ಮೆನ್ನಬೆಟ್ಟು ಗ್ರಾಮ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ ಪ್ರಥಮ ಸಾಲಿನ ಗ್ರಾಮ ಸಭೆ ಗುರುವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮೆನ್ನಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಾನಯನ ಇಲಾಖೆಯಿಂದ 78.77ಲಕ್ಷ ರೂ.ನಲ್ಲಿ ಸಮಗ್ರ ಜಲಾನಯನ ಅಭಿವೃದ್ಧಿ ಘಟಕ ನಿರ್ವಹಣಾ ಯೋಜನೆ ರೂಪಿಸಲಾಗಿದ್ದು, ಮೂರು ವರ್ಷಗಳಲ್ಲಿ ಹಂತಹಂತವಾಗಿ ಜಾರಿಗೊಳ್ಳಲಿದೆ ಎಂದು ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ವಸಂತ ಎಸ್. ಕುಲಕರ್ಣಿ ತಿಳಿಸಿದರು. ಮುಲ್ಕಿ-ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದಲ್ಲಿ ಆರು ಗ್ರಾಮ ಪಂಚಾಯತ್‌ಗಳ 19 ಗ್ರಾಮಗಳಿಗೆ 6.23ಕೋಟಿ ರೂ. ಯೋಜನೆ ಮಂಜೂರಾಗಿದ್ದು, ಕಿಂಡಿ ಅಣೆಕಟ್ಟು ರಚನೆ, ಪಶು ಸಂಗೋಪನಾ ಘಟಕ, ಅರಣ್ಯ ಸಸಿಗಳು, ತೋಟಗಾರಿಕಾ ಸಸಿಗಳ ನೆಡುವಿಕೆ ಸೇರಿದಂತೆ ಅನೇಕ ಯೋಜನೆಗಳನ್ನು ಈ ಮೂಲಕ ಕಾರ್ಯಗತಗೊಳಿಸುವುದು. ರೈತರ ಆದಾಯ ಉತ್ಪನ್ನ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿಗಳನ್ನು ನೀಡಲಾಗುವುದು
ಎಂದು ಮಾಹಿತಿ ನೀಡಿದರು.
ಕೊಂಡೆಮೂಲ, ಮೆನ್ನಬೆಟ್ಟು, ನಡುಗೋಡು, ಕಿಲೆಂಜೂರು ಗ್ರಾಮಗಳನ್ನೊಳಗೊಂಡ ಮೆನ್ನಬೆಟ್ಟು ಗ್ರಾಮಪಂಚಾಯತ್‌ನ ಹೆಸರನ್ನು ಕಟೀಲು ಗ್ರಾಮ ಪಂಚಾಯತ್ ಎಂದು ಬದಲಾಯಿಸಬೇಕು. ಇದರಿಂದ ಅಭಿವೃದ್ಧಿಯ ನಿಟ್ಟಿನಲ್ಲಿ ಸಹಕಾರಿಯಾಗುತ್ತದೆ ಎಂದು ಕೆಲವು ಗ್ರಾಮಸ್ಥರು ಒತ್ತಾಯಿಸಿದರೆ ಇನ್ನು ಕೆಲವರು ಮೆನ್ನಬೆಟ್ಟು ಕಿನ್ನಿಗೋಳಿ ಪಂಚಾಯಿತಿಗೆ ಸೇರಿಸಿ ಎಂದು ಹೇಳಿದರೆ ಹಲವರು ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಕಿನ್ನಿಗೋಳಿ ನಗರ ಪಂಚಾಯಿತಿ ಮಾಡಬೇಕೆಂದರು. ಅಧ್ಯಕ್ಷರು ಈ ಮಾತಿಗೆ ಉತ್ತರ ನೀಡುತ್ತಾ ಹಿಂದಿನ ಗ್ರಾಮ ಸಭೆಯಲ್ಲಿ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಕಿನ್ನಿಗೋಳಿ ನಗರ ಪಂಚಾಯಿತಿಯಾಗಿ ಮಾರ್ಪಡಿಸಲು ನಿರ್ಣಯ ಮಾಡಿ ಕಳುಹಿಸಲಾಗಿದೆ ಎಂದು ಚರ್ಚೆಗೆ ತೆರೆ ಎಳೆದರು.
ಕೊಂಡೆಮೂಲ ಗ್ರಾಮದ ಅಜಾರಿನಲ್ಲಿರುವ ಬೋರ್‌ವೆಲ್ ಸಮೀಪ ಕಳೆದ ವರ್ಷ ಪಂಚಾಯತ್‌ನಿಂದ ಒಂದು ಲಕ್ಷ ರೂ.ನಲ್ಲಿ ಟ್ರಾನ್ಸ್‌ಫಾರ್ಮರ್ ಹಾಕಲಾಗಿದ್ದು ಕೆಲವು ತಿಂಗಳ ಹಿಂದೆ ಬೋರ್‌ವೆಲ್ ಪಂಪು ನಿಷ್ಕ್ರಿಯಗೊಂಡಿದೆ. ಈಗ ಟ್ರಾನ್ಸ್‌ಫಾರ್ಮರ್ ಸ್ಥಳಾಂತರಗೊಂಡಿದೆ. ಈ ಬಗ್ಗೆ ತನಿಖೆಯಾಗಬೇಕೆಂದು ಕೊಂಡೆಮೂಲ ಗ್ರಾಮಸ್ಥರು ಒತ್ತಾಯಿಸಿದರು.
ನಡುಗೋಡು ಅಂಗನವಾಡಿ ಪಂಚಾಯಿತಿ ಜಾಗವಾಗಿದ್ದು ಅರಣ್ಯ ಇಲಾಖೆ ಸಸಿಗಳನ್ನು ನೆಟ್ಟು ಈಗ ತಕರಾರು ಸ್ಥಳವಾಗಿದೆ ಎಂದು ಗ್ರಾಮಸ್ಥರು ಪಂಚಾಯಿತಿಯ ಗಮನಕ್ಕೆ ತಂದರು. ಜಲ್ಲಿಗುಡ್ಡೆ ಹಾಗೂ ಮೆನ್ನಬೆಟ್ಟು ಅಂಗನವಾಡಿ ಕೇಂದ್ರಗಳ ಸ್ಥಳ ನಿಗದಿ ಬಗ್ಗೆ ಇಲಾಖಾಧಿಕಾರಿಗಳನ್ನು ಕೂಡಲೇ ಸಂಪರ್ಕಿಸಿ ತ್ವರಿತವಾಗಿ ಕಾರ್ಯಾಚರಿಸಬೇಕು ಎಂದರು.
ಕೆಮ್ಮಡೆ ಹರಿಜನ ಕಾಲೋನಿ ರಸ್ತೆಗೆ ಕೆಲವು ವರ್ಷಗಳಿಂದ ಡಾಮಾರೀಕರಣ ಆಗದೆ ರಸ್ತೆ ಪೂರ್ತಿ ಹದಗೆಟ್ಟಿದೆ, ಕೆಮ್ಮಡೆ ಕೊಲ ಪರಿಸರದಲ್ಲಿ ವಿದ್ಯುತ್ ಕಂಬಗಳು ವಾಲಿಕೊಂಡಿದೆ ಮಳೆಗಾಲ ಪ್ರಾರಂಭವಾದ್ದರಿಂದ ಶೀಘ್ರ ದುರಸ್ತಿ ಮಾಡಿ ಅವಘಡಗಳು ಆಗದಂತೆ ಮುಂಜಾರೂಗತೆ ವಹಿಸಿಬೇಕೆಂದು ನಿವೇದಿಸಿಕೊಂಡರು.
ಕಟೀಲು ಪೆಟ್ರೋಲ್ ಪಂಪಿನ ಹತ್ತಿರದ ರಸ್ತೆಯಲ್ಲಿ ಮಳೆ ಬಂದು ರಸ್ತೆ ಕೆಸರಾಗಿದೆ. ಮಣ್ಣು ಕೂಡಾ ಜರಿದು ಹೊಗುತ್ತಿದ್ದು ನಡೆದಾಡಲು ಹಾಗೂ ವಾಹನ ಚಲಾಯಿಸಲು ಕಷ್ಟ ಸಾಧ್ಯವಾಗಿದೆ ಪರಿಸರದ ಗ್ರಾಮಸ್ಥರ ಅಳಲು. ಜಲ್ಲಿಗುಡ್ಡೆ ಮುಂಚಿಕಾಡು ಪ್ರದೇಶದಲ್ಲಿ ನೀರಿನ ಪೂರೈಕೆ ಸಮರ್ಪಕವಾಗುತ್ತಿಲ್ಲ ಎಂದು ದೂರುಗಳು ಕೇಳಿಬಂದವು.
ಮೂಡಬಿದ್ರೆ ಜಲಾನಯನ ಇಲಾಖಾ ಕೃಷಿ ಅಧಿಕಾರಿ ಯುವರಾಜ್ ನೋಡಲ್ ಅಧಿಕಾರಿಯಾಗಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಉಪಾಧ್ಯಕ್ಷೆ ಸರೋಜಿನಿ, ಪಿಡಿಒ ಗಣೇಶ ಬಡಿಗೇರ, ಇಂಜೀನಿಯರ್ ಪ್ರಶಾಂತ್, ಮತ್ತಿತರರು ಉಪಸ್ಥಿತರಿದ್ದರು.

Kinnigoli 14061301

Comments

comments

Leave a Reply

Read previous post:
ಕರಾವಳಿ ಲೇಖಕಿ ಅಧ್ಯಕ್ಷೆ – ಜಾನಕಿ ಬ್ರಹ್ಮಾವರ

Mithuna Kodethooru ಕಿನ್ನಿಗೋಳಿ : ಕರಾವಳಿ ಲೇಖಕಿ ವಾಚಕಿಯರ ಸಂಘದ ಅಧ್ಯಕ್ಷೆಯಾಗಿ ಜಾನಕಿ ಬ್ರಹ್ಮಾವರ, ಉಪಾಧ್ಯಕ್ಷೆಯಾಗಿ ಡಾ.ಅನಸೂಯ ಸಾಲ್ಯಾನ್, ಕಾರ‍್ಯದರ್ಶಿಯಾಗಿ ಸುಧಾರಾಣಿ, ಜೊತೆ ಕಾರ‍್ಯದರ್ಶಿಯಾಗಿ ಸುಜಾತಾ ಮುದ್ರಾಡಿ,...

Close