ಕೊಡೆತ್ತೂರು

Mithuna Kodethoor
ಹತ್ತೂರು ಸೇರಿ ಅತ್ತೂರು ಆಯಿತು. ಅತ್ತೂರ‍್ದ ಕುತ್ತಿ ಕುತ್ತೆತ್ತೂರು ಆಯಿತು. ಅತ್ತೂರ‍್ದ ಕೊಡಿ ಕೊಡೆತ್ತೂರು ಆಯಿತು ಅಂತ ಹಿರಿಯರು ಅಭಿಪ್ರಾಯ ಪಡುತ್ತಾರೆ. ದೇವಸ್ವ ಶಬ್ದ ಬಳಕೆಯಾಗುತ್ತ ದೇವಸ್ಯದ ರೂಪ ತಾಳಿರಬಹುದು.

ಕೊಡೆತ್ತೂರು ಎಂಬ ಹಳ್ಳಿ ಕೊಂಡೆಮೂಲ, ನಡುಗೋಡು, ಮೆನ್ನಬೆಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಗುರುತಿಸಬಹುದಾದ್ದದ್ದು. ಸಂಪತ್‌ಭರಿತವಾದ ಕೃಷಿ ಭೂಮಿಯನ್ನು ಹೊಂದಿರುವ ವರುಷದ ಆರೇಳು ತಿಂಗಳು ಹಚ್ಚಹಸುರು ಗದ್ದೆಗಳಿಂದ ಕಂಗೊಳಿಸುವ ಕೊಡೆತ್ತೂರು ಐತಿಹಾಸಿಕವಾಗಿಯೂ ಹೆಸರು ಮಾಡಿರುವಂತಹದ್ದು ಎಂಬುದಕ್ಕೆ ದೇವಸ್ಯದ ಪರಿಸರದಲ್ಲಿ ಕಾಣಸಿಗುವ ಮೂರು ಶಿಲಾಶಾಸನಗಳು ಸಾಕ್ಷಿ. ಈಗಾಗಲೇ ಎರಡು ಶಾಸನಗಳನ್ನು ಓದಲಾಗಿದ್ದು, ದೇವಸ್ಯ ಮಠದ ನಾಗಬನದಲ್ಲಿರುವ ಒಂದು ಶಾಸನವನ್ನು ಇನ್ನೂ ಓದಲಾಗಿಲ್ಲ.ಕೊಡೆತ್ತೂರು ಗುತ್ತು ಮತ್ತು ದೇವಸ್ಯ ಮಠದ ಮಧ್ಯದ ಕೃಷಿಭೂಮಿ ಪಕ್ಕದಲ್ಲೇ ಹರಿದುಹೋಗುವ ಪುಟ್ಟ ತೊರೆಯ ಆರ್ಭಟಕ್ಕೆ ವರುಷಕ್ಕೊಂದೆರಡು ದಿನವಾದರೂ ಪೂರ್ತಿ ಮುಳುಗಿ ಹೋಗುವುದೂ ಇದೆ.
ದೇವಸ್ಯ ಮಠದ ಪಕ್ಕದಲ್ಲೇ ಹರಿದುಹೋಗುವ ಮತ್ತು ವರುಷದ ಆರು ತಿಂಗಳು ಹರಿಯುವ ತೋಡು ಅಥವಾ ಪುಟ್ಟ ತೊರೆ ಕೆಮ್ಮಡೆ, ಕಂಗುತೋಟದ ಕಡೆಯಿಂದ ಹರಿದು ಬರುವಂತಹದ್ದು. ಇದು ದೇವಸ್ಯ ಮಠದ ಹತ್ತಿರದಲ್ಲಿರುವ ಅಶ್ವತ್ಥಗುಂಡಿಯಲ್ಲಿ ಮುಕ್ಕ ಮತ್ತು ಸಂಕಯ್ಯಬೆನ್ನಿ ಕಡೆಯಿಂದ ಹರಿದುಬರುವ ಇತರ ಎರಡು ತೊರೆಗಳನ್ನು ಕೂಡಿಕೊಂಡು ಶಿಬರೂರು ಕಡೆ ಸಾಗುವ ತೊರೆಗೆ ಸೇರಿಕೊಳ್ಳುತ್ತದೆ. ಈ ಅಶ್ವತ್ಥ ಗುಂಡಿಯಲ್ಲಿ ಮಳೆಗಾಲದಲ್ಲಿ ನಾಲ್ಕೂ ಕಡೆಯೂ ಭೋರ್ಗರೆಯುವ ನೀರ ತೋಡು ಅಥವಾ ತೊರೆಯನ್ನು ಕಾಣಬಹುದು.
ದೇವಸ್ಯ ಮಠದ ಎದುರು ಇರುವ ಬಾವಿಯಲ್ಲಿ ಅನೇಕ ವರ್ಷಗಳಿಂದ ಎರಡು ನಾಗ ಕಲ್ಲುಗಳು ಇವೆ ಎಂಬುದು ಕೂಡ ಕುತೂಹಲದ ಸಂಗತಿಯೇ. ನಾಲ್ಕು ಕಲ್ಲುಗಳಿದ್ದು, ಎರಡನ್ನು ಅದಕ್ಕೆ ಸಂಬಂಧಿಸಿದವರು ಕೊಂಡುಹೋಗಿದ್ದಾರೆ ಎಂಬುದು ಸ್ಥಳೀಯರ ಹೇಳಿಕೆ.
ದೇವಸ್ಯದಲ್ಲಿ ದೇವಸ್ಥಾನ ಇತ್ತೆನ್ನುವುದಕ್ಕೆ ಅಶ್ವತ್ಥ ಗುಂಡಿ(ಬಹುಶಃ ಇಲ್ಲಿ ದೇವರ ಜಳಕವಾಗುತ್ತಿರಬಹುದು), ಬೈಲಿನ ಮತ್ತೊಂದು ಭಾಗದಲ್ಲಿರುವ ಚಂದ್ರಮಂಡಲ ಎಂಬ ಮನೆ ಅಥವಾ ಸ್ಥಳ ಹೀಗೆ ಕೆಲ ಲಕ್ಷಣಗಳನ್ನು ಕಟೀಲು ದಿ.ಶ್ರೀನಿವಾಸ ಭಟ್ಟರು ಅಭಿಪ್ರಾಯ ಪಡುತ್ತಿದ್ದರು.
ದೇವಸ್ಯ ಮಠ ಸೇರಿದಂತೆ ಕೊಡೆತ್ತೂರು ಪರಿಸರದಲ್ಲಿ ಕನಿಷ್ಟ ನಲವತ್ತು ಬಗೆಯ ಪಕ್ಷಿಗಳನ್ನು ಗುರುತಿಸಬಹುದು. ಬೆಳಿಗ್ಗಿನ ಜಾವದಲ್ಲಿ ನವಿಲು, ನಾಲ್ಕಾರು ಬಗೆಯ ಕೊಕ್ಕರೆ ಜಾತಿಯ ಪಕ್ಷಿಗಳು, ಇತ್ತೀಚಿಗೆ ವಿರಳವಾಗುತ್ತಿರುವ ಗುಬ್ಬಚ್ಚಿಗಳು, ಮರಗುಟಿಗ ಸೇರಿದಂತೆ ಅನೇಕ ಹಕ್ಕಿಗಳನ್ನು ಹಾಗೂ ಚಿಟ್ಟೆಗಳನ್ನು ಕಾಣಬಹುದಾಗಿದ್ದು ಈ ಪರಿಸರ ಅದೆಷ್ಟು ಆಹ್ಲಾದಕರ ವಾತಾವರಣದಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಕೊಡೆತ್ತೂರಿನ ಒಂದು ತುದಿ ನಡುಗೋಡು ಹಾಗೂ ಇನ್ನೊಂದು ಭಾಗ ಉಲ್ಲಂಜೆಯಲ್ಲಿ ಶಾಲೆಗಳಿವೆ ಎಂಬುದು ಕೂಡ ಗುರುತಿಸಬೇಕಾದ ವಿಚಾರ. ದೇವಸ್ಯ ಮಠದವರೇ ಆದ ಡಾ.ಕೆ.ನರಸಿಂಹ ಉಡುಪ ಮತ್ತು ಖ್ಯಾತ ಹೃದಯ ತಜ್ಞ ಕೊಡೆತ್ತೂರು ಡಾ.ದೇವೀಪ್ರಸಾದ ಶೆಟ್ಟಿ ಹೀಗೆ ಇಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದು ಇಡೀ ಊರಿಗೇ ಕೋಡು ಮೂಡಿಸಿದ ಸಂಗತಿ.
ಕೆಲ ಊರುಗಳಲ್ಲಿ ಕೆಲ ಜಾತಿಯವರಿಗೆ ಉಳಿಗಾಲವಿಲ್ಲ ಎಂಬ ನಂಬಿಕೆಯಿರುತ್ತದೆ. ಆದರೆ ಕೊಡೆತ್ತೂರಿನಲ್ಲಿ ಹಿಂದೂಗಳಲ್ಲಿ ಇರುವ ಎಲ್ಲ ಜಾತಿಗಳ ಜನರೂ ಸೌಹಾರ್ದಯುತವಾಗಿ ಇದ್ದಾರೆ.
ದೇವಸ್ಯ ಮಠದ ಪರಿಸರ ಸೇರಿದಂತೆ ಕೊಡೆತ್ತೂರಿನಲ್ಲಿ ಎಲ್ಲ ಕಡೆಗಳಂತೆ ಇತ್ತೀಚಿಗೆ ಗದ್ದೆ ಕೃಷಿ ಇಲ್ಲವಾಗುತ್ತಿದೆ. ಎಲ್ಲರ ಮನೆಗಳಿಂದಲೂ ಕೋಣಗಳು ಮಾರಾಟವಾಗಿವೆ. ಆದರೆ ಒಂದೆರಡು ಟಿಲ್ಲರ್, ಟ್ರಾಕ್ಟರ್ ಬಂದಿದೆ ಎಂಬುದು ದಾಖಲಿಸಬೇಕಾದ ಸಂಗತಿಯಾಗಿ ಯಾಕೆ ಕಾಣುತ್ತದೆ ಎಂದರೆ ಪರಿಸರದ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರದ ಸಂದರ್ಭದಲ್ಲಿ ಕೊಡೆತ್ತೂರು ಊರಮಂದಿ ಇವತ್ತಿಗೂ ಹೊರೆಕಾಣಿಕೆ ಕೊಂಡೊಯ್ಯುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದರಿಂದ. ಆದರ್ಶ ಬಳಗ ಊರಿನ ಯುವಕರ ಕ್ರಿಯಾಶೀಲ ಸಂಘಟನೆ. ಕೊಡೆತ್ತೂರು ಗುತ್ತು ಒಂದು ಕಾಲಕ್ಕೆ ಸಾವಿರ ಮುಡಿಯಷ್ಟು ಜಮೀನು ಹೊಂದಿದ್ದ ಶ್ರೀಮಂತ ಗುತ್ತು. ಕೊಡೆತ್ತೂರಿನ ಸುತ್ತಲಿನ ರಸ್ತೆಗಳೆಲ್ಲವೂ ಡಾಮರು ಕಂಡಿದೆ ಎಂಬುದು ಇಲ್ಲಿನ ರಾಜಕೀಯ ಕ್ರಿಯಾಶೀಲತೆಗೆ ಕನ್ನಡಿ.

Comments

comments

Leave a Reply

Read previous post:
ಕಟೀಲು : ತೀರ್ಥ ಮಂಟಪಕ್ಕೆ ಚಿನ್ನ ಬೆಳ್ಳಿಯ ಹೊದಿಕೆ

Mithuna Kodethoor ಕಟೀಲು : ಕಟೀಲು ದೇಗುಲದ ತೀರ್ಥಮಂಟಪಕ್ಕೆ ಬೆಳುವಾಯಿ ಅಡಿಂಜೆ ಗುತ್ತು ಜಯರಾಮ ಶೆಟ್ಟಿ ಕಾಣಿಕೆಯಾಗಿ ನೀಡಿದ ಮೂರೂವರೆ ಕೆ.ಜಿ. ಬೆಳ್ಳಿಯ ಹೊದಿಕೆ, 84ಗ್ರಾಂ.ಚಿನ್ನದ ಕೀರ್ತಿ ಮುಖವನ್ನು...

Close