ನಿಡ್ಡೋಡಿ ಬೃಹತ್ ಉಷ್ಣ ವಿದ್ಯುತ್ ಸ್ಥಾವರ

Kinnigoli-21081304

ಕರಾವಳಿ ಪ್ರದೇಶಕ್ಕೆ ಎರಡನೇ ಬೃಹತ್ ಉಷ್ಣ ವಿದ್ಯುತ್ ಸ್ಥಾವರ ಬರವುದು ನಿಶ್ಚಿತವಾಗಿದೆಯೇ?!? ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನಿಡ್ಡೋಡಿ ಎಂಬಲ್ಲಿ ಕೇಂದ್ರ ಸರಕಾರದ ಇಂಧನ ಇಲಾಖೆಗೆ ಸೇರಿದ ಸುಮಾರು 4000 ಮೆ.ವ್ಯಾ. ಸಾಮರ್ಥ್ಯದ ವಿದೇಶಿ ಕಲ್ಲಿದ್ದಲು ಆಧಾರಿತ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (ಯುಎಂಪಿಪಿ) ತಲೆ ಎತ್ತಲಿದೆ. ಕೇಂದ್ರ ಸರಕಾರ ವಿವಿಧ ರಾಜ್ಯಗಳಲ್ಲಿ ಒಟ್ಟು 12 ಅಲ್ಟ್ರಾ ಮೆಗಾ ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರ ಕೈಗೊಂಡಿದ್ದು. ಒಂದು ಸ್ಥಾವರ ಕರ್ನಾಟಕಕ್ಕೂ ಸಿಗಲಿದೆ. ವಿದ್ಯುತ್ ದರ ಕಡಿಮೆ ಮಾಡುವ ಉದ್ದೇಶದಿಂದ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್‌ನ್ನು ಕಲ್ಲಿದ್ದಲು ದೊರೆಯುವ ಪ್ರದೇಶ ಅಥವಾ ಸಮುದ್ರ ತೀರಕ್ಕೆ ಸಮೀಪ ಸ್ಥಾಪಿಸಬೇಕು ಎಂಬ ನಿಯಮವಿದೆ.

2001ರ ಜನಗಣತಿ ಪ್ರಕಾರ ದೇಶದಲ್ಲಿ 44 ಶೇ. ಮನೆಗಳು ವಿದ್ಯುತ್ ಸಂಪರ್ಕ ಕಂಡಿಲ್ಲ. 2003ರಲ್ಲಿ ಎಲೆಕ್ಟ್ರಿಕ್ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿತು. ಮೂರು ಲಕ್ಷ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲು ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಎಂಬ ಬೃಹತ್ ಸ್ಥಾವರಗಳನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿತು. ಕೇಂದ್ರದ ವಿದ್ಯುತ್ ಇಲಾಖೆಯು ಕೇಂದ್ರ ವಿದ್ಯುತ್ ಪ್ರಾಧಿಕಾರ ಮತ್ತು ಪವರ್ ಫೈನಾನ್ಸ್ ಕಾರ್ಪೊರೇಶನ್ ಲಿ.ನ ಸಹಯೋಗದೊಂದಿಗೆ 4,000 ಮೆಗಾ ವ್ಯಾಟ್ ಸಾಮರ್ಥ್ಯದ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್‌ಗಳನ್ನು ಸ್ಥಾಪಿಸಲು ಸರಕಾರ ಮುಂದಾಯಿತು.

2008-09ರಲ್ಲಿ ಕರ್ನಾಟಕಕ್ಕೆ ಬಂದ ಯೋಜನೆ :
ನೇಶನಲ್ ಥರ್ಮಲ್ ಪವರ್ ಕಾರ್ಪೋರೇಷನ್ (NTPC) ಎಂಬ ಸರಕಾರಿ ಸ್ವಾಮ್ಯದ ಸಂಸ್ಥೆಯು 4000 ಮೆಗಾವ್ಯಾಟ್ ನ ಉಷ್ಣ ವಿದ್ಯುತ್ ಸ್ಥಾವರದ ಯೋಜನೆಯು 2008-09ರಲ್ಲಿ ಕರ್ನಾಟಕಕ್ಕೆ ಹೆಜ್ಜೆ ಇಟ್ಟಿದ್ದು. ಈ ಯೋಜನೆಯನ್ನು ಕರ್ನಾಟಕದ ಉತ್ತರಕನ್ನಡ, ದಕ್ಷಿಣಕನ್ನಡ ಮತ್ತು ಉಡುಪಿಯಲ್ಲಿ ನಿರ್ಮಿಸಬೇಕೆಂದು ಎನ್ಟಿಪಿಸಿ ಕಂಪನಿಯು ಆದೇಶಿಸಿತ್ತು. ಈ ನಿಟ್ಟಿನಲ್ಲಿ ಉತ್ತರಕರ್ನಾಟಕದ ತದಡಿಯಲ್ಲಿ ನಿರ್ಮಿಸುವುದೆಂದು ತೀರ್ಮಾನಿಸಿದಾಗ ಆಪ್ರದೇಶದ ಜನರು ಪ್ರತಿಭಟನೆಯ ಮೂಲಕ ಯೋಜನೆ ಬಾರದಂತೆ ಎಚ್ಚರವನ್ನು ನೀಡಿದ್ದರು. ಆ ನಂತರ ಎಲ್ಲಿಯೂ ಅವಕಾಶ ಸಿಗದಿದ್ದಾಗ ಯೋಜನೆ ಹಿಂದೆ ಹೋಗುವುದರಲ್ಲಿತ್ತು. ತದಡಿಯಲ್ಲಿ ತಿರಸ್ಕೃತಗೊಂಡ ಯೋಜನೆಯನ್ನು ನಿಡ್ಡೋಡಿಗೆ ತರಿಸುವ ಪ್ರಯತ್ನ ನಡೆಯುತ್ತಿದೆ.

ಹೋರಾಟ, ಗದ್ದಲಗಳ ನಡುವೆ ಕೆಲವು ಸಂಸ್ಥೆಗಳ ಹಸ್ತಾಂತರದ ನಂತರ ಆರಂಭವಾದ ಉಡುಪಿಯ ಯುಪಿಸಿಎಲ್‌ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕೇವಲ 1,200 ಮೆ.ವ್ಯಾ. ಆದರೆ ನಿಡ್ಡೋಡಿಯ ಸ್ಥಾವರ 4,000 ಮೆ. ವ್ಯಾ. ಅಂದರೆ ಯುಪಿಸಿಎಲ್‌ಗಿಂತ ಮೂರೂವರೆ ಪಟ್ಟು ಅಧಿಕ ಸಾಮಾರ್ಥ್ಯ ಹೊಂದಿದೆ. ಯುಪಿಸಿಎಲ್‌ನಿಂದಾದ ಪರಿಸರ ಮಾಲಿನ್ಯ ಹಾನಿ ನೋಡಿದಾಗ ನಿಡ್ಡೋಡಿ ಪ್ರಾಜೆಕ್ಟ್ ಅದಕ್ಕಿಂತಲೂ ಮೂರೂವರೆ ಪಟ್ಟು ಅಧಿಕ ಪ್ರಮಾಣದಲ್ಲಿ ಪರಿಸರವನ್ನು ನಾಶ ಮಾಡುವುದು ನಿಶ್ಚಿತ.
ಮೆಗಾ ಯೋಜನೆಗೆ 3,000ದಿಂದ 4,000ಎಕರೆ ಜಾಗವನ್ನು ಕೊಡಲಾಗಿದೆ. ನಿಡ್ಡೋಡಿಯಲ್ಲೂ ಆಷ್ಟೇ ಪ್ರಮಾಣದ ಭೂಮಿ ಬೇಕಾಗಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ನಿಡ್ಡೋಡಿಯಲ್ಲಿ ಸರಕಾರದ ಭೂಮಿ ಗೋಮಾಳ ಅಥವಾ ಕೃಷಿಗೆ ಪೂರಕವಾದ ಜಾಗ. ಹಾಗಾದರೆ ಕೃಷಿಯೇ ಉಸಿರಾಗಿರುವ ನಿಡ್ಡೋಡಿ ಪರಿಸರದ ಸಹಸ್ರಗಟ್ಟಲೆ ಎಕರೆ ಕೃಷಿ ಭೂಮಿಯನ್ನು ಈ ಸ್ಥಾವರ ಸ್ವಾಹವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮುಲ್ಕಿ-ಕಿನ್ನಿಗೋಳಿ-ಮೂಡುಬಿದಿರೆ ನಡುವೆ ಬರುವ ನಿಡ್ಡೋಡಿ ಎಂಬ ಕೃಷಿ ಆಧರಿತ ಪುಟ್ಟ ಗ್ರಾಮದಲ್ಲಿ ಸರಕಾರಿ ಭೂಮಿ ಇದೆ ಎಂಬುದನ್ನು ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ ಹೊರತು ಸರಕಾರದ ಇತರ ಮಾಹಿತಿಯಲ್ಲಿ ಯಾವುದೇ ದಾಖಲೆಗಳಿಲ್ಲ. ಸರಕಾರದ ಜನ ವಿರೋಧಿ ನೀತಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ನಿಡ್ಡೋಡಿ ಗ್ರಾಮವು ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ಪ್ರಸ್ತಾವನೆಗೆ ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಹಾಗೂ ಪರಿಸರದ ನಾಲ್ಕು ಗ್ರಾಮ ಪಂಚಾಯಿತಿಗಳು ಅವಿರೋಧವಾಗಿ ವಿರೋಧ ನಿರ್ಣಯ ಮಾಡಿವೆ.

ಈ ಅಪಾಯಕಾರಿ ಯೋಜನೆ ಬಂದರೆ ಕೃಷಿ ಭೂಮಿ ಬರಡಾಗಿ, ಊರು ಸರ್ವ ನಾಶವಾಗಲಿದೆ. ಯೋಜನೆಯನ್ನು ಆರಂಭಿಸುವ ಮೊದಲು ಅದರ ಸಾಧಕ ಬಾಧಕ ಚರ್ಚೆ ನಡೆಯಬೇಕು. ಅಧಿಕಾರಿಗಳು ಗ್ರಾಮಸ್ಥರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಆದರೆ ಸರಕಾರಗಳು ಗ್ರಾಮಸ್ಥರನ್ನು ನಿರ್ಲಕ್ಷಿಸಿ ಯೋಜನೆಯನ್ನು ಹೇರುತ್ತಿದೆ.

ನಿಡ್ಡೋಡಿ ವ್ಯಾಪ್ತಿಯ ಕಲ್ಲಮುಂಡ್ಕೂರು, ಮುಚ್ಚೂರು, ನೆಲ್ಲಿತೀರ್ಥ, ತೆಂಕಮಿಜಾರು, ಬಡಗಮಿಜಾರು , ಅಶ್ವತ್ಥಪುರ, ಕಿನ್ನಿಗೋಳಿ, ಐಕಳ, ಕಟೀಲು, ಎಕ್ಕಾರು ಪ್ರದೇಶಗಳಲ್ಲಿ ಸಾವಿರಾರು ಕುಟುಂಬಗಳು ಜೀವನ ಸಾಗಿಸುತ್ತಿದ್ದಾರೆ. ಎಕ್ಕಾರಿನಲ್ಲಿ ಇರುವಂತೆ ಇಲ್ಲಿ ಕೂಡಾ ಕುಡುಬಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಾವಯವ ಕೃಷಿಯನ್ನು ಅವಲಂಬಿಸಿ ಜೀವನ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಮತ್ತು ಇತರ ಜನಾಂಗದವರು ಕೂಡಾ ಕೃಷಿಯನ್ನೇ ಅವಲಂಬಿಸಿದ್ದಾರೆ. ನಿಡ್ಡೋಡಿಯಲ್ಲಿ ಪ್ರಸ್ತಾಪಿತಗೊಂಡಿರುವ ಕಲ್ಲಿದ್ದಲು ಆಧಾರಿತ ೪೦೦೦ ಮೆಗಾವ್ಯಾಟ್ ನ ಉಷ್ಣ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣಗೊಂಡರೆ ಶಾಲಾ ಕಾಲೇಜುಗಳು, ಧಾರ್ಮಿಕ ಕ್ಷೇತ್ರಗಳ ಮೇಲೆ ಹೆಚ್ಚಿನ ದುಷ್ಪಾರಿಣಾಮ ಬೀಳಲಿದೆ.
ಕೃಷಿಕರನ್ನು ಕತ್ತಲೆಯಲ್ಲಿಟ್ಟು ಈ ಪ್ರದೇಶವನ್ನು ಬರಡುಭೂಮಿಯೆಂದು ನಂಬಿಸಿ ಅಧಿಕಾರಿಗಳು ಕೇಂದ್ರಕ್ಕೆ ಮಾಹಿತಿ ನೀಡಿ ಬಡ ಕೃಷಿಕರನ್ನು ಮೂರ್ಖರನ್ನಾಗಿಸುವ ಹುನ್ನಾರ ಮಾಡುತ್ತಿದ್ದಾರೆ.

ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿರುವ ಮೂಡುಬಿದಿರೆಯಿಂದ ೧೨ ಕಿ.ಮೀ ದೂರವಿರುವ ನಿಡ್ಡೋಡಿ ಗ್ರಾಮವು ಭಾರೀ ಪ್ರಮಾಣದ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ವಿಚಾರದಿಂದ ಆತಂಕಗೊಂಡಿದೆ. ರಾಜಕೀಯದಲ್ಲಿ ಕಾಂಗ್ರೆಸ್ಸಿಗರು ‘ನಿಡ್ಡೋಡಿ ಸ್ಥಾವರ ಬಿಜೆಪಿ ಕೂಸು, ಬಿಜೆಪಿಗರು ಕಾಂಗ್ರೆಸಿಗರ ಕೂಸು’ ಎಂದು ಕಾಲ ಹರಣ ಮಾಡದೇ ಇರುವುದು ಉತ್ತಮ. ನಿಡ್ಡೋಡಿ ಸ್ಥಾವರ ಗ್ರಾಮಸ್ಥರ ಕನಸುಗಳನ್ನು ಕಸಿದುಕೊಳ್ಳುವ ಹಂತದಲ್ಲಿದ್ದು ಸಾಂಘಿಕ ಹೋರಾಟದ ಮೂಲಕ ಗ್ರಾಮಸ್ಥರಿಗೆ ಧ್ವನಿಯಾಗಿ ಧೈರ್ಯ ತುಂಬುವ ಪ್ರಯತ್ನ ಕರಾವಳಿಗರು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕಾಗಿದೆ.

ದಕ್ಷಿಣ ಕನ್ನಡದಲ್ಲಿ ಈಗಾಗಲೇ ಒಂದು ವಿದ್ಯುತ್ ಯೋಜನೆಯಿದೆ. ಸಾಲದ್ದಕ್ಕೆ ಎಸ್.ಇ.ಝಡ್ ಮತ್ತು ಇತರ ಬೃಹತ್ ಯೋಜನೆಗಳಿಗೆ ನಮ್ಮ ರೈತರು ಸಾವಿರಾರು ಎಕರೆ ಜಮೀನನ್ನು ಕಳೆದುಕೊಂಡಿದ್ದಾರೆ. ನಿಡ್ಡೋಡಿಯಲ್ಲೂ ಸ್ವಾಧೀನವಾಗುವ ಭೂಮಿಯಲ್ಲಿ ದೊಡ್ಡ ಪಾಲು ಕೃಷಿ ಭೂಮಿಯೇ ಆಗುವುದರಲ್ಲಿ ಸಂಶಯವಿಲ್ಲ. ದೇಶದಲ್ಲಿ ವಿದ್ಯುತ್ ಅಭಾವ ಇದೆ ನಿಜ. ಆದರೆ ರೈತನ ಭೂಮಿಯನ್ನು ಕರ್ನಾಟಕದ ಯೂವುದೇ ಕರಾವಳಿ ಭಾಗದಲ್ಲಿ ಬೃಹತ್ ಯೋಜನೆಯನ್ನು ಅನುಷ್ಠಾನಕ್ಕೆ ತರುವಾಗ ಪರಿಸರದ ಮೇಲಾಗುವ ಶಾಶ್ವತ ದುಷ್ಪರಿಣಾಮಗಳು ಮತ್ತು ಈ ಕಡಿದಾದ ಕರಾವಳಿಯ ಭೂ ಸೂಕ್ಷ್ಮತೆಯನ್ನು ಪ್ರಧಾನವಾಗಿ ಪರಿಗಣಿಸಲೇಬೇಕಾಗಿದೆ. ಕರಾವಳಿಯ ಸೂಕ್ಷ್ಮ ದುರ್ಭಲ ಒತ್ತಡಗಳನ್ನು ತಾಳಿಕೊಳ್ಳಲಾಗದ ಸ್ವಾಭಾವಿಕ ಸಹಜ ಗುಣಗಳನ್ನು ಹೊಂದಿದೆ ಎಂದು ಆಳವಾದ ಅಧ್ಯಯನ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗಿವೆ.
ಅಂತಹ ಕೆಲವು ಅಧ್ಯಯನ ವರದಿಗಳೆಂದರೆ
1. Industrial and Economic Perspective of Dakshina Kannada by Karnataka Center for Industrial Planning
2. Report by Danida Management of sustainable Development 1993-1995
3. Neeri Report 1996
4. Carrying Capasity for Industrial of a Region  1998
5. The Karnatakas Environmental Status and Action Plan 2003
ಈಗಾಗಲೇ ಕರಾವಳಿ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಯೋಜನೆಗಳು ಮತ್ತು ಕಾರ್ಯಗತಗೊಳ್ಳಲಿರುವ ಬೃಹತ್ ಯೋಜನಗಳ ಬಗ್ಗೆ ರೂಪು ರೇಷೆ ಅಂತಿಮಗೊಳಿಸುವ ಮುನ್ನ ಭೂಮಿಯ ಧಾರಣಾ ಸಾಮಾರ್ಥ್ಯ ಅಧ್ಯಯನ ನಡೆಸಿ ಯೋಜನೆಯ ಅನುಷ್ಠಾನದ ಸಾಧಕ ಭಾದಕಗಳನ್ನು ಪರಿಗಣಿಸಬೇಕು ನಮ್ಮ ಸರಕಾರಗಳು ನೇಮಿಸಿದ ತಜ್ಞ ಸಮಿತಿಗಳ ವರದಿಗಳನ್ನು ಸರಕಾರ ಮತ್ತು ಜನಸಾಮಾನ್ಯರು ಗಂಬೀರವಾಗಿ ಪರಿಗಣಿಸಬೇಕಾಗಿದೆ.
ಮಾಲಿನ್ಯಕಾರಕ ಬೃಹತ್ ಕೈಗಾರಿಕೆಗಳು ಹಾಗೂ ದೊಡ್ಡ ಪ್ರಮಾಣದಲ್ಲಿ ದಕ್ಷಿಣಕನ್ನಡ ಉಡುಪಿ ಮತ್ತು ಉತ್ತರಕನ್ನಡ ಕರಾವಳಿಜಿಲ್ಲೆಗಳಲ್ಲಿ ಕೈಗಾರಿಕ ಚಟುವಟಿಕೆಗಳನ್ನು ಕೈಗೊಂಡಲ್ಲಿ ಕರಾವಳಿಯ ಅಮೂಲ್ಯ ಜಲಸಂಪತ್ತನ್ನು ಹಾಳುಗೆಡಹುದರ ಜೊತೆಗೆ ಕರಾವಳಿ ಪರಿಸರ ಮಾಲಿನ್ಯಕಾರಕವಾಗಿ ಜನಜೀವನದ ಮೇಲೆ ತೀವ್ರ ತರದ ದುಷ್ಪರಿಣಾಮ ಬೀರುವುದು ಖಚಿತ ಕಲ್ಲಿದ್ದಲ್ಲು ಆಧರಿತ ಉಷ್ಣವಿದ್ಯುತ್ ಸ್ಥಾವರದಂತಹ ಪರಿಸರಕ್ಕೆ ಮಾಲಿನ್ಯಕಾರಕ ಕೈಗಾರಿಕೆಗಳು ಈ ಭೂಪ್ರದೇಶದ ಮೇಲೆ ಬಹಳ ಕೆಡುಕಾದ ಭಾದೆ. ಉಂಟು ಮಾಡುವುದಲ್ಲಸದೆ, ಕರಾವಳಿ ಕರ್ನಾಟಕವನ್ನು ಶಾಶ್ವತ ಬಂಜೆತನದತ್ತ ತಳ್ಳುವುದು ನಿಶ್ಚಿತ. ಪರಿಸರ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟ ಪ್ರದೇಶದ ವೈವಿಧ್ಯ ಜೀವ ಸಂಕುಲಕ್ಕೆ ವಿನಾಶಿಕಾರಿಯಾಗಿಯೂ ಪರಿಣಮಿಸಬಹುದು. ಆದುದರಿಂದ ರಾಜ್ಯದ ಜಾಗತಿಕ ತಾಪಮಾನ ಪ್ರಕ್ರಿಯೆಗಳ ಮೇಲಿನ ಕರಾವಳಿಯ ಪ್ರಾಕೃತಿಕ ಪರಿಸರದ ವ್ಯತ್ಯಯದಲ್ಲಾಗುವ ಸಂದಿಗ್ಧ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬಹಳ ಜಾಗೂರಕತೆಯಿಂದ ಈ ಎಲ್ಲಾ ವ್ಯವಹಾರಗಳನ್ನು ಸರಕಾರಗಳು ಹಾಗೂ ಕರಾವಳಿ ಜನತೆ ನಿರ್ವಹಿಸಬೇಕಲಾಗಿದೆ. ಮತ್ತು ನಿಭಾಯಿಸಬೇಕಾಗಿದೆ.
ಕರಾವಳಿ ಕರ್ನಾಟಕ ಬಹಳ ಇಕ್ಕಟ್ಟಾದ ಭೂಪ್ರದೇಶವಾಗಿದ್ದು. ನೀರು ಸುಲಭವಾಗಿದ್ದು ಸುಲಭವಾಗಿ ಭೂರಂದ್ರಗಳ ಮೂಲಕ ಇಳಿದು ಹೋಗುವ ಮಣ್ಣಿನ ಗುಣಲಕ್ಷಣ ಹೊಂದಿದೆ. ದೊಡ್ಡ ಪ್ರಮಾಣದ ವಿದ್ಯತ್ ಸ್ಥಾವರಗಳ ಮಾಲಿನ್ಯ ತ್ಯಾಜಗಳನ್ನು ತುಂಬಾ ವಿಶಾಲವಾದ ಆಕಾಶಕ್ಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲದ ಕಾರಣ ಪಶ್ಚಿಮದ ಸಮುದ್ರ ಕಡೆಯಿಂದ ಬೀಸುವ ಗಾಳಿಯಿಂದ ಅದು ಅತೀ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯ ದಟ್ಟವಾದ ಸಸ್ಯ ವೈವಿಧ್ಯದ ಪ್ರದೇಶಗಳು ಹಾಗೂ ಕರಾವಳಿಯ ಜನ ವಸತಿಯ ಪ್ರದೇಶಗಳಲ್ಲಿ ಹರಡಿ ಪ್ರಾಣಿ ಸಂಕುಲ, ಸಸ್ಯ ಹಾಗೂ ಜನ ಜೀವನ ವ್ಯವಸ್ಥೆ ದುರ್ಭಲವಾಗಲಿದೆ.
ಕರ್ನಾಟಕದಲ್ಲಿ ಯಾವುದೇ ರೀತಿಯ ಇಂಧಲ ಮೂಲಗಳ ನಿಕ್ಷೇಪಗಳಿಲ್ಲ ಎಂದು ರುಜುವಾತಾಗಿದೆ. ಕಲ್ಲಿದ್ದಲು ಆಧಾರಿತ ವಿದ್ಯತ್ ಸ್ಥಾವರಗಳು ಕಲ್ಲಿದ್ದಲು ನಿಕ್ಷೇಪದ ಗಣಿ ಪ್ರದೇಶದಲ್ಲಿ ಅಥವಾ ವಿದ್ಯುತ್ ಲೋಡ್ ಸೆಂಟರ್ ಸಮೀಪ ಸ್ಥಾಪನೆಯಾಗಬೇಕು. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದ ವಿದ್ಯತ್ ಲೋಡ್ ಸೆಂಟರ್‌ಗಳಿಲ್ಲದ ಕಾರಣ ಪ್ರಸ್ತಾವಿತ ಯು.ಎಮ್.ಪಿ.ಪಿ ಯೋಜನೆ ಕಾರ್ಯಸಾಧ್ಯವಲ್ಲ.
ಕರ್ನಾಟಕದ ಮಾಜಿ ಮುಖ್ಯ ಮಂತ್ರಿಯೊಬ್ಬರು ಛತ್ತೀಸ್‌ಘಡ ರಾಜ್ಯ ಸರಕಾರದೊಂದಿಗೆ ವಿದ್ಯುತ್ ಸಂಬಂದಿ ಒಡಂಬಡಿಕೆ ಎಮ್.ಓ.ಯು.ಗೆ ಸಹಿ ಮಾಡುವ ಸಂದರ್ಭದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕವು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆರ್ಥಿಕವಾಗಿ ಸೂಕ್ತವಲ್ಲ ಹಾಗಾಗಿ ಛತ್ತೀಸ್ ಘಡ ರಾಜ್ಯದಲ್ಲಿ ಕಚ್ಚಾ ಕಲ್ಲಿದ್ದಲು ನಿಕ್ಷೇಪ ಸಿಗುವ ಕಾರಣ ಸಮೀಪದಲ್ಲಿಯೇ ಸ್ಥಾವರ ಸ್ಥಾಪಿಸಲಾಗಿದೆ ಎಂದು ಹೇಳಿರುವುದು ವರಧಿಯಾಗಿದೆ.

ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆ ವಾರ್ಷಿಕವಾಗಿ 5 ಟಿ.ಎಮ್.ಸಿ. ಗಳಷ್ಟು ಬೃಹತ್ ಪ್ರಮಾಣದ ಶುದ್ಧ ನೀರನ್ನು ಪಡೆದುಕೊಳ್ಳುವುದು ನಿಶ್ಚಿತ ಎಂಬುವುದು ತಜ್ಞರ ಅಬಿಮತ. ಪರಿಸರದ ಗ್ರಾಮಗಳ ನದಿ ಹೊಳೆಗಳಿಂದ ಅಷ್ಟೊಂದು ಪ್ರಮಾಣದ ಅಂತರ್ಜಲ ಸೆಳೆಯುವುದು ಅಸಾಧ್ಯ. ಅರಬ್ಬಿಸಮುದ್ರದ ಉಪ್ಪು ನೀರನ್ನು ಶುದ್ಧೀಕರಿಸಿ ಉಪಯೋಗಿಸಬೇಕಾಗುತ್ತದೆ. ಶುದ್ಧೀಕರಿಸಿದಾಗ ಬಿಡುಗಡೆಯಾಗುವ ಕಶ್ಮಲ ವಸ್ತುಗಳು ಮಣ್ಣಿಗೆ ಸೇರಿದಾಗ ಸಮಸ್ಯೆ ಎದುರಾಗುತ್ತದೆ. ಸಂಸ್ಕರಣ ಪ್ರಕ್ರಿಯೆಗಾಗಿ ದೊಡ್ಡಪ್ರಮಾಣದ ಶಕ್ತಿಯ ಅವಶ್ಯಕತೆಯಿದ್ದು ಅದರ ಪಾಶ್ವ ಪರಿಣಾಮಗಳ ಯೋಚಿಸಬೇಕಾಗುತ್ತದೆ.

ಕರಾವಳಿ ಭಾಗದಲ್ಲಿ ಉಡುಪಿ ಜಿಲ್ಲೆಯ ನಂದಿಕೂರು ಉಷ್ಣವಿದ್ಯತ್ ಸ್ಥಾವರ 1,200ಮೆ.ವ್ಯಾ. ಸಾಮರ್ಥ್ಯದ್ದಾಗಿದ್ದು ಪಶ್ಚಿಮ ಘಟ್ಟಗಳ ತಳಭಾಗದಲ್ಲಿ ಈಗಾಗಲೇ ಕಾರ್ಯಚರಿಸುತ್ತಿದೆ. ಆ ಸ್ಥಾವರ, ಸ್ಥಳೀಯರಿಂದ ಹಲವು ವರ್ಷಗಳಿಂದ ಪ್ರಬಲ ವಿರೋಧ ಎದುರಿಸುತ್ತಿದೆ. ಈ ಪ್ರದೇಶದಿಂದ ಪಶ್ಚಿಮ ಘಟ್ಟಗಳ ಮೂಲಕ ಅಧಿಕ ಕಿಲೋ. ವ್ಯಾಟ್ ಸಾಮರ್ಥ್ಯದ ವಿದ್ಯತ್ ಪ್ರಸರಣ ಮಾರ್ಗ ನಿರ್ಮಾಣಗೊಂಡು ಸಸ್ಯ ವೈವಿಧ್ಯ ಮತ್ತು ಜೀವ ವೈವಿಧ್ಯ ಸಂಕುಲಕ್ಕೆ ಅಪಾಯವುಂಟಾಗಿರುವುದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.
ಸತ್ಯಾಸತ್ಯತೆಗಳನ್ನು ಪರಿಗಣಿಸುವಾಗ ಹಲವು ಕಲ್ಲಿದ್ದಲ್ಲು ಆಧಾರಿತ ವಿದ್ಯುತ್ ಸ್ಥಾವರಗಳ ಪೈಕಿ ಕೆಲವು ಸ್ಥಾವರಗಳು ಎನ್.ಟಿ.ಪಿ.ಸಿ ಸ್ವಾಮ್ಯತೆಗೊಳಪಟ್ಟವುಗಳಾಗಿದ್ದು, ಬಹಳ ಗಂಭೀರವಾದ ಕಲ್ಲಿದ್ದಲು ಪೂರೈಕೆ ಕೊರತೆಯಿಂದ ನಲುಗುತ್ತಿದೆ. ಆದರೆ. ಎನ್.ಟಿಪಿಸಿ ಇದೀಗ ದೇಶದಾದ್ಯಂತ ಅಲ್ಲಲ್ಲಿ ಇಂಥ ಕಲ್ಲಿದ್ದಲ್ಲು ಆಧಾರಿತ ಹೆಚ್ಚುವರಿ ವಿದ್ಯತ್ ಸ್ಥಾವರಗಳನ್ನು ಸ್ಥಾಪಿಸಲು ಹೊರಟಿರುವುದರ ಹಿಂದಿನ ಮರ್ಮವೇನೆಂದು ಸ್ವಷ್ಟವಾಗುತ್ತಿಲ್ಲ. ಅಂತಹ ಸ್ಥಾವರಗಳಲ್ಲಿ ಪ್ರಸ್ತಾವಿತ ನಿಡ್ಡೋಡಿ ಸ್ಥಾವರವೂ ಒಂದು. ಇತ್ತೀಚಿನ ವರ್ಷಗಳಲ್ಲಿ ಎನ್.ಟಿಪಿಸಿ ಸಂಸ್ಥೆ ಕಲ್ಲಿದ್ದಲು ಸಚಿವಾಲಯಕ್ಕೆ ಅಧಿಕೃತವಾಗಿ ಕಚ್ಛಾ ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಆಗುತ್ತಿರುವ ಬಗ್ಗೆ ದೂರು ಸಲ್ಲಿಸಿರುವುದು ಎಲ್ಲರಿಗೂ ತಿಳಿದ ಸಂಗತಿ. ಸಾರ್ವಜನಿಕರ ದುಡಿಮೆಯಿಂದ ಉತ್ಪತ್ತಿಯಾದ ಹಣದಲ್ಲಿ ಅಂತಹ ಬೃಹತ್ ಪ್ರಮಾಣದ ಯುಎಂಪಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲುದ್ದೇಶಿಸಿರುವುದು ಇಂಧನ ಕೊರತೆ ಮತ್ತು ನೀರಿನ ಕೊರತೆಗಳ ಮಧ್ಯೆ ಸಮಾಜಕ್ಕೆ ದೊಡ್ಡ ಪ್ರಮಾಣದ ಹೊರೆಯಾಗಿ ಪರಿಣಮಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ರಾಜ್ಯದ ತದಡಿ, ಚಾಮಲಾಪುರ ಮತ್ತು ಹನುಕೋನಗಳಲ್ಲಿ 3 ಬೃಹತ್ ಕಲ್ಲಿದ್ದಲಾಧರಿತ ವಿದ್ಯತ್ ಯೋಜನೆಗಳ ಪ್ರಸ್ತಾವನೆಯನ್ನು ಜನರ ಪ್ರಬಲ ವಿರೋಧದ ಕಾರಣದಿಂದ ಕೈಬಿಡಲಾಗಿದೆ. ಅಲ್ಲದೆ, ಗುಲ್ಬರ್ಗಾ ಬಳಿಯ ಜೇವರ್ಗಿಯಲ್ಲಿ ಕೂಡ ಇನ್ನೊಂದು ಕಲ್ಲಿದ್ದಲ್ಲು ಆಧಾರಿತ ವಿದ್ಯತ್ ಯೋಜನೆಯನ್ನು ಜನರು ಬಹಳ ಪ್ರಬಲವಾಗಿ ವಿರೋಧಿಸುತ್ತಿರುವುದು- ಇವನ್ನೆಲ್ಲಾ ಗಮನಿಸುವಾಗ ಕರ್ನಾಟಕ ರಾಜ್ಯದ ಜನತೆ ಕಲ್ಲಿದ್ದಲ್ಲಿನ ವಿದ್ಯತ್ ಯೋಜನೆಗಳನ್ನು ಸ್ವಾಗತಿಸದಿರುವುದು ಸರಕಾರಗಳ ಜನವಿರೋಧಿ ನೀತಿಗೆ ಪ್ರಬಲ ಸಾಕ್ಷ್ಯ ದೊರಕಿಸಿಕೊಟ್ಟಂತಾಗಿದೆ.
ಪ್ರಸ್ತಾವಿತ ಯುಎಂಪಿಪಿ ಸ್ಥಾವರದಿಂದ ಉತ್ಪತ್ತಿಯಾಗುವ ವಿದ್ಯುತ್ ಕೇವಲ ಕರಾವಳಿ ಪ್ರದೇಶಕ್ಕೆ ಮಾತ್ರ ಪೂರೈಕೆಯಾಗುವ ಕಾರ್ಯಸೂಚಿ ಹೊಂದಿಲ್ಲ. ಅದು ಸಂವೇದನೆಯಿಂದ ಕೂಡಿದ ಅತೀ ಸೂಕ್ಷ್ಮ ಪಶ್ಚಿಮ ಘಟ್ಟಗಳನ್ನು ದಾಟಿ ಕರ್ನಾಟಕದ ಇತರ ವಿದ್ಯತ್ ಲೋಡ್ ಸೆಂಟರ್ ಗಳು ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶಗಳ ಲೋಡ್ ಸೆಂಟರ್ ಗಳಿಗೆ ಪೂರೈಕೆಯಾಗಲಿದೆ. ವಿಶ್ವಸಂಸ್ಥೆಯ ಪಾರಂಪರಿಕ ವಿಶ್ವ ವೈವಿಧ್ಯ ತಾಣಗಳಲ್ಲೊಂದಾದ ಪಶ್ಚಿಮ ಘಟ್ಟಗಳ ಮುಖಾಂತರ ವಿದ್ಯತ್ ಪ್ರಸರಣ ಮಾರ್ಗ ಹಾದುಹೋಗಿ ಅಗಾಧ ಸಂಖ್ಯೆಯ ವೃಕ್ಷ ಸಂಪತ್ತು ಧರೆಗುರುಳಿ ಜೀವವೈವಿಧ್ಯತೆಯ ಚಟುವಟಿಕೆಯ ದಟ್ಟಾರಣ್ಯ ವಿನಾಶದಂಚಿಗೆ ತಲುಪಲಿದೆ.
ವಾರ್ಷಿಕವಾಗಿ ಮಿಲಿಯಗಟ್ಟಲೆ ಟನ್ನುಗಳನ್ನು ಕಚ್ಛಾ ಕಲ್ಲದ್ದಲು ಇಂತಹ ವಿದ್ಯತ್ ಸ್ಥಾವರಗಳಲ್ಲಿ ಇಂಧನವಾಗಿ ಬಳಕೆಯಾಗುವುದರಿಂದ ಅಗಾಧ ಪ್ರಮಾಣದಲ್ಲಿ ಹಸಿರುಮನೆ ಪರಿಣಾಮ (Green House Gases} ಅಲ್ಲದೆ ಇನ್ನಿತರ ಮಾಲಿನ್ಯಕಾರಕ ತ್ಯಾಜ್ಯ, ಅಧಿಕ ವೋಲ್ಟೇಜಿನ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣದಿಂದ ಅರಣ್ಯ ನಾಶ-ಇವೆಲ್ಲದರ ಒಟ್ಟು ಪರಿಣಾಮ ಇಂಗಾಲ ಹೀರಿಕೊಳ್ಳುವ ಸಾಮರ್ಥ್ಯ ತೀವ್ರವಾಗಿ ಕುಸಿಯುತ್ತದೆ. ಇದು ಜಾಗತಿಕ ತಾಪಮಾನ ಏರಿಕೆಯನ್ನು ತೆರಯುವಲ್ಲಿ ಬಹಳ ಪ್ರಬಲವಾದ ಅಡ್ಡಿಯುಂಟುಮಾಡುತ್ತದೆ.
ಪ್ರಸ್ತಾವಿತ ನಿಡ್ಡೋಡಿ ಉಷ್ಣ ವಿದ್ಯುತ್ ಯೋಜನೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಬಹಳ ಗುರುತರವಾದ ಸಮಸ್ಯೆಗಳು, ಕಷ್ಟಗಳು ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಸರಕಾರಕ್ಕೂ, ಜನತೆಗೂ ಎದುರಾಗುತ್ತದೆ. ಎಂಬುದು ಸ್ಪಷ್ಟ, ಒಟ್ಟಾರೆಯಾಗಿ ಈ ಯೋಜನೆ ಅನುಷ್ಠಾನದಲ್ಲಿ ನೇರ ಮತ್ತು ಪರೋಕ್ಷ ಯೋಜನಾ ವೆಚ್ಚಗಳು ಮತ್ತು ಸಾಧಕ-ಬಾಧಕಗಳನ್ನು ನಿರ್ಧರಿಸುವಾಗ ಸಾಮಾಜಿಕ, ಪಾರಿಸರಿಕ ಮತ್ತು ಆರೋಗ್ಯದ ನಿಭಾವಣೆಯ ವೆಚ್ಚಗಳು ಬಹಳ ದುಬಾರಿಯಾಗಿ ಸಮಾಜಕ್ಕೆ ಲಾಭದಾಯಕವಾಗುವ ಬದಲು ಸಂಕಷ್ಟದಾಯಕವಾಗಿ ಪರಿಣಮಿಸುವುದು ಖಂಡಿತ ಮತ್ತು ಖಚಿತ.

ನಿಡ್ಡೋಡಿ ಯುಎಂಪಿಪಿ ಯೋಜನಾ ಸ್ಥಳದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 8-10 ಕಿ.ಲೋ ಮೀ.ಅಂತರವಿದೆ. ಇಷ್ಟೋಂದು ಬೃಹತ್ ಗಾತ್ರದ ವಿದ್ಯುತ್ ಸ್ಥಾವರವನ್ನು ಪ್ರತಿಷ್ಠಿತ ನಿಲ್ದಾಣದ ಸಮೀಪ ಸ್ಥಾಪಿಸುವ ಸಮರ್ಥ ನಿಲುವೇನು? ಈ ಬಗ್ಗೆ ಆಳವಾದ ಅಧ್ಯಯನ ಅವಸ್ಯವಿದೆ. ನೆಲ್ಲಿತೀರ್ಥ ದೇವಳ, ಕಟೀಲು ದೇವಳ, ಹಾಗೂ ಪರಿಸರದ ಚರ್ಚ್, ಮಸೀದಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ೮-೧೦ ಕಿ.ಲೋ.ಮೀ. ಅಂತರದಲ್ಲಿ ೨ ಸ್ಥಾವರಗಳು ಆಗುತ್ತಿರುವುದು ವಿಷಾದನೀಯ.
ದೇಶದಲ್ಲಿರುವ ಕಲ್ಲದ್ದಲ್ಲು ಆಧಾರಿತ ವಿದ್ಯುತ್ ಸ್ಥಾವರಗಳು ಜಾಗತಿಕ ತಾಪಮಾನ ಮತ್ತು ವಾತಾವರಣದ ವ್ಯತ್ಯಯಕ್ಕೆ ದೊಡ್ಡ ಪ್ರಮಾಣದಲ್ಲಿ ಕಾರಣವಾಗಿವೆ ಎನ್ನಲಾಗಿದೆ. ಇದು ವಾತಾವರಣದ ಬದಲಾವಣೆಯಲ್ಲಿನ ರಾಷ್ಟ್ರೀಯ ಕ್ರಿಯಾ ಯೋಜನೆ ಮತ್ತು ಜಾಗತಿಕ ಜನ ಸಮುದಾಯಕ ಮೇಲಾಗುವ ಹಸಿರುಮನೆ ಪರಿಣಾಮ ಕಡಿಮೆಗೊಳಿಸುವಲ್ಲಿ ಭಾರತದ ಬದ್ಧತೆಯನ್ನು ಪ್ರಶ್ನಿಸುತ್ತದೆ.
ಕರ್ನಾಟಕ ಸರಕಾರ ಈ ಯೋಜನೆಯಿಂದ ತನ್ನ ಪಾಲಿನ 1,500ರಿಂದ 2,000ಮೆಗಾವ್ಯಾಟ್ ವಿದ್ಯುತ್‌ನ್ನು ಪಡೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕರ್ನಾಟಕ ವಿದ್ಯುತ್ ಕ್ಷೇತ್ರವನ್ನು ಪರಿಗಣನೆಗೆ ತೆಗೆದುಕೊಂಡಾಗ ಈಗಾಗಲೇ ಇರುವ ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆಯ ಕಾರ್ಯನಿರ್ವಹಣೆಯಲ್ಲಿನ ’ವಿದ್ಯುತ್ ಸೋರಿಕೆ’ ತಡೆದು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿದಾಗ ಅದು ತಾನು ಪಡೆದುಕೊಳ್ಳಲಿರುವ ೨,೦೦೦ ಮೆಗಾವ್ಯಾಟ್ ವಿದ್ಯುತ್‌ಗಿಂತಲೂ ಅಧಿಕ ಪ್ರಮಾಣದ ವಿದ್ಯುತ್ ಉಳಿಸಿ, ಬಳಸಿಕೊಳ್ಳಬಹುದು ಎಂದು ವಿದ್ಯುತ್ ಕ್ಷೇತ್ರದ ವಿಷಯತಜ್ಞರು ಅಭಿಪ್ರಾಯಪಡುತ್ತಾರೆ. ರಾಷ್ಟ್ರ ಮಟ್ಟದಲ್ಲಿ ತನ್ನ ಸ್ಥಾನವನ್ನು ವಿಶಿಷ್ಟವಾಗಿ ಹೊಂದಿರುವ ಪ್ರತಿಷ್ಠಿತ ಎನ್ಟಿಪಿಸಿ ಸಂಸ್ಥೆಯು ಸಾಮಾಜಿಕ/ಕಾರ್ಪೋರೇಟ್ ಬಾಧ್ಯತೆ ಮತ್ತು ಕಾರ್ಯಕ್ರಮತೆಯನ್ನು ದಕ್ಷತೆಯಿಂದ ನಿರ್ವಹಿಸಿದಲ್ಲಿ ಒಂದು ಉತ್ತಮ ವಿದ್ಯುತ್ ಸೇವೆಯ ಕಂಪನಿಯಾಗಿ ಮಾರ್ಪಟ್ಟು ಕರ್ನಾಟಕಕ್ಕೆ ಸಂಪನ್ಮೂಲ ಉಳಿತಾಯ ಹಾಗೂ ಕ್ರೋಢೀಕರಣದ ಜೊತೆಗೆ ಹೆಚ್ಚುವರಿ ವಿದ್ಯುತ್ ಕರ್ನಾಟಕಕ್ಕೆ ನೀಡಿ ತನ್ನ ಪ್ರತಿಷ್ಠಿತ ಸ್ಥಾನವನ್ನು ಕಾಯ್ದುಕೊಳ್ಳಬಹುದಾಗಿದೆ. ಇದರ ಬದಲು ರಾಜ್ಯಕ್ಕೆ ಹೊರೆಯಾಗಿ ಸಾಮಾಜಿಕ ಸಮಸ್ಯೆಗಳು ಹಾಗೂ ಜನಜೀವನ, ಜೀವವೈವಿಧ್ಯತೆಗೆ, ಪರಿಸರಕ್ಕೆ ದುಬಾರಿಯಾಗಿ ಪರಿಣಮಿಸುವ ಕಾರ್ಯಸಾಧುವಲ್ಲದ ಯುಎಂಪಿಪಿ ಯೋಜನೆಯನ್ನು ಕೈಬಿಡಬೇಕಾಗಿದೆ.
ಸುಮಾರು ೧೩,೦೦೦ ಮೆಗಾವ್ಯಾಟ್‌ಗಳಷ್ಟು ವಿದ್ಯುತ್‌ನ್ನು ಕರ್ನಾಟಕ ರಾಜ್ಯ ತನ್ನ ಸ್ವಂತ ಸಾಮರ್ಥ್ಯ ಮತ್ತು ಕೇಂದ್ರೀಯ ವಿದ್ಯುತ್ ಕ್ಷೇತ್ರದ ಪಾಲಿನಿಂದ ಇದೀಗ ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಮತ್ತು ೧೧,೫೦೦ ಮೆಗಾವ್ಯಾಟ್ ವಿದ್ಯುತ್‌ನ್ನು ಎಲ್ಲಾ ಸೋರಿಕೆಗಳನ್ನು ಹೊರತುಪಡಿಸಿ ರಾಜ್ಯ ಬಳಸಿಕೊಳ್ಳುತ್ತಿದೆ ಎಂದು ಊಹಿಸಲಾಗಿದೆ. ದೈನಂದಿನ ಜನತೆಯ ಒತ್ತಡದ ಕಾರ್ಯಚಟುಉವಟಿಕೆಯ ಅವಧಿಯಲ್ಲಿ ರಾಜ್ಯದ ಬೇಡಿಕೆಯು ೨೦೧೨-೧೩ರಲ್ಲಿ ೧೦,೦೦೦ ಮೆಗಾವ್ಯಾಟ್‌ನಷ್ಟಿತ್ತು ಎಂದು ತಜ್ಷರು ವಿವರಣೆ ನೀಡುತ್ತಾರೆ.
ಎನ್ಟಿಪಿಸಿ ಸಂಸ್ಥೆಯ ರಾಷ್ಟ್ರೀಯ/ಪ್ರಾದೇಶಿಕ ಪಾತ್ರ ನಿರ್ವಹಣೆಯನ್ನು ಗಣನೆಗೆ ತೆಗೆದುಕೊಂಡಾಗ ಭಾರತದ ದಕ್ಷಿಣ ಪ್ರದೇಶಗಳಲ್ಲಿ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ವಿದ್ಯುತ್ ಶಕ್ತಿಯ ಉಳಿತಾಯ ಮತ್ತು ರಕ್ಷಣೆ ಹಾಗೂ ಬೇಡಿಕೆಯ ಬಗೆಗಿನ ನಿರ್ವಹಣೆಯನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಿದಲ್ಲಿ ೪೦,೦೦೦ಮೆಗಾವ್ಯಾಟ್‌ಗಿಂತಲೂ ಅಧಿಕ ಹೆಚ್ಚುವರಿ ಸಾಮರ್ಥ್ಯದ ವಿದ್ಯುತ್ ಪಡೆದುಕೊಳ್ಳಬಹುದು. ಪ್ರಸ್ತಾವಿಕ ನಿಡ್ಡೋಡಿ ಯುಎಂಪಿಪಿ ಸ್ಥಾವರಕ್ಕಾಗಿ ಸುಮಾರು ೨೦,೦೦೦ಕೋಟಿ ರೂ. ವಿನಿಯೋಗಿಸಿ ಪಡೆದುಕೊಳ್ಳುವ ೪೦೦೦ಮೆಗಾವ್ಯಾಟ್ ವಿದ್ಯುತ್‌ಗಿಂತಲೂ, ಪ್ರಸ್ಥಾವಿತ ಯೋಜನೆಯ ಶೇ.೨೫ರಷ್ಟು ಮಾತ್ರ ಯೋಜನಾ ವೆಚ್ಚ ಬಳಸಿ ೪೦ಸಾವಿರ ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಪಡೆಯಬಹುದು ಎಂದು ತಜ್ಞರು ವಿವರಿಸುತ್ತಾರೆ. ಇದು ಲಾಭದಾಯಕವಲ್ಲವೇ? ಈ ನಿಟ್ಟಿನಲ್ಲಿ ಸಮಾಜಕ್ಕೆ ಹೊರೆಯಾಗುವ ನಿಡ್ಡೋಡಿ ಯುಎಂಪಿಪಿ ಯೋಜನೆ ಅನುಷ್ಠಾನದ ನಿರ್ಧಾರವನ್ನು ಕೈಬಿಡಬಹುದು.
ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಕೈಗಾ ಅಣುವಿದ್ಯುತ್ ಸ್ಥಾವರ, ಕಾಳಿ ಜಲವಿದ್ಯುತ್ ಯೋಜನೆ, ಶರಾವತಿ ಟೈಲ್‌ರೇಸ್ ಪ್ರೊಜೆಕ್ಟ್, ವಾರಾಹಿ ಯೋಜನೆ, ನಂದಿಕೂರು ಉಷ್ಣವಿದ್ಯುತ್ ಯೋಜನೆಗಳಿಂದ ಉತ್ಪತ್ತಿಯಾಗುವ ಒಟ್ಟು ವಿದ್ಯುತ್‌ನ ಪ್ರಮಾಣ ಈ ಮೂರೂ ಕರಾವಳಿ ಜಿಲ್ಲೆಗಳೀಗೆ ಇನ್ನು ಮುಂದಿನ ೫೦ವರ್ಷಗಳ ಕರಾವಳಿ ಕರ್ನಾಟಕದ ವಿದ್ಯುತ್ ಬೇಡಿಕೆ ಪೂರೈಸುವಷ್ಟು ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಈಗಾಗಲೇ ಇದೆ ಎಂದು ತಜ್ಞರು ವಿವರಿಸುತ್ತಾರೆ. ರಾಜ್ಯದಲ್ಲಿ ಅಧಿಕ ವಿದ್ಯುತ್ ಬೇಡಿಕೆ ಇರುವ ಬೆಂಗಳೂರು, ಹಾಸನದಂಥ ನಗರ ಪ್ರದೇಶಗಳಿಗೆ ಸಮೀಪದಲ್ಲಿಯೇ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದನೆ ಸಣ್ಣ ಪ್ರಮಾಣದ ಘಟಕಗಳನ್ನು ಅಲ್ಲಲ್ಲಿ ಸ್ಥಾಪಿಸಲು ಸರಕಾರ ಕ್ರಮ ಕೈಗೊಳ್ಳಬಾರದೇಕೆ? ಇದರಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಬಹಳ ಕಡಿಮೆ.
ರಾಜ್ಯದ ಜನಸಮುದಾಯ ತಂತ್ರಜ್ಞಾನ ಆಧಾರಿತ ಮತ್ತು ಆರ್ಥಿಕವಾಗಿ ಕಡಿಮೆ ವೆಚ್ಚದಾಯಕವೆನಿಸುವ ಯೋಜನೆಗಳನ್ನು ಕರ್ನಾಟಕ ರಾಜ್ಯದ ಕಲ್ಯಾಣಕ್ಕಾಗಿ ಮಾಡಿದರೆ ರೈತಾಪಿ ಜನರ ಹಿತ ಕಾಪಾಡಬಲ್ಲುದು.

Comments

comments

Comments are closed.