ಜನಪ್ರತಿನಿಧಿಗಳ ನಿರ್ಲಕ್ಷ- ರಸ್ತೆ ನಿರ್ಮಿಸಿದ ಗ್ರಾಮಸ್ಥರು.

ಕಿನ್ನಿಗೋಳಿ : ಜನಪ್ರತಿನಿಧಿಗಳಿಂದ ನಿರ್ಲಕ್ಷಕ್ಕೊಳಗಾಗಿ, ಕಳೆದ ಹತ್ತು ವರ್ಷಗಳಿಂದ ಮುಕ್ತಿ ಕಾಣದ ಏಳಿಂಜೆ ಗ್ರಾಮದ ಪಟ್ಟೆ ಪಿಜಿನ್‌ಜೋರ ಪ್ರದೇಶದ ಪಂಚಾಯಿತಿ ಕಾಲುದಾರಿಯಾಗಿದ್ದ ರಸ್ತೆಯನ್ನು ಏಳಿಂಜೆ ಪಟ್ಟೆ ಗ್ರಾಮಸ್ಥರು ಶ್ರಮದಾನದ ಮೂಲಕ ರಸ್ತೆ ನಿರ್ಮಾಣ ಮಾಡಿದ್ದಾರೆ.
ಏಳಿಂಜೆ ಗ್ರಾಮದ ಪಟ್ಟೆ ಜಾರಂದಾಯ ದೈವಸ್ಥಾನಕ್ಕೆ ಹೋಗುವ ಹತ್ತಿರದ ಕಾಲು ದಾರಿಯಲ್ಲಿ ಸಾಗಿದರೆ ಪಿಜಿನ್‌ಜೋರ ಪ್ರದೇಶವಿದೆ ಇಲ್ಲಿ ಸುಮಾರು 50 ಎಕೆರೆಗಳಷ್ಟು ಕೃಷಿ ಪ್ರಧಾನ ಭೂಮಿಯಿದ್ದು ಹಾಗೂ ಸುಮಾರು 40ರಿಂದ 50 ಕೃಷಿಕರ ಮನೆಗಳಿದ್ದು ಪ್ರತಿಯೊಬ್ಬರೂ ಕಾಲುದಾರಿಯನ್ನು ಆಶ್ರಯಿಸಬೇಕಾಗಿದೆ. ಸುಮಾರು ಒಂದುವರೆ ಕಿಲೋಮೀಟರ್ ದೂರದ ಈ ಕಾಲುದಾರಿ ನಾದುರಸ್ಥಿಯಲ್ಲಿದ್ದು, ಕೃಷಿ ಸಲಕರಣೆ, ಗೊಬ್ಬರ ಹಾಗೂ ಮನೆ ಬಳಕೆಯ ವಸ್ತುಗಳನ್ನು ತಲೆಹೊರೆಯ ಮೂಲಕ ತರುವ ಪರಿಸ್ಥಿತಿ ಇಲ್ಲಿನ ಜನರದ್ದಾಗಿದ್ದು ಯಾರಾದರೂ ಅನಾರೋಗ್ಯಕ್ಕೀಡಾದಲ್ಲಿ ರಿಕ್ಷಾ ಕೂಡಾ ಬರಲಾಗದ ಪರಿಸ್ಥಿತಿಯಲ್ಲಿ ಈ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಹತ್ತು ವರ್ಷಗಳ ಹಿಂದಿನವರೆಗೂ ಪಂಚಾಯಿತಿ ವತಿಯಿಂದ ಕಾಲುದಾರಿ ರಿಪೇರಿಯಾಗುತಿದ್ದು. ಗ್ರಾಮಸ್ಥರಿಗೆ ಸರಿಯಾಗಿ ಸ್ಪಂದನೆ ನೀಡುತಿತ್ತು. ಈಗ ದಿವ್ಯ ನಿರ್ಲಕ್ಷ್ಯ ಹಾಗೂ ಮೌನವೇ ಪಂಚಾಯಿತಿಯ ಉತ್ತರವಾಗಿದೆ.

ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳಿಗೆ ಕಳೆದ 10ವರ್ಷಗಳಿಂದ ಮನವಿಯ ಮಹಾಪೂರವನ್ನೇ ಹರಿಸಿದರೂ ಅವರು ಸ್ಪಂದಿಸದೆ ಇರುವ ಕಾರಣ ಗ್ರಾಮಸ್ಥರು ವಿಶಿಷ್ಟ ರೀತಿಯ “ಪ್ರತಿಭಟನೆಯ ಶ್ರಮದಾನ” ಮಾಡುವ ಮೂಲಕ ಕಾಲುದಾರಿಯನ್ನು ಕಚ್ಚಾ ರಸ್ತೆಯಾಗಿ ನಿರ್ಮಿಸಿದ್ದಾರೆ. ಈ ರಸ್ತೆ ಕುದ್ರಿಪದವು, ಪಟ್ಟೆ ಹಾಗೂ ಐಕಳ ಗ್ರಾಮಸ್ಥರಿಗೆ ಏಳಿಂಜೆ ದೇವಸ್ಥಾನಕ್ಕೆ ಹೋಗುವ ಸಮೀಪದ ರಸ್ತೆಯಾಗಿದೆ.

ಹತ್ತಿರದ ದಾಮಸ್ಕಟ್ಟೆ -ಸುಂಕದ ಕಟ್ಟೆ ದಾರಿಯಲ್ಲಿ 10 ವರ್ಷದ ಮೊದಲು ಸೇತುವೆ ಹಾಗೂ ರಸ್ತೆಯು ಗ್ರಾಮೀಣ ಸಡಕ್ ಯೋಜನೆ ಹಾಗೂ ಜಿಲ್ಲಾ ಪಂಚಾಯಿತಿ ಯೋಜನೆಯಲ್ಲಿ ಅಭಿವೃದ್ಧಿ ಹೊಂದಿತ್ತು. ಆದರೆ ಇತ್ತೀಚಿನ ಐದು ವರ್ಷಗಳಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎರಡು ಕಿಲೋಮೀಟರ್ ಡಾಮಾರು ಕಂಡ ರಸ್ತೆ ಇನ್ನೂ ಕೂಡ ಸುಮಾರು ಒಂದು ಕಿಲೋಮೀಟರ್ ರಸ್ತೆಗೆ ಡಾಮಾರೀಕರಣ ಆಗಬೇಕಾಗಿದೆ. ದಾರಿದೀಪ ಕೂಡ ಇಲ್ಲದೆ ಜನರು ಪರದಾಡುವಂತಾಗಿದೆ. ಇದೂ ಅಭಿವೃದ್ಧಿಗೊಂಡು ಪೂರ್ಣ ಪ್ರಮಾಣದ ರಸ್ತೆಯಾದಲ್ಲಿ ಸುಮಾರು 250ಕ್ಕೂ ಅಧಿಕ ಮನೆಗಳಿಗೆ ಸಹಕಾರಿಯಾಗಲಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲನಿಗೆ ಕೂಡಾ ಸಮೀಪದ ರಸ್ತೆಯಾಗಲಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಎರಡು ರಸ್ತೆಗಳು ಅಭಿವೃದ್ಧಿ ಹೊಂದಿದರೆ ಐಕಳ, ಏಳಿಂಜೆ, ಪಟ್ಟೆ ಕುದ್ರಿಪದವು ಜನರಿಗೆ ಬಹುಪಯೋಗಿ ರಸ್ತೆಯಾಗಲಿದೆ.
ಗ್ರಾಮಸ್ಥರ ಈ ಶ್ರಮದಾನ ಸಾರ್ವಜನಿಕ ಪ್ರಶಂಸ್ಥೆಗೆ ಪಾತ್ರವಾಗಿದೆ, ಜನಪ್ರತಿನಿಧಿಗಳ ಕಣ್ತೆರೆಸಿದ ಶ್ರಮದಾನ ಇತರ ಊರಿಗೂ ಮಾದರಿಯಾಗಿದೆ. ಸರಕಾರ ಮತ್ತು ಇಲಾಖೆಯ ಅನುದಾನವನ್ನು ನಿರೀಕ್ಷಿಸದೆ ಸ್ವತಃ ಪರಿಶ್ರಮ ಪಟ್ಟರೆ ಇಂತಹ ಕಾಮಗಾರಿಗಳನ್ನು ಪ್ರತೀ ಊರಿನಲ್ಲೂ ನಡೆಸಬಹುದು. 

ಗ್ರಾಮಸ್ಥರ ಸಮಸ್ಯೆಗೆ ಜನಪ್ರತಿನಿಧಿಗಳು ಸ್ಪಂದಿಸದ ಕಾರಣ ನಾವು ಜನರೊಂದಿಗೆ ಸೇರಿ ಶ್ರಮದಾನದ ಮೂಲಕ ರಸ್ತೆ ಮಾಡಿದ್ದೇವೆ ಇನ್ನು ಜನಪ್ರತಿನಿಧಿಗಳು ಶೀಘ್ರ ಸ್ಪಂದಿಸಿ ಪೂರ್ಣ ಪ್ರಮಾಣದ ಡಾಮರ್ ರಸ್ತೆಯಾಗಿ ಪರಿವರ್ತಿಸುವಲ್ಲಿ ಸಹಕರಿಸುವ ನಿರೀಕ್ಷೆ ಇದೆ. . . ………..

ಜಯಂತ ಐಕಳ ಪಂಚಾಯತ್ ಸದಸ್ಯರು.

ಸುಮಾರು 100ವರ್ಷ ಇತಿಹಾಸದ ಕಾಲುದಾರಿಯನ್ನು ರಸ್ತೆಯನ್ನಾಗಿ ಪರಿವರ್ತಿಸಲು ವಿವಿಧ ಇಲಾಖೆಗಳು ಮತ್ತು ಜನಪ್ರತಿನಿಧಿಗಳಿಗೆ ಕಳೆದ 10 ವರ್ಷಗಳಿಂದ ಮನವಿಕೊಟ್ಟು ಸಾಕಾಗಿಹೋಗಿದೆ ಇದೀಗ ಕಚ್ಚಾ ರಸ್ತೆ ನಿರ್ಮಾಣ ಮಾಡಿದ್ದೇವೆ ಇದರಿಂದ ಪಟ್ಟೆ ಜಾರಂದಾಯ ದೈವಸ್ಥಾನದ ಭಂಡಾರ ಹೋಗಲು ಅನುಕೂಲವಾದಂತೆ ಇಲ್ಲಿನ ಸ್ಥಳಿಯರಿಗೂ ಸಹಕಾರಿಯಾಗಲಿದೆ ಇನ್ನಾದರೂ ಜನಪ್ರತಿನಿಧಿಗಳು ಸಹಕರಿಸುತ್ತಾರೆ ಎಂದು ಕಾಯುತ್ತಿದ್ದೇವೆ. . . . …..

ಸುರೇಶ್ ಸ್ಥಳೀಯರು.

 

Comments

comments

Leave a Reply

Read previous post:
ಆರೋಗ್ಯವಂತ ಶಿಶು ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ವತಿಯಿಂದ ಆರೋಗ್ಯವಂತ ಶಿಶುಗಳ ಸ್ಪರ್ಧೆ ಮತ್ತು ಮಾಹಿತಿ ಶನಿವಾರ 20ರಂದು ಬೆಳಿಗ್ಗೆ 10ರಿಂದ 12ರ ವರೆಗೆ ಕಿನ್ನಿಗೋಳಿಯ ಶ್ರೀ ರಾಮ ಮಂದಿರದ...

Close