ಗ್ರಾಮೀಣ ಪ್ರತಿಭೆ ಸದಾಶಿವ ಪೂಜಾರಿ

ಕಿನ್ನಿಗೋಳಿ: ಚೌತಿ ಹಬ್ಬ ಸಮೀಪಿಸುತ್ತಿದ್ದಂತೆ ಶ್ರೀ ಗಣೇಶೋತ್ಸವ ಆಚರಣೆಗೆ ಪೂರ್ವ ಸಿದ್ಧತೆ ನಡೆಯುತ್ತದೆ. ವಿಗ್ರಹ ತಯಾರಕರಿಗೆ ಆ ದಿನಗಳಲ್ಲಿ ಬಿಡುವಿಲ್ಲದ ಕೆಲಸ. ಪ್ರತಿಭಾವಂತ ಕಲಾವಿದರು ನಮ್ಮಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ಪ್ರತಿಭೆಗೆ ಫ್ರೋತ್ಸಾಹ, ಸಹಕಾರ ಸಿಗುವುದು ಕೆಲವರಿಗೆ ಮಾತ್ರ. ಇನ್ನು ಕೆಲವರು ತಮ್ಮ ಸ್ವಂತ ಇಚ್ಛಾ ಶಕ್ತಿಯಿಂದ ಮೇಲೆ ಬರುತ್ತಾರೆ. ಅಂತಹವರಲ್ಲಿ ಸದಾಶಿವ ಪೂಜಾರಿ ಕೂಡಾ ಒಬ್ಬರು. ಗ್ರಾಮೀಣ ಪರಿಸರದಲ್ಲಿ ಹುಟ್ಟಿ, ಬೆಳೆದು, ಕಲಾ ಸೇವೆಗೈಯುತ್ತಿರುವ ಕಲಾವಿದ ಕಿನ್ನಿಗೋಳಿ ಸಮೀಪದ ಕುದ್ರಿಪದವು ಎಂಬಲ್ಲಿನ (48 ವರ್ಷ) ಸದಾಶಿವ ಪೂಜಾರಿ . ಈ ಪರಿಸರದಲ್ಲಿ ಜನಜನಿತವಾಗಿದ್ದು ಯಾವುದೇ ಪ್ರಚಾರ ಪ್ರಿಯತೆಗೆ ಗಮನಕೊಡದೇ ಸದಾ ಎಲೆಮರಿಯ ಕಾಯಿಯಂತೆ ಇರುತ್ತಾರೆ.
ಕಲ್ಲಮುಂಡ್ಕೂರು ಗ್ರಾಮದ ಕುದ್ರಿಪದವು ಎಂಬಲ್ಲಿ ಸವಿತಾ ಆರ್ಟ್ಸ್ ಕೇಂದ್ರದಲ್ಲಿ ಕಾರ್ಯ ಪ್ರವೃತ್ತರಾಗಿರುವ ಸದಾಶಿವ ಒಂದು ಬಾರಿ ನೋಡಿದುದನ್ನು ತನ್ನ ಮನಸ್ಸಿಗೆ ತೋಚಿದಂತೆ ಒಂದು ರೂಪಕೊಟ್ಟು ಜೀವಕಳೆ ತುಂಬ ಬಲ್ಲ ಚಾಕಚಕ್ಯತೆ ಹೊಂದಿದ್ದಾರೆ. ವಿಗ್ರಹ ರಚನೆಯಲ್ಲಿ ತೊಡಗಿಸಿಕೊಂಡರೆ ಮೂರ್ತಿಗೆ ಜೀವಕಳೆ ತುಂಬುವಷ್ಟು ನೈಜತೆ ಮೂಡಿಸುತ್ತಾರೆ. ಗಣಪತಿ, ಶಾರದೆ, ಏಸುಕ್ರಿಸ್ತ, ಮೇರಿಯಮ್ಮ ಮೊದಲಾದ ವಿಗ್ರಹಗಳನ್ನು ಮಣ್ಣಿನಿಂದ ಅತ್ಯಂತ ಕಲಾತ್ಮಕವಾಗಿ ನಿರ್ಮಿಸುವಲ್ಲಿ ಅವರು ಸಿದ್ಧಹಸ್ತರು.
ತಾಳಿಪಾಡಿ ಪೊಂಪೈ ಹೈಸ್ಕೂಲು ಚಿತ್ರಕಲಾ ಅಧ್ಯಾಪಕ ದಿ|ಅಚ್ಯುತ ಆಚಾರ್ಯ ಗುರುವಾಗಿ ಕಲೆಯ ಬಗ್ಗೆ ಸ್ಪೂರ್ತಿಯನ್ನು ತುಂಬಿ ಆವೆ ಮಣ್ಣಿನಲ್ಲಿ ಮೂರ್ತಿ ರಚನೆಯ ಬಗ್ಗೆ ತನ್ನ ಪಾಂಡಿತ್ಯವನ್ನು ಸದಾಶಿವರಿಗೆ ಧಾರೆಯೆರೆದಿದ್ದಾರೆ.

ಕಳೆದ 30 ವರ್ಷಗಳಿಂದ ಗಣಪತಿಯ ಮಣ್ಣಿನ ವಿಗ್ರಹ ತಯಾರಿ ಕಾರ್ಯದಲ್ಲಿ ತೊಡಗಿಕೊಂಡಿರುವ ಸದಾಶಿವ ಮೂಲತಹ ಓರ್ವ ಚಿತ್ರ ಕಲಾವಿದ. ಸೈನ್ ಬೋರ್ಡುಗಳನ್ನು ಹಾಗೂ ಲಘು ಹಾಗು ಘನ ವಾಹನಗಳ ಸ್ಪ್ರೇ ಪೈಟಿಂಗ್ ಕೆಲಸ ಮಾಡುತ್ತಿದ್ದರು. ವಿಗ್ರಹ ರಚನೆ ಇಂದಿನ ದಿನಗಳಲ್ಲಿ ತುಂಬಾ ದುಬಾರಿಯಾಗುತ್ತಿದೆ. ಉತ್ಕ್ರಷ್ಟ ಮಣ್ಣಿನ ಅಗತ್ಯವಿದೆ. ಆವೆಮಣ್ಣಿಗೆ ಹೆಜಮಾಡಿಯ ಹೆಂಚಿನ ಕಾರ್ಖಾನೆಯನ್ನು ಅವಲಂಬಿಸಿದ್ದಾರೆ. ಐದು, ಆರು ಅಡಿಗಳಷ್ಟು ಎತ್ತರದ ಮೂರ್ತಿ ರಚನೆಗೆ ಸುಮಾರು ಒಂದು ವಾರ ಬೇಕಾಗುತ್ತದೆ. ಕಿನ್ನಿಗೋಳಿ ಸಮೀಪದ ಏಳಿಂಜೆ ಪೆರ್ಗುಂಡಿ ಗಣಪತಿ ಮೂರ್ತಿಯ ರಚನೆ ಮೊತ್ತ ಮೊದಲ ಪ್ರಯತ್ನ. ಆ ನಂತರದ ವರ್ಷದಿಂದ ಮೂರ್ತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಲೇ ಬಂದಿದ್ದು ಈಗ ಒಟ್ಟು ೬೬ ಮೂರ್ತಿಗಳ ತಯಾರಿಕೆಗೆ ಬೇಡಿಕೆ ಬಂದಿದ್ದು ಸುಮಾರು 15 ಸಾರ್ವಜನಿಕ ಗಣೇಶೋತ್ಸವ ಗಣಪತಿ ಮೂರ್ತಿಗಳು. ಸಕಾಲದಲ್ಲಿ ಕೆಲಸ ಗಣೇಶ ಹಬ್ಬದ ಮುಂಚಿನ ದಿವಸಕ್ಕೆ ತಯಾರಿ ಆಗುತ್ತದೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ.
ನಾನು ವಿಗ್ರಹ ರಚನೆ ಮಾಡಿದರೆ. ವಿಗ್ರಹ ಹಾಗೂ ಪೀಠಕ್ಕೆ ಪೈಂಟ್ ಹಾಗೂ ಸಣ್ಣಪುಟ್ಟ ಕೆಲಸಕ್ಕೆ ಪತ್ನಿ ಮತ್ತು ಮಕ್ಕಳು ಸಹಾಯ ನೀಡುತ್ತಾರೆ. ಹತ್ತು ವರ್ಷ ಮೊದಲು ಸುಮಾರು 20 ಮಂದಿ ಕೆಲಸಕ್ಕಿದ್ದರು. ಸ್ನೇಹಿತರ ಸತತ ಪ್ರೋತ್ಸಾಹ ಹಾಗೂ ಪ್ರೇರಣೆಯಿಂದ ಆವೆಮಣ್ಣಿನ ಸಾಂಪ್ರದಾಯಿಕ ಭಂಗಿಗಳ ಗಣಪತಿ ಮೂರ್ತಿ ರಚಿಸುವುದಕ್ಕೆ ಮೊದಲ ಆದ್ಯತೆ ಕೊಟ್ಟು ಗ್ರಾಹಕರು ಇಷ್ಟ ಪಟ್ಟಂತೆ ವಿಗ್ರಹ ರಚಿಸುತ್ತೇನೆ. ವಿಗ್ರಹಕ್ಕೆ ಬಣ್ಣ ಕೊಡುವಲ್ಲಿ ಪರಿಸರ ಪ್ರೇಮದ ಕಾಳಜಿಯಿಂದ ಆಯಿಲ್ ಪೈಂಟ್ ಬಳಸದೆ ವಾಟರ್ ಕಲರ್ ಮುಂತಾದ ನೀರಿಗೆ ಹಾನಿ ಮಾಡದ ಬಣ್ಣವನ್ನು ಬಳಸುತ್ತೇನೆ. ಅತಿರಂಜಿತ ಬಣ್ಣಗಳಿಲ್ಲದ ವಿಗ್ರಹ ರಚನೆ ಹಾಗೂ ಆವೆ ಮಣ್ಣಿನ ಟೊಳ್ಳು ಗಣಪತಿ ನನ್ನದು ಎಂದು ಹೇಳುತ್ತಾರೆ
ವಿಗ್ರಹ ತಯಾರಿಕೆಯ ಸಂದರ್ಭದಲ್ಲಿ ಮನಸ್ಸು ಶಾಂತವಾಗಿದ್ದಲ್ಲಿ ಮಾತ್ರ ವಿಗ್ರಹವು ಅಚ್ಚುಕಟ್ಟಾಗಿ ಮೂಡಿ ಬರಲು ಸಾಧ್ಯ. ತಾನು ದೇವರ ವಿಗ್ರಹ ರಚಿಸುವುದರಿಂದ ಮನೆ ಮಂದಿ ಎಲ್ಲರೂ ಸಸ್ಯಾಹಾರಿಗಳಾಗಿದ್ದೇವೆ, ವೃತ ನಿಯಮಗಳನ್ನು ಪಾಲಿಸುತ್ತೇನೆ ಎನ್ನುವ ಸದಾಶಿವರು ತನ್ನ ಮನೆಯ ಅಂಗಳದಲ್ಲೇ ವಿಗ್ರಹ ತಯಾರಿ ಶೆಡ್ ನಿರ್ಮಿಸಿಕೊಂಡಿದ್ದಾರೆ. ಅದೇ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ವಿಗ್ರಹಗಳನ್ನು ರಚಿಸಿದರೆ ಅವುಗಳು ಕರಗದೆ ಪರಿಸರ ಮಾಲೀನ್ಯದೊಂದಿಗೆ ಅವುಗಳಿಗೆ ಗಣೇಶನ ಶಕ್ತಿ ಒದಗುವುದಿಲ್ಲ ಯಾಕೆಂದರೆ ಅವುಗಳು ಪಂಚಭೂತಗಳಲ್ಲಿ ಎಂದೂ ಲೀನವಾಗುವುದಿಲ್ಲ. ಬಣ್ಣದ ವಿಚಾರದಲ್ಲೂ ಅಷ್ಟೇ ಎಂದಿಗೂ ಸ್ವಾಭಾವಿಕ ಹಾಗೂ ಮಾಲೀನ್ಯ ರಹಿತವಾದ ಬಣ್ಣಗಳನ್ನೇ ಬಳಸುತ್ತೇವೆ. ಇದರಿಂದಾಗಿ ನೀರಿಗೆ ಬಿದ್ದ ತಕ್ಷಣ ಯಾವುದೇ ರಾಸಾಯನಿಕ ಕ್ರಿಯೆ ಉಂಟಾಗದೆ ವಿಗ್ರಹವು ಕರಗುವುದು ಹಾಗೂ ಜಲಚರಗಳಿಗೂ ಯಾವುದೇ ರೀತಿಯ ಹಾನಿಯಾಗುವುದಿಲ.
ಜೂನ್ ಒಂದರಿಂದಲೇ ವಿಗ್ರಹ ರಚನೆ ಕೆಲಸ ಪ್ರಾರಂಭಿಸುತ್ತೇನೆ. ಈಗಿನ ಆರ್ಥಿಕ ಸ್ಥಿತಿ ವಿಗ್ರಹಕ್ಕೆ ರಚನೆಗೆ ತಗಲುವ ಸಮಯ ನೋಡಿದಾಗ, ಕೆಲವು ಗ್ರಾಹಕರು ಕೊಡುವ ಸಂಭಾವನೆ ಕಡಿಮೆ, ಕೆಲವರು ಚೌಕಾಶಿ ಮಾಡಿದರೂ ಅವರು ನನ್ನ ಖಾಯಂ ಗಿರಾಕಿಯಾದ್ದರಿಂದ ಹಾಗೂ ವಿಗ್ರಹ ರಚನೆ ದೇವರ ಸೇವೆಯೆಂದು ನಾನು ಭಾವಿಸಿಕೊಂಡಿದ್ದೇನೆ
ಓರ್ವರ ಅಪೇಕ್ಷೆಯಂತೆ ಬಣ್ಣವಿಲ್ಲದ ಮೂರ್ತಿ ಮಾಡಲಾಗಿದ್ದು ಚಿನ್ನ ಬೆಳ್ಳಿಯ ಆಭರಣಗಳನ್ನು ತೊಡಿಸಿದಾಗ ಬಣ್ಣದ ಮೂರ್ತಿಗಿಂತಲೂ ಇದು ಹೆಚ್ಚು ಆಕರ್ಷಕವಾಗಿ ಕಾಣುವುದರಲ್ಲಿ ಸಂದೇಹವಿಲ್ಲ. ಇದು ಬಹಳ ಚೆಂದವೂ ಹಾಗೆಯೇ ಪರಿಸರ ಮಾಲಿನ್ಯ ತಡೆಗೂ ಬೆಂಬಲ ನೀಡಿದಂತಾಗುತ್ತದೆ ಎಂದು ಸದಾಶಿವರ ಮಾತು.

ಗಣಪತಿ ಸೀಸನ್ ಮುಗಿದ ನಂತರ ಪೈಂಟಿಂಗ್ ಕೆಲಸ ಮಾಡುತ್ತಾರೆ. ಫ್ಲೆಕ್ಸ್ ಹಾವಳಿಯಿಂದಾಗಿ ಪೈಂಟರುಗಳಿಗೆ ಕೆಲಸದ ಕೊರತೆ ಬಾರೀ ಎದುರಾಗಿದೆ ನಂತರದ ದಿನಗಳಲ್ಲಿ ಇನ್ನಿತರ ಕಲಾ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.

ಗಣೇಶ ಚತುರ್ಥಿಯ ಆಚರಣೆ ಇಂದು ಹೆಚ್ಚಾಗುತ್ತಿದೆ. ಜನರಲ್ಲಿ ಒಗ್ಗಟ್ಟು ಮತ್ತು ಸಂಸ್ಕೃತಿಯ ಅರಿವು ಮೂಡಬೇಕಾಗಿದೆ. ಇಂದಿನ ಯುವಜನತೆ ವಿಗ್ರಹ ರಚನಾ ಕಾರ್ಯದಲ್ಲಿ ಉತ್ಸುಕತೆ ತೋರುತ್ತಿಲ್ಲ ಹಿಂದೆ ನಾವು ಕಲಿಯುತ್ತಿರುವ ಸಂದರ್ಭದಲ್ಲಿ ಒಬ್ಬ ಕಲಾವಿದನ ಬಳಿ ಕನಿಷ್ಠವೆಂದರೂ 20 ಮಂದಿ ಆಸಕ್ತರು ಇರುತ್ತಿದ್ದರು. ಆಸಕ್ತರು ಯಾರಾದರೂ ಬಂದರೆ ಅವರಿಗೆ ಕಲಿಸಲು ನಾವು ಉತ್ಸುಕರಾಗಿದ್ದೇವೆ ಎನ್ನುತ್ತಾರೆ.

Kinnigoli-07091301

Kinnigoli-07091312

Kinnigoli-07091311

 

Comments

comments

Comments are closed.

Read previous post:
Kinnigoli-06091304
ಕಿನ್ನಿಗೋಳಿ ಲಯನ್ಸ್ ಕ್ಲಬ್ : ಶಿಕ್ಷಕರಿಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಗುರುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ ಶಿಕ್ಷಕರಾದ ಗ್ರೆಗರಿ ಡಿಸೋಜ, ಸೆವೆರಿನ್ ಸಿಕ್ವೇರಾ, ಪ್ರೊ| ಪ್ರಾಟ್ರಿಕ್...

Close