ಕಿನ್ನಿಗೋಳಿ- ಉಲ್ಲಂಜೆ ಅಪಾಯಕಾರಿ ಕಿರುಸೇತುವೆ

Kinnigoli24051304

Kinnigoli24051303

ಕಿನ್ನಿಗೋಳಿ : ಕಿನ್ನಿಗೋಳಿ-ಕಟೀಲು ಸಮೀಪದ ಉಲ್ಲಂಜೆ (ಮಜಿಲ) ರಸ್ತೆಯಲ್ಲಿರುವ ಎಕ ಮುಖ ಕಿರುಸೇತುವೆ ( ಹತ್ತು ಅಡಿ ಅಗಲದ) ಹಾಗೂ ತಿರುವುಗಳು ಸಂಚರಿಸುವವರಿಗೆ ಅಪಾಯಕಾರಿಯಾಗಿದೆ. ದಿನನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಅಲ್ಲದೆ ಸಾರ್ವಜನಿಕರು ಇಲ್ಲಿ ಸಂಚರಿಸುತ್ತಲೇ ಇರುತ್ತಾರೆ. ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದ್ದು, ಅಪಾಯಕಾರಿ ತಿರುವಿನಿಂದ ಕೂಡಿದ್ದಲ್ಲದೇ ಇಳಿಜಾರು ರಸ್ತೆಯಾಗಿದೆ. ಘನವಾಹನಗಳಾದ ಲಾರಿಗಳು ಹಾಗೂ ಬಸ್ಸುಗಳು ಸಂಚರಿಸುವುದರಿಂದ ಅಪಾಯಕ್ಕೆ ಮುನ್ನುಡಿ ಬರೆದಂತಿದೆ.
ಎಕಕಾಲದಲ್ಲಿ ಎರಡು ವಾಹನಗಳು ಎದುರುಬದುರಾದರೆ ಸ್ವಲ್ಪ ನಿಯಂತ್ರಣ ತಪ್ಪಿದರೂ ಸಾಕು ಕಂದಕಕ್ಕೆ ಬೀಳುವುದರಲ್ಲಿ ಸಂಶಯವೇ ಇಲ್ಲ. ಸೇತುವೆಯ ಹತ್ತಿರ ಹಲವು ಬಾರಿ ವಾಹನ ಅಪಘಾತಗಳಾಗಿದೆ. ಅತಿ ವೇಗದಲ್ಲಿ ಧಾವಿಸಿ ಬರುವ ವಾಹನಗಳು ಕಿರು ಸೇತುವೆಯಲ್ಲಿ ಎದುರಿನ ವಾಹನಕ್ಕೆ ಸಂಚಾರಕ್ಕೆ ಅವಕಾಶ ನೀಡುವ ಭರದಲ್ಲಿ ತಡೆಗೋಡೆಗೆ ಹೊಡೆದು ಬಿಡುತ್ತವೆ. ಇದರಿಂದ ಎರಡು ಬದಿಯ ತಡೆಗೋಡೆಗಳು ನಾಶವಾಗುತ್ತಿದೆ.

ಉಡುಪಿಯಿಂದ ಮೂಲ್ಕಿ ಕಿನ್ನಿಗೋಳಿಗಾಗಿ ಮಂಗಳೂರು ವಿಮಾನನಿಲ್ದಾಣಕ್ಕೆ ಹೋಗಲು, ದ.ಕ. ಜಿಲ್ಲಾ ಪಂಚಾಯಿತಿ ಅನುದಾನದಿಂದ 9 ವರ್ಷಗಳ ಹಿಂದೆ ಸುಮಾರು 85 ಲಕ್ಷ ರೂಪಾಯಿಗಳ ವೆಚ್ಚದಿಂದ ಕಿನ್ನಿಗೋಳಿ ಉಲ್ಲಂಜೆ ಕಟೀಲು ಮದ್ಯದ ಒಳಮಾರ್ಗವನ್ನು ದುರಸ್ಥಿ ಪಡಿಸಿತ್ತು. ಕಿರುಸೇತುವೆಯ ಬಳಿ 2 ವರ್ಷದ ಹಿಂದೆ ಜಿಲ್ಲಾಧಿಕಾರಿ ಹಾಗೂ ಶಾಸಕರ ಅನುದಾನದಿಂದ 8ಲಕ್ಷ ರೂಪಾಯಿಗಳ ವೆಚ್ಚದಲ್ಲಿ 100 ಮೀಟರ್ ರಸ್ತೆ ಅಗಲೀಕರಣ ಹಾಗೂ ಇಂಟರ್ ಲಾಕ್ ಅಳವಡಿಸಲಾಗಿದೆ. ಆದರೆ ಕಿರು ಸೇತುವೆ ಇಂದಿಗೂ ಮುಕ್ತಿ ಕಂಡಿಲ್ಲದಿರುವುದು ವಿಷಾದನೀಯ.
ವಿಮಾನ ನಿಲ್ದಾಣಕ್ಕೆ ಹತ್ತಿರದ ಹೆದ್ದಾರಿ, ಜನಸಂಚಾರ ನಿಭಿಡತೆ ಹೊಂದಿರುವ ಕಟೀಲು ದೇವಳದ ಬೀದಿಗೆ ಹೋಗದಿರುವುದರಿಂದ ಬೈಪಾಸ್ ರಸ್ತೆಯಂತೆ ಕಾರ್ಯಾಚರಿಸುವ ಈ ರಸ್ತೆ ಟ್ರಾಫಿಕ್ ಜಾಮ್ ಮುಕ್ತ ಹಾಗೂ ಸುಲಭ ಸಾಧ್ಯದ ದಾರಿಯಾಗಿದೆ. ಪ್ರತಿದಿನವೂ ಮುಲ್ಕಿ ಉಡುಪಿ ಕಡೆಯಿಂದ ಬಜಪೆ ಕಡೆಗೆ ನೂರಾರು ವಾಹನಗಳು ಓಡಾಡುತ್ತವೆ. ನಿರ್ಮಾಣದ ಹಂತದಿಂದಲೂ ಕಿರುಸೇತುವೆ ಮುಂದೆ ಎರಡೂ ಬದಿಯಲ್ಲಿ ಎಚ್ಚರಿಕೆಯಿಂದ ಚಲಿಸಿರಿ ಎಂಬ ಯಾವುದೇ ಸೂಚನಾಫಲಕಗಳು ಇಲ್ಲದಿರುವುದರಿಂದ ಅವಘಡ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನುತ್ತಾರೆ ಸ್ಥಳೀಯರು.

ಅಪಘಾತಕ್ಕೆ ಕಾರಣವೇನು?

ಇಲ್ಲಿ ಅಪಘಾತ ಸಂಭವಿಸಲು ಕಾರಣವೆಂದರೆ ಕಿರುಸೇತುವೆ ರಸ್ತೆಯ ಅಗಲದಲ್ಲಿ 10 ಅಡಿಯಷ್ಟೇ ಕಿರಿದಾಗಿರುವುದು. ದೂರದಿಂದ ಕಾಣುವಾಗ ಅಷ್ಟೊಂದು ಗೋಚರವಾಗುವುದಿಲ್ಲ. ಹತ್ತಿರ ಬಂದಾಗ ಅಗಲ ಕಡಿಮೆ ಇರುವುದು ಗೊತ್ತಾಗುತ್ತದೆ. ಈ ಸಂದರ್ಭ ಎದುರಿನಿಂದಲೂ ವಾಹನ ವೇಗವಾಗಿ ಬರುತ್ತಿದ್ದರೆ ವಿಧಿ ಇಲ್ಲದೆ ತಡೆಗೋಡೆಗೆ ಅಪ್ಪಳಿಸಲೇಬೇಕಾಗುತ್ತದೆ. ಇಲ್ಲವಾದರೆ ಎದುರಿನ ವಾಹನಕ್ಕೆ ಢಿಕ್ಕಿಯಾಗುವ ಸಾಧ್ಯತೆ ಇರುತ್ತದೆ. ಸ್ಥಳೀಯ ವಾಹನ ಚಾಲಕರು ಹಾಗೂ ಜನರಿಗೆ ಅಗಲ ಕಿರಿದಾಗಿರುವುದು ಗೊತ್ತಿರುತ್ತದೆ. ಆದುದರಿಂದ ಹೊರಗಿನ ವಾಹನಗಳು ಬಂದಾಗ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿರುತ್ತವೆ. ಚಾಲಕರು ಪ್ರಾಣ ಭಯದಿಂದ ವಾಹನ ಚಲಾಯಿಸುವಂತಾಗಿದೆ. ರಸ್ತ ತಿರುವು ಇರುವ ಕಾರಣ ಮಳೆಗಾಲದಲ್ಲಿ ಪಕ್ಕದಲ್ಲೇ ಬೆಳೆದಿರುವ ಗಿಡಗಂಟಿಗಳು ಅಪಾಯಕಾರಿ ಸೇತುವೆಯನ್ನು ಮರೆ ಮಾಚುತ್ತಿವೆ.
ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ದಿನಾಲೂ ಈ ಮಾರ್ಗವಾಗಿ ಪ್ರಯಾಣಿಸುತ್ತಾರೆ. ಆದರೆ ಈ ಕಿರು ಸೇತುವೆ ಅಗಲೀಕರಣಗೋಳಿಸುವ ಮನಸ್ಸು ಮಾಡದೇ ಇರುವುದು ಖೇದಕರ ಎಂಬುದು ಸಾರ್ವಜನಿಕರ ಅಳಲು. ಕಿರು ಸೇತುವೆ ಶೀಘ್ರದಲ್ಲಿ ಅಗಲಗೊಳಿಸಿ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿ, ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ಕಿರುಸೇತುವೆಯ ಬಳಿ ರಸ್ತೆ ಈಗಾಗಲೇ ಅಗಲೀಕರಣಗೊಂಡಿದೆ. ಸೇತುವೆ ಅಗಲೀಕರಣ ಕುರಿತು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಬಹುಪಯೋಗಿ ಉತ್ತಮ ರಸ್ತೆಯ ನಿರೀಕ್ಷೆಯಲ್ಲಿದ್ದೇವೆ.
ಜನಾರ್ಧನ ಕಿಲೆಂಜೂರು – ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ

9 ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿಯ ಅನುದಾನದಿಂದ ಅಗಲೀಕರಣಗೊಂಡ ಈ ರಸ್ತೆ, ಈಗ ಕಿರು ಸೇತುವೆ ಕೂಡ ಅಗಲೀಕರಣಗೊಂಡರೆ ಸಾರ್ವಜನಿಕರಿಗೆ ಪೂರ್ಣ ಪ್ರಮಾಣದ ಅನುಕೂಲ ಹಾಗೂ ಟ್ರಾಫಿಕ್ ಜಾಮ್ ಮುಕ್ತ ಕಿನ್ನಿಗೋಳಿ ಕಟೀಲು ರಸ್ತೆಯಾಗಲಿದೆ.
– ಈಶ್ವರ ಕಟೀಲು – ಜಿಲ್ಲಾ ಪಂಚಾಯಿತಿ ಸದಸ್ಯ
ಸರಕಾರ ಹಾಗೂ ಸಂಬಂದ ಪಟ್ಟವರು ತ್ವರಿತಗತಿಯಲ್ಲಿ ಕಿರುಸೇತುವೆ ಅಗಲೀಕರಣ ಹಾಗೂ ತಿರುವು ಅಗಲೀಕರಣಕ್ಕೆ ಸ್ಪಂದನೆ ನೀಡಿದಲ್ಲಿ ಜೀವ ಹಾನಿ ಮತ್ತು ಅಪಘಾತಗಳು ನಡೆಯದೆ ಸೂಕ್ತ ಸಂಚಾರಕ್ಕೆ ರಹದಾರಿಯಾಗಬಲ್ಲುದು

ಸರೋಜಿನಿ ಸ್ಥಳೀಯರು

Comments

comments

Leave a Reply

Read previous post:
ಮೆ.28 ಏಳಿಂಜೆ ದೇವಳ ಅಂಗಾರಕ ಸಂಕಷ್ಟಿ ಪೂಜೆ

 ಕಿನ್ನಿಗೋಳಿ : ಮೇ.28ರಂದು ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿ ಪೂಜೆ ನಡೆಯಲಿದೆ. ಬೆಳಿಗ್ಗೆ ಮಹಾ ಗಣಪತಿ ಹೋಮ, ಶ್ರೀ ಲಕ್ಷ್ಮೀ ಜನಾರ್ದನ ದೇವರಿಗೆ...

Close