ಲಾರಿ ಡಿಕ್ಕಿ ಹೊಡೆದು ಪೊಲೀಸ್ ಪೇದೆ ದಾರುಣ ಸಾವು

Narendra Kerekadu

ಮೂಲ್ಕಿ; ರಾಷ್ಟ್ರೀಯ ಹೆದ್ದಾರಿ 66 ಮೂಲ್ಕಿ ಬಳಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದ ಅಪಘಾತವೊಂದರಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ರಕ್ಷಣಾ ಕವಚದ ವಿಶೇಷ ಕಾರ್ಯಾಚರಣೆ ನಡೆಸುವ ಪ್ರದೇಶವಾದ ಜಿಲ್ಲೆಯ ಗಡಿ ಪ್ರದೇಶ ಮೂಲ್ಕಿಯ ಬಪ್ಪನಾಡು ದೇವಸ್ಥಾನದ ಬಳಿಯ ಚೆಕ್ ಪೋಸ್ಟ್‌ನಲ್ಲಿ ಈ ದುರ್ಘಟನೆ ನಡೆದಿದ್ದು ಮೃತಪಟ್ಟ ಪೇದೆಯನ್ನು ಶಿವರಾಜಪ್ಪ (29) ಎಂದು ಗುರುತಿಸಲಾಗಿದೆ.
ಮೃತ ಶಿವರಾಜಪ್ಪ ಮೂಲತ: ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ಅರಬಕಟ್ಟೆಯ ನಿವಾಸಿಯಾಗಿದ್ದು ಕಳೆದ 2008ರಲ್ಲಿ ಸುಳ್ಯ ಠಾಣೆಗೆ ನಿಯುಕ್ತಿಗೊಳ್ಳುವ ಮೂಲಕ ಪೊಲೀಸ್ ಕರ್ತವ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2011ರಲ್ಲಿ ಮೂಲ್ಕಿ ಠಾಣೆಗೆ ವರ್ಗಾವಣೆಗೊಂಡು ನಿಷ್ಠಾವಂತ ಪೊಲೀಸ್ ಪೇದೆಯಾಗಿದ್ದರು.
ಶುಕ್ರವಾರ ಮುಂಜಾನೆ 3.30ರ ಸುಮಾರಿಗೆ ತನ್ನ ಸಹದ್ಯೋಗಿಗಳಾದ ಪ್ರಮೋದ್ ಮತ್ತು ಸೀತಾರಾಮ್‌ರವರ ಜೊತೆ ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು ಮಂಗಳೂರು ಕಡೆಯಿಂದ ಅತಿವೇಗದಲ್ಲಿ ಬರುತ್ತಿದ್ದ ಲಾರಿಯನ್ನು ನಿಲ್ಲಿಸಲು ಸೂಚಿಸಿದರು ಚಾಲಕನು ಲಾರಿಯನ್ನು ನಿಲ್ಲಿಸದೇ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಶಿವರಾಜಪ್ಪನನ್ನು ತಕ್ಷಣ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಚಿಕಿತ್ಸೆ ಫಲಕಾರಿಯಾಗದೇ ತಲೆಗೆ ತೀವ್ರ ಗಾಯವಾದುದರಿಂದ ಆಸ್ಪತ್ರೆಯಲ್ಲಿಯೇ ಮೃತಪಟ್ಟರು. ಲಾರಿಯು ಡಿಕ್ಕಿ ಹೊಡೆದು ಉಡುಪಿಯತ್ತ ಪರಾರಿಯಾಗಿದೆ.
ಬಪ್ಪನಾಡು ಬಳಿಯ ತಾತ್ಕಾಲಿಕ ಚೆಕ್‌ಪೋಸ್ಟ್ ಸೋಗೆಯಿಂದ ಮಾಡಿದ್ದಾಗಿದ್ದು ಅದರಲ್ಲಿ ಪೊಲೀಸರಿಗೆ ಯಾವುದೇ ರೀತಿಯ ರಕ್ಷಣೆಯಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಶಿವರಾಜಪ್ಪನೊಂದಿಗೆ ಇದ್ದ ಪೊಲೀಸ್ ಪೇದೆ ಸೀತಾರಾಮ್‌ರವರಿಗೆ ಕಳೆದ ಒಂದು ವರ್ಷದ ಹಿಂದೆ ಇದೇ ರೀತಿಯ ಅವಘಟ ಸಂಭವಿಸಿದ್ದು ಆಗ ಅವರ ಕೈಗೆ ತೀವ್ರ ಗಾಯವಾಗಿತ್ತು. ಈ ಅಪಘಾತದದ ಪ್ರಕರಣ ಮೂಲ್ಕಿ ಠಾಣೆಯಲ್ಲಿ ದಾಖಲಾಗಿದ್ದು.
ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ್ದು, ಅಂತಿಮ ಸಂಸ್ಕಾರ ಹಾಗೂ ಗೌರವಾರ್ಪಣೆಯನ್ನು ಮಂಗಳೂರಿನ ಎಸ್‌ಪಿ ಕಛೇರಿಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.

 

Comments

comments

Leave a Reply

Read previous post:
ನಿಡ್ಡೋಡಿ ಕ್ರೀಡೋತ್ಸವ

Raghunath Kamath ನಿಡ್ಡೋಡಿ ಜಾರಂದಡಿ ಶ್ರೀ ಜಾರಂತಯ ಬಂಟ ಕ್ರೀಡಾ ಸಮಿತಿಯ ಆಶ್ರಯದಲ್ಲಿ ಕ್ರೀಡೋತ್ಸವ ಮುದಲಾಡಿ ಕಂಬಳಗದ್ದೆಯಲ್ಲಿ ಭಾನುವಾರ ನಡೆಯಿತು. ಜಾರಂದಡಿ ಪುರುಷೋತ್ತಮ ಪೂಜಾರಿ ಕ್ರೀಡೋತ್ಸವ ಉದ್ಘಾಟಿಸಿದರು. ಜಗದೀಶ...

Close