ಕಳಪೆ ಕಾಮಗಾರಿಯಿಂದ ಕುಸಿಯಲಿರುವ ಮಾಡ್ರ ಗುತ್ತು ಕೆರೆದಂಡೆ

Photo by Bhagyavan Sanil

ಮುಲ್ಕಿ : ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಶಿಮಂತೂರು ಮಾಡ್ರಗುತ್ತು ಕೆರೆ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದ್ದು ಮುಂಬರುವ ಮಳೆಗಾಲದಲ್ಲಿ ಕೆರೆ ತುಂಬಿದರೆ ನೂತನವಾಗಿ ಕಟ್ಟಲಾದ ಕಟ್ಟೆ ಕುಸಿದು ಪ್ರಾಣ ಹಾನಿಯಾಗುವುದು ಖಂಡಿತ ಎಂದು ಕಿಲ್ಪಾಡಿ ಪಂಚಾಯತ್ ಸದಸ್ಯ ಹಾಗೂ ಮಾಡ್ರ ಗುತ್ತು ಕುಟುಂಬದ ಮುಖ್ಯಸ್ಥರಾದ ಶಿಮಂತೂರು ಸಂಜೀವ ಶೆಟ್ಟಿ ಹೇಳಿದ್ದಾರೆ,

ಇತಿಹಾಸವುಳ್ಳ ಈ ಕೆರೆಯು 3.30 ಎಕರೆ ವಿಸ್ತೀರ್ಣವನ್ನು ಹೊಂದಿದ್ದು ನೂರಾರು ಎಕರೆ ಜಮೀನಿನಲ್ಲಿ ಬತ್ತ ಮತ್ತು ಇತರ ಕೃಷಿ ಕಾರ್ಯಗಳಿಗೆ ನೀರುಣಿಸುತ್ತಾ ಬಂದಿದೆ ಹಿಂದಿನಿಂದಲೂ ಸ್ಥಳಿಯರು ಈ ಕೆರೆಗೆ ಕಟ್ಟೆ ಕಟ್ಟುವ ಮೂಲಕ ನೀರನ್ನು ಶೇಖರಿಸಿ ಅಂತರ್ಜಲ ವೃದ್ಧಿ ಮತ್ತು ಕೃಷಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಕೆರೆ ಅಭಿವೃದ್ಧಿ ಯೋಜನೆಯ ಅನುಸಾರ ಶಾಸಕ ಅಭಯಚಂದ್ರ ಜೈನ್ ರವರ ತಮ್ಮ ವ್ಯಾಪ್ತಿಯಲ್ಲಿ ಬರುವ 5 ಕೆರೆಗಳಾದ ಮಾಡ್ರಗುತ್ತು, ಕೆಂಚನಕೆರೆ, ಕಕ್ವ  ಮಡಿವಾಳ ಕೆರೆ, ಕವತ್ತಾರು ಕೆರೆಗಳಿಗೆ ತಲಾ 20 ಲಕ್ಷರೂ ಮತ್ತು ಬಳಕುಂಜ ಕೆರೆಗೆ 25 ಲಕ್ಷರೂ ಅನುದಾನದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ.
20 ಲಕ್ಷರೂ ಅನುದಾನದಲ್ಲಿ ಮಾಡ್ರಗುತ್ತು ಕೆರೆ ಕಾಮಗಾರಿ ಪ್ರಾರಂಭಿಸುವ ಮೊದಲು ಸ್ಥಳೀಯ ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯ ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಅಲ್ಲಿನ ವಿಷಯ ತಿಳಿಯದೆ ಗ್ರಾಮ ಪಂಚಾಯತ್ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಇಂಜಿನಿಯರ್ ಸೇರಿಕೊಂಡು ತಮಗೆ ಬೇಕಾದ ಗುತ್ತಿಗೆ ದಾರರಿಗೆ ಗುಪ್ತವಾಗಿ ಕಾಮಗಾರಿ ಸಿಗುವಂತೆ ಮಾಡಿದ ಪರಿಣಾಮ ಕಳಪೆ ಕಾಮಗಾರಿಯಿಂದ ಈಗಾಗಲೇ ಕೆರೆಕಟ್ಟೆಯು ಕುಸಿದು ಅದಕ್ಕೆ ತೇಪೆಹಾಕುವ ಕಾರ್ಯ ಪ್ರಾರಂಭವಾಗಿದೆ. ಕೆಲವು ಕಡೆ ಬಿರುಕುಗಳು ಇನ್ನೂ ಕಂಡುಬಂದಿದೆ. ನೀರು ಹೊರಹೋಗಲು ಅವರು ಹಾಕಿದ ಪೈಪು ಕಿತ್ತುಹೋಗಿದ್ದು ಬದಲಿಗೆ ಹಿಂದೆ ಸ್ಥಳೀಯರು ಬಳಸುತ್ತಿದ್ದ ಪೈಪ್ ಅಳವಡಿಸಿದ್ದಾರೆ. ಕೆರೆಯನ್ನು ಆಳ ಮಾಡದೆ ದಂಡೆಯನ್ನು ಕೆರೆದು ಅಗೆದಂತೆ ಮಾಡಿ ವಂಚಿಸುತ್ತಿದ್ದಾರೆ. ಈಬಗ್ಗೆ ಪಂಚಾಯತ್ ಅಧ್ಯಕ್ಷರು ಮತ್ತು ಇಂಜಿನಿಯರ್‌ರವರನ್ನು ಕೇಳಿಕೊಂಡರೂ ಅವರು ಕೇಳದಂತೆ ವರ್ತಿಸಿ ತರಾತುರಿಯಲ್ಲಿ ಕಾಮಗಾರಿ ಮುಗಿಸಿ ಕೈತೊಳೆದುಕೊಳ್ಳುವ ಲಕ್ಷಣ ಕಾಣುತ್ತಿದೆ ಎಂದು ಸಂಜೀವ ಶೆಟ್ಟಿಯವರು ತಿಳಿಸಿದ್ದಾರೆ. ರಸ್ತೆ ನಿರ್ಮಾಣದಲ್ಲೂ ಕಳಪೆಯಾಗಿದ್ದು ರಸ್ತೆಗೆ ಹಾಕಲಾದ ಮಣ್ಣು ಮಳೆ ನೀರಿನೊಂದಿಗೆ ಕೆರೆ ಸೇರುತ್ತಿದ್ದು ಒಟ್ಟಾರೆ ಹೆಚ್ಚಿನ ಸಮಸ್ಯೆಯಾಗಿದೆ ಈ ಬಗ್ಗೆ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ತಕ್ಷಣ ಸ್ಪಂದಿಸದಿದ್ದರೆ ಮನೆ ಮತ್ತು ಪ್ರಾಣಹಾನಿ ಆಗಬಹುದು ಎಂದಿದ್ದಾರೆ.

Comments

comments

Leave a Reply

Read previous post:
ಮುಲ್ಕಿ ವ್ಯಾಸ ಮಹರ್ಷಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನೆ

Photo by Bhagyavan Sanil ಮುಲ್ಕಿ: ಜೀವನದಲ್ಲಿ ಉತ್ತಮ ಗುರಿಯನ್ನು ಹೊಂದಿ ಅದರ ಪರಿಪೂರ್ಣತೆಗಾಗಿ ನಾಯಕತ್ವದ ಗುಣಗಳನ್ನು ಬೆಳೆಸಿ ಶಿಸ್ತಿಗೆ ಪ್ರಾಮುಖ್ಯತೆ ನೀಡುವ ಮೂಲಕ ಉತ್ತಮ ಪ್ರಜೆಗಳಾಗಿ...

Close