ಹಳ್ಳ ಹಿಡಿದ ರಾಜೀವ ಗಾಂಧಿ ಸೇವಾ ಕೇಂದ್ರ ಕಾಮಾಗಾರಿ

Kinnigoli24051301

Kinnigoli24051302

ಕಿನ್ನಿಗೋಳಿ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ನೆನೆಗುದಿಗೆ ಬಿದ್ದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ದ್ಯೋತಕವಾಗಿ ರಾಜೀವ ಸೇವಾ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು. ಹತ್ತಿರದ ಮೆನ್ನಬೆಟ್ಟು, ಐಕಳ ಹಾಗೂ ಮಂಗಳೂರು ತಾಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಕಟ್ಟಡಗಳು ಉದ್ಘಾಟನೆಗೊಂಡಿವೆ.

ಸುಮಾರು ವಾರ್ಷಿಕ 50ರಿಂದ 60ಲಕ್ಷ ಆದಾಯವಿರುವ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಪೈಕಿ ಉತ್ತಮ ಆದಾಯವಿರುವ ಪಂಚಾಯಿತಿ ಎಂದು ಪರಿಗಣಿಸಲ್ಪಟ್ಟಿದ್ದು ಶೇ. 20ರಷ್ಟು ಮಾತ್ರ ಕಾಮಗಾರಿ ಪ್ರಗತಿಯಲ್ಲಿ ನಿಂತ ಈ ಕಟ್ಟಡ ನಿಜಕ್ಕೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಕಪ್ಪು ಚುಕ್ಕಿಯಂತೆ ಗೋಚರಿಸುತ್ತಿದೆ.
ಕಟ್ಟಡದ ಪಂಚಾಂಗ ಹಾಕುವಾಗ ಇಲಾಖಾ ಇಂಜಿನಿಯರ್‌ಗಳು ಸರಿಯಾಗಿದೆ ಎಂದು ಹಸಿರು ನಿಶಾನೆ ತೋರಿಸಿದ್ದರು. ಆದರೆ ಪಿಲ್ಲರ್ ಹಂತದಲ್ಲಿ  ಒಂದು ಪಿಲ್ಲರ್‌ನಲ್ಲಿ ದೋಷ ಬಂದಿದ್ದು ತಾಂತ್ರಿಕ ಹಾಗೂ ಇಲಾಖಾಧಿಕಾರಿಗಳ ಸಂವಹನ ಕೊರತೆಯಿಂದಾಗಿ ಈ ಯೋಜನೆ ಅರ್ಧದಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ.

ರಾಜೀವಗಾಂಧಿ ಸೇವಾ ಕೇಂದ್ರ ನಿರ್ಮಾಣ ಕಾಮಾಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಹಾಗೂ ಕಳಪೆ ಕಾಮಗಾರಿಯ ಬಗ್ಗೆ ಗ್ರಾಮಸ್ಥರು ಫೆಬ್ರವರಿ ತಿಂಗಳಲ್ಲಿ ನಡೆದ ಗ್ರಾಮ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದಾಗ ಗ್ರಾಮ ಪಂಚಾಯಿತಿ ಹಾಗೂ ಇಲಾಖಾಧಿಕಾರಿಗಳು ಸಮಸ್ಯೆಗಳನ್ನು ಸರಿ ಪಡಿಸುವುದಾಗಿ ವಾಗ್ದಾನ ಮಾಡಿದ್ದರು.

ಚುನಾವಣೆ ನೀತಿ ಸಂಹಿತೆ ಇದ್ದರಿಂದ ಒಂದೂವರೆ ತಿಂಗಳು ನಿಂತ ಕಾಮಗಾರಿ ಈಗ ಮಳೆಗಾಲದ ನೆಪದಲ್ಲಿ ಸ್ಥಗಿತವಾಗಬಹುದೇ..? ಸುಮಾರು 10ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಬೇಕಿದ್ದ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಸರ್ಕಾರಿ ಕಟ್ಟಡದ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸದಿರುವುದು ನೋಡಿದರೆ ಕೆಲಸ ಮಾಡಬೇಕೆಂಬ ಇಚ್ಛಾಶಕ್ತಿ ಇಲ್ಲದಿರುವುದು ತೋರಿಸುತ್ತದೆ. ಈಗ ಹಣ ಸರಕಾರಕ್ಕೆ ಹಿಂದೆ ಹೋಗಿದ್ದು ಕಾಮಗಾರಿ ಪೂರ್ಣ ನಿಂತುಹೋಗಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಕೂಲಿ ಸಂಬಳಕ್ಕಿಂತ ಎರಡು ಅಥವಾ ಮೂರು ಪಟ್ಟು ಹೆಚ್ಚು ಸಂಬಳ ( ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ) ಬೇರೆ ಬೇರೆ ಕಟ್ಟಡ ಕಾಮಾಗಾರಿ ಕೆಲಸಗಳಲ್ಲಿ ದೊರಕುವುದರಿಂದ ಈ ಯೋಜನೆಯ ಕೆಲಸ ಮಾಡಲು ಜನರು ಹಿಂದೇಟು ಹಾಕುತ್ತಾರೆ.

ಸದರಿ ಕೆಲಸವನ್ನು ನಿರ್ವಹಿಸಲು ಸಾಕಷ್ಟು ಪ್ರಮಾಣದಲ್ಲಿ ಕೆಲಸಗಾರರು ಸಿಗುತ್ತಿಲ್ಲ. ಕೂಲಿ ಸಂಬಳ 155ರೂಪಾಯಿಗಳು ಸಾಕಾಗದೇ ಇರುವ ಕಾರಣ ಕೆಲಸ ಮಾಡಲು ಜನರು ಬರುವುದಿಲ್ಲ. ತ್ವರಿತಗತಿಯಿಂದ ಕಾಮಾಗಾರಿ ಮುಗಿಸುವ ಕುರಿತು ಗಂಭೀರತೆ ಹೊಂದಬೇಕಾಗಿದೆ.
ದೇವಪ್ರಸಾದ್ ಪುನರೂರು
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು.

ಸರಕಾರ ಮಟ್ಟದಲ್ಲಿ ಇಲಾಖಾಧಿಕಾರಿಗಳು ಗಮನ ವಹಿಸಿ ಕಾಮಾಗಾರಿ ಪೂರ್ಣಗೊಳ್ಳುವಂತೆ ಸಹಕಾರ ನೀಡಬೇಕಾಗಿದೆ.
ಜಾನ್ಸನ್ ಜೆರೊಮ್ ಡಿ’ಸೋಜ
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು

Comments

comments

Leave a Reply

Read previous post:
ಕಿನ್ನಿಗೋಳಿ- ಉಲ್ಲಂಜೆ ಅಪಾಯಕಾರಿ ಕಿರುಸೇತುವೆ

ಕಿನ್ನಿಗೋಳಿ : ಕಿನ್ನಿಗೋಳಿ-ಕಟೀಲು ಸಮೀಪದ ಉಲ್ಲಂಜೆ (ಮಜಿಲ) ರಸ್ತೆಯಲ್ಲಿರುವ ಎಕ ಮುಖ ಕಿರುಸೇತುವೆ ( ಹತ್ತು ಅಡಿ ಅಗಲದ) ಹಾಗೂ ತಿರುವುಗಳು ಸಂಚರಿಸುವವರಿಗೆ ಅಪಾಯಕಾರಿಯಾಗಿದೆ. ದಿನನಿತ್ಯ ಶಾಲಾ ಕಾಲೇಜು...

Close