ಕಿನ್ನಿಗೋಳಿ ; ಬೃಹತ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ವಿರೋಧ

ಕಿನ್ನಿಗೋಳಿ: ರಾಜಕೀಯ ಉದ್ದೇಶವನ್ನು ಬಿಟ್ಟು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಗ್ರಾಮದ ಅಸ್ತಿತ್ವ ಉಳಿಸುಕೊಳ್ಳುವಲ್ಲಿ ಅಲ್ಲದೆ ಆರೋಗ್ಯದ ಚಿಂತನೆಗಾಗಿ ನಿಡ್ಡೋಡಿ ವಿದ್ಯುತ್ ಸ್ಥಾವರದ ವಿರುದ್ದ ಹೋರಾಟಕ್ಕಾಗಿ ಸಂಘಟಿತರಾಗಬೇಕು. ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು ಹೇಳಿದರು.
ನಿಡ್ಡೋಡಿಯಲ್ಲಿ ಪ್ರಸ್ತಾವಿತ ಅಲ್ಟ್ರಾಮೆಗಾ ಉಷ್ಣ ವಿದ್ಯುತ್ ಸ್ಥಾವರದ ವಿರುದ್ಧ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ನಡೆದ ಗ್ರಾಮಸ್ಥರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಸೋಂದಾ ಭಾಸ್ಕರ ಭಟ್ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಗೆ ತಳಊರಿದ ಎಂಆರ್‌ಪಿಎಲ್, ಯುಪಿಸಿಎಲ್, ಎಂಸಿಎಫ್ ನಂತಹ ಕಂಪೆನಿಗಳ ಪರಿಸರ ಮಾಲಿನ್ಯದಿಂದಾಗಿ ಕಹಿ ಭಾವನೆಗಳು ನಮ್ಮಲ್ಲಿ ಕಂಡಿದೆ. ಈಗ ಇದರ ನಾಲ್ಕು ಪಟ್ಟು ಹೆಚ್ಚಾದ ಮಾರಕ ನಿಡ್ಡೋಡಿ ಯೋಜನೆ ಬರುವ ಪ್ರಸ್ತಾಪವಿದ್ದು ಅದನ್ನು ವಿರೋಧಿಸುವಲ್ಲಿ ಸಂಘಟಿತರಾಗಬೇಕು. ಇದರಿಂದಾಗಿ ನಮ್ಮ ತುಳುನಾಡಿನ ಪ್ರಕೃತಿ ಸಂಸ್ಕ್ರತಿ ನಾಶವಾಗುವುದು ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿಯುವ ನದಿಗಳ ಮೂಲ ಸ್ಥಾನ ಪಶ್ಚಿಮ ಘಟ್ಟಗಳು. ಯೋಜನೆ ಪ್ರಾರಂಭಗೊಂಡರೆ ಪ್ರಾಣಿ ಸಂಕುಲ ಸಸ್ಯ ಪ್ರಭೇದ ಸಮುದ್ರಜೀವಿಗಳಿಗೆ ಹಾಗೂ ನದಿ ಮೂಲಗಳಿಗೆ ಧಕ್ಕೆಯಾಗಲಿದೆ ಎಂಬುದು ಪರಿಸರ ತಜ್ಞರ ಅಭಿಮತ. ಹಾರುವ ಬೂದಿ, ಆಮ್ಲ ಮಳೆ, ತಾಪಮಾನ ಏರಿಕೆ, ಜನ, ದನ ಪರಿಸರಕ್ಕೆ ಅಪಾಯ ಈ ಎಲ್ಲಾ ತೊಂದರೆಗಳು ಉದ್ದಿಮೆಯ ಜೊತೆಗೆ ಹುಟ್ಟಿಕೊಳ್ಳುತ್ತವೆ. ವಿದ್ಯುತ್ ಸ್ಥಾವರದ ವಿರುದ್ಧ ಪರಿಸರದ ಗ್ರಾಮಗಳಲ್ಲಿ ಹೋರಾಟ ನಡೆಯಲೇಬೇಕು. ಪರಿಸರ ಕಾಳಜಿಯ ವೈದ್ಯರು, ನ್ಯಾಯವಾದಿಗಳು, ರೋಟರಿ, ಲಯನ್ಸ್,ಜೇಸೀಸ್ ಅಲ್ಲದೆ ಇತರ ಸಂಘ ಸಂಸ್ಥೆಗಳು ಅಲ್ಲದೆ ಅವಿಭಜಿತ ದಕ್ಷಿಣಕನ್ನಡದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು ನಿಡ್ಡೋಡಿ ಸ್ಥಾವರದ ವಿರುದ್ದ ನಿರ್ಣಯ ಮಾಡಿ ಪ್ರತಿಯನ್ನು ಸರಕಾರಕ್ಕೆ ಹಾಗೂ ಹೋರಾಟ ಸಮಿತಿಗೆ ಕಳುಹಿಸಬೇಕು ಎಂದು ಮೂಡಬಿದಿರೆ ರೈತ ಸಂಘದ ಅಧ್ಯಕ್ಷ ಧನಕೀರ್ತಿ ಬಲಿಪ ಹೇಳಿದರು.
ಅಭಿವೃದ್ದಿ ಪೂರಕವಾಗಿ ಕರಾವಳಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ಕೊಂಕಣ ರೈಲು ಹಾಗೂ ಬಂದರು ಬರುವಾಗ ಜನರು ಸಂತೋಷ ಪಟ್ಟರು ಈ ಎಲ್ಲ ಸೌಲಭ್ಯಗಳಿಂದಾಗಿ ಅಭಿವೃದ್ಧಿ ಮಾರಕ ಯೋಜನೆಗಳಿಗೆ ನಾವೇ ಎಡೆ ಕೊಟ್ಟಂತಾಗಿದೆ. ರಾಜ್ಯ ಹೆದ್ದಾರಿಯಾದ ಮುಲಿ- ಮೂಡಬಿದೆರೆಗೆ ಈ ವರೆಗೂ ರಸ್ತೆ ಅಗಲವಾಗಿಲ್ಲ ಈಗ ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಲಿದೆ, ಮೂಡಬಿದಿರೆ ಕಾರ್ಕಳಕ್ಕೆ ರೈಲು ಯೋಜನೆ ಹಾಗೂ ಬಜೆಟ್ಟಿನಲ್ಲಿ ಕರಾವಳಿಯ ಕೈಗಾರಿಕೆಗೆ ಹಣ ಮೀಸಲು ಎಂಬ ಸುದ್ದಿಗಳ ಪುಕಾರಿಗೆ ಪರಿಸರದ ಜನ ತಲ್ಲಣಗೊಂಡಿದ್ದಾರೆ. ನಿಡ್ಡೋಡಿ ಸ್ಥಾವರ ಆಗಬಹುದೇ?? ಎಂಬ ಜಿಜ್ಞಾಸೆ ಜನರಲ್ಲಿ ಮೂಡಿದೆ. ಜಾತಿ ಪಕ್ಷ ಉದ್ಯೋಗದ ಮೂಲಕ ಜನರನ್ನು ಮರಳುಗೊಳಿಸುವ ಹುನ್ನಾರ ಸಂಬಂಧಪಟ್ಟವರು ಮಾಡಬಹುದು ಎಂದು ಸಭೆಯಲ್ಲಿ ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದರು. .
ಜನರಿಗೆ ಸರಿಯಾಗಿ ಮಾಹಿತಿ ಸಿಗಬೇಕಾದರೆ ನಮ್ಮ ಸಂಸದರು ಮತ್ತು ಮಂತ್ರಿಗಳನ್ನು ಕರೆಸಿ ಮತ್ತೆ ಸಭೆ ನಡೆಸಬೇಕು ಎಂದು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ ಎಂದು ಅಭಿಪ್ರಾಯ ಪಟ್ಟರು.
ನಿಡ್ಡೋಡಿ ಯೋಜನೆಯ ಬಗ್ಗೆ ಪರಿಸರ ಖಾತೆ, ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆಗಳಿಗೆ ಮಾಹಿತಿ ಹಕ್ಕಿನ ಮೂಲಕ ಕೇಳಿದಾಗ ನಮಗೆ ಮಾಹಿತಿ ಲಭ್ಯವಿಲ್ಲ ಎಂದು ಲಿಖಿತ ಸಂದೇಶ ಬಂದಿದೆ ಎಂದು ಮಾತೃಭೂಮಿ ಸಮಿತಿ ಅಧ್ಯಕ್ಷ ಅಲೋನ್ಸ್ ಡಿ’ಸೋಜಾ ತಿಳಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾಲೆಟ್ ಪಿಂಟೋ ಮಾತನಾಡಿ ರಾಜಕೀಯ ವ್ಯಕ್ತಿಗಳು ಹೋರಾಟ ಸಮಿತಿಯಲ್ಲಿ ಬೇಡ ಎನ್ನುವ ವಾದ ಸರಿಯಲ್ಲ ಬದಲಿಗೆ ನಿಡ್ಡೋಡಿ ಸಂರಕ್ಷಣೆಗಾಗಿ ರಾಜಕೀಯ ಇಚ್ಚಾಶಕ್ತಿ ಬಿಟ್ಟು ಸಮಿತಿಗೆ ಸೇರಿಕೊಳ್ಳುವರನ್ನು ಸ್ವಾಗತಿಸಬೇಕು. ಹೋರಾಟಕ್ಕೆ ನಿಷ್ಕಳಂಕ ಜನಪ್ರತಿನಿಧಿಗಳು ಅಗತ್ಯವಾಗಿರುತ್ತಾರೆ ಎಂದು ಹೇಳಿದರು.

ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪರವರು ತಾಳಿಪಾಡಿ ಗ್ರಾಮದಲ್ಲಿ ಹೋರಾಟ ಸಮಿತಿಯಲ್ಲಿ ಉಪ ಸಮಿತಿಯನ್ನು ರಚಿಸಲು ಸಭೆಯಲ್ಲಿ ವಿಷಯವನ್ನು ಮಂಡಿಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ನೇತೃತ್ವದಲ್ಲಿ ತಾಳಿಪಾಡಿ ಗ್ರಾಮ ಉಪಸಮಿತಿಯನ್ನು ರಚಿಸಲಾಯಿತು. ಸಂಘಟನಾ ಕಾರ್ಯದರ್ಶಿಗಳಾಗಿ ಜೋಸ್ಸಿ ಪಿಂಟೋ, ಪುರಂದರ ಶೆಟ್ಟಿಗಾರ್ ಸಹಿತ ಗ್ರಾಮಸ್ಥರ ಸಮಿತಿಯನ್ನು ರಚಿಸಲಾಯಿತು.

ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೈಲಾ ಸಿಕ್ವೇರಾ, ತುಳುಕೂಟದ ರಘುರಾಮ ಶೆಟ್ಟಿ ಮಿಜಾರು, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹಗ್ಡೆ, ಕಾನ್ಸೆಟ್ಟಾ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಜೀವಿತಾ, ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರುಸಾರಿಯೊ, ಲಯನ್ಸ್ ಕ್ಲಬ್‌ನ ಲಾರೆನ್ಸ್ ಫೆರ್ನಾಂಡಿಸ್, ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಧ್ಯಕ್ಷ ಶ್ರೀಧರ ಶೆಟ್ಟಿ ಮಾತನಾಡಿದರು.ಶರತ್ ಕಾರ್ಯಕ್ರಮ ನಿರೂಪಿಸಿದರು
ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದು ಎಲ್ಲರೂ ಯೋಜನೆಯ ವಿರುದ್ದ ಒಕ್ಕೋರಲಿನಿಂದ ಹೋರಾಟದ ತೀವ್ರತೆಯ ಬಗ್ಗೆ ಸಮಾಲೋಚಿಸಿದರು.

Kinnigoli-07081306

Comments

comments

Comments are closed.

Read previous post:
Kinnigoli-07081305
ಗುತ್ತಕಾಡು : ಉಚಿತ ಶೂ ವಿತರಣೆ

ಕಿನ್ನಿಗೋಳಿ : ಹಳ್ಳಿ ಶಾಲೆ, ಕನ್ನಡ ಮಾಧ್ಯಮ ಎಂಬ ಕೀಳರಿಮೆ ಬೇಡ ಈ ಮಾಧ್ಯಮದಲ್ಲಿ ಕಲಿತವರೂ ಉತ್ತಮ ಪ್ರತಿಭಾವಂತರಾಗಿದ್ದಾರೆ ಎಂದು ವಿಶ್ವ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್...

Close