ಆಸ್ಪತ್ರೆಗೆ ಹೊರಟವರು ಮಸಣ ಸೇರಿದರು

Photo by Narendra Kerekadu

ಮುಲ್ಕಿ; ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಳಿಯ ಕೊಲ್ನಾಡು ಎಂಬಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳ ಮೂಲದ ಪತಿ, ಪತ್ನಿ ಸಹಿತ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ಕೇರಳ ಕಣ್ಣೂರಿನ ತಲಚೇರಿ ಬಳಿಯ ಪೊಯಿವಾರು ಗ್ರಾಮದ ನಿವಾಸಿ ಕುಂಞ ಅಹಮ್ಮದ್ ಮುಸ್ಲಿಯಾರ್ ಎಂಬುವವರ ಮಗ ಯೂಸುಫ್ (58), ಅವರ ಪತ್ನಿ ಆಯಿಶಾ (42), ಹಾಗೂ ಅದೇ ಗ್ರಾಮದ ದಿ.ಅಬ್ದುಲ್ಲ ಎಂಬುವವರ ಮಗ ಅಹಮ್ಮದ್ (42) ಎಂಬುವವರು ಮೃತಪಟ್ಟಿದ್ದು ಕಾರಿನಲ್ಲಿದ್ದ ಮತ್ತೋರ್ವ ಪ್ರಯಾಣಿಕ ಅಹಮ್ಮದ್ ಗಾಯಾಳುವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿದ್ದಾರೆ.


ಭಾರತ್ ಆಟೋಮೊಬೈಲ್ಸ್‌ನ ಮುಂಭಾಗದಲ್ಲಿ ಚತುಷ್ಪಥ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಯನ್ನು ಬದಲಾಯಿಸಿ ಎಡಬದಿಯಲ್ಲಿ ಸಂಚರಿಸುವ ವ್ಯವಸ್ಥೆ ಮಾಡಿದ್ದು ಕತ್ತಲಿನಲ್ಲಿ ಸ್ವಿಪ್ಟ್ ಕಾರು ಮತ್ತು ನವಯುಗ ಕನ್ಸ್‌ಟ್ರಕ್ಷನ್‌ನ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ಯೂಸಫ್‌ರವರಿಗೆ ಅಪೆಂಡಿಕ್ಸ್‌ನ ಚಿಕಿತ್ಸೆಗಾಗಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಿಸಲು ಪತ್ನಿ ಆಯಿಶಾರೊಂದಿಗೆ ಸ್ಥಳೀಯ ಸಮಾಜ ಸೇವಕರಾಗಿರುವ ಅಹಮ್ಮದ್‌ರವರ ಖಾಸಗಿ ಕಾರಿನಲ್ಲಿಯೇ ರಾತ್ರಿ 8ಗಂಟೆಗೆ ಮನೆಯಲ್ಲಿ ಊಟ ಮುಗಿಸಿಕೊಂಡು ಪ್ರಯಾಣಿಸಿದ್ದರು, ಸ್ವತಹ ಅಹಮ್ಮದ್‌ರವರೇ ಕಾರನ್ನು ಚಲಾಯಿಸುತ್ತಿದ್ದರಲ್ಲದೇ ಇವರೊಂದಿಗೆ ಯೂಸಫ್‌ರ ಪಕ್ಕದ ಮನೆಯ ಅಹಮ್ಮದ್ ಮೂವರೊಂದಿಗೆ ಪ್ರಯಾಣಿಸಿದ್ದರು ಆದರೆ ವಿಧಿ ಲೀಲೆ ಆಸ್ಪತ್ರೆಗೆಂದು ತೆರಳಿದ್ದವರು ಮಸಣದ ಹಾದಿ ಹಿಡಿದರು.
ಯೂಸಫ್ ಆಯಿಶಾ ದಂಪತಿಗೆ ನಾಲ್ಕು ಹೆಣ್ಣು ಮತ್ತು ಒಂದು ಗಂಡು ಮಗುವಿದೆ ಹಾಗೂ ಕಾರು ಮಾಲೀಕ ಅಹಮ್ಮದ್‌ರವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ನಗರ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಎಂ.ಆಸಿಫ್ ಮತ್ತು ಸದಸ್ಯ ಪುತ್ತುಬಾವರವರು ತಮ್ಮ ಸ್ನೇಹಿತರೊಂದಿಗೆ ಸ್ಥಳಕ್ಕೆ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಪೊಲೀಸರೊಂದಿಗೆ ಶ್ರಮಿಸಿದರು ಎಂದು ತಿಳಿದು ಬಂದಿದೆ.
ಮುಲ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೊತ್ತರ ಪರೀಕ್ಷೆ ನಡೆಸಿ ಸ್ಥಳೀಯ ಕಾರ್ನಾಡು, ಮುಲ್ಕಿ ಮುಸ್ಲಿಂ ಬಾಂಧವರೇ ಆಸ್ಪತ್ರೆಯ ಆವರಣದ ಬಳಿ ಇರುವ ಮನೆಯೊಂದರಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಕ್ರಿಯಾ ಕರ್ಮವನ್ನು ನಡೆಸಿ ಶರೀರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು ಎಂದು ಪುತ್ತುಬಾವರವರು ಪತ್ರಿಕೆಗೆ ತಿಳಿಸಿದ್ದಾರೆ. ಮುಲ್ಕಿ ಠಾಣೆಯಲ್ಲಿ ಟಿಪ್ಪರ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.

 

 

Comments

comments

Leave a Reply

Read previous post:
ಕಟೀಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುಸ್ತಕ ವಿತರಣೆ

Photo by Mithuna Kodethoor ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಾಥಮಿಕ ಶಾಲೆಯ ಮಕ್ಕಳಿಗೆ ರೇವತಿ ಚೌಟ ಸ್ಮರಣಾರ್ಥ ರೂ. 25ಸಾವಿರ ವೆಚ್ಚದ ಪುಸ್ತಕಗಳನ್ನು ವಿತರಿಸಲಾಯಿತು. ದಾನಿ ರಾಘವ...

Close