ಕೆಸರುಗದ್ದೆ ಓಟ

ಪರಶುರಾಮ ಸೃಷ್ಟಿಯೆಂದೇ ಜನಜನಿತವಾದ ನಮ್ಮ ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗಳಿಂದಾಗಿ ಕೃಷಿ ಅತ್ಯಂತ ತ್ವರಿತವಾಗಿ ನಶಿಸುತ್ತಿದೆ. ಮೂರು ಬೆಳೆ ಬೆಳೆಯುತ್ತಿದ್ದ ಗದ್ದೆಗಳು ಮನೆಗಳಾಗಿ ಪ್ಲಾಟುಗಳಾಗಿ ಬದಲಾವಣೆಗೊಳ್ಳುತ್ತಿವೆ. ಗದ್ದೆಗಳನ್ನು ಮಣ್ಣು ತುಂಬಿಸಿ ಮನೆ ಸೈಟು ನಿರ್ಮಿಸಲಾಗುತ್ತಿದೆ. ಎಲ್ಲಿ ನೋಡಿದರೂ ಗಗನ ಚುಂಬಿ ಕಟ್ಟಡಗಳು ತಲೆಯೆತ್ತುತ್ತಿವೆ. ಭತ್ತ, ಗೇರು, ತೆಂಗು, ಅಡಿಕೆ ಕೃಷಿಗೆ ಹೆಸರುವಾಸಿಯಾಗಿದ್ದ ಈ ನಮ್ಮ ಕರಾವಳಿ ಈಗ ಕಾಂಕ್ರೀಟು ಕಾಡುಗಳಾಗಿ ಪರಿವರ್ತನೆಗೊಳ್ಳುತ್ತಿವೆ. ನಮ್ಮ ಸಂಸ್ಕೃತಿ ನಾಶವಾಗುತ್ತಿದೆ.

ಟಿವಿ, ಮೊಬೈಲ್, ಕಂಪ್ಯೂಟರ್ ಗಳಿಂದಾಗಿ ಗ್ರಾಮೀಣ ಸಂಸ್ಕೃತಿಯ ಸೊಗಡು ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಲೀನವಾಗುತ್ತಿದೆ. ಈ ಕಾರಣದಿಂದಲೇ ಯುವಜನರನ್ನು ಮತ್ತೆ ಹಳ್ಳಿಯ ಮೂಲ ಸಂಸ್ಕೃತಿ ಪರಿಚಯಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಂಥವುಗಳ ಪೈಕಿ ಇತ್ತೀಚಿನ ಮಳೆಗಾಲದ ದಿನಗಳಲ್ಲಿ ಕೆಸರುಗದ್ದೆ ಓಟ, ಆಟೋಟಗಳು ಕರಾವಳಿಯ ಅನೇಕ ಕಡೆಗಳಲ್ಲಿ “ಮಳೆಗಾಲದ ಸ್ಪೆಷಲ್ ” ಎಂದೇ ಜನಪ್ರಿಯವಾಗುತ್ತಿವೆ.
ಹಿಂದಿನ ಕಾಲದಲ್ಲಿ ಮಳೆ ಎಂದರೆ ಜನ ಭಯಪಡುತ್ತಿದ್ದರು. ಯುಗಾದಿ ಹಬ್ಬ ಕಳೆಯುತ್ತಿದ್ದಂತೆಯೇ ಪ್ರಾರಂಭವಾಗುತ್ತಿದ್ದ ಮಳೆ ದೀಪಾವಳಿ ತನಕವೂ ಸುರಿಯುತ್ತಿತ್ತು. ಆಗ ಈಗಿನಂತೆ ವಾಣಿಜ್ಯ ಬೆಳೆಗಳ ಭರಾಟೆಯೂ ಇರಲಿಲ್ಲ. ಭತ್ತದ ಬೆಳೆಯೇ ಜೀವನಾಧಾರವಾಗಿತ್ತು. ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಭತ್ತದ ಕೃಷಿಯನ್ನು ಮಾಡುತ್ತಿದ್ದರು. ಹೀಗಾಗಿ ಜೂನ್ ತಿಂಗಳ ಪ್ರಾರಂಭದಲ್ಲಿ ರೈತರು ನೇಗಿಲು ಹಿಡಿದು ಗದ್ದೆಗಿಳಿದರೆ ನಾಟಿ ಕೆಲಸ ಮುಗಿಸಿ ಈಚೆಗೆ ಬರುವ ವೇಳೆಗೆ ತಿಂಗಳುಗಳೇ ಕಳೆದು ಹೋಗುತ್ತಿತ್ತು. ಈ ಸಂದರ್ಭ ಪೇಟೆ, ಪಟ್ಟಣದ ರಂಗು ರಂಗಿನ ಬದುಕಾಗಲೀ, ಮನೋರಂಜನೆಯಾಗಲೀ ಅವರಿಗೆ ದೊರೆಯುತ್ತಿರಲಿಲ್ಲ. ಆದರೂ ಬಿಡುವಿಲ್ಲದ ಕೆಲಸದ ನಡುವೆಯೂ ಒಂದಷ್ಟು ಮನೋರಂಜನೆಗಾಗಿ ಕೆಸರುಗದ್ದೆ ಓಟವನ್ನು ಏರ್ಪಡಿಸುತ್ತಿದ್ದರು.

ಗದ್ದೆಯ ಕೆಸರು ಹೇಗಿರುತ್ತದೆ ಎನ್ನುವುದೇ ಈಗ ಪಟ್ಟಣಗಳ ಮಕ್ಕಳಿಗೆ ಗೊತ್ತಿರುವುದಿಲ್ಲ. ಭತ್ತ ಬೆಳೆಯುವ ಗದ್ದೆ, ತುಂತುರು ಮಳೆ, ಅದೂ ಕೆಸರಲ್ಲಿ ಕುಣಿಯುವುದೆಂದರೆ ಒಂಥರಾ ಖುಷಿ, ಮಕ್ಕಳಿಗೆ ನಿಜಕ್ಕೂ ಸಂಭ್ರಮ. . ಉಳುಮೆಯಿಂದ ಹಸನಾದ ಕೆಸರಿನ ಗದ್ದೆಯಲ್ಲಿ ಕ್ರೀಡೆಯ ಸಡಗರ, ಕೆಸರಿನಲ್ಲಿ ಕಾಲೂರ ಲಾರದೇ ಚಿಮ್ಮಿ ಬಂದ ಚೆಂಡನ್ನು ಒದ್ದು ಬಿದ್ದು ಗೆಲುವಿಗಾಗಿ ಸೆಣೆಸಾಟ, ಕ್ರೀಡಾ ಪ್ರೇಮಿಗಳ ಚಪ್ಪಾಳೆಯ ಪ್ರೋತ್ಸಾಹ. ಲೇ..ಲೇ..ಐಸಾ..ಎಂದು ಬಲಿಷ್ಠ ತಂಡಗಳು ಕೆಸರಿನಲ್ಲಿ ಕಾಲೂರಿ ಬಿಗಿಪಟ್ಟು ಹಿಡಿದರೆ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆಯೊಂದಿಗೆ ಪ್ರೋತ್ಸಾಹಿಸುವ ಪರಿ.. ಪ್ರಾಚಿನ ವಾದಿಕೆಗಳಾದ ಕಂಬಳಗಳು ಈಗ ನೋಡಲು ಅಪರೂಪವಾಗುತ್ತಿರುವ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ಬರೀ ರಾಜಕೀಯ ದೊಂಬರಾಟಗಳನ್ನು ನೋಡಿ ರೋಸಿ ಹೋಗಿರುವ ಮಂದಿ ತಮ್ಮೆಲ್ಲಾ ಜಂಜಾಟವನ್ನು ಮರೆತು ನಿಸರ್ಗದ ರಮಣೀಯ ತಾಣದಲ್ಲಿ ಒಂದಷ್ಟು ಹೊತ್ತು ಖುಷಿಯಾಗಿ ಕಾಲಕಳೆಯುವ ಕೆಸರುಗದ್ದೆ ಕ್ರೀಡಾಕೂಟಗಳು ಮಳೆಗಾಲದಲ್ಲಿ ನಡೆಯುತ್ತದೆ. ಸುರಿಯುವ ಮಳೆಯಲ್ಲಿ ಕೊರೆಯುವ ಚಳಿಯಲ್ಲಿ ನೀರು ತುಂಬಿದ ಕೆಸರು ಗದ್ದೆಯಲ್ಲಿ ನಡೆಯುವ ವಿವಿಧ ಕ್ರೀಡಾಕೂಟಗಳು, ಯಾವುದೇ ಗ್ಯಾಲರಿಗಳಿಲ್ಲದೆ ಗದ್ದೆ ಏರಿಯಲ್ಲೇ ನಿಂತು ವೀಕ್ಷಿಸುವ ಪ್ರೇಕ್ಷಕರು.

ಬೇಸಿಗೆಯಲ್ಲಿ ಕ್ರಿಕೆಟ್, ಫುಟ್ಭಾಲ್, ವಾಲಿಬಾಲ್ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಶೌರ್ಯ ಮೆರೆದ ಯುವಜನರು, ಮಳೆಗಾಲದಲ್ಲಿ ಕೈ ಕಟ್ಟಿ ಕೂರದೆ ಕೆಸರು ಗದ್ದೆಯನ್ನೇ ಮೈದಾನವನ್ನಾಗಿಸಿಕೊಂಡು ಅಲ್ಲಿ ಕ್ರೀಡೆಗಳನ್ನು ನಡೆಸಿ ಆನಂದಿಸುತ್ತಿರುವುದು ಇತ್ತೀಚೆಗಿನ ವರ್ಷಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

Comments

comments

Leave a Reply

Read previous post:
ಕಡಂದಲೆಯಲ್ಲಿ ಗ್ರಾಮೀಣ ಕ್ರೀಡೋತ್ಸವ

Photo By: Sharath Shetty ಕಡಂದಲೆ: ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸಿದಾಗ ಗ್ರಾಮೀಣ ಬದುಕನ್ನು ಉಳಿಸಿದ್ದಂತೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಪಿ....

Close