ಇಲಾಖಾ ಮಾಹಿತಿ ಕೇಳಲು ಗ್ರಾಮಸ್ಥರೇ ಇಲ್ಲ

Mithuna Kodethoor
ಕಿನ್ನಿಗೋಳಿ : ರೈತರಿಗೆ ಸಾಲ ಕೊಡಿ, ಕೊಟ್ಟ ಮೇಲೆ ಮನ್ನಾ ಮಾಡಿ, ರೈತರಿಗೆ ಸವಲತ್ತು ಕೊಡಿ, ರೈತರಿಗೆ ಯಾವ ಯಾವ ಯೋಜನೆಗಳಿವೆ, ಗಿಡ ಯಾವಾಗ ಬರುತ್ತದೆ ಅಂತ ಎಲ್ಲರೂ ಪ್ರತಿಭಟಿಸುತ್ತಾರೆ, ಒತ್ತಾಯಿಸುತ್ತಾರೆ. ಆದರೆ ಇಲ್ಲಿ ಕೃಷಿ, ತೋಟಗಾರಿಕೆ ಇಲಾಖೆಯ ಮಾಹಿತಿಗಳನ್ನು ನೀಡಲು ನಾವು ಬಂದರೆ ಕೇಳಲು ಗ್ರಾಮಸ್ಥರೇ ಇಲ್ಲ ಇದು ಬುಧವಾರ ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಗ್ರಾಮ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಅಧಿಕಾರಿ ನಾರಾಯಣಾಚಾರಿ ಬೆರಳೆಣಿಕೆಯ ಸಂಖ್ಯೆಯಲ್ಲಿದ್ದ ಗ್ರಾಮಸ್ಥರನ್ನುದ್ದೇಶಿಸಿ ಕೇಳಿದ ಪ್ರಶ್ನೆ!
ಗ್ರಾಮ ಸಭೆ ಆರಂಭವಾಗುವಾಗ 11 ಗಂಟೆ. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರೂ ಎಲ್ಲರೂ ಪ್ರಶ್ನೆ ಕೇಳುವವರೇ. ಸಮರ್ಪಕವಾಗಿ ಉತ್ತರಿಸಲು ಗ್ರಾ.ಪಂ. ಪಿಡಿಒ, ಅಧ್ಯಕ್ಷ, ಸದಸ್ಯರು ತಡವರಿಸುತ್ತಿದ್ದುದರಿಂದ ಗೊಂದಲದ ಗೂಡಾಯಿತು. ಅನಗತ್ಯ ಚರ್ಚೆಗಳು ಸಮಯ ಹಾಳು ಮಾಡಿದವು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ಕೊಡಲು ಎದ್ದು ನಿಂತಾಗ ಮಧ್ಯಾಹ್ನ ಒಂದೂವರೆ ಗಂಟೆ. ಸಭೆ ಮುಕ್ಕಾಲು ಪಾಲು ಖಾಲಿ.
ಪಂಚಾಯತ್ ಪಕ್ಕ ರಾಜೀವ ಗಾಂಧಿ ಸೇವಾ ಕೇಂದ್ರ ನಿರ್ಮಾಣ ಆಗಿಲ್ಲ ಯಾಕೆ ಎಂಬ ಪ್ರಶ್ನೆಗೆ ಕಾಮಗಾರಿ ಆರಂಭವಾಗಿದೆ, ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂಬ ಭರವಸೆ ಅಧ್ಯಕ್ಷ ದೇವಪ್ರಸಾದರಿಂದ ಸಿಕ್ಕಿತು. ನವನಗರದ ಬಳಿ ರಸ್ತೆಗೆ ಬದಿ ಕಟ್ಟಿದ ಕಾಮಗಾರಿ ಕಳಪೆಯಾಗಿದೆ, ಕಳೆದ ಮೂರು ವರುಷಗಳಿಂದ ಮನವಿ ಕೊಟ್ಟರೂ ನೀರಿನ ಸಂಪರ್ಕ ಕೊಡದ ಪಂಚಾಯತ್ ಮೊನ್ನೆ ಮೊನ್ನೆ ಆರಂಭವಾದ ಕ್ಯಾಂಟೀನಿಗೆ ನೀರಿನ ಸಂಪರ್ಕ ಕೊಟ್ಟದ್ದು ಹೇಗೆ ಎಂಬ ವಿಲಿಯಂ ಕಾರ್ಡೋಜರ ಪ್ರಶ್ನೆಗೆ ಎಲ್ಲಾ ಸರಿ ಮಾಡುತ್ತೇವೆ ಎಂದರು ಅಧ್ಯಕ್ಷರು. ಗೋಳಿಜೋರದಲ್ಲಿ ಎಸ್‌ಸಿಎಸ್‌ಟಿ ನಾಗರೀಕರಿಗೆ ಗಂಗಾಕಲ್ಯಾಣ ಯೋಜನೆಯಡಿ ನಾಲ್ಕು ಬೋರ್‌ವೆಲ್‌ಗಳಿದ್ದು, ಒಂದು ಕೊಳವೆ ಬಾವಿಗಷ್ಟೇ ಪಂಪು ಇದೆ. ಅಲ್ಲಿನ ಇಪ್ಪತ್ತು ಮನೆಗಳಿಗೆ ನೀರಿನ ಸಮಸ್ಯೆಯಿದೆ ಎಂದು ದೊಡ್ಡ ದನಿಯಲ್ಲಿ ಹೇಳಿದ ಚಂದ್ರಶೇಖರರ ಒತ್ತಾಯಕ್ಕೆ ಅತಿ ಶೀಘ್ರ ಉಳಿದ ಕೊಳವೆಬಾವಿಗಳಿಗೂ ಪಂಪು ಸಂಪರ್ಕ ಕೊಡಿಸಿ ನೀರಿನ ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು. ಮೊನ್ನೆ ತಾನೇ ಸಿಂಡಿಕೇಟ್ ಬ್ಯಾಂಕ್ ನಿಂದ ಚರ್ಚ್ ವರೆಗೆ ರಸ್ತೆ ಅಗಲೀಕರಣ ಮಾಡಿದ ಬಗ್ಗೆ ದೀಪಕ್ ರವರು ಅಧ್ಯಕ್ಷ ದೇವಪ್ರಸಾದ್ ಕ್ರಮವನ್ನು ಶ್ಲಾಘಿಸಿದರು
ಪದ್ಮನೂರು ಗಂಪದ ಮನೆ ರಸ್ತೆ ರಿಪೇರಿ ಮಾಡದೆಯೇ 19 ಸಾವಿರ ರೂ. ಬಿಲ್ಲು ಮಾಡಲಾಗಿದೆ ಎಂಬುದು ವಿಶ್ವನಾಥ ಶೆಟ್ಟರ ಆರೋಪ. ಮಲೇರಿಯಾ ಪ್ರಕರಣ ಹೆಚ್ಚುತ್ತಿರುವುದರಿಂದ ಫಾಗಿಂಗ್ ಮಾಡಿ ಅಂತ ಸದಸ್ಯ ಸಂತಾನ್ ಡಿಸೋಜ ಒತ್ತಾಯಿಸಿದರು. ಆಹಾರ ನಾಗರಿಕ ಪೂರೈಕೆ ಇಲಾಖೆ, ಜಿ.ಪಂ.ಇಂಜಿನಿಯರ್ ಸೇರಿದಂತೆ ಇಲಾಖಾಧಿಕಾರಿಗಳು ಬಂದಿಲ್ಲ ಅಂತ ಗ್ರಾಮಸ್ಥರು ದೂರಿದರು. ಜಿ.ಪಂ.ಸದಸ್ಯೆ ಆಶಾ ಆರ್. ಸುವರ್ಣ, ತಾ.ಪಂ.ಸದಸ್ಯ ರಾಜು ಕುಂದರ್, ಗ್ರಾ.ಪಂ.ಉಪಾಧ್ಯಕ್ಷೆ ಹೇಮಾವತಿ, ಪಿಡಿಒ ನಾರಾಯಣ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಪಾವಂಜೆ ದೇವಾಡಿಗ ಸಂಘದಿಂದ ಧನಸಹಾಯ

ಕಿನ್ನಿಗೋಳಿ : ಹಳೆಯಂಗಡಿ, ದೇವಾಡಿಗ ಸಮಾಜ ಸಂಘ(ರಿ) ಪಾವಂಜೆ ಇದರ ವತಿಯಿಂದ ತೀರಾ ಬಡತನದಲ್ಲಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾದ ಪಡುಪಣಂಬೂರು ಹೊಗೆಗುಡ್ಡೆಯ ನಿವಾಸಿ ದಿ. ಶ್ರೀನಿವಾದಸ ದೇವಾಡಿಗ ಮತ್ತು...

Close