ಸದಸ್ಯರ ರಂಪಾಟ; ಕೆಮ್ರಾಲ್ ಗ್ರಾಮ ಸಭೆ ರದ್ದು

News by Narendra Kerekadu Photo By: Raghunath Kamath

ಕೆಮ್ರಾಲ್: ರಸ್ತೆ ಕಾಮಗಾರಿಯೊಂದರ ಬಗ್ಗೆ ವಾದ ವಿವಾದ ಉಂಟಾಗಿ ಇಬ್ಬರು ಪಂಚಾಯತ್ ಸದಸ್ಯರು ಅದನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ರಂಪಾಟ, ತಳ್ಳಾಟ ನಡೆದು ಕೊನೆಗೆ ಘರ್ಷಣೆ ಹಂತಕ್ಕೆ ಬಂದು ಗ್ರಾಮ ಸಭೆಯೇ  ರದ್ದಾಗಿದೆ. ಇಂದು (ಶುಕ್ರವಾರ) ಮುಲ್ಕಿ ಹೋಬಳಿಯ ಕೆಮ್ರಾಲ್ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಕೂಸುರವರ ಅಧ್ಯಕ್ಷತೆಯಲ್ಲಿ ಸುಮಾರು 200ಕ್ಕೂ ಮಿಕ್ಕಿ ಗ್ರಾಮಸ್ಥರು ಸೇರಿದ್ದ ಗ್ರಾಮ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ ಮತ್ತಿನ್ನಿತರ ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದರು.

ಇಂಜಿನಿಯರ್ ಪ್ರಶಾಂತ್ ಆಳ್ವಾರವರು ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿದ್ದಾಗ ಗ್ರಾಮಸ್ಥರೊಬ್ಬರು ಹೊಸಕಾವೇರಿ ಬಳಿಯಲ್ಲಿ ನಡೆದ ಮೋರಿ ಕಾಮಗಾರಿಯ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿದರು.
ಇದರ ಬಗ್ಗೆ ಮಾಹಿತಿ ನೀಡಿದ ಸದಸ್ಯ ಮಯ್ಯದ್ದಿ ತಾನು ಮಳೆಯ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎಂದು ತುರ್ತಾಗಿ ಮುರಿದು ಬಿದ್ದ ಮೋರಿಯನ್ನು ಜೇಸಿಬಿ ಮೂಲಕ ರಿಪೇರಿ ಮಾಡಿಸಿ ಜನರಿಗಾಗಿ ಕೆಲಸ ಮಾಡಿಸಿದ್ದಲ್ಲದೇ, ಇದರಿಂದ ಯಾವುದೇ ಗ್ರಾಮಸ್ಥರಿಗೆ ತೊಂದರೆ ಆಗಿಲ್ಲ ಆದರೆ ಸದಸ್ಯರೊಬ್ಬರು ತನ್ನ ಮೇಲೆ ವಯುಕ್ತಿಕವಾಗಿ ಠಾಣೆಯಲ್ಲಿ ದೂರು ದಾಖಲಿಸಿದ್ದು ಸರಿಯೇ ಎಂದು ಪ್ರಶ್ನಿಸಿ ಗ್ರಾಮಸ್ಥರಿಗೆ ಇದರಿಂದ ತೊಂದರೆಯಾಗಿದೆ ಎಂದಾದಲ್ಲಿ ಕೂಡಲೆ ಸದಸ್ಯತನಕ್ಕೆ ರಾಜಿನಾಮೆ ನೀಡುವೆ ಎಂದು ಸವಾಲು ಎಸೆದು ಕಾಮಗಾರಿಯನ್ನು ಸಮರ್ಥಿಸಿಕೊಂಡರು.
ಇದಕ್ಕೆ ಉತ್ತರವಾಗಿ ಸದಸ್ಯ ಸುಧಾಕರ ಶೆಟ್ಟಿ ಮಾತನಾಡಿ ಮೋರಿ ರಿಪೇರಿಯಾಗಲಿ, ರಸ್ತೆ ರಿಪೇರಿಯಾಗಲಿ ಅಲ್ಲಿ ನಡೆಸುವಾಗ ನ್ಯಾಯಾಲಯದಲ್ಲಿ ತಕರಾರಿದ್ದ ಜಮೀನನ್ನು ಜೇಸಿಬಿ ಮೂಲಕ ಅಗಲಗೊಳಿಸಿದ್ದಾರೆ, ಕಾಮಗಾರಿ ನಡೆಸಿದರೆ ಪಂಚಾಯತ್‌ನಲ್ಲಿ ಮೊದಲು ನಿರ್ಣಯ ಆಗಿದೆಯೇ ಎಂದು ಮರು ಪ್ರಶ್ನಿಸಿದಾಗ ಮಯ್ಯದ್ದಿಯವರು ವೇದಿಕೆ ಬಂದು ಮೈಕ್‌ನಲ್ಲಿ ಕಾಮಗಾರಿಯನ್ನು ಮತ್ತಷ್ಟು ಸಮರ್ಥಸಿಕೊಂಡು ಸದಸ್ಯರ ಬಗ್ಗೆ ವಯುಕ್ತಿಕ ನಿಂದನೆಗೆ ಪ್ರಾರಂಭಿಸಿದಾಗ ತಕ್ಷಣ ಸುಧಾಕರ ಶೆಟ್ಟಿ ವೇದಿಕೆಗೆ ಬಂದು ಮೈಕನ್ನು ಸೆಳೆದರು ಈ ಸಂದರ್ಭದಲ್ಲಿ ಇಬ್ಬರ ಬೆಂಬಲಿಗರು ವೇದಿಕೆಗೆ ಬಂದು ಕೈ ಕೈ ಮಿಲಾಯಿಸಲು ಪ್ರಾರಂಭಿಸಿದಾಗ ಗೊಂದಲದ ವಾತಾವರಣ ಉಂಟಾಯಿತು.
ಈ ನಡುವೆ ಮುಲ್ಲಡ್ಕ ಪರಿಸರದ ನಿವಾಸಿಗಳು ಸಹ ವೇದಿಕೆಗೆ ಬಂದು ಸದಸ್ಯರ ವಿರುದ್ಧ ರಂಪಾಟ ನಡೆಸಿದಾಗ ಸ್ಥಳದಲ್ಲಿದ್ದ ಇಬ್ಬರೇ ಪೊಲೀಸರು ಅವರನ್ನು ಹದ್ದು ಬಸ್ತಿನಲ್ಲಿಡಲು ಒದ್ದಾಡಿದರು, ಕೊನೆಗೆ ಇತರ ಸದಸ್ಯರು ಬಂದು ಎಲ್ಲರನ್ನು ಸಮಾಧಾನಿಸುವಾಗ ಮಹಿಳೆಯರೇ ಹೆಚ್ಚಿದ್ದ ಸಭೆಯಲ್ಲಿ ಅವರು ಗಲಾಟೆ ನಡೆಯುವ ಸಂಭವ ಇದೆ ಎಂದು ಪಂಚಾಯತ್‌ನ್ನು ಶಪಿಸುತ್ತಾ ಸಭಾಂಗಣದಿಂದ ಹೊರ ನಡೆದರು, ಕೆಲವು ಕಿಡಿಗೇಡಿಗಳು ಕುಳಿತಿದ್ದ ಚೇಯರ್‌ಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರು ನಂತರ ಹೆಚ್ಚುವರಿ ಪೊಲೀಸರು ಬಂದು ಸಭೆಯನ್ನು ನಿಯಂತ್ರಣದಕ್ಕೆ ತಂದಾಗ ಎಲ್ಲರಿಗೂ ಸಭೆ ರದ್ದಾಗುವ ಮುನ್ಸೂಚನೆ ದೊರತಿತ್ತು.
ಕೊನೆಗೆ ಸಭೆಯ ನೋಡೆಲ್ ಅಧಿಕಾರಿಯಾಗಿದ್ದ ಅಕ್ಷರ ದಾಸೋಹದ ಸಹಾಯಕ ನಿರ್ಧೇಶಕ ಜೇಮ್ಸ್ ಕುಟಿನ್ಹಾರವರು ಗ್ರಾಮ ಸಭೆಯನ್ನು ಮುಂದಿನ ಸೂಕ್ತ ದಿನದಲ್ಲಿ ನಡೆಸಬೇಕು ಎಂದು ಹಾಲಿ ಸಭೆಯನ್ನು ರದ್ದುಗೊಳಿಸಲು ಆದೇಶಿಸಿದರು.
ಸಭೆಯ ಆರಂಭದಲ್ಲಿಯೇ ಅರಣ್ಯ, ಮೆಸ್ಕಾಂ, ಆಹಾರ ಇಲಾಖೆಯ ಅಧಿಕಾರಿಗಳು ಬಂದಿಲ್ಲ ಎಂದು ವಿನೋದ್ ಬೊಳ್ಳೂರು ಪ್ರಶ್ನಿಸಿದಾಗ 31 ಇಲಾಖೆಯ ಅಧಿಕಾರಿಗಳಿಗೆ ಸಭೆಯ ಬಗ್ಗೆ ತಿಳಿಸಿದ್ದೇವೆ ಎಂದು ಉತ್ತರ ಬಂದಿತು, ಮುಲ್ಲಕಾಡು ಸ್ಮಶಾನದಲ್ಲಿ ವಿದ್ಯುತ್ ಇಲ್ಲ, ಅಲ್ಲಿನ ರಸ್ತೆ ಸರಿಯಿಲ್ಲ, ದಾರಿ ದೀಪ ಇಲ್ಲ, ಮೋರಿ ಇಲ್ಲದೇ ಮಳೆ ನೀರು ಮಣ್ಣಿನ ರಸ್ತೆಯನ್ನು ಹಾಳು ಮಾಡುತ್ತಿದೆ ಎಂದು ದಯಾನಂದ ದೂರಿಕೊಂಡಾಗ ಅವರಿಗೆ ಅಲ್ಲಿನ ಅನೇಕ ಗ್ರಾಮಸ್ಥರು ಬೆಂಬಲಿಸಿದಾಗ ಪಂಚಾಯತ್ ಸದಸ್ಯರು, ಅಧಿಕಾರಿಗಳು ನೀವು ಗ್ರಾಮಸ್ಥರೇ ಅಲ್ಲವಲ್ಲ ಎಂದು ಹೇಳಿಕೆ ಕೊಟ್ಟಾಗ ಆಕ್ಷೇಪ ವ್ಯಕ್ತವಾಯಿತು.
ಕಳೆದ ಏಳು ವರ್ಷದಿಂದ ಅತ್ತೂರು ರಸ್ತೆಯನ್ನು ರಿಪೇರಿ ಮಾಡಿ ಡಾಮರು ಹಾಕಿ ಎಂದರು ಸದಸ್ಯರು ಗಮನ ಹರಿಸಿಲ್ಲ ರಿಕ್ಷಾ ಚಾಲಕರು ಅಲ್ಲಿಗೆ ಬರುವುದಿಲ್ಲ ಎನ್ನುತ್ತಾರೆ, ನಮ್ಮ ಮನವಿಗೆ ಬೆಲೆಯಿಲ್ಲವೆ ಎಂದು ದೇವಿದಾಸ್ ದೂರಿಕೊಂಡರು. ಕಾಫಿಕಾಡಿನಲ್ಲಿ, ಮೋರಿ ಕಳಪೆಯಾಗಿದೆ, ಸುರಗಿರಿ ರಸ್ತೆ, ಆರೋಗ್ಯ ಕೇಂದ್ರದ ರಸ್ತೆ, ಪಂಜದ ರಸ್ತೆ, ಹೊಸಕಾಡು ರಸ್ತೆ ಕೆಟ್ಟಿದ್ದು ರಿಪೇರಿ ಆಗಿಲ್ಲ ಎಂದು ಗ್ರಾಮಸ್ಥರು ದೂರಿದರು,
ತೋಟಗಾರಿಕೆಯ ನಾರಾಯಣಾಚಾರಿ, ಕೃಷಿಯ ಬಾಲಕೃಷ್ಣ, ಕಂದಾಯದ ಲೋಕೇಶ್, ಆರೋಗ್ಯ ಇಲಾಖೆ ಜೆಸಿಂತಾ ಲೋಬೋ, ಇಂಜನಿಯರ್ ಪ್ರಶಾಂತ್ ಆಳ್ವಾ, ತಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶೋಭಾ, ಕಾರ್ಯದರ್ಶಿ ಗಣೇಶ್, ಉಪಾಧ್ಯಕ್ಷ ರಿಚರ್ಡ್ ಡಿಸೋಜಾ, ಸದಸ್ಯರಾದ ಕೆ.ಎ.ಖಾದರ್, ತಾಲ್ಲೂಕು ಪಂಚಾಯತ್ ಸದಸ್ಯೆ ಬೇಬಿ ಸುಂದರ ಕೋಟ್ಯಾನ್ ಸಭೆಯಲ್ಲಿ ಹಾಜರಿದ್ದರು.
ಕೊನೆಗೆ ಸಭೆ ರದ್ದಾದ ನಂತರ ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲು, ಕ್ಷೇತ್ರದ ಬಿಜೆಪಿ ಅಧ್ಯಕ್ಷೆ ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ತಾಲ್ಲೂಕು ಪಂಚಾಯತ್ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಇತರರು ಆಗಮಿಸಿ ಸಭೆಯ ಬಗ್ಗೆ ಸದಸ್ಯರು ಮತ್ತು ಅಧಿಕಾರಿ ಹಾಗೂ ಗ್ರಾಮಸ್ಥರಲ್ಲಿ ಮಾಹಿತಿ ಪಡೆದು, ಮುಂದಿನ ಗ್ರಾಮ ಸಭೆಯಲ್ಲಿ ಯಾವುದೇ ಕಾರಣಕ್ಕೂ ಸದಸ್ಯರು ಪ್ರಶ್ನೆಯನ್ನು ಕೇಳಬಾರದು ಹಾಗೂ ವೈಯಕ್ತಿಕ ಸಮಸ್ಯೆಗೆ ಆಸ್ಪದ ನೀಡಬಾರದು, ಗ್ರಾಮಸ್ಥರ ಪ್ರಶ್ನೆಗಳಿಗೆ ಆ ವಾರ್ಡ್‌ನ ಸದಸ್ಯರು ಮಾತ್ರ ಉತ್ತರಿಸುವ ಸಂಪ್ರದಾಯ ಬೆಳೆಸಿಕೊಳ್ಳಿರಿ ಹಾಗೂ ಗ್ರಾಮಸ್ಥರು ಮಾತನಾಡುವ ಹಕ್ಕು ಗ್ರಾಮ ಸಭೆಯಲ್ಲಿ ಮಾತ್ರ ಇದ್ದು ಈ ಬಗ್ಗೆ ಜಾಗೃತರಾಗಬೇಕು ಎಂದು ಈಶ್ವರ ಕಟೀಲು ಸಭೆಯಲ್ಲಿ ಉಳಿದಿದ್ದ ಇತರ ಗ್ರಾಮಸ್ಥರಿಗೆ ಸಲಹೆ ನೀಡಿದರು.

ರಾಜಕೀಯ ಸಂಘರ್ಷ….

ಇದೇ ಕೆಮ್ರಾಲ್ ಗ್ರಾಮ ಸಭೆಯಲ್ಲಿ ಕಳೆದ ಏಳು ವರ್ಷದ ಹಿಂದೆ ರಾಜಕೀಯ ಪಕ್ಷಗಳ ಹೊಯ್ದಾಟದಿಂದ ಗಲಭೆ ಉಂಟಾಗಿ ಕೊನೆಗೆ ಅಂದಿನ ಕಾರ್ಯದರ್ಶಿ ಸುರೇಶ್ ಎಂಬುವವರು ಸದಸ್ಯರ ಮತ್ತು ವರದಿಗೆಂದು ಬಂದಿದ್ದ ಪತ್ರಕರ್ತರ ಮೇಲೆಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಅದು ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ, ನಂತರ ಗ್ರಾಮ ಸಭೆಯು ಮೀಸಲು ಪೋಲಿಸ್ ಪಡೆಯ ಸುಪರ್ದಿಯಲ್ಲಿ ಬಂದ್ ಕೋಣೆಯಲ್ಲಿ ನಡೆಯಿತಲ್ಲದೇ ಪತ್ರಕರ್ತರು ಕಿಟಕಿಯ ಬಾಗಿಲಲ್ಲಿ ನಿಂತು ವರದಿಯನ್ನು ಮಾಡಿದ್ದರು. ನಂತರ ಪಕ್ಷಿಕೆರೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ರಾಜಕೀಯ ಮೇಲಾಟಕ್ಕೆ ಗ್ರಾಮ ಸಭೆಯೇ ಮೂಲ ಕಾರಣವಾಗಿತ್ತನ್ನು ನೆನಪಿಸಬಹುದು.

Comments

comments

Leave a Reply

Read previous post:
ಬಳಕುಂಜೆಯಲ್ಲಿ ಧಾರ್ಮಿಕ ಸಭೆ

Photo By: Ramesh Ulepady ಬಳಕುಂಜೆ: ಬಳಕುಂಜೆಯ  ಶ್ರೀ ವಿಠೋಬ ರಖುಮಾಯಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವಾಂಗ ಧಾರ್ಮಿಕ ಸಭೆ ಶುಕ್ರವಾರ ನಡೆಯಿತು. ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ...

Close