ಬಿಜೆಪಿ ಆಡಳಿತ ಪಂಚಾಯಿತಿಗೆ ಶಾಸಕರ ಅಸಹಕಾರ; ಆರೋಪ

ಕಿನ್ನಿಗೋಳಿ : ಅಭಿವೃದ್ಧಿಗೆ ಸಹಕಾರ ನೀಡಬೇಕಾದ ಕ್ಷೇತ್ರದ ಶಾಸಕರು ಬಿಜೆಪಿ ಆಡಳಿತ ಇರುವ ಗ್ರಾಮ ಪಂಚಾಯಿತಿಗಳಿಗೆ ಅಸಹಕಾರ ನೀಡುತ್ತಿದ್ದು, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಗ್ರಾಮದ ಅಭಿವೃದ್ಧಿಗೋಸ್ಕರ ಕೈಗೊಂಡ ಸರ್ವಾನುಮತದ ನಿರ್ಣಯವನ್ನು ಜಿಲ್ಲಾಡಳಿತದ ಮೇಲೆ ತನ್ನ ಪ್ರಭಾವ ಬೀರಿ ಗಾಳಿಗೆ ತೂರಿ ದ್ವೇಷದ ರಾಜಕಾರಣ ಮಾಡ ಹೊರಟಿರುವುದು ಸಚಿವ ಸ್ಥಾನದಲ್ಲಿರುವವರಿಗೆ ಶೋಭೆ ತರುವಂತದ್ದಲ್ಲ ಎಂದು ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಆಡಳಿತದ ನಿರ್ಣಯದಂತೆ ಕೊಂಡೆಮೂಲ ಗ್ರಾಮ ಅಜಾರು ಸಮೀಪದ ಧೂಮಾವತಿ ದೈವಸ್ಥಾನ ದ್ವಾರದ ಬಳಿ ಲೋಕೋಪಯೋಗಿ ಇಲಾಖೆಗೆ ಒಳಪಟ್ಟ ರಸ್ತೆ ಬದಿ ನಿರ್ಮಿಸುತ್ತಿರುವ ಅಂಗಡಿಯನ್ನು ತೆರವು ಗೊಳಿಸಿದ ವಿರುದ್ಧ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವಠಾರದಲ್ಲಿ ಸೋಮವಾರ ನಡೆದ ಸಾಂಕೇತಿಕ ಧರಣಿ ಹಾಗೂ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಕಟೀಲು ಸೇತುವೆ ಬಳಿಯಿಂದ ಕ್ಷೇತಕ್ಕೆ ಬರುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವಿಸ್ತರಣೆ ಮಾಡುವಾಗ ಅಡ್ಡ ನಿಂತು ತೀವ್ರವಾಗಿ ಪ್ರತಿಭಟಿಸಿದ ಶಾಸಕರು ಈಗ ಅದೇ ಇಲಾಖೆಯನ್ನು ಬಳಸಿಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ, ಅಂದು ಇದ್ದ ಜನಪರ ಕಾಳಜಿ ಇಂದು ಮರೆತಿರುವುದು ಕಟೀಲು ಕ್ಷೇತ್ರದ ದೌರ್ಭಾಗ್ಯ ಎಂದು ವ್ಯಂಗ್ಯವಾಡಿದರು.

ಅಂಗಡಿ ನಿರ್ಮಾಣದ ಬಗ್ಗೆ ಈ ಮುಂಚೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ಸರ್ವಸದಸ್ಯರು ಪಕ್ಷಬೇಧ ಮರೆತು ಅಂಗಡಿ ಕಟ್ಟುವ ಬಗ್ಗೆ ನಿರ್ಣಯ ಕೈಗೊಂಡಿದ್ದರು. ಈಗ ಸ್ಥಾಪಿತ ಹಿತಾಸಕ್ತಿಯ ಪ್ರೇರಣೆಯಿಂದಾಗಿ ಜಿಲ್ಲಾಡಳಿತವು ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಎಕಾಎಕಿ ಅಂಗಡಿ ತೆರವು ಗೊಳಿಸುವ ನೇರ ಆದೇಶವನ್ನೇ ನೀಡಿದೆ. ಪಂಚಾಯಿತಿಯ ನಿರ್ಣಯಗಳಿಗೆ ಯಾವುದೇ ಬೆಲೆಯಿಲ್ಲ ಎಂಬಂತ ಪರಿಸ್ಥಿತಿ ಉಂಟಾಗಿದೆ. ಎಂದು ಮೆನ್ನಬೆಟ್ಟು ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು ವಿಷಾದ ವ್ಯಕ್ತಪಡಿಸಿದರು.

ಪಾಳೆಗಾರಿಕೆಯ ಕಾಲ ಕಳೆದು ಹೋಗಿದ್ದರೂ ಅದರ ನೆರಳು ಇನ್ನೂ ಆವರಿಸಿದೆ ಎನ್ನುವುದಕ್ಕೆ ಅಂಗಡಿ ತೆರವು ಕಾರ್ಯಾಚರಣೆಯೇ ದಿವ್ಯ ಸಾಕ್ಷಿಯಾಗಿದೆ. ಬಿಜೆಪಿ ಆಡಳಿತದ ಪಂಚಾಯಿತಿಗಳಿಗೆ ಅನುದಾನ ನೀಡದಿದ್ದಲ್ಲಿ ಮತ್ತು ಗ್ರಾಮದ ಅಭಿವೃದ್ಧಿಗೆ ಸ್ಪಂದಿಸದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರಾಧ್ಯಕ್ಷ ಸುಚರಿತ ಶೆಟ್ಟಿ ಎಚ್ಚರಿಸಿದರು.
ಪ್ರತಿಭಟನಾಕಾರರು ಹಣೆಗೆ ಕಪ್ಪು ಪಟ್ಟಿ ಧರಿಸಿ ಜಿಲ್ಲಾಡಳಿತದ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿದರು.

ಬಿಜೆಪಿಯ ಜಿಲ್ಲಾ ಸಮಿತಿಯ ಸದಸ್ಯ ಕೆ.ಭುವನಾಭಿರಾಮ ಉಡುಪ, ಉಪಾಧ್ಯಕ್ಷೆ ಕಸ್ತೂರಿ ಪಂಜ, ಪರಿಶಿಷ್ಟ ಜಾತಿ, ಪಂಗಡ ಮೋರ್ಛಾದ ಅಧ್ಯಕ್ಷ ಎಂ. ಶೀನ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ತಾಲ್ಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಕೇಶವ ಕರ್ಕೇರಾ, ಶೈಲಾ ಶೆಟ್ಟಿ, ಭಾಸ್ಕರ ಪೂಜಾರಿ, ಅರುಣ್, ಜಯಶಂಕರ ರೈ, ತಾರಾ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Kinnigoli-14101303

Comments

comments

Comments are closed.

Read previous post:
Kinnigoli-14101302
ದೇಶಕ್ಕೆ ಅನ್ನ ನೀಡುವ ರೈತರು

ಕಿನ್ನಿಗೋಳಿ: ದೇಶಕ್ಕೆ ಅನ್ನ ನೀಡುವ ರೈತರ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಹುಟ್ಟು ಹಾಕಿದ ರೈತ ಸಂಘ, ಶೋಷಣೆಯ ವಿರುದ್ಧ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಇದೆ. ಎಂದು ಐಕಳ ರೈತ...

Close