ಮೆನ್ನಬೆಟ್ಟು ಗ್ರಾಮ ಸಭೆ

ಕಿನ್ನಿಗೋಳಿ : ನಡುಗೋಡು ಗ್ರಾಮದಲ್ಲಿ ಸರಕಾರಿ ಸ್ಥಳದಲ್ಲಿ ಮನೆ ನಿವೇಶನ ನೀಡಲು ಯೋಜನೆ ಸಿದ್ಧವಾಗಿದ್ದು, ಪಂಚಾಯತ್‌ಗೆ ಬಂದಿರುವ 480 ಅರ್ಜಿಗಳಲ್ಲಿ ಯೋಗ್ಯ ಮತ್ತು ಅರ್ಹ ನಿವೇಶನ ರಹಿತರಿಗೆ ಮನೆ ನಿವೇಶನ ವಿತರಿಸಲಾಗುವುದು ಎಂದು ಬುಧವಾರ ನಡೆದ ಮೆನ್ನಬೆಟ್ಟು ಗ್ರಾಮ ಸಭೆಯಲ್ಲಿ ಪಿಡಿಒ ಗಣೇಶ ಬಡಿಗೇರ ಮಾಹಿತಿ ನೀಡಿದರು.
ಕಟೀಲು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಳೆದ ವರ್ಷ ಎಂಟು ಮಲೇರಿಯಾ ಪ್ರಕರಣಗಳಷ್ಟೇ ಕಂಡು ಬಂದಿದ್ದು, ಈ ಬಾರಿ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಸ್ವಚ್ಛತೆಯನ್ನು ಕಾಪಾಡಬೇಕು. ಮಲೇರಿಯಾ ಪತ್ತೆಯಾಗದಿರುವ ಕಾರಣಕ್ಕಾಗಿ ಫಾಗಿಂಗ್ ಮಾಡುವ ಅವಶ್ಯಕತೆಯಲ್ಲ ಎಂದು ಆರೋಗ್ಯ ಇಲಾಖೆಯ ಪಾಪಣ್ಣ ಮಾಹಿತಿ ನೀಡಿದರು.
ಕೃಷಿ ಇಲಾಖೆಯಲ್ಲಿ ಸಿಬಂದಿ ಕೊರತೆ ಇದೆ. ಆದರೆ ಮುಲ್ಕಿ ರೈತ ಸಂಪರ್ಕ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸಿಬಂದಿ ನೇಮಿಸಲಾಗಿದೆ ಎಂದು ಕೃಷಿ ಅಧಿಕಾರಿ ಬಾಲಕೃಷ್ಣ ತಿಳಿಸಿದರೆ, ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ರಹಿತ ಹತ್ತು ಮನೆಗಳಿದ್ದು, ಶೀಘ್ರ ಭಾಗ್ಯಜ್ಯೋತಿ ಸಂಪರ್ಕ ಕೊಡಿಸುವಂತೆ ಮೆಸ್ಕಾಂ ಇಲಾಖೆ ಅಧಿಕಾರಿಗೆ ಸೂಚಿಸಲಾಯಿತು.
ಜಲಾನಯನ ಇಲಾಖೆ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಐದು ವರ್ಷಗಳಲ್ಲಿ ಒಂದು ಕೋಟಿ ಮೂವತ್ತು ಲಕ್ಷ ರೂ.ಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ ಎಂದು ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಕಿಲೆಂಜೂರು ತಿಳಿಸಿದರು.
ಲೋಕೋಪಯೋಗಿ ಇಲಾಖಾಧಿಕಾರಿ ಗ್ರಾಮ ಸಭೆಗೆ ಬರುವುದಿಲ್ಲ ಕರೆಯಿಸಿ ಎಂಬ ಒತ್ತಾಯಕ್ಕೆ ಪಿಡಬ್ಲುಡಿ ಇಲಾಖೆ ಜಿ.ಪಂ.ನ ಅಡಿಯಲ್ಲಿ ಬರುವುದಿಲ್ಲ. ಹಾಗಾಗಿ ಗ್ರಾಮಸಭೆಗೆ ಅದರ ಅಧಿಕಾರಿಗಳು ಬರುವುದಿಲ್ಲ, ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಮೂರು ಅಂಗನವಾಡಿಗಳಿಗೆ ಕಟ್ಟಡಕ್ಕೆ ಅನುದಾನ ತರಿಸಲಾಗುವುದು ಎಂದು ಜಿ.ಪಂ.ಸದಸ್ಯ ಈಶ್ವರ್ ತಿಳಿಸಿದರು. ಆದರೆ ಮುಂದಿನ ಸಭೆಗೆ ಪಿಡಬ್ಲುಡಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ಆಹ್ವಾನಿಸಬೇಕೆಂದು ನಿರ್ಣಯಿಸಲಾಯಿತು. ನವೋದಯ ನಗರ ರಸ್ತೆ ಸರಿಯಿಲ್ಲ ಎಂಬ ಸ್ಥಳೀಯರು ದೂರಿಗೆ ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಮನವಿ ಕೊಡಿ. ರಸ್ತೆ ಅತಿಕ್ರಮಣ ತೆಗೆಯಿಸಿದರೆ ಚರಂಡಿ ಮಾಡಿ ರಸ್ತೆ ರಪೇರಿ ಮಾಡಿಸಲು ಸಹಕಾರಿಯಾಗುತ್ತದೆ ಎಂದರು.
ಸವಲತ್ತುಗಳಿಗೆ ಆದಾಯ ಪತ್ರ ಅಗತ್ಯ. ಆದರೆ ಈಗ ಕೂಲಿ ಕೆಲಸ ಮಾಡುವವರಿಗೂ ವಾರ್ಷಿಕ ಆದಾಯ ಐವತ್ತು ಸಾವಿರ ರೂಪಾಯಿ ದಾಟುತ್ತದೆ. ಹಾಗಾಗಿ ಹನ್ನೊಂದು ಸಾವಿರ ಮಾತ್ರ ಆದಾಯ ಎಂದು ಪತ್ರ ಕೊಡುವುದು ಹೇಗೆ ಎಂದು ಸಮಸ್ಯೆ ವಿವರಿಸಿದ್ದು ಗ್ರಾಮಕರಣಿಕರು.
ನೋಡೆಲ್ ಅಧಿಕಾರಿ ಎನ್.ಎಸ್.ಅಂಗಡಿ, ತಾ.ಪಂ.ಸದಸ್ಯೆ ಬೇಬಿ ಕೋಟ್ಯಾನ್, ಪಶು ಇಲಾಖೆಯ ಸತ್ಯಶಂಕರ್, ತೋಟಗಾರಿಕೆಯ ನಾರಾಯಣಾಚಾರ್, ಇಂಜಿನಿಯರ್ ಪ್ರಶಾಂತ್ ಆಳ್ವ ಮತ್ತಿತರರಿದ್ದರು.

Comments

comments

Leave a Reply

Read previous post:
ಪದ್ಮನೂರು ಶಾಲೆಯಲ್ಲಿ ಶಾಲಾ ಪರಿಕರಗಳ ವಿತರಣೆ

Photo by Suresh Padmanoor ಕಿನ್ನಿಗೋಳಿ  : ಉದ್ಯಮಿ ಪ್ರಥ್ವಿರಾಜ್ ಆಚಾರ್ಯ ದಂಪತಿಯರು ಪದ್ಮನೂರು ಜಿಲ್ಲಾ ಪಂಚಾಯತ್ ಶಾಲೆಯ ಒಂದರಿಂದ ಏಳನೇಯ ತರಗತಿಯ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ...

Close