ್ಯೆ, ಅಂಡರ್‌ಪಾಸ್ ರಚನೆಯಾದಲ್ಲಿ ವ್ಯವಹಾರಕ್ಕೆ ತೊಡಕು ಈ ಬಗ್ಗೆ ಗಮನ ಸೆಳೆದು ಈ ಎಲ್ಲಾ ಸಮಸ್ಯೆಗೆ ಫ್ಲೈ ಓವರ್ ರಚಿಸಿದಲ್ಲಿ ಎಲ್ಲಕ್ಕೂ ಪರಿಹಾರ ಆಗಬಹುದು ಎಂದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಮಹಾಪ್ರಬಂಧಕ ಎ.ಕೆ.ಮಾಥುರ್ ಪ್ರತಿಕ್ರಿಯಿಸಿ ಈ ಭಾಗದಲ್ಲಿ ಮೊದಲು ಬೈಪಾಸ್ ನಿರ್ಮಿಸಲು ತೀವ್ರ ಪ್ರತಿಭಟನೆ ನಡೆದು ರದ್ದುಗೊಂಡಿದ್ದು, ಈಗಿರುವ ವೆಚ್ಚದಲ್ಲಿ ಅಂಡರ್ ಪಾಸನ್ನು ಮಾತ್ರ ಮಾಡಬಹುದು ಆದರೆ ಫ್ಲೈ ಓವರ್ ನಿರ್ಮಿಸಲು ಹೆಚ್ಚುವರಿ ಅನುದಾನದ ಅಗತ್ಯ ಇದ್ದು ಯೋಜನಾ ವೆಚ್ಚದಲ್ಲಿ ಸಾಧ್ಯವಿಲ್ಲ ಎಂದರು.
ಶಾಸಕ ಉತ್ತರಿಸಿ ಪಕ್ಕದ ಸುರತ್ಕಲ್, ಕೂಳೂರು, ಕೊಟ್ಟಾರ, ಕುಂಟಿಕಾನದ ಮುಖ್ಯ ಪೇಟೆಯಲ್ಲಿ ಫ್ಲೈ ಓವರ್ ನಿರ್ಮಿಸಿಯೇ ಪರಿಹಾರ ಕಂಡು ಕೊಳ್ಳಲಾಗಿದೆ ಜನರ ಭಾವನೆಗೆ ಧಕ್ಕೆ ಬರದೇ ನಿರ್ಧಾರ ಕೈಗೊಳ್ಳಬೇಕು ಬಲವಂತದ ನಿರ್ಧಾರ ಮಾಡಬೇಡಿ ಎಂದು ತಮ್ಮ ಅಸಮಧಾನವನ್ನು ಆಸ್ಕರ್ ಫೆರ್ನಾಂಡಿಸ್‌ರಲ್ಲಿ ಹೇಳಿಕೊಂಡರು.
ಎಲ್ಲಾ ಸಮಸ್ಯೆಗೂ ಸೂಕ್ತವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಅಲ್ಲದೇ ಮೊದಲು ಬೈಪಾಸ್ ಬೇಡ ಎಂದವರು ಈಗ ಬೇಕು ಎಂದಿರುವುದು ಆಶ್ಚರ್ಯ ಆಗಿದೆ ಆದ್ದರಿಂದ ಎಲ್ಲಾ ಬೇಡಿಕೆಯನ್ನು ಪರಿಶೀಲಿಸಿ ಕಾಮಗಾರಿಯನ್ನು ನಡೆಸಲಾಗುವುದು ಎಂದು ಆಸ್ಕರ್ ಫೇರ್ನಾಂಡಿಸ್ ಹೇಳಿದರು.
ಹಳೆಯಂಗಡಿಯಲ್ಲಿ ರಸ್ತೆ ವಿಸ್ತರಣೆಗೆ ತಾರತಮ್ಯ ಅನುಸರಿಸಿದ್ದಾರೆ ಎಂದು ಉದ್ಯಮಿ ಶಶೀಂದ್ರ ಸಾಲ್ಯಾನ್ ದೂರಿಕೊಂಡರು ನಂತರ ಹಳೆಯಂಗಡಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮರಳಿ ಅಳತೆ ಮಾಡಲು ಆಸ್ಕರ್ ಸೂಚಿಸಿದರು.
ಮೂಲ್ಕಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶಶಿಕಾಂತ ಶೆಟ್ಟಿ, ಉಪಾಧ್ಯಕ್ಷ ಯೋಗಿಶ್ ಕೋಟ್ಯಾನ್. ಬಿ.ಎಂ.ಆಸಿಫ್, ಹರಿಕೃಷ್ಣ ಪುನರೂರು, ಹರಿಶ್ಚಂದ್ರ ಕೋಟ್ಯಾನ್, ಉದಯ ಶೆಟ್ಟಿ, ತಾರಾನಾಥ ಅಡ್ವೆ, ನೂರು ಅಹ್ಮದ್, ಇನ್ನಿತರರು ಹಾಜರಿದ್ದರು.

ಬೈಪಾಸ್ ರಚಿಸಿ..

ಮುಲ್ಕಿಯಲ್ಲಿನ ರಸ್ತೆ ವಿಸ್ತರಣೆಗೆ ಸೂಕ್ತವಾದ ಪರಿಹಾರ ಕಾಣಬೇಕಾದರೆ ಮುಲ್ಕಿಯಲ್ಲಿ ರಾಜಕೀಯ ಉದ್ದೇಶದಿಂದ ರದ್ದಾಗಿರುವ ಬೈಪಾಸ್ ರಚನೆಗೆ ಉದ್ಯಮಿಗಳು, ಅಂಗಡಿ ಮಾಲೀಕರು ಮನವಿ ಮಾಡಿಕೊಂಡರು.

ಮುಲ್ಕಿರೈಲು ನಿಲುಗಡೆ…
ಮುಲ್ಕಿ ರೈಲ್ವೇ ನಿಲ್ದಾಣದಲ್ಲಿ ಕೆಲವೊಂದು ಬೋಗಿಗಳನ್ನು ನಿಲ್ಲಿಸುವ ಬಗ್ಗೆ ಈಗಾಗಲೇ ಪರಿಶಿಲನೆ ನಡೆಸುತ್ತಿದ್ದು ರೈಲ್ವೇ ಇಲಾಖೆಯು ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಅಲ್ಲದೇ ಎಲ್ಲಾ ರೈಲು ನಿಂತರೆ ಅದು ಗೂಡ್ಸ್ ಆಗುತ್ತದೆ ಎಂಬುದನ್ನು ಮನಗಂಡು ಯಾವ ರೈಲು ನಿಲ್ಲಲಿದೆ ಎಂದು ಇಲಾಖೆ ನಿರ್ಧರಿಸಲಿದೆ ಎಂದರು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಮುಗ್ರೋಡಿಸ್ ಎನ್‌ಕ್ಲೇವ್ ಗೆ ಭೂಮಿಪೂಜೆ

Photos by Lionel Pinto ಕಿನ್ನಿಗೋಳಿ ಮೇ 11: ರಾಜರತ್ನಪುರದ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಬಳಿ ನಿರ್ಮಿಸಲು ಉದ್ದೇಶಿಸಿರುವ ಮುಗ್ರೋಡಿಸ್ ಕಿನ್ನಿಗೋಳಿ ಎನ್‌ಕ್ಲೇವ್ ವಸತಿ ಮತ್ತು ವಾಣಿಜ್ಯ...

Close