ಬಳಕುಂಜೆ ಗ್ರಾಮ ಸಭೆ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2013-14ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಸೋಮವಾರ ಬಳ್ಕುಂಜೆ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಬಳ್ಕುಂಜೆ ಗ್ರಾಮ ವ್ಯಾಪ್ತಿಗೊಳಪಟ್ಟ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ಆಹಾರ ನಾಗರಿಕ ಪೂರೈಕೆ ಇಲಾಖೆ, ಜಿ.ಪಂ.ಇಂಜಿನಿಯರ್ ಸೇರಿದಂತೆ ಇಲಾಖಾಧಿಕಾರಿಗಳ ಅನುಪಸ್ಥಿತಿ ಎದ್ದು ತೋರುತ್ತಿತ್ತು. ಪ್ರತೀ ಗ್ರಾಮ ಸಭೆಗಳಲ್ಲಿ ಇಲಾಖಾಧಿಕಾರಿಗಳು ಗೈರು ಹಾಜಾರಾಗುತ್ತಿದ್ದು ಮುಂದಿನ ಗ್ರಾಮ ಸಭೆಗೆ ಇಲಾಖಾಧಿಕಾರಿಗಳು ಹಾಜಾರಾಗದ್ದಿದಲ್ಲಿ ಗ್ರಾಮಸಭೆಯನ್ನು ಬಹಿಷ್ಕರಿಸಲಾಗುವುದು ಎಂದು ಗ್ರಾಮಸ್ಥರು ಒಕ್ಕೊಲರಿನಿಂದ ಹೇಳಿದರು. ಕೊಲ್ಲೂರುವಿನಲ್ಲಿ ನಡೆಯುವ ಕೋಳಿ ಅಂಕ ಹಾಗೂ ಅಲ್ಲಿ ಹಾಕಲ್ಪಟ್ಟ ಕಸ ಹಾಗೂ ಅದನ್ನು ವಿಲೇವಾರಿ ಮಾಡದ ಬಗ್ಗೆ ಕೊಲ್ಲೂರು ಗ್ರಾಮಸ್ಥರು ಆಕ್ಷೇಪಿಸಿದರು.

ಖಾಯಂ ಗ್ರಾಮ ಕರಣಿಕ ನಿಯೋಜನೆ ಮಾಡುವ ಬಗ್ಗೆ ಗ್ರಾಮಸ್ಥರು ಅಹವಾಲು ಹೇಳಿದಾಗ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಬಳ್ಕುಂಜೆ ಗ್ರಾಮಕ್ಕೆ ಕಾಯಂ ಗ್ರಾಮ ಕರಣಿಕ ನಿಯೋಜನೆಯಾಗಿದ್ದು ಕಾರಣಾಂತರಗಳಿಂದ ವಿಳಂಬವಾಗುತ್ತಿದೆ. ಅದಷ್ಟು ಬೇಗ ನಿಯೋಜನೆಯಾಗಲಿದ್ದಾರೆ ಎಂದು ತಿಳಿಸಿದರು.

ಹೆಚ್ಚಿನ ನೀರಿನ ಒರತೆಯಿರುವ ಕೆರೆಗಳ ಹೋಳೆತ್ತುವಿಕೆಯ ಬಗ್ಗೆ ಪಂಚಾಯಿತಿಯ ಗಮನಕ್ಕೆ ತರಲಾಯಿತು. ಮಾಗಂದಡಿ ಕಚ್ಚಾರಸ್ತೆಯನ್ನು ಉತ್ತಮ ರಸ್ತೆಯನ್ನಾಗಿ ಮಾರ್ಪಡಿಸಬೇಕು. ರಸ್ತೆಗಳಿಗೆ ಅಡ್ಡ ಬರುವ ಮರಗಳ ಗೆಲ್ಲು ಕೊಂಬೆಗಳು. ಗಿಡಗಂಟಿಗಳ ತೆರವು, ಚರಂಡಿ ದುರಸ್ತಿ ಹಾಗೂ ದಾರಿ ದೀಪಗಳ ಸರ್ಮಪಕ ವ್ಯವಸ್ಥೆಯಾಗಬೇಕೆಂದು ಗ್ರಾಮಸ್ಥರು ನಿವೇದನೆ ಮಾಡಿದರು.
ಕೆಲವು ಗ್ರಾಮಸ್ಥರು ಅಸರ್ಮಪಕ ನೀರು ಸರಬರಾಜು ಆಗುತ್ತಿರುವ ಬಗ್ಗೆ ದೂರಿದಾಗ ಅಧ್ಯಕ್ಷರು “ಕೆಲವರು ಕೆಲವು ಕಡೆ ಗೇಟ್ ವಾಲ್ವ್ ಗಳನ್ನು ದುರ್ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಮುಂದಿನ ದಿನಗಳಲ್ಲಿ ಛೇಂಬರ್ ಗಳನ್ನು ನಿರ್ಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಮೂಡಬಿದ್ರೆ ಜಲಾನಯನ ಇಲಾಖಾ ಕೃಷಿ ಅಧಿಕಾರಿ ಯುವರಾಜ್ ನೋಡಲ್ ಅಧಿಕಾರಿಯಾಗಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ಜಲಜ, ಜಿ.ಪಂ.ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾ.ಪಂ. ಸದಸ್ಯ ನೆಲ್ಸನ್ ಲೋಬೋ, ಪ್ರಭಾರ ಗ್ರಾಮಕರಣಿಕ ಕಿರಣ್, ಇಲಾಖಾ ಇಂಜೀನಿಯರ್ ಪ್ರಶಾಂತ್, ಬಳ್ಕುಂಜೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಜೀವಿ, ಪಿಡಿಒ ಜಲಜ ಟಿ. ಮತ್ತಿತರರು ಉಪಸ್ಥಿತರಿದ್ದರು.

Kinnigoli 10061302

Comments

comments

Leave a Reply

Read previous post:
ಕಲ್ಲಾಪು ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಹಳೆಯಂಗಡಿ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ, ಯುವಕ ಮಂಡಲ ಹಾಗೂ ಮಹಿಳಾವೇದಿಕೆ ವತಿಯಿಂದ ಶ್ರೀ ಕೇತ್ರದ ಕೂಡುಕಟ್ಟಿಗೆ ಸೇರಿದ ಒಂದನೇ ತರಗತಿಯಿಂದ ದ್ವಿತೀಯಾ ಪಿ.ಯು.ಸಿ...

Close