ಕಟೀಲು ಯಕ್ಷಗಾನ : ಆರನೇ ಮೇಳ ಪ್ರಾರಂಭ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಈ ಸಲದ ಯಕ್ಷಗಾನ ತಿರುಗಾಟದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಆರನೇ ಮೇಳ ಪ್ರಾರಂಭ, ಮಳೆಗಾಲದಲ್ಲಿ ಕಟೀಲು ರಥಬೀದಿಯಲ್ಲಿ ಕಾಲಮಿತಿ ಯಕ್ಷಗಾನ, 22 ದಿನ ಮುಂಚಿತವಾಗಿ ತಿರುಗಾಟ ಆರಂಭ ಮುಂತಾದ ನಿರ್ಧಾರವನ್ನು ಗುರುವಾರ ಸಂಜೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕಟೀಲು ಕ್ಷೇತ್ರದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.

ಆರನೇ ಮೇಳದ ಕಲ್ಪನೆ
ಆರನೇ ಯಕ್ಷಗಾನ ಮೇಳದ ಕಲ್ಪನೆ ಯಕ್ಷಗಾನ ಇತಿಹಾಸದಲ್ಲಿಯೇ ಪ್ರಥಮ. ಇದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಗೆ ಹೆಗ್ಗಳಿಕೆಯಾಗಿದೆ. ಈಗಾಗಲೇ 8 ಸಾವಿರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನದ ಬುಕ್ಕಿಂಗ್ ಆಗಿದ್ದು ಹತ್ತು ವರ್ಷದವರೆಗೆ ಪ್ರದರ್ಶನದ ಜಾಸ್ತಿ ಬೇಡಿಕೆ ಬಂದಿರುವ ಕಾರಣ ಅಲ್ಲದೆ ಸೇವಾರ್ಥಿಗಳ ಬೇಡಿಕೆಗಳಿಗೆ ಗಮನವಿತ್ತು ಆರನೇ ಮೇಳ ಪ್ರಾರಂಭಿಸಲಾಗುವುದು. ಈ ಸಲದ ತಿರುಗಾಟದಲ್ಲಿ ಒಟ್ಟು 1332 ಪ್ರದರ್ಶನಗಳಿದೆ.

ಮಳೆಗಾಲದಲ್ಲಿ ಕಾಲಮಿತಿ ಯಕ್ಷಗಾನದ ಪ್ರಸ್ತಾವ
ಹೆಚ್ಚಿನ ಯಕ್ಷಗಾನ ಮೇಳಗಳು ಕಾಲಮಿತಿ ಯಕ್ಷಗಾನದ ಬಗ್ಗೆ ಚಿಂತನೆ ನಡೆಸುತ್ತಿವೆ. ಮೇ 26ರಿಂದ ಅಕ್ಟೋಬರ್ 4ರವರೆಗಿನ ಮಳೆಗಾಲದಲ್ಲಿ ಕಟೀಲು ದೇವಳದ ರಥಬೀದಿಯಲ್ಲಿ ಮಾತ್ರ ಸಂಜೆ 6ರಿಂದ ರಾತ್ರಿ 12 ಗಂಟೆ ಯವರೆಗೆ ಕಾಲಮಿತಿ ಯಕ್ಷಗಾನ ನಡೆಸುವ ಬಗ್ಗೆ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ನಿರ್ಣಯಿಸಲಾಗಿದೆ. ಕಾಲಮಿತಿ ಯಕ್ಷಗಾನದ ಕಲಾವಿದರು ಹಾಗೂ ಮೇಳದ ಸರದಿ ಆವೃತ್ತಿ ಬಗ್ಗೆ ಇನ್ನೂ ರೂಪು ರೇಷೆ ಅಂತಿಮಗೊಳ್ಳಬೇಕಾಗಿದೆ. ಮಳೆಗಾಲದಲ್ಲಿ ೧೩೨ ಪ್ರದರ್ಶನಗಳ ಕಾಲಮಿತಿ ಯಕ್ಷಗಾನ ನಡೆಸುವ ಇರಾದೆಯಿದೆ.

ಈಗಾಗಲೇ ಯಕ್ಷಗಾನ ಬುಕ್ಕಿಂಗ್ ಮಾಡಿರುವ 60ವರ್ಷ ದಾಟಿದ ಸೇವಾರ್ಥಿಗಳಿಗೆ ಈ ವರ್ಷ ಆದ್ಯತೆ ನೀಡಿ ಪ್ರದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಆಲೋಚನೆಯಿದೆ. ಈ ಬಾರಿ 22 ದಿನ ಮುಂಚಿತವಾಗಿ ಅಂದರೆ ಅಶ್ವಿಜ ಶುದ್ಧ ಬಹುಳ ಪಂಚಮಿಯಂದು (ದೀಪಾವಳಿ ಹಬ್ಬದ ಸಮಯ) ಅಂದರೆ ನವೆಂಬರ್ 7ರಂದು ಎಲ್ಲ ಆರೂ ಮೇಳಗಳು ತಿರುಗಾಟ ಪ್ರಾರಂಭಿಸುವುದರಿಂದ ತಲಾ 22 ಪ್ರದರ್ಶನ ಹೆಚ್ಚುವರಿಯಾಗಿ ಸಿಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ದೇವಳದ ಆಡಳಿತಾಧಿಕಾರಿ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಲಕ್ಷ್ಮೀ ನಾರಾಯಣ ಆಸ್ರಣ್ಣ ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ದೇವಿಪ್ರಸಾದ್ ಆಸ್ರಣ್ಣ ಹಾಗೂ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು.

ಮೇಳಗಳ ತಿರುಗಾಟ ಆರಂಭಕ್ಕೆ ಮುನ್ನ ಸಮಗ್ರ ರೂಪುರೇಷೆ ಅಂತಿಮಗೊಳಿಸಲಾಗುವುದು. ಕಟೀಲಿನಲ್ಲಿ ಮೇಳದ ನಿರ್ವಹಣೆಗೆ ಯಾವುದೇ ರೀತಿಯಲ್ಲಿ ಹೆಚ್ಚುವರಿ ಹೊರೆ ಆಗುವುದಿಲ್ಲ. ಶಾಶ್ವತ ಯಕ್ಷಗಾನದ ಸಂಖ್ಯೆ ವರ್ಷಕ್ಕೆ 450 ಇದ್ದು ಆರನೇ ಮೇಳ ಮತ್ತು ಮಳೆಗಾಲದ ಆಟದ ಕಾಲಮಿತಿ ಆಟದ ಹೊಸ ವ್ಯವಸ್ಥೆಗಳಿಂದಾಗಿ ವರ್ಷಕ್ಕೆ ಒಟ್ಟು 1332 ಆಟಗಳನ್ನು ಆಡಿಸುವುದು ಸಾಧ್ಯವಾಗುತ್ತದೆ
ಶಾನಾಡಿ ಅಜಿತ್ ಕುಮಾರ್ ಹೆಗ್ಡೆ,
ಆಡಳಿತಾಧಿಕಾರಿ, ಕಟೀಲು ದೇವಸ್ಥಾನ

ಭಕ್ತರ ಅಪೇಕ್ಷೆಗೆ ವಿರುದ್ಧವಾಗದಂತೆ ಸಂಪ್ರದಾಯ ಬದ್ಧ ಬದಲಾವಣೆಗಳಾಗಿವೆ. ಹೆಚ್ಚು ಸೇವಾರ್ಥಿಗಳು ಇದರ ಸದುಪಯೋಗ ಪಡಕೊಳ್ಳಬಹುದು.
ವಾಸುದೇವ ಅಸ್ರಣ್ಣ
ಅನುವಂಶಿಕ ಮೊಕ್ತೇಸರರು

ಆರನೇ ಮೇಳದ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೇಳದ ಬಸ್ ಹಾಗೂ ರಂಗಸ್ಥಳವನ್ನು ಶ್ರೀ ದುರ್ಗಾ ಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟೇಬಲ್ ಟ್ರಸ್ಟ್ ನೀಡಲು ಮುಂದಾಗಿದೆ. ಮೇಳದ ದೇವರ ಚಿನ್ನದ ಕಿರೀಟ, ರಜತ ಪೆಟ್ಟಿಗೆ ಸಹಿತ ಇತರ ವ್ಯವಸ್ಥೆಗಳನ್ನು ನೀಡಲು ದಾನಿಗಳು ಮುಂದಾಗಿದ್ದಾರೆ
ಹರಿನಾರಾಯಣದಾಸ ಆಸ್ರಣ್ಣ
ಕಟೀಲು ದೇವಳ ಅರ್ಚಕ

kinnigoli31081301

 

Comments

comments

Comments are closed.

Read previous post:
Kinnigoli-30081317
ಕಟೀಲಿನಲ್ಲಿ ಮೊಸರುಕುಡಿಕೆ

Kateel Studio ಕಿನ್ನಿಗೋಳಿ: ಶ್ರೀಕೃಷ್ಣಜನ್ಮಾಷ್ಟಾಮಿ ಪ್ರಯುಕ್ತ ಮೊಸರುಕುಡಿಕೆ ಗುರುವಾರ ಕಟೀಲಿನಲ್ಲಿ ನಡೆಯಿತು.

Close