ಚರಂಡಿಗೆ ಇಳಿಯುತ್ತಿರುವ ವಾಹನಗಳು

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಕಿರೆಂ ಚರ್ಚ್ ಬಳಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ವಾಹನಗಳು ಚರಂಡಿಗೆ ವಾಲುತ್ತಿದ್ದರೂ ಗಾಢ ನಿದ್ರೆಯಲ್ಲಿರುವ ಎರಡೂ ಗ್ರಾಮ ಪಂಚಾಯತ್‌ಗಳ ವಿರುದ್ಧ ಸಾರ್ವಜನಿಕರು ಹಾಗೂ ವಾಹನ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಂಭವಿಸಿದೆ.
ಹಲವಾರು ವರ್ಷಗಳಿಂದ ಈ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲದಿರುವುದರಿಂದ ಕಳೆದ ಕೆಲವು ದಿನಗಳಿಂದ ಘನ ವಾಹನಗಳು ರಸ್ತೆಯ ಬದಿಯಲ್ಲಿರುವ ಚರಂಡಿಗೆ ಇಳಿಯುತ್ತಿದ್ದು ಈ ಬಗ್ಗೆ ಇಂದು ಬೆಳಿಗ್ಗೆ ಸಹ ಪ್ರಯಾಣಿಕರನ್ನು ಹೊತ್ತಿದ್ದ ಖಾಸಗಿ ಸರ್ವಿಸ್ ಬಸ್ಸು ಪಕ್ಕಕ್ಕೆ ವಾಲಿ ದೊಡ್ಡ ಅವಘಡದ ಸಂಭಾವ್ಯ ತಪ್ಪಿಹೋಗಿದೆ.
ಈ ಬಗ್ಗೆ ವಿಜಯ ಕರ್ನಾಟಕ ಹಲವಾರು ಬಾರಿ ಸಚಿತ್ರ ವರದಿ ಪ್ರಕಟಿಸಿದ್ದರೂ ಶಾಶ್ವತ ಪರಿಹಾರ ದೊರಕಿಲ್ಲ. ಕಳೆದ ವರ್ಷ ಸ್ಥಳೀಯ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳು ಒಂದಿಷ್ಟು ಶ್ರಮದಾನ ಮಾಡಿ ಹೊಂಡ ಮುಚ್ಚಿ ಅಲ್ಪ ಮುಕ್ತಿ ದೊರಕಿಸಿ ಮಾನವೀಯತೆ ಪ್ರದರ್ಶಿಸಿದ್ದರು. ಈ ರಸ್ತೆಯ ಒಂದು ಭಾಗ ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಸೇರಿದರೆ ಮತ್ತೊಂದು ಭಾಗ ಐಕಳ ಗ್ರಾಮ ಪಂಚಾಯತ್‌ಗೆ ಸೇರಿದೆ ಆದರೂ ಎರಡೂ ಪಂಚಾಯತ್‌ಗಳು ನಿರ್ಲಕ್ಷ ತೋರಿದ್ದು ಸಾರ್ವಜನಿಕರ ಸಹನೆಯನ್ನು ಪರೀಕ್ಷಿಸುತ್ತಿದೆ ಎಂದು ನಾಗರಿಕರು ಆರೋಪಿಸಿದ್ದು ಕಳೆದ ನಾಲ್ಕು ದಿನಗಳ ಹಿಂದೆ ನಿಟ್ಟೆ ವಿದ್ಯಾ ಸಂಸ್ಥೆಯ ಬಸ್ಸು ಚರಂಡಿಗೆ ಇಳಿದರೆ, ಮರುದಿನ ಅದೇ ಸ್ಥಳದಲ್ಲಿ ಕಾರೊಂದು ಚರಂಡಿಗೆ ಹೊಡದಲ್ಲಿ ಸಿಕ್ಕಿಕೊಂಡು ಚರಂಡಿಗೆ ಇಳಿದಿತ್ತು. ಈಗ ಗುರುವಾರ ಬಸ್ಸು ಸೈಡು ಕೊಡಲು ಹೋಗಿ ಚರಂಡಿಗೆ ಇಳಿದಿದೆ. ದ್ವಿಚಕ್ರವಾಹನದವರು ಸಿಕ್ಕಿಕೊಳ್ಳುವುದಕ್ಕೆ ಲೆಕ್ಕವೇ ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಇದಕ್ಕೆ ಮುಖ್ಯ ಕಾರಣ ಮಳೆ ಬಂದ ಕೂಡಲೇ ಈ ರಸ್ತೆಯಲ್ಲಿ ಒಂದರಿಂದ ಎರಡು ಅಡಿ ನೀರು ನಿಲ್ಲುತ್ತಿರುವುದು. ವಾಹನಗಳು ಸಿಕ್ಕಿಕೊಂಡ ತಕ್ಷಣ ಸ್ಥಳೀಯರೇ ನೆರವು ನೀಡಬೇಕಾದ ಅನಿವಾರ್ಯತೆ ಇಲ್ಲಿನ ನಿವಾಸಿಗಳದ್ದು ರಾತ್ರಿ ಸಮಯದಲ್ಲಿ ಬಿದ್ದು ಒದ್ದಾಡುವ ಅನೇಕ ವಾಹನ ಚಾಲಕರನ್ನು ನಾವು ಕಂಡು ಮರುಕ ಪಟ್ಟಿದ್ದಿದೆ ಆದರೂ ಗ್ರಾಮ ಪಂಚಾಯಿತಿಗಳು ಮೌನ ವಹಿಸಿದೆ ಎಂದು ಗಂಭೀರವಾಗಿ ಆರೋಪಿಸುವ ಗ್ರಾಮಸ್ಥರು ಹತ್ತಿರದಲ್ಲೇ ಇರುವ ಐಕಳ ಗ್ರಾಮ ಪಂಚಾಯತ್‌ಗಳಾಗಲಿ, ತೆರಿಗೆ ಸಂಗ್ರಹಣದಲ್ಲಿ ತಾಲ್ಲೂಕಿನಲ್ಲಿಯೇ ಎರಡನೇ ಸ್ಥಾನದಲ್ಲಿರುವ ಕಿನ್ನಿಗೋಳಿ ಗ್ರಾಮ ಪಂಚಾಯತ್‌ಗಳಿಗೆ ಇಲ್ಲಿನ ವಾಹನ ಚಾಲಕರ ಚೀರಾಟ-ಪರದಾಟ ಕೇಳಿಸುತ್ತಿಲ್ಲವೇ ಎಂದು ಪ್ರಶ್ನಿಸುತ್ತಾರೆ.
ಈ ಬಗ್ಗೆ ಗ್ರಾಮ ಪಂಚಾಯತ್‌ಗಳು ಸಹ ರಸ್ತೆಯ ಅಕ್ಕಪಕ್ಕದವರು ರಸ್ತೆ ಒತ್ತುವರಿಯನ್ನು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸುತ್ತಾರೆ. ಆದರೆ ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದಾಡುತ್ತಿತ್ತು ಆಗ ರಸ್ತೆಯ ಪಕ್ಕದಲ್ಲಿರುವ ಚರಂಡಿಯನ್ನು ರಸ್ತೆಗಿಂತ ಎತ್ತರವಾಗಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದು ಅಲ್ಲದೆ ನೀರು ಸರಾಗವಾಗಿ ಹೋಗುತ್ತಿದ ದಾರಿಯನ್ನು ಮುಚ್ಚಿರುವುದು ಈ ದುರಂತಗಳಿಗೆ ಪರೋಕ್ಷ ಕಾರಣ ಎನ್ನಲಾಗಿದೆ.
ಹತ್ತಿರದ ಜಮೀನಿನವರು ಹಾಗೂ ಇಲಾಖೆಯ ಘೋರ ನಿರ್ಲಕ್ಷ ಇನ್ನಾದರೂ ಸರಿಯಾದಿತೇ???
ನಿರಂತರವಾಗಿ ಸಂಭವಿಸುತ್ತಿರುವ ಈ ದುರಂತಗಳಿಂದ ಬೇಸತ್ತು ಬಸ್ಸು ಚಾಲಕರು ಬಸ್ಸು ಮಾಲೀಕರ ಸಂಘದವರಲ್ಲಿ ಮೌಖಿಕ ದೂರು ನೀಡಿದ್ದು ತಕ್ಷಣ ಪರಿಹಾರ ಕಂಡು ಕೊಳ್ಳದಿದ್ದಲ್ಲಿ ಇತರ ವಾಹನ ಚಾಲಕರು ಹಾಗೂ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವ ಬಗ್ಗೆ ಚಿಂತನೆ ಸಹ ನಡೆದಿದೆ ಎಂದು ತಿಳಿದು ಬಂದಿದೆ.

Kinnigoli-08081301

Kinnigoli-08081302

Comments

comments

Comments are closed.

Read previous post:
Giriyappa-Devadiga
ನಿಧನ: ಗಿರಿಯಪ್ಪ ದೇವಾಡಿಗ (57)

ಕಿನ್ನಿಗೋಳಿ : ಕಿನ್ನಿಗೋಳಿ ಕೆಮ್ಮಡೆ ನಿವಾಸಿ ಗಿರಿಯಪ್ಪ ದೇವಾಡಿಗ(57ವರ್ಷ) ಗುರುವಾರ ಹೃದಯಾಘಾತದಿಂದ ನಿಧನರಾದರು. ಕಿನ್ನಿಗೋಳಿಯಲ್ಲಿ ಹಲವು ವರ್ಷಗಳಿಂದ ಟೈಲರಿಂಗ್ ವೃತ್ತಿಯಲ್ಲಿ ದುಡಿಯುತ್ತಿದ್ದು, ಸಮಾಜ ಸೇವಕರಾಗಿದ್ದರು, ಕೆಮ್ಮಡೆಯ ಕೊರ‍್ದಬ್ಬು ದೈವಸ್ಥಾನದ...

Close