ಮೂಲ್ಕಿ-ಬೆಳ್ಳಾಯರು ಹುಡ್ಕೋ ಕಾಲನಿ-ಗ್ರಾಹಕರ ಆಕ್ಷೇಪ

Narendra Kerekadu

ಮೂಲ್ಕಿ: ಜನಸಾಮಾನ್ಯರಿಗೆ ಉಪಯೋಗವಾಗಬೇಕಿದ್ದ ಗೃಹ ಮಂಡಳಿ ತನ್ನೆಲ್ಲ ಚೈತನ್ಯ ಕಳೆದುಕೊಂಡು ಬಿಟ್ಟಿದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆಯೊಂದು ಮೂಲ್ಕಿ ಬಳಿಯ ಪಡುಪಣಂಬೂರು ಗ್ರಾಮ ಪಂಚಾಯಿತಿಯ ಬೆಳ್ಳಾಯರು ಎಂಬ ಗ್ರಾಮದಲ್ಲಿ ಇರುವ ಹುಡ್ಕೋ(ಕರ್ನಾಟಕ ಗೃಹ ನಿರ್ಮಾಣ ಮಂಡಳಿ) ಕಾಲನಿಯೇ ಪ್ರತ್ಯಕ್ಷ ಸಾಕ್ಷಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ವಸತಿ ಹೀನರಿಗೆ ಅತ್ಯಂತ ಕಡಿಮೆ ಮೊತ್ತದಲ್ಲಿ ಮನೆ ನಿರ್ಮಿಸಿ ಮಿತ ಬಡ್ಡಿಯ ಸಾಲದ ಸೌಲಭ್ಯವನ್ನೂ ಒದಗಿಸಿಕೊಡುತ್ತಿದ್ದ ಹುಡ್ಕೋ(ಕರ್ನಾಟಕ ಗೃಹ ನಿರ್ಮಾಣ ಮಂಡಳಿ) ಈಗ ಖಾಸಗಿ ಲ್ಯಾಂಡ್ ಡೆವಲಪರ್ಸ್‌ನಂತಾಗಿದೆ ಎನ್ನುವ ನಾಗರಿಕರು ಇದಕ್ಕೆ ಅಧಿಕಾರಿಗಳ ಬೇಜವಾಬ್ದಾರಿಯ ಹೊಣೆಗಾರಿಕೆಯೇ ಕಾರಣ ಎಂಬಂತೆ ಆರೋಪ ಮಾಡುತ್ತಾರೆ.
20ವರ್ಷಗಳ ಹಿಂದೆ ಈ ಬೆಳ್ಳಾಯರು ಗ್ರಾಮದಲ್ಲಿ ಗೃಹ ಮಂಡಳಿ ಆರು ಎಕರೆ ಜಮೀನು ಖರೀದಿಸಿ ನಾಲ್ಕೈದು ವರ್ಷಗಳ ಹಿಂದೆಯಷ್ಟೇ ಅದನ್ನು ಸಮತಟ್ಟು ಮಾಡಿ ಸೈಟ್‌ಗಳನ್ನಾಗಿ ಪರಿವರ್ತಿಸಿತ್ತು. ಸುಮಾರು 100ರಷ್ಟು ಎರಡೂವರೆ ಸೆಂಟ್ಸ್‌ನಿಂದ ನಾಲ್ಕು, ಐದು ಸೆಂಟ್ಸ್‌ಗಳ ಸೈಟ್ ಇಲ್ಲಿ ಮಾರಾಟಕ್ಕಿಡಲಾಗಿತ್ತು. ಇದರೊಂದಿಗೆ 20 ಮನೆಗಳನ್ನು ಗೃಹ ಮಂಡಳಿಯೇ ನಿರ್ಮಿಸಿ 15 ಲಕ್ಷದ ಬೆಲೆಗೆ ಪುಟ್ಟ ಮನೆಯನ್ನು ನಿರ್ಮಿಸಿ ಮಾರಾಟ ಮಾಡುತ್ತಿದೆ.
ಆದರೆ ಇಲ್ಲಿ ಬೆರಳೆಣಿಕೆಯ ಮನೆಗಳಷ್ಟೇ ಮಾರಾಟವಾಗಿದೆ. ಮನೆಯ ಗುಣ ಮಟ್ಟದ ಬಗ್ಗೆ ಯಾವುದೇ ತಕರಾರು ಸ್ಥಳೀಯರಿಗೆ ಇಲ್ಲ ಆದರೆ ಮಾರಾಟ ಮಾಡಿರುವ ಬೆಲೆ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪಣೆ ಇದೆ. ಕಾರಣ ಹುಡ್ಕೋ ಕಾಲನಿಯ ಆಸುಪಾಸಿನ ಸ್ಥಳಗಳಲ್ಲಿ ಸೆಂಟ್ಸ್‌ಗೆ 40ರಿಂದ 60 ಸಾವಿರ ರೂಪಾಯಿಯವರೆಗೆ ಭೂಮಿಗೆ ಬೆಲೆ ಇದೆ. ಆದರೆ ಇಲ್ಲಿ ಹುಡ್ಕೋ ಕಾಲನಿಯಲ್ಲಿ ಇದಕ್ಕಿಂತಲೂ ದುಪ್ಪಟ್ಟು ಬೆಲೆಯನ್ನು ಅಂದರೆ ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟು (ಸೆಂಟ್ಸ್‌ಗೆ) ಬೆಲೆಯಲ್ಲಿ ಸೈಟ್ ಮಾರುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸುತ್ತಾರೆ.
ಹೇಳುವುದಕ್ಕೆ ಉತ್ತಮ ರಸ್ತೆ, ನೀರಿನ ಸೌಲಭ್ಯ, ಪ್ರಶಾಂತ ಪರಿಸರದಲ್ಲಿ ಹುಡ್ಕೋ ಕಾಲನಿ ನಿರ್ಮಾಣವಾಗಿದ್ದರೂ ಇಲ್ಲಿ ವಾಸಿಸುವವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. ಇದಕ್ಕೆ ಕಾರಣ ಗೃಹ ಮಂಡಳಿಯ ನಿರಾಸಕ್ತಿ ಎನ್ನುವ ಗ್ರಾಹಕರು. ಲಾಟರಿ ಮುಖಾಂತರ ಅರ್ಜಿ ಹಾಕಿದವರಿಗೆ ಮನೆ ಇಲ್ಲವೇ ಸೈಟ್ ವಿತರಿಸುವ ಹುಡ್ಕೋ ಈಗ ಅದನ್ನೂ ಮಾಡುತ್ತಿಲ್ಲ. ಮಂಗಳೂರಿನ ಕುಂಜತ್ತಬೈಲ್‌ನಲ್ಲಿರುವ ಹುಡ್ಕೋ ಕಚೇರಿಗೆ ಹೋದರೆ ಅಲ್ಲಿನ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ತೋರಿಸಿಕೊಳ್ಳುತ್ತಾರೆ. ಪ್ರತಿಯೊಂದಕ್ಕೂ ಬೆಂಗಳೂರಿನ ಹುಡ್ಕೋ ಮುಖ್ಯ ಕಚೇರಿಯತ್ತ ದಾರಿ ತೋರಿಸುತ್ತಾರೆ ಎಂಬ ಅನುಭವವನ್ನು ಪತ್ರಿಕೆಯೊಂದಿಗೆ ಗ್ರಾಹಕರು ತೆರೆದಿಟ್ಟಿದ್ದಾರೆ.
ಮಾರಿ ಹೋಗುವ ಹೊತ್ತಿಗೆ ಮಾರಾಟವಾಗಲಿ. ನಮಗೇನು ಅರ್ಜೆಂಟಿಲ್ಲ ಎಂಬ ಧೋರಣೆ ಹುಡ್ಕೋದ ಅಧಿಕಾರಿಗಳದ್ದು ಇದರ ಪರಿಣಾಮ ಹುಡ್ಕೋದವರು ನಿರ್ಮಿಸಿದ ಮನೆ ಈಗೀಗ ತುಕ್ಕು ಹಿಡಿಯುತ್ತಿದೆ. ವಸತಿ ಹೀನರಿಗೆ ಕಡಿಮೆ ದರದಲ್ಲಿ ವಸತಿ ಭಾಗ್ಯ ಒದಗಿಸ ಬೇಕಾಗಿದ್ದ ಸರಕಾರಿ ಸಂಸ್ಥೆಯೊಂದು ಇಂತಹ ಅಧಿಕಾರಿಗಳಿಂದಾಗಿ ತಮ್ಮ ಕಣ್ಣೆದುರೇ ಅದರ ಪ್ರಸ್ತುತತೆ ಕಳೆದುಕೊಳ್ಳುತ್ತಿದೆ ಎಂಬ ಆತಂಕವೂ ಗ್ರಾಹಕರಲ್ಲಿ ಮನ ಮಾಡಿದೆ.
ಒಂದು ಸುಂದರವಾಗಿ ನಿರ್ಮಿಸಿದ ಹುಡ್ಕೋ ಕಾಲೋನಿಯನ್ನು ಕೂಡಲೆ ಸೂಕ್ತ ರೀತಿಯಲ್ಲಿ ವಿಲೆವಾರಿ ಮಾಡಿಕೊಂಡರೆ ಉತ್ತಮ ಇಲ್ಲದಿದ್ದರೇ ಇಲ್ಲಿನ ಮನೆಗಳ ಒಂದೊಂದೇ ಭಾಗವು ಕಳೆದುಕೊಂಡು ಹಾಳು ಕೊಂಪೆ ಆಗುವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

Kinnigoli-17101301

Kinnigoli-17101302

Comments

comments

Comments are closed.

Read previous post:
Kinnigoli16101301
ಶಾಂತಿಪಲ್ಕೆ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಪಲ್ಕೆ ಮಹಾಂಕಾಳಿ ದೇವಸ್ಥಾನದ ಬಳಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ 1.5ಲಕ್ಷ ಮೊತ್ತದ ಪೈಪ್ ಲೈನ್ ಕಾಮಾಗಾರಿಯ ಗುದ್ದಲಿ ಪೂಜೆಯನ್ನು ಜಿಲ್ಲಾ...

Close