ಕಮ್ಮಾಜೆ – ರಸ್ತೆ ದುರಸ್ತಿಗೆ ಕಾಯುತ್ತಿದೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು ಸಾರ್ವಜನಿಕರ ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿದೆ. ಇದರ ದುರಸ್ತಿ ಬಗ್ಗೆ ಗ್ರಾಮಸ್ಥರು ದೂರು ಕೊಟ್ಟಿರುತ್ತಾರೆ. ರಸ್ತೆ ಸುಮಾರು ಮೂರು ಕಿಲೋಮೀಟರ್ ಇದ್ದು ಸಂಪೂರ್ಣ ದುರಸ್ತಿಗೆ ಕಾಯುತ್ತಿದೆ.
ಮುಲ್ಕಿಯಲ್ಲಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕಿನ್ನಿಗೋಳಿಯ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕಮ್ಮಾಜೆ ಎಂಬಲ್ಲಿ 2 ವರ್ಷಗಳ ಹಿಂದೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಂಡಿದೆ. ಸುಮಾರು 4 ಕೋಟಿ ಯೋಜನೆಯ ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಳ್ಳಿಯ ಸೊಗಡನ್ನು ಸಾರುವ ಮೆನ್ನಬೆಟ್ಟು ಗ್ರಾಮದ 10 ಎಕರೆ ಸರಕಾರಿ ಜಮೀನಿನಲ್ಲಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಈ ಸಂಸ್ಥೆಗೆ ಹೋಗುವ ರಸ್ತೆಯ ಅವ್ಯವಸ್ಥೆ ಹೇಳ ತೀರದು. ಈ ರಸ್ತೆಯಲ್ಲಿ ಶಾಲೆಯ ದಾರಿ ತೋರಿಸುವ ಸರಿಯಾದ ನಾಮಫಲಕ ಕೂಡಾ ಇಲ್ಲ. ದೂರದ ಊರಿನಿಂದ ಬರುವ ವಿದ್ಯಾರ್ಥಿಗಳ ಹೆತ್ತವರು/ಪೋಷಕರು ಪರದಾಡುವ ಸ್ಥಿತಿ ಇಲ್ಲಿದೆ. ಬಾಡಿಗೆ ವಾಹನ ಚಾಲಕರು ಇಲ್ಲಿ ಬರಲು ಹಿಂಜರಿಯುತ್ತಾರೆ. ರಸ್ತೆಯ ಒಂದು ಬದಿ ಐಕಳ ಪಂಚಾಯಿತಿಗೆ ಸೇರಿದರೆ ಇನ್ನೊಂದು ಬದಿ ಮೆನ್ನಬೆಟ್ಟು ಪಂಚಾಯಿತಿಗೆ ಸೇರಿದೆ ಆದರೆ ರಸ್ತೆ ಮಾತ್ರ ಮೆನ್ನಬೆಟ್ಟು ಪಂಚಾಯಿತಿಗೆ ಸೇರಿದೆ. ರಸ್ತೆ ಕೆಲವು ವರ್ಷಗಳಿಂದ ಕಾಯಕಲ್ಪಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿದೆ.

ನೇಕಾರ ಕಾಲೋನಿ ಮತ್ತು ಕಲ್ಲಕುಮೇರಿಗೆ ಸಂಪರ್ಕಿಸುವ ರಸ್ತೆಯಾಗಿದೆ. ಇಲ್ಲಿ ಸತ್ತಮುತ್ತ ಕೃಷಿಕರ ಗದ್ದೆ ಹಾಗೂ ಅಡಿಕೆ ಮತ್ತು ತೆಂಗಿನ ತೋಟಗಳಿದ್ದು ಸುಮಾರು 100 ರಿಂದ 150 ಮನೆಗಳಿವೆ. ಸಮೀಪ ಕಲ್ಲಿನಕೋರೆ ಕಾರ್ಯಚರಿಸುತ್ತಿದ್ದು ಈಗ ಸ್ಥಗಿತಗೊಂಡಿದೆ. ಈ ಹಿಂದೆ ಲಾರಿಗಳ ಆರ್ಭಟದಿಂದ ರಸ್ತೆ ಸಂಪೂರ್ಣ ಹಾಳಾಗಿದೆ ಅಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದಿರುವುದರಿಂದ ರಸ್ತೆ ಪೂರ್ತಿ ಹದಗೆಡಲು ಕಾರಣವಾಗಿದೆ. ಈ ರಸ್ತೆ ಹಳ್ಳ ಕೊಳ್ಳಗಳಿಂದ ಕೂಡಿದ್ದು ದ್ವಿಚಕ್ರ ವಾಹನ ಚಾಲಕರು ರಸ್ತೆಯಲ್ಲಿ ವಾಹನ ಓಡಿಸುವಾಗ ಏಳು ಬೀಳುಗಳನ್ನು ತಪ್ಪಿಸಲು ಪರದಾಡುವ ಸ್ಥಿತಿ ಬಂದಿದೆ. ರಾತ್ರಿ ವೇಳೆ ವಿದ್ಯುತ್ ಇಲ್ಲದ ಸಮಯದಲ್ಲಿ ರಸ್ತೆಗೆ ಇಳಿದರೆ ಕೈ ಕಾಲು ಉಳುಕುವುದು ಖಚಿತ. ಮೂಲಭೂತ ಸೌಕರ್ಯಗಳಾದ ಚರಂಡಿ, ನೀರು, ವಿದ್ಯುತ್ ಮತ್ತು ರಸ್ತೆ ಸಂಪರ್ಕ ಕಲ್ಪಿಸಬೇಕಾದುದು ಸರಕಾರದ ಆದ್ಯ ಕರ್ತವ್ಯ. ಇಲ್ಲಿ ಉತ್ತಮ ಸೌಕರ್ಯ ಒದಗಿಸಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ಗ್ರ್ರಾಮಸ್ಥರ ಒಕ್ಕೊರಲ ಒತ್ತಾಯ.

Kinnigoli-19061301

Kinnigoli-19061302

Kinnigoli-19061303

Comments

comments

Leave a Reply

Read previous post:
Kateel-18061302
ಕಟೀಲು: ತಾಳಮದ್ದಳೆ ಸಪ್ತಾಹ ಉದ್ಘಾಟನೆ

Raghunath Kamath ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಕಟೀಲು ತಾಳಮದ್ದಳೆ ಸಪ್ತಾಹ-2013 (ಸಾದ್ಯೋನಾರಾಯಣೋ ಹರಿಃ) ಉದ್ಘಾಟನೆ ಸೋಮವಾರ ಕಟೀಲು ಸರಸ್ವತೀ ಸದನದಲ್ಲಿ ನಡೆಯಿತು. ಕಟೀಲು ದೇವಳದ...

Close