ಯುಪಿಸಿಎಲ್ ಸ್ಥಾವರ ಬಲತ್ಕಾರದ ಕಾಮಗಾರಿಕೆಗೆ ತಡೆ

Photos By Bhagyavan Sanil

ಪಡುಬಿದ್ರಿ: ಸಾರ್ವಜನಿಕ ವಿರೋಧದ ನಡುವೆ ಕೆಪಿಟಿಸಿಎಲ್‌ನವರು ಯುಪಿಸಿಎಲ್ ಸ್ಥಾವರದಿಂದ ಹಾಸನಕ್ಕೆ 400ಕೆವಿ ವಿದ್ಯುತ್ ಸಾಗಾಟಕ್ಕಾಗಿ ನಿರ್ಮಿಸುತ್ತಿದ್ದ ವಿದ್ಯುತ್ ತಂತಿ ಎಳೆಯುವ ಬಲತ್ಕಾರದ ಕಾಮಗಾರಿಕೆಗೆ ತಡೆ ಒಡ್ಡಲಾಗಿದೆ.
ಸೋಮವಾರ ಮುಂಜಾನೆ ನೂರಾರು ಪೊಲೀಸ್ ಬಂದೋಬಸ್ತ್ ನಿರ್ಮಿಸಿ ಕಾಮಗಾರಿಗೆ ಮುಂದಾಗಿದ್ದ ಕೆಪಿಟಿಸಿಎಲ್‌ಗೆ ಎಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮನಾ, ಸದಸ್ಯ ಜಯಂತ್ ಕುಮಾರ್, ನಾಗೇಶ್ ಭಟ್, ಜಿಲ್ಲಾ ಪಂಚಾಯತ್ ಸದಸ್ಯ ಅರುಣ್ ಶೆಟ್ಟಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ, ನವೀನ್ ಎನ್. ಶೆಟ್ಟಿ ಮತ್ತಿತರರು ತಡೆಒಡ್ಡಿ ಕಾನೂನು ಬಾಹಿರ ಕಾಮಗಾರಿ ನಡೆಸದಂತೆ ತಾಕೀತು ಮಾಡಿದರು.
ಈ ಸಂದರ್ಭ ಕೆಪಿಟಿಸಿಎಲ್ ಸುಪರಿಡೆಂಟ್ ಇಂಜಿನಿಯರ್ ಗೋವಿಂದರಾವ್, ಎಕ್ಸಿಕ್ಯುಟಿವ್ ಎಂಜಿನಿಯರ್ ಪಿಡಿಬಿ ರಾವ್ ಪ್ರತಿಭಟನಾಕಾರರೊಂದಿಗೆ ಮಾತನಾಡಿ ವಿದ್ಯುತ್ ತಂತಿ ಎಳೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು ಈ ಹಿನ್ನಲೆಯಲ್ಲಿ ಕಾಮಗಾರಿ ನಡೆಸುತ್ತಿರುವುದಾಗಿ ಹೇಳಿದರು.
ಅದಕ್ಕೊಪ್ಪದ ಪ್ರತಿಭಟನಕಾರರ ಪೈಕಿ ಜಯಂತ್ ಕುಮಾರ್, ಜಿಲ್ಲಾಧಿಕಾರಿ ಪರವಾನಗಿಯಲ್ಲಿ ನಂದಿಕೂರಿನಿಂದ ಹಾಸನ ಎಂದು ನಮೂದಾಗಿರುವುದರಿಂದ ಎಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತಂತಿ ಎಳೆಯಲು ಬಿಡಲಾರೆವು. ಅಲ್ಲದೆ ಎಲ್ಲೂರು ಗ್ರಾಮ ಪಂಚಾಯತ್ ತಂತಿ ಎಳೆಯುವ ವಿರುದ್ಧ ನಿರ್ಣಯ ಅಂಗೀಕರಿಸಿದ್ದು, ಪಂಚಾಯತ್ ಪರವಾನಗಿ ಪಡೆಯದೆ ಕಾಮಗಾರಿಗೆ ಅವಕಾಶ ನೀಡಲಾರೆವು ಎಂದರು.
ಹಾಸನದ ಶಾಂತಿಪುರದಿಂದ ಯುಪಿಸಿಎಲ್ ತನಕ ೧೮೦ಕಿ.ಮೀ ಉದ್ದ ತಂತಿ ಎಳೆಯುವ ಕಾರ್ಯ ಚಾಲ್ತಿಯಲ್ಲಿದ್ದು, ಶೇ.೯೦ ಕಾಮಗಾರಿ ಮುಕ್ತಾಯವಾಗಿದೆ. ಎಲ್ಲೂರು ನಂದಿಕೂರು ಮಧ್ಯೆ ೩ ಟವರ್‌ಗಳ ಸಹಿತ ೩-೪ ಕಡೆ ವಿದ್ಯುತ್ ತಂತಿ ಎಳೆಯುವ ಕಾಮಗಾರಿ ಬಾಕಿ ಇದೆ. ಪ್ರಸರಣಾ ಮಾರ್ಗಮಧ್ಯೆ ಅರಣ್ಯ ಪ್ರದೇಶವಿದ್ದಲ್ಲಿ ಮಾತ್ರ ಪಂಚಾಯತ್ ಪರವಾನಗಿ ಅಗತ್ಯವಿದೆ. ಉಳಿದ ಸಂದರ್ಭ ಅನುಮತಿ ಅಗತ್ಯವಿಲ್ಲ ಎಂದು ಪಿಡಿಬಿ ರಾವ್ ಪತ್ರಿಕೆಗೆ ತಿಳಿಸಿದ್ದು, ಜಿಲ್ಲಾಧಿಕಾರಿಯವರನ್ನು ಮುಖಃತ ಭೇಟಿಯಾಗಿ ಎಲ್ಲೂರು ಪ್ರದೇಶದ ಕಾಮಗಾರಿಗೆ ಲಿಖಿತ ಅನುಮತಿ ಪಡೆಯುವುದಾಗಿ ತಿಳಿಸಿದ್ದಾರೆ.

ವಯೋವೃದ್ಧರ ಅಳಲು: ಕಾಮಗಾರಿ ಸಂದರ್ಭ ಸ್ಥಳೀಯ ವಯೋವೃದ್ಧ ವಿಶ್ವನಾಥ ಭಟ್ ಎಂಬವರು ಸುಡು ಬಿಸಿಲಲ್ಲಿ ಕಾಮಗಾರಿ ವೇಳೆ ವಾಹನಕ್ಕೆ ಅಡ್ಡ ಮಲಗಿ ಪ್ರತಿಭಟನೆ ನಡೆಸಿದರು. ತನ್ನ ಮೇಲೆಯೇ ವಾಹನ ಕೊಂಡೊಯ್ದು ಕಾಮಗಾರಿ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನಮ್ಮ ಮೂಲಭೂತ ಹಕ್ಕು ಕಸಿದು ನಡೆಸುವ ಯಾವುದೇ ಕಾಮಗಾರಿಗೆ ಅವಕಾಶ ನೀಡಲಾರೆ ಎಂದು ಗುಡುಗಿದರು.
ರಾಗವೇಂದ್ರ ಭಟ್, ಮುದ್ದುಮೂಲ್ಯ ಮತ್ತಿತರ ಕುಟುಂಬಿಕರು ಯಾವುದೇ ನೋಟೀಸ್ ಅಥವಾ ಪರಿಹಾರ ನೀಡದೆ ಬಲತ್ಕಾರವಾಗಿ ನಮ್ಮ ಜಾಗದಲ್ಲಿ ಈ ಆಕ್ರಮ ಕಾಮಗಾರಿ ನಡೆಯುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಪಿಟಿಸಿಎಲ್ ಅಧಿಕಾರಿ ಗೋವಿಂದರಾವ್ ಪರಿಹಾರದ ಚೆಕ್ಕನ್ನು ತಂದಿದ್ದೇವೆ. ಆದರೆ ಕಡಿಮೆಯಾಗಿದೆ ಎಂದು ಅವರು ಪಡೆದಿಲ್ಲ ಎಂದರು.
ಕಾಪು ವೃತ್ತ ನಿರೀಕ್ಷಕ ಶಿವಾನಂದ ವಾಲೇಕರ್, ಪಡುಬಿದ್ರಿ ಠಾಣಾಧಿಕಾರಿ ಮಹದೇವ ಶೆಟ್ಟಿ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರು ಪೊಲೀಸ್ ಮನವಿಯನ್ನು ತಿರಸ್ಕರಿಸಿ ಕಾಮಗಾರಿಗೆ ತಡೆ ಒಡ್ಡಿದರು. ಕೆಪಿಟಿಸಿಎಲ್ ಎಇಇಮೋಹನ್ ಮತ್ತು ಪ್ರವೀಣ್, ಎಇ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮಧ್ಯಾಹ್ನ ೩.೧೫ರ ಸುಮಾರಿಗೆ ಜಿಲ್ಲಾಧಿಕಾರಿಯವರಿಂದ ತಂತಿ ಎಳೆಯಲು ಲಿಖಿತ ಆದೇಶ ತಂದು ಕೆಪಿಟಿಸಿಎಲ್ ಅದಿಕಾರಿಗಳು ಪ್ರತಿಭಟನಾಕಾರರಿಗೆ ನೀಡಿದ ಬಳಿಕ ಕಾಮಗಾರಿ ಮುಂದುವರಿಯಿತು.
ಈ ಸಂದರ್ಭ ಪತ್ರಿಕೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರರ ಪೈಕಿ ಜಯಂತ್ ಕುಮಾರ್ ಎಂಬವರು ಅರಣ್ಯ ಮತ್ತು ಪರಿಸರ ಮಂತ್ರಾಲಯ ಅನುಮತಿಸಿದ ಕಾಮಗಾರಿಗೆ ಸ್ಥಳೀಯಾಡಳಿತ ಪರವಾನಗಿ ಅಗತ್ಯವಿದೆ. ಎಲ್ಲೂರು ಪ್ರಧೇಶದಲ್ಲಿ ತಂತಿ ಎಳೆಯಲು ಪರವಾನಗಿ ನೀಡಿಲ್ಲ. ಅಲ್ಲದೆ ಪರಿಸರ ಇಲಾಖೆಯು ಕೆಪಿಟಿಸಿಎಲ್‌ಗೆ ಹಾಸನದಿಂದ ನಂದಿಕೂರಿಗೆ ಮಾತ್ರ ತಂತಿ ಎಳೆಯಲು ಅನುಮತಿ ನೀಡಿದೆ ವಿನಹ ಎಲ್ಲೂರು ಸೇರ್ಪಡೆಯಾಗಿಲ್ಲ. ಹಾಗಾಗಿ ಜಿಲ್ಲಾಧಿಕಾರಿ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದಿದ್ದಾರೆ.

Comments

comments

Leave a Reply

Read previous post:
ಪಡುಬಿದ್ರಿ: ತಾತ್ಕಾಲಿಕ ದ್ರವ ತ್ಯಾಜ್ಯ ಸಂಗ್ರಹಣಾಗಾರ ನಿರ್ಮಿಸಿ

Photo by Bhagyavan Sanil ಪಡುಬಿದ್ರಿ: ಒಳಚರಂಡಿ ವ್ಯವಸ್ಥೆ ರಹಿತ ಪಡುಬಿದ್ರಿಯ ಎಲ್ಲಾ ಹೋಟೆಲ್ ಮಾಲೀಕರು ಮತ್ತು ಸಂಕೀರ್ಣಗಳು ಗ್ರಾಮದಲ್ಲಿ ಶಾಶ್ವತ ಒಳಚರಂಡಿ ವ್ಯವಸ್ಥೆ ಜಾರಿಗೊಳ್ಳುವ ತನಕ...

Close