ಕಂಬಳ ಕ್ರೀಡೆಯಲ್ಲಿ ರಾಜೋತ್ಸವ ಪ್ರಶಸ್ತಿ

Narendra Kerekadu
ಮೂಲ್ಕಿ: ಪವಿತ್ರವಾದ ತುಳುನಾಡಿನ ಪುಣ್ಯ ಭೂಮಿಯಾದ ಮೂಲ್ಕಿಯ ಮಣ್ಣು ಅಷ್ಟೇ ಶ್ರೇಷ್ಠವಾಗಿದ್ದು, ಕಂಬಳ ಕ್ರೀಡೆಗಾಗಿ ವಿಶೇಷ ರಾಜ್ಯೋತ್ಸವ ಪ್ರಶಸ್ತಿ ಬಂದಿದ್ದು ಮೂಲ್ಕಿಯ ಸಮಸ್ತ ಜನತೆಗೆ ಸಲ್ಲುವಂತಾಗಿದೆ, ಕಂಬಳದ ರಾಜನಾಗಿ ಮೆರೆದ “ನಾಗರಾಜ”ನಿಗೆ ಈ ಪ್ರಶಸ್ತಿಯ ಅರ್ಹತೆಗೆ ಸರಿಸಮಾನವಾಗಿದೆ ನಾಲ್ಕು ದಶಕದ ಕ್ರೀಡಾ ಕ್ಷಮತೆಗೆ ಸರ್ಕಾರ ಗುರುತಿಸಿದ್ದು ಹೆಮ್ಮೆ ತಂದಿದೆ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಮಾನ್ಯತೆಗೆ ಭಾಜನರಾಗಿರುವ ಮೂಲ್ಕಿಯ ಪಯ್ಯೊಟ್ಟು ಸದಾಶಿವ ಸಾಲ್ಯಾನ್ ಹೇಳುತ್ತಾರೆ.
ಪಯ್ಯೋಟ್ಟುವಿನ ಅಂತಯ್ಯ ಕೋಟ್ಯಾನ್ ಮತ್ತು ವೆಂಕಮ್ಮ ದಂಪತಿಗಳ 9 ಮಕ್ಕಳಲ್ಲಿ ಸದಾಶಿವ ಸಾಲ್ಯಾನ್‌ಗೆ ಕೃಷಿ, ಜಾನಪದ ಕ್ರೀಡೆ, ಸಂಘಟನೆ, ರಾಜಕೀಯ, ಬಸ್ಸು ಉದ್ಯಮಕ್ಕೆ ಮುಡಿಪಾದರಲ್ಲದೇ ಅದರಲ್ಲಿ ಯಶಸ್ಸು ಸಹ ಸಾಧಿಸಿದವರು. ದೇಹವು ಯೌವನದತ್ತ ಸಾಗುವಾಗಲೇ ಕಂಬಳದ ಗದ್ದೆಗೆ ಇಳಿದು ಕೋಣಗಳೊಂದಿಗೆ ಓಟವನ್ನು ನಡೆಸಿದ್ದ ಅವರು ಇದೇ ಅವರನ್ನು ಉತ್ತುಂಗಕ್ಕೇರುಸುವಲ್ಲಿ ಸಹಕಾರಿಯಾಯಿತು.
ಮೂಲ್ಕಿ ಎಂದಾಕ್ಷಣ ಅಲ್ಲೊಂದು ಪಯ್ಯೋಟ್ಟು ಕಂಬಳದ ಕೋಣ ಇದೆಯಲ್ಲ ಎಂಬ ಮಾತು ಎಲ್ಲೆಲ್ಲೂ ಪ್ರಸಾರ ಪಡೆಯಿತು. ಇದರಿಂದ ಮೂಲ್ಕಿಗೂ ಸಹ ಒಂದು ಗೌರವ ಸ್ಥಾನಮಾನ ಸಿಕ್ಕಿತಲ್ಲದೇ ಅಷ್ಟೇ ಶ್ರದ್ಧೆಯಿಂದ ಅದನ್ನು ಇಂದಿನವರೆಗೂ ಕಾಯ್ದುಕೊಂಡು ಬಂದಿರುವ ಸದಾಶಿವ ಸಾಲ್ಯಾನ್‌ರವರಿಗೆ ಪ್ರೇರಣೆ ಆಗಿದ್ದು ಮಾವ ರುಕ್ಕರಾಮ್ ಸಾಲ್ಯಾನ್‌ರವರು ಎಂದು ಹೇಳಿಕೊಳ್ಳುತ್ತಾರೆ.
ಮುಂಬಯಿಯಲ್ಲಿ ಲಲಿತ್ ಮಹಲ್‌ನ ರುಕ್ಕಣ್ಣನಾಗಿ ಉದ್ಯಮಿಯಾಗಿ ಸಮಾಜ ಸೇವಕರಾಗಿ ಜನಾನುರಾಗಿಯಾಗಿದ್ದ ರುಕ್ಕರಾಮ್ ಸಾಲ್ಯಾನ್‌ರವರು ಪ್ರಾರಂಭಿಸಿದ ಕಂಬಳ ಕ್ರೀಡೆಯ ಸ್ಪರ್ಧೆಯ ಕೋಣಗಳನ್ನು ಸಾಕು ಸಲುಹಿಸಿ ಅದನ್ನು ಓಟಕ್ಕೆ ಹದಮಾಡುವ ರೀತಿಯನ್ನು ಕಂಡು ಆಕರ್ಷಿತನಾದೆ ಅದರ ಜೊತೆ ಜೊತೆಗೆ ಬೆಳೆದು ಅದನ್ನೂ ಇಷ್ಟು ಎತ್ತರಕ್ಕೆ ಕೊಂಡೊಯ್ದಿದಿದ್ದಕ್ಕೆ ಅವರೇ ತನಗೆ ಸ್ಪೂರ್ತಿ ಎಂದು ಸಾಲ್ಯಾನ್ ನೆನಪಿಸುತ್ತಾರೆ.
ಪವಿತ್ರವಾದ ನಾಗರ ಪಂಚಮಿ ದಿನದಂದು ಪಯ್ಯೋಟ್ಟು ಮನೆಗೆ ಬಂದ ಕೋಣಕ್ಕೆ “ನಾಗರಾಜ” ಎಂದು ನಾಮಕರಣ ಮಾಡಿದ ಸದಾಶಿವ ಸಾಲ್ಯಾನ್‌ರವರು ಅದನ್ನು ಕಂಬಳದ ಗದ್ದೆಯಲ್ಲಿ ಓಟದ ರಾಜನಾಗಿ ಮೆರೆಯಲು ಸಾಕಷ್ಟು ವಿಶೇಷ ತರಬೇತಿಯನ್ನು ನೀಡಿದ್ದರು. ನಿರೀಕ್ಷೆಯಂತೆ ನಾಗರಾಜ ಕಂಬಳದ ರಾಜನಾಗಿ ಮೆರೆದನಲ್ಲದೇ ಒಟ್ಟು 26 ಬಾರಿ ವಿವಿಧೆಡೆ ಚಿನ್ನದ ಪದಕ ಗೆದ್ದು ಕೀರ್ತಿ ತಂದರೆ, ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಕಂಬಳದ ಕೋಣ ಎನ್ನದೇ ಸಾಧನೆಯ ಸರದಾರ ಎಂದೇ ವಿಶೇಷ ಗೌರವದಿಂದ ಸನ್ಮಾನಿಸಿದ್ದು ಈ ಕ್ರೀಡೆಯಲ್ಲಿ ಇದುವರೆಗೂ ಯಾವ ಕೋಣಕ್ಕೂ ಇಂತಹ ಸಿಕ್ಕಿಲ್ಲ. ಇಂದು ನಾಗರಾಜ ಈ ಮನೆಯಿಂದ ಮರೆಯಾದರು ಆತ ಕೋಣ ಎಂಬ ಭಾವನೆ ಇಲ್ಲದೇ ನನ್ನ ಸಾಕು ಮಗನಂತೆ ನನ್ನೋಂದಿಗೆ ಆತನ ಗಾಂಭೀರ್ಯ, ನೆನಪು ಸದಾ ನನ್ನ ಬದುಕಲ್ಲಿ ಅಚ್ಚಳಿಯದೇ ಜೀವನದ ಕೊನೆಯವರೆಗೂ ಉಳಿದಿದೆ ಎನ್ನುವಾಗ ಸದಾಶಿವಣ್ಣ ಭಾವುಕರಾಗುತ್ತಾರೆ.
ಪಯ್ಯೋಟ್ಟು ಮನೆಯಿಂದ ಕಂಬಳಕ್ಕೆ ಕೋಣಗಳನ್ನು ಹೊರಡಿಸುವಾಗ ಅಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತದೆ, ಮನೆಯವರೆಲ್ಲರೂ ಹಾಗೂ ಕಂಬಳ ಪ್ರೇಮಿಗಳ ಸಹಿತ ಕುಟುಂಬದವರು ವಿಶೇಷ ಪೂಜೆ ಪುರಸ್ಕಾರ ಹಾಗೂ ಹಿರಿಯರಿಗೆ ನಮಸ್ಕರಿಸಿಯೇ ಕಂಬಳಕ್ಕೆ ಹೊರಡುವುದು. ಕಂಬಳ ಮುಗಿಸಿ ಮರಳಿ ಮನೆಗೆ ಬಂದಾಗ ಅದು ಅಲ್ಲಿ ಸೋಲಲಿ ಅಥವ ಗೆಲ್ಲಲಿ ಅದೇ ಆದರಾಥಿತ್ಯ ಅದಕ್ಕೆ ಸಿಗುತ್ತದೆ ಇದೇ ಶ್ರದ್ಧೆ ನಿಷ್ಠೆಯಿಂದ ರಾಜ್ಯೋತ್ಸವ ಪ್ರಶಸ್ತಿಯು ಸಾಲ್ಯಾನ್‌ರಿಗೆ ದೇವರ “ಅಭಯ” ಸಿಕ್ಕಿದೆ ಎಂದು ಮೂಲ್ಕಿಯ ಉದ್ಯಮಿ ತಾರನಾಥ ಸುವರ್ಣ ಅಡ್ವೆ ಅಭಿಮಾನದಿಂದ ತಿಳಿಸುತ್ತಾರೆ.
ಪಯ್ಯೋಟ್ಟು ಸದಾಶಿವ ಸಾಲ್ಯಾನ್‌ರವರು ಮೂಲ್ಕಿ ರಿಕ್ಷಾ ಚಾಲಕ ಮಾಲಕರ ಗೌರವಾಧ್ಯಕ್ಷರಾಗಿ, ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ದುಡಿದವರು ಹಲವಾರು ಸ್ಥಳೀಯ ಸಂಘ ಸಂಸ್ಥೆಯ ಸಲಹೆಗಾರರಾಗಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಸಮಾಜ ಸೇವೆಯನ್ನು ಇಂದಿಗೂ ನಿರಂತರವಾಗಿ ನಡೆಸುತ್ತಿದ್ದಾರೆ. ತಮ್ಮ ಪಯ್ಯೋಟ್ಟು ಮನೆಯಲ್ಲಿ ಕೆಲವೊಂದು ಕುಟುಂಬ ಕಲಹ, ಜಮೀನು, ಹಣಕಾಸು ವಿವಾದವನ್ನು ಬಗೆ ಹರಿಸುವ ಕೇಂದ್ರವನ್ನಾಗಿಯೂ ಗುರುತಿಸಲಾಗುತ್ತಿದೆ.
ಆದರೆ ಸಮಾಜದಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಅವರು ಇಚ್ಚಿಸಿರುವುದು ರಾಜಕೀಯದಲ್ಲಿ ಕಾರಣ ತಮ್ಮ 15ರ ಹರೆಯದಲ್ಲಿಯೇ ಕಾಂಗ್ರೇಸ್ ಪಕ್ಷದ ಪರವಾಗಿ ಪೋಸ್ಟರ್ ಅಂಟಿಸುವ ಮೂಲಕ ಹಂತ ಹಂತವಾಗಿ ಬೆಳೆದು ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದರಿಂದಲೇ ಅವರೀಗ ಮೂಲ್ಕಿ ಬ್ಲಾಕ್ ಕಾಂಗ್ರೇಸ್ಸಿನ ಅಧ್ಯಕ್ಷರಾಗಿ ಜವಬ್ದಾರಿಯನ್ನು ಹೊತ್ತಿದ್ದಾರಲ್ಲದೇ ಪ್ರಸ್ತುತ ಸಚಿವರಾಗಿರುವ ಕೆ.ಅಭಯಚಂದ್ರ ಜೈನ್‌ರವರ ಗೆಲುವಿಗೆ ಪರೋಕ್ಷ ಕಾರಣಕರ್ತರು ಹೌದು ಎನ್ನುತ್ತಾರೆ ಕಾಂಗ್ರೇಸ್ಸಿಗರು.
ಕರಾವಳಿಯ ಪ್ರತಿಷ್ಠಿತ ಮನೆತನವಾಗಿರುವ ಪಯ್ಯೋಟ್ಟುವಿನ ಸದಾಶಿವ ಸಾಲ್ಯಾನ್‌ರವರು ತಮ್ಮ 63 ಹರೆಯದಲ್ಲಿಯೂ ಯುವಕರಂತೆ ಇಂದಿಗೂ ಕಂಬಳದ ಗದ್ದೆಗೆ ಇಳಿಯುತ್ತಿದ್ದಾರೆ. ಪತ್ನಿ ಜಯಂತಿ ಎಸ್.ಸಾಲ್ಯಾನ್ ಇವರ ಪ್ರತಿಯೊಂದು ಕಾರ್ಯಕ್ಕೂ ಬೆನ್ನೆಲುಬಾಗಿದ್ದಾರೆ. ಈ ದಂಪತಿಯ ಇಬ್ಬರು ಪುತ್ರಿಯರಿಗೂ ಮದುವೆಯಾಗಿದ್ದು ಓರ್ವರು ವಿದೇಶದಲ್ಲಿದ್ದರೇ ಮತ್ತೋರ್ವರು ಮುರುಡೇಶ್ವರದಲ್ಲಿ ನೆಲೆಸಿದ್ದಾರೆ. ಈ ಮನೆತನ ಪರಿಚಿತವಾಗಿರುವುದು ಕಂಬಳದ ಸಂಘಟನೆಗೆ ಹಾಗೂ ಆ ಕ್ರೀಡೆಯಲ್ಲಿ ಸಾಧಿಸಿದ ಸಾಧನೆಗಾಗಿ 2013ರ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮತ್ತಷ್ಟು ಸಾರ್ಥ್ಯಕ್ಕೆ ಪಡೆದಿದೆ ಎಂದೇ ಮೂಲ್ಕಿಯ ಜನತೆ ಹೆಮ್ಮೆಯಿಂದ ಪ್ರತಿಕ್ರಿಯಿಸುತ್ತಾರೆ.

ಪಯ್ಯೋಟ್ಟು ಮನೆತನ…

ಕಂಬಳ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದ ಪಯ್ಯೋಟ್ಟು ಸದಾಶಿವ ಸಾಲ್ಯಾನ್‌ರವರ “ನಾಗರಾಜ” ಕೋಣದ ಚಿತ್ರವನ್ನು ಭಾರತ ಸರ್ಕಾರವು ಅಂಚೆ ಇಲಾಖೆಯ 5 ಮತ್ತು 10 ರೂ.ವಿನ ಸ್ಟಾಂಪನ್ನು ಹೊರತಂದಿದೆ, ಅಲ್ಲದೇ ಪ್ರವಾಸೊದ್ಯಮ ಇಲಾಖೆಯು ಹೊರತರುವ ಪ್ರತಿಯೊಂದು ಜಾಹಿರಾತಿನ ಕಂಬಳದ ಚಿತ್ರಣದಲ್ಲಿ ನಾಗರಾಜನದ್ದೇ ಗಾಂಭೀರ್ಯ. ಪಯ್ಯೋಟ್ಟು ಕೃಷಿ ಭೂಮಿಯಲ್ಲಿ ಪ್ರತೀ ವರ್ಷ ನಾಟಿ ಹಾಗೂ ಕಟಾವಿಗೆ ಸೇರುವ ಕಾರ್ಮಿಕರ ಸಂಖ್ಯೆ 150 ದಾಟುತ್ತದೆ..!, ಇಲ್ಲಿ ಕುಟುಂಬ ಕಲಹ, ಜಮೀನು, ಹಣಕಾಸು ವಿವಾದ ಕೂಡ ಪರಿಹಾರ ಕಾಣುತ್ತದೆ.

Kinnigoli31101313

Kinnigoli31101314

Kinnigoli31101315

Kinnigoli31101316

Kinnigoli31101317

Comments

comments

Comments are closed.

Read previous post:
Kinnigoli31101312
ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ

ಕಿನ್ನಿಗೋಳಿ: ತಂದೆತಾಯಿ ಗುರುಹಿರಿಯರನ್ನು ಗೌರವಿಸಿ, ಸಮಾಜಕ್ಕೆ ಒಳಿತನ್ನು ಮಾಡಿದಾಗ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಎಲ್ಲಾ ಮತಧರ್ಮದವರಿಗೂ ಬೆಳಕು ಒಂದೇ. ದೇವರು ಒಬ್ಬನೇ. ಮನಸ್ಸಿನ ಕತ್ತಲೆ ದೂರವಾಗಿ ಸಮಾಜಕ್ಕೆ ಬೆಳಕನ್ನು ನೀಡುವುದೇ...

Close