ನಿಡ್ಡೋಡಿ ವಿದ್ಯುತ್ ಸ್ಥಾವರ ಪ್ರತಿಭಟನೆ

ಕಿನ್ನಿಗೋಳಿ : ತದಡಿಯಲ್ಲಿ ಅನಿಲ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗುವ ಸುದ್ದಿ ಒಂದು ಕಡೆಯಾದರೆ ಇತ್ತ ಇನ್ನೊಂದು ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಕರಾವಳಿ ಪ್ರದೇಶಕ್ಕೆ ಕಾಲಿಡುವುದು ಆತಂಕದ ವಿಷಯ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನಿಡ್ಡೋಡಿ ಎಂಬಲ್ಲಿ ಕೇಂದ್ರ ಸರಕಾರದ ಇಂಧನ ಇಲಾಖೆಗೆ ಸೇರಿದ ಸುಮಾರು 4,೦೦೦ ಮೆ.ವ್ಯಾ. ಸಾಮರ್ಥ್ಯದ ವಿದೇಶಿ ಕಲ್ಲಿದ್ದಲು ಆಧಾರಿತ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (ಯುಎಂಪಿಪಿ) ತಲೆ ಎತ್ತಲಿದ್ದು, ಸಮುದ್ರ ತೀರಕ್ಕೆ ಸಮೀಪದಲ್ಲಿ ಸ್ಥಾಪನೆಯಾಗಲಿದೆ. ಪರಿಸರವಾದಿಗಳ ಪ್ರತಿಭಟನೆ ನಡುವೆಯೂ ಕರಾವಳಿ ಪ್ರದೇಶದಲ್ಲೇ ಎರಡು ಬೃಹತ್ ವಿದ್ಯುತ್ ಉತ್ಪಾದನಾ ಯೋಜನೆಗಳು ಬಂದಂತಾಗುತ್ತದೆ!
ನಿಡ್ಡೋಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 4೦೦೦ ಮೆಗಾ ವ್ಯಾಟ್ ಸಾಮಥ್ರ್ಯದ ಉಷ್ಣ ವಿದ್ಯುತ್ ಸ್ಥಾವರದಿಂದ 4 ಗ್ರಾಮ ಪಂಚಾಯಿತಿ ವ್ಯಾಪ್ತಿಯು ಸಂಪೂರ್ಣವಾಗಿ ಭಾದೆಗೊಳಪಡಲಿದೆ. ಇಂತಹ ಪರಿಸರ ಹಾಗೂ ಜನವಿರೋಧಿ ಯೋಜನೆಯನ್ನು ವಿರೋಧಿಸಿ ಭಾನುವಾರ ಮಾತೃಭೂಮಿ ಸಂರಕ್ಷಣಾ ಸಮಿತಿ ಹಾಗೂ ಇತರ ಸಂಘಟನೆಗಳ ವತಿಯಿಂದ ಉಪವಾಸ ಸತ್ಯಾಗ್ರಹ ನಡೆಯಿತು.
ರೈತರು ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಮಾತೃಭೂಮಿ ಸಂರಕ್ಷಣಾ ಸಮಿತಿಯು ಸಾಂಕೇತಿಕವಾಗಿ ರಸ್ತೆತಡೆ ಮಾಡಿ ನಂತರ ವಾಹನಗಳ ಸುಗಮ ಸಂಚಾರ ವ್ಯವಸ್ಥೆಗೆ ದಾರಿ ಮಾಡಿಕೊಟ್ಟರು. ಸುಮಾರು ಬೆಳಿಗ್ಗಿನ ಹೊತ್ತು ೨ರಿಂದ ೩ಸಾವಿರ ಜನರು ಶಿಸ್ತು ಬದ್ಧ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಅನೇಕ ರೀತಿಯ ಹೋರಾಟದ ನಡುವೆಯೂ ಆರಂಭವಾದ ಉಡುಪಿಯ ಯುಪಿಸಿಎಲ್‌ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೇವಲ 1,2೦೦ ಮೆ.ವ್ಯಾ. ಆಗಿದ್ದು ಪ್ರಸ್ತಾವಿತ ನಿಡ್ಡೋಡಿ ವಿದ್ಯುತ್ ಸ್ಥಾವರ 4,೦೦೦ ಮೆ. ವ್ಯಾ. ಅಂದರೆ ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ಅಧಿಕ. ಯುಪಿಸಿಎಲ್‌ನಿಂದಾದ ಪರಿಸರ ಹಾನಿ ನೋಡಿದರೆ ನಿಡ್ಡೋಡಿ ಯೋಜನೆ ಅದಕ್ಕಿಂತಲೂ ನಾಲ್ಕು ಪಟ್ಟು ಅಧಿಕ ಪ್ರಮಾಣದಲ್ಲಿ ಪರಿಸರವನ್ನು ನಾಶ ಮಾಡುವುದು ಖಂಡಿತ.ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ರದ್ದುಪಡಿಸುವಲ್ಲಿ ಅವರವರ ಕಾರ್ಯವ್ಯಾಪ್ತಿಯಲ್ಲಿ ಎಲ್ಲ ರಾಜಕಾರಣಿಗಳೂ ಪ್ರಾಮಾಣಿಕವಾಗಿ ಪ್ರಯತ್ನ ಪಡಬೇಕು. ರಾಜಕೀಯಕರಣವನ್ನು ಮಾಡುವುದನ್ನು ಮಾತೃಭೂಮಿ ಸಂರಕ್ಷಣಾ ಸಮಿತಿ ತೀವ್ರವಾಗಿ ಆಕ್ಷೇಪಿಸುತ್ತದೆ ಎಂದು ಸಮಿತಿ ಅಧ್ಯಕ್ಷ ಅಲ್ಫೋನ್ಸ್ ಡಿ’ಸೋಜ ಮತ್ತು ಸಂಚಾಲಕ ಕಿರಣ್ ಮಂಜನಬೈಲು ಹೇಳಿದರು.

ಕರಾವಳಿಯ ವಿದ್ಯುತ್ತನ್ನು ಬೇರೆ ಜಿಲ್ಲೆಗಳಿಗೆ ನೀಡಿ ದಕ್ಷಿಣ ಕನ್ನಡ ಜನರನ್ನು ಮೂರ್ಖರನ್ನಾಗಿಸುವ ಹುನ್ನಾರ ಸರಕಾರಗಳು ನಡೆಸುತ್ತಿದೆ. ಭೂ ಮಾಫಿಯ ಮತ್ತು ಬಾಹ್ಯ ಶಕ್ತಿಗಳ ಬಗ್ಗೆ ಗುಮಾನಿಯಿದೆ ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.

ಈಗಾಗಲೇ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧವಾಗಿ ಕಲ್ಲಮುಂಡ್ಕೂರು, ತೆಂಕ ಮಿಜಾರು, ಪುತ್ತಿಗೆ ಮೊದಲಾದ ಗ್ರಾ.ಪಂ.ಗಳಲ್ಲೂ ಅವಿರೋಧವಾಗಿ ವಿರೋಧ ನಿರ್ಣಯ ದಾಖಲಾಗಿದೆ. ಇತರ ಕಡೆಗಳಲ್ಲಿ ಇಂಥ ಮೆಗಾ ಯೋಜನೆಗೆ 3,೦೦೦ದಿಂದ 4,೦೦೦ ಎಕರೆ ಜಾಗವನ್ನು ಕೊಡಲಾಗಿದೆ. ನಿಡ್ಡೋಡಿಯಲ್ಲೂ ಆಷ್ಟೇ ಪ್ರಮಾಣದ ಭೂಮಿ ಬೇಕಾಗಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ನಿಡ್ಡೋಡಿಯಲ್ಲಿ ಸರಕಾರದ ಭೂಮಿ ಗೋಮಾಳ ಅಥವಾ ಕೃಷಿಗೆ ಪೂರಕ ಜಾಗ. ಹಾಗಾದರೆ ಕೃಷಿಯೇ ಉಸಿರಾಗಿರುವ ನಿಡ್ಡೋಡಿ ಹಾಗೂ ಪರಿಸರದವರ ಸಹಸ್ರಗಟ್ಟಲೆ ಎಕರೆ ಕೃಷಿ ಭೂಮಿಯನ್ನು ಈ ಸ್ಥಾವರ ಆಹುತಿ ತೆಗೆದುಕೊಳ್ಳುವುದು ಯಾವ ನ್ಯಾಯ? ವೈಜ್ಞಾನಿಕವಾಗಿ ಪಶ್ಚಿಮ ಘಟ್ಟ ಹಾಗೂ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳಿಗೆ ಈ ಯೋಜನೆ ಮಾರಕವಾಗಲಿದೆ ಈಗಲಾದರೂ ಜನಪ್ರತಿನಿಧಿಗಳು ಪ್ರತಿಭಾಟಿಸುವ ಧೈರ್ಯ ಮಾಡಬೇಕಾಗಿದೆ. ಎಂದು ದ.ಕ. ಜಿಲ್ಲಾ ರೈತ ಸಂಘದ ಅಧ್ಯಕ್ಷ ರೋಹಿತಾಶ್ವ ರೈ ಹೇಳಿದರು.
ನಿಡ್ಡೋಡಿ ವ್ಯಾಪ್ತಿಯ ನೆಲ್ಲಿತೀರ್ಥ, ಮುಚ್ಚೂರು ತೆಂಕಮಿಜಾರು, ಕಲ್ಲಮುಂಡ್ಕೂರು ಬಡಗಮಿಜಾರು , ಅಶ್ವತ್ಥಪುರ, ಕಟೀಲು, ಎಕ್ಕಾರು ಈ ಪ್ರದೇಶದಲ್ಲಿ ಸಾವಿರಾರು ಕುಟುಂಬಗಳು ಜೀವನ ಜೀವನ ಸಾಗಿಸುತ್ತಿದ್ದಾರೆ. ಅಲ್ಲದೆ ಕುಡುಬಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿದ್ದು ಇವರೆಲ್ಲರೂ ಸಾವಯವ ಕೃಷಿಯನ್ನು ಮಾಡಿಕೊಂಡಿರುತ್ತಾರೆ. ಅಲ್ಪಸಂಖ್ಯಾತರು ಮತ್ತು ಇತರ ಜನಾಂಗದವರು ಈ ಭಾಗದಲ್ಲಿ ಇದ್ದು ಇವರು ಕೂಡಾ ಕೃಷಿಯನ್ನೇ ಅವಲಂಬಿಸಿದ್ದಾರೆ. ನಿಡ್ಡೋಡಿಯಲ್ಲಿ ಪ್ರಸ್ತಾಪಿತಗೊಂಡಿರುವ ಕಲ್ಲಿದ್ದಲು ಆಧಾರಿತ 4೦೦೦ ಮೆಗಾವ್ಯಾಟ್ ನ ಉಷ್ಣ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಗೊಂಡರೆ ಶಾಲಾ ಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳ ಮೇಲೆ ಹೆಚ್ಚಿನ ದುಷ್ಪಾರಿಣಾಮ ಬೀಳಲಿದೆ ಎಂದು ಅಪ್ನಾದೇಶ್ ಸಂಚಾಲಕ ಶೇಖ್ ಅಬ್ದುಲ್ಲಾ ಕುಪ್ಪೆಪದವು ಹೇಳಿದರು.

ಈ ಪ್ರದೇಶದ ಜನರು, ಕೃಷಿಕರನ್ನು ಕತ್ತಲೆಯಲ್ಲಿಟ್ಟು ಈ ಪ್ರದೇಶವನ್ನು ಬರಡುಭೂಮಿಯೆಂದು ನಂಬಿಸಿ ಇಲ್ಲಿ ಯೋಜನೆ ಅನುಷ್ಠಾನಕ್ಕೆ ಕೇಂದ್ರಕ್ಕೆ ಮಾಹಿತಿ ನೀಡಿ ಬಡ ಕೃಷಿಕರನ್ನು ಒಕ್ಕಲೆಬ್ಬಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮನೋಹರ್ ಶೆಟ್ಟಿ ಕುಪ್ಪೆಪದವು ಹೇಳಿದರು.

ಕೃಷಿ ಪ್ರಧಾನವಾದ ನಿಡ್ಡೋಡಿ ಪರಿಸರದಲ್ಲಿ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಎಡಪದವು-ತೆಂಕೆಎಡಪದವು, ಪಡುಪೆರಾರ-ಮೂಡುಪೆರಾರ, ಪುತ್ತಿಗೆ ಅಶ್ವತಪುರ, ನೀರ್ಕೆರೆ ಮುಂತಾದವುಗಳು ಜನ-ಜಾನುವಾರು ಕೃಷಿ ತೋಟ ಮತ್ತು ಪರಿಸರಕ್ಕೆ ತೀವ್ರ ತೊಂದರೆಯಾಗುತ್ತದೆ. ಆರೋಗ್ಯದ ಮೇಲೆ ಮಾಲಿನ್ಯದ ಪ್ರಭಾವ,ಕೃಷಿ ಭೂಮಿ ಬರಡಾಗುವ ಸಾಧ್ಯತೆಗಳು ಅಧಿಕವಿದೆ.ಸಾವಿರಾರು ಎಕ್ರೆ ಕೃಷಿ ಭೂಮಿ ನಾಶವಾಗಿ,ಜನ ಉದ್ಯೋಗ ವಸತಿ ಇಲ್ಲದೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಹಸಿರು ಸೇನೆ ಸಂಘದ ಜಿಲ್ಲಾ ಸಂಚಾಲಕ ದಯಾನಂದ ಶೆಟ್ಟಿ ಹೇಳಿದರು.
ಹೋರಾಟಕ್ಕೆ ರಾಜಕೀಯ ಬಣ್ಣವನ್ನು ಬಳಿಯುವುದು ಸರಿಯಲ್ಲ. ತಮ್ಮ ಭೂಮಿಯನ್ನು ಉಳಿಸಲು ಹಂಬಲಿಸುವ ಜನರಿಗೆ ಬೆಂಗಾವಲಾಗಿ ನಿಂತು ಯಾವ ರೀತಿ ನಮ್ಮೂರನ್ನು ಉಳಿಸಬಹುದು ಎಂದು ಹೋರಾಟವನ್ನು ಮಾಡಬೇಕಾದ ಸಮಯ. ಜನಪ್ರತಿನಿಧಿಗಳಾದ ವೀರಪ್ಪ ಮೊಯಿಲಿ ಹಾಗೂ ಅಭಯಚಂದ್ರ ಜೈನ್ ಕೂಡ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ನಂಬಿಕೆಯಿದೆ. ಕೃಷಿ ಪ್ರಧಾನವಾಗಿರುವ ನಿಡ್ಡೋಡಿ ಪರಿಸರವು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವೂ ಆಗಿದೆ. ಸ್ಥಳದ ನಿಖರವಾದ ಅಂಕಿ ಅಂಶವನ್ನು ಪಡೆಯುವುದು ನನ್ನ ಕರ್ತವ್ಯವಾಗಿದೆ ಜನತೆಯೊಂದಿಗೆ ಹೋರಾಟದಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುವೆ ಎಂದು ಮಂಗಳೂರು ಸಂಸದ ನಳೀನ್ ಕುಮಾರ್ ಹೇಳಿದರು.
ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೋಕಿಂ ಕೊರೆಯಾ, ಮಾಜಿ ಅಧ್ಯಕ್ಷ ಪೂವಪ್ಪ ಗೌಡ, ಭಾಸ್ಕರ್ ದೇವಸ್ಯ, ಉಮಾನಾಥ ಕೋಟ್ಯಾನ್, ಜಗದೀಶ್ ಅಧಿಕಾರಿ ಸುಚರಿತ ಶೆಟ್ಟಿ, ಭವ್ಯ ಗಂಗಾಧರ್, ಶಾಲೆಟ್ ಪಿಂಟೊ ಮತ್ತು ಪರಿಸರದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಸುತ್ತಮುತ್ತಲ ಗ್ರಾಮದ ಜನರ ಬೆಂಬಲದೊಂದಿಗೆ ಮುಂದಿನ ವಾರ ಮೂಡಬಿದಿರೆಯಲ್ಲಿ ಉಗ್ರ ಹೋರಾಟ ನೆಡೆಸುವುದಾಗಿ ಸಮಿತಿ ತಿಳಿಸಿದೆ.

ಕಾರ್ಡ್ ಚಳುವಳಿ:
ಅಂಚೆ ಕಾರ್ಡ್ ಚಳುವಳಿಯನ್ನು ಕೈಗೆತಿಕೊಂಡು ನಿಡ್ಡೋಡಿಯಲ್ಲಿ ಬೃಹತ್ ಉಷ್ಣವಿದ್ಯುತ್ ಸ್ಥಾವರ ನಿರ್ಮಾಣ ವಿರೋಧಿಸಿ ಮುಖ್ಯಮಂತ್ರಿಗಳಿಗೆ ಈ ಕಾರ್ಡ್ ಗಳನ್ನು ರವಾನಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು.

Kinnigoli-28071309

Kinnigoli-28071310

Kinnigoli-28071311

Kinnigoli-28071312

Kinnigoli-28071313

Kinnigoli-28071314

Kinnigoli-28071315

Comments

comments

Comments are closed.

Read previous post:
Kinnigoli-28071308
ಸಚ್ಚಾರಿತ್ರ್ಯದ ಸಂಸ್ಕಾರದಿಂದ ಜಗತ್ತನ್ನು ಗೆಲ್ಲಬೇಕು

ಕಿನ್ನಿಗೋಳಿ: ಸಚ್ಚಾರಿತ್ರ್ಯದ ಸಂಸ್ಕಾರವನ್ನು ಬೆಳೆಸಿಕೊಂಡು ಜಗತ್ತನ್ನು ಗೆಲ್ಲಬೇಕು. ದೇಶಭಕ್ತಿಯ ಜತೆಗೆ ಪರಿಸರದ ಪ್ರೀತಿ, ಕಾಳಜಿ ವಿದ್ಯಾರ್ಥಿಗಳಲ್ಲಿ ಮುಖ್ಯವಾಗಿ ಬರಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು....

Close