ಚಿರತೆ ಹಾವಳಿ

ಕಿನ್ನಿಗೋಳಿ: ಇಂದು ಅವ್ಯಾಹಿತ ಅರಣ್ಯ ನಾಶದಿಂದ ಗುಡ್ಡ ಬೆಟ್ಟಗಳು ಕೂಡ ಹಾಳು ಬಿದ್ದಂತೆ ಕಾಣಿಸುತ್ತವೆ. ಆದ್ದರಿಂದ ಮಳೆಯೂ ಬೀಳುತ್ತಿಲ್ಲ. ಯಾವ ಪ್ರಮಾಣದಲ್ಲಿ ಮರಗಳನ್ನು ಕಡಿಯಲಾಗುತ್ತದೆಯೋ, ಅದೇ ಪ್ರಮಾಣದಲ್ಲಿ ಗಿಡ ಮರಗಳನ್ನು ನೆಟ್ಟು ಬೆಳೆಸುತ್ತಿಲ್ಲ. ಆದುದರಿಂದ ನಿಸರ್ಗದ ಈ ಅಮೂಲ್ಯವಾದ ಸಂಪತ್ತು ಅತಿವೇಗದಿಂದ ಕಡಿಮೆಯಾಗುತ್ತಿದ್ದು, ಜೈವಿಕ ಹಾಗೂ ವಾತಾವರಣ ಸಮತೋಲನ ಹಾಳು ಮಾಡುತ್ತಿದೆ. ಕಲ್ಲಿನ ಗಣಿಗಳ ಮೂಲಕ ಬೆಟ್ಟಗಳ ಸಾಲುಗಳೂ ಕಾಣದಂತಾಗಿ ಎಲ್ಲೆಡೆ ನಿರ್ಜನವಾಗುತ್ತಿವೆ ಲೆಕ್ಕವಿಲ್ಲದಷ್ಟು ಅರಣ್ಯ ಭಾಗವನ್ನು ನಾಶ ಮಾಡಿರುವುದರಿಂದ ಪ್ರಾಣಿಗಳೂ ನಿರಾಶ್ರಿತರಾಗಿವೆ. ಆದುದರಿಂದ ಅವು ಮಾನವರ ನೆಲೆಯಲ್ಲಿ ಆಶ್ರಯ ಹುಡುಕುತ್ತಿವೆ. ಆದುದರಿಂದಲೇ ಕರ್ನಾಟಕದ ಅನೇಕ ಭಾಗಗಳಲ್ಲಿ ಮೇಲಿಂದ ಮೇಲೆ ಹುಲಿ-ಚಿರತೆ, ಆನೆಗಳು ಗ್ರಾಮ ನಗರಗಳಲ್ಲಿ ಓಡಾಡಿ ಭಯ ಸೃಷ್ಟಿಸಿದ ಘಟನೆಗಳು ನಡೆಯುತ್ತಿವೆ.
ಕಿನ್ನಿಗೋಳಿ ಸಮೀಪದ ಹಳೆಯಂಗಡಿ, ತೋಕೂರು, ಬೆಳ್ಳಾಯರು, ಪಡುಪಣಂಬೂರು, ಕಲ್ಲಾಪು, ಇಂದಿರಾನಗರ ಪರಿಸರದಲ್ಲಿ ಕಳೆದೊಂದು ವಾರದಿಂದ ಚಿರತೆ ಹಾವಳಿ ವಿಪರೀತವಾಗಿದ್ದು, ಗ್ರಾಮಸ್ಥರು ಆತಂಕದಿಂದಲೇ ದಿನ ಕಳೆಯುವಂತಾಗಿದೆ.
ದೀಪಾವಳಿ ಮುನ್ನಾದಿನ ನಸುಕಿನಲ್ಲಿ ಸ್ಥಳೀಯರೊಬ್ಬರು ಕೆಲಸಕ್ಕೆ ಹೋಗುವಾಗ ತೋಕೂರು ಸಮೀಪದ ರಸ್ತೆಯಲ್ಲಿ ಚಿರತೆ ಮಲಗಿರುವುದನ್ನು ಕಂಡಿದ್ದಾರೆ. ಅದರ ಮರುದಿನ ಕಲ್ಲಾಪು ರೈಲ್ವೇ ಹಳಿಯ ಸಮೀಪ ಎರಡು ಚಿರತೆಗಳನ್ನು ಕಂಡವರು ಬೆಚ್ಚಿಬಿದ್ದಿದ್ದಾರೆ. ಸಂಜೆಯ ವೇಳೆ ಕೆಲಸದಿಂದ ಬರುತ್ತಿದ್ದ ವ್ಯಕ್ತಿಯೊಬ್ಬರು ಚಿರತೆಯನ್ನು ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಇದರಿಂದ ಜನರು ಭಯಭೀತರಾಗಿದ್ದು, ನಸುಕಿನ ಮತ್ತು ರಾತ್ರಿಯ ವೇಳೆ ಮನೆಯಿಂದ ಹೊರಬೀಳಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕತ್ತಲು ಆವರಿಸುತ್ತಿದ್ದಂತೆ ಜನರು ಭೀತಿಯಿಂದ ಬಾಗಿಲು ಮುಚ್ಚಿ ಮನೆಯೊಳಗೆ ಸೇರಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಕತ್ತಲಾದ ಬಳಿಕ ಮಕ್ಕಳು ಮನೆಯಂಗಳಕ್ಕೆ ಬರಲು ಭಯಪಡುತ್ತಾರೆ. ರಾತ್ರಿ ಹೊತ್ತಿನಲ್ಲಿ ನಾಯಿಗಳನ್ನು ಮನೆಯೊಳಗೇ ಕಟ್ಟಬೇಕಾಗುತ್ತದೆ. ಈ ಘಟನೆಗಳು ಮರೆಯುವ ಮುನ್ನವೇ ನಸುಕಿನ ಜಾವ ತೋಕೂರು ಸಮೀಪದ ಲೈಟ್ ಹೌಸ್ ಬಳಿ ಗುಡ್ಡದ ಮಧ್ಯೆ ಹಾದುಹೋಗುವ ರಸ್ತೆಯಲ್ಲಿ ಚಿರತೆ ನಿರಾತಂಕವಾಗಿ ಮಲಗಿರುವುದನ್ನು ಸ್ಥಳೀಯರೊಬ್ಬರು ಕಂಡಿದ್ದಾರೆ. ತುರ್ತು ಕೆಲಸದ ನಿಮಿತ್ತ ಹೊರಟಿದ್ದ ಅವರು ರಸ್ತೆಯಲ್ಲಿ ಚಿರತೆಯನ್ನು ಕಂಡು ಕೆಲವು ನಿಮಿಷಗಳ ಕಾಲ ಟಾರ್ಚ್ ಬೆಳಕನ್ನು ಹಾಯಿಸಿ ನಿಂತಿದ್ದು ಬಳಿಕ ಚಿರತೆ ರಸ್ತೆಯಿಂದ ಪಕ್ಕದಲ್ಲೇ ಇರುವ ಪೊದೆಗಳೆಡೆ ಸಾಗಿರುವುದನ್ನು ಕಂಡಿದ್ದಾರೆ. ಗುಡ್ಡದಲ್ಲಿ ಚಿರತೆ ಅಡಗಿ ಕುಳಿತು ದಾಳಿ ಮಾಡಬಹುದು ಎಂಬ ಭಯದಿಂದಲೇ ಮುಂದಕ್ಕೆ ಸಾಗಿದ ಅವರು ಮತ್ತೆ ಹಿಂದಕ್ಕೆ ತಿರುಗಿ ಟಾರ್ಚ್ ಬೆಳಕನ್ನು ಹಾಯಿಸಿದಾಗ ಚಿರತೆ ಮತ್ತೆ ಅದೇ ಜಾಗದಲ್ಲಿ ಬಂದು ನಿಂತಿದ್ದನ್ನು ನೋಡಿರುವ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ತೋಕೂರು, ಬೆಳ್ಳಾಯರು, ಕಲ್ಲಾಪು ಪರಿಸರದಲ್ಲಿ ಕಾಡು ಪ್ರದೇಶವಿದ್ದು, ಇಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ಹುಲಿ ಚಿರತೆಗಳು ಆಗಾಗ ಕಾಣಿಸಿಕೊಂಡಿದ್ದು ಕ್ರಮೇಣ ಕಡಿಮೆಯಾಗಿತ್ತು. ಹಿಂದೆ ಕೃಷಿಕರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಪ್ರಾಣಿಗಳು ಹಾನಿಯುಂಟು ಮಾಡುತ್ತಿದ್ದವು. ಆದರೆ ನಂತರದ ದಿನಗಳಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಬಂದಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ನಾಗರಿಕರು ಆತಂಕಗೊಂಡಿದ್ದಾರೆ. ಈಗ ದೊಣ್ಣೆ ಮತ್ತು ಕುಡುಗೋಲುಗಳನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ. ಚಿರತೆಗಳು ಗ್ರಾಮದ ಸುತ್ತಮುತ್ತ ಅಡ್ಡಾಡುತ್ತಿರುವುದರಿಂದ ಯಾವ ಸಂದರ್ಭದಲ್ಲಿ ಚಿರತೆಗಳು ದಾಳಿ ಮಾಡುತ್ತವೋ ಅನ್ನೋ ಭಯ ಗ್ರಾಮಸ್ಥರನ್ನು ಕಾಡುತ್ತಿದೆ. ಚಿರತೆಗಳ ಹಾವಳಿ ಹೆಚ್ಚಾಗಿರುವುದರಿಂದ ಜಾನುವಾರುಗಳನ್ನು ಇಲ್ಲಿ ಮೇಯಲು ಬಿಡುತ್ತಿಲ್ಲ. ಈ ಬಗ್ಗೆ ಈಗಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಹಳೆಯಂಗಡಿ ಸಮೀಪದ ಬೆಳ್ಳಾಯರು, ಕಲ್ಲಾಪು, ಲೈಟ್‌ಹೌಸ್, ಪಡುಪಣಂಬೂರು ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಗೂ ಗ್ರಾಮಸ್ಥರು ದೂರಿನ ಹಿನ್ನೆಲೆ ಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಹಳೆಯಂಗಡಿ ರೈಲ್ವೇ ಹಳಿ ಪಕ್ಕದ ಗುಡ್ಡದಲ್ಲಿ ದೊಡ್ಡದಾದ ಬೋನನ್ನು ತಂದು ಇರಿಸಿದ್ದಾರೆ. ಸ್ಥಳೀಯ ಜನರು ಆತಂಕದ ಸ್ಥಿತಿಯಲ್ಲಿರುವಾಗ ಅರಣ್ಯ ಇಲಾಖೆಯ ಅಧಿಕಾರಿ ಗಳು ಬೋನಿನೊಳಗೆ ನಾಯಿಯನ್ನು ಕೂಡಿ ಹಾಕಿ ಚಿರತೆ ಹಿಡಿಯಲು ಕಸರತ್ತು ಆರಂಭಿಸಿದ್ದಾರೆ.
ಇಲ್ಲಿ ಬೋನು ತಂದಿಟ್ಟು ವಾರ ಕಳೆದರೂ ಚಿರತೆ ಮಾತ್ರ ಬಂಧಿಯಾಗಿಲ್ಲ. ಇದರಿಂದ ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪರಿಸರದ ಜನರು ಚಿರತೆಯ ಬಗ್ಗೆಯೇ ಚರ್ಚಿಸುತ್ತಿದ್ದು ನಿತ್ಯ ಹೋಗಿಬರುವ ದಾರಿಯನ್ನೂ ಬದಲಾಯಿಸಿದ್ದಾರೆ. ಮಕ್ಕಳು ಮನೆಯಿಂದ ಹೊರಗಡೆ ಆಟವಾಡಲು ಮೈದಾನಕ್ಕೆ ತೆರಳುವುದಕ್ಕೂ ಮನೆ ಮಂದಿ ಅನುಮತಿ ನೀಡುತ್ತಿಲ್ಲ. ಮಹಿಳೆಯರು ಮಧ್ಯಾಹ್ನದ ವೇಳೆಯಲ್ಲೂ ಮನೆಯಿಂದ ಹೊರ ಹೋಗುತ್ತಿಲ್ಲ. ಪರಿಸರದಲ್ಲಿ ಚಿರತೆ ಕಂಡದ್ದಕ್ಕಿಂತ ಈ ಕುರಿತ ಗಾಳಿಸುದ್ದಿಯೇ ಕಾರು ಬಾರು ನಡೆಸುತ್ತಿರುವುದು ಜನರ ಭಯವನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ. ಚಿರತೆ ಹಾವಳಿಯಿಂದಾಗಿ ಬೆಳ್ಳಾಯರು, ತೋಕೂರು ಪರಿಸರದ ಹತ್ತಾರು ನಾಯಿಗಳು ಕಾಣೆಯಾಗಿವೆ. ಅವುಗಳೆಲ್ಲ ಚಿರತೆ ಬಾಯಿಗೆ ತುತ್ತಾಗಿದೆ ಎನ್ನುವುದು ಜನರ ಮಾತುಗಳು.
ಚಿರತೆ ಹಿಡಿಯುವ ಅರಣ್ಯ ಇಲಾಖೆಯ ಮೊದಲ ಪ್ರಯತ್ನ ಫಲ ನೀಡುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಬೋನು ಬಿಟ್ಟು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸಲಿ ಎನ್ನುವುದು ಈ ಭಾಗದ ಗ್ರಾಮಸ್ಥರ ಬೇಡಿಕೆಯೂ ಆಗಿದೆ. ಚಿರತೆ ಭಯದಿಂದ ಕಂಗೆಟ್ಟಿರುವ ಗ್ರಾಮಸ್ಥರು ಕತ್ತಲಲ್ಲಿ ಬೀದಿನಾಯಿಗಳನ್ನು ಕಂಡರೂ ಬೆಚ್ಚಿಬೀಳುತ್ತಿದ್ದು ಅರಣ್ಯ ಇಲಾಖೆ ಸಕಾಲದಲ್ಲಿ ಗ್ರಾಮಸ್ಥರ ಭಯವನ್ನು ನಿವಾರಿಸುವ ಪ್ರಯತ್ನವನ್ನು ಮಾಡಬೇಕಿದೆ.

Kinnigoli 12111307

ಎರಡು ವಾರದ ಹಿಂದೆ ಬಳಕುಂಜೆ ಸಮೀಪದ ಕೊಲ್ಲೂರು ಪದವಿನಲ್ಲಿ ಚಿರತೆ ಹಾವಳಿ ಕಂಡು ಬಂದಿತ್ತು. ರಾತ್ರಿ ಗ್ರಾಮಸ್ಥರ ಮನೆಯಲ್ಲಿದ್ದ ಸಾಕು ನಾಯಿಗಳನ್ನು ಕೊಂದು ತಿಂದಿದೆ. ಚಿರತೆ ಹಾವಳಿ ಗ್ರಾಮಸ್ಥರನ್ನು ನಿದ್ದೆಗೆಡಿಸಿದೆ. ಈ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ನೀಡಲಾಗಿತ್ತು. ಅರಣ್ಯ ಇಲಾಖೆಯವರು ಕೊಲ್ಲೂರಿನಲ್ಲಿ ಚಿರತೆ ಹಿಡಿಯುವ ಬೋನು ಇಟ್ಟಿದ್ದಾರೆ. ಮತ್ತೆ ಅದರ ಗೋಜಿಗೆ ಬಂದಿಲ್ಲ ಎಂದು ಗಂಗಾಧರ ಪೂಜಾರಿ ತಿಳಿಸಿದ್ದಾರೆ.
ಎರಡು ವಾರದ ಹಿಂದೆ ಕರುವೊಂದು ಚಿರತೆಗೆ ಆಹಾರದ ಘಟನೆ ಮುಂಡ್ಕೂರು ಗ್ರಾಮದ ಕಜೆ ದಡ್ಡು ಎಂಬಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ನಾರಾಯಣ ಮೂಲ್ಯ ಎಂಬವರ ಹಟ್ಟಿಯಲ್ಲಿ ಕಟ್ಟಿ ಹಾಕಲಾಗಿದ್ದ ದನದ ಕರುವನ್ನು ಮನೆಮಂದಿಯ ಕಣ್ಣೆದುರೇ ಹೊತ್ತೂಯ್ದಿದೆ. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಭೀತಿ ಹುಟ್ಟಿಸಿದೆ. ಮನೆಯ ಹತ್ತಿರದಲ್ಲಿಯೇ ಇರುವ ಮರ, ಪೊದೆಗಳೆಡೆಯಲ್ಲಿ ಮಲಗುವ ಚಿರತೆಗಳು ಕೋಳಿ, ನಾಯಿ ಹಾಗೂ ಕರುಗಳನ್ನು ಒಯ್ಯುವುದು ಸಾಮಾನ್ಯವಾಗಿದೆ.
ಬೋಳ, ಕಜೆ ದಡ್ಡು ಪ್ರದೇಶದಲ್ಲಿ ಹಿಂದಿನಿಂದಲೂ ಚಿರತೆ ಹಾಗೂ ಹುಲಿ ತಿರುಗಾಡುತ್ತಿದ್ದು, ದನ ಕರುಗಳನ್ನು ಬಲಿ ಪಡೆಯುತ್ತಿದೆ. ಇದರಿಂದ ಪರಿಸರದ ಜನರು ರಾತ್ರಿ ಸಂಚಾರವನ್ನೇ ಸ್ಥಗಿತಗೊಳಿಸಿದ್ದಾರೆ. ಶಾಲಾ ಮಕ್ಕಳು ಶಾಲೆಗೆ ಹೋಗಲು ಹೆದರುತ್ತಿದ್ದಾರೆ. ಚಿರತೆ ಹಾವಳಿ ಮಿತಿಮೀರಿ ಇತ್ತೀಚೆಗೆ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡುವವರೆಗೂ ಮುಂದುವರಿದಿತ್ತು. ಚಿರತೆ ಹಲವು ಮನೆಗಳ ನಾಯಿ ಮತ್ತಿತರ ಸಾಕು ಪ್ರಾಣಿಗಳನ್ನು ತಿಂದಿದೆ.
ಚಿರತೆಗಳು ಹಳೆಯಂಗಡಿ, ಇಂದಿರಾನಗರ ತೋಕೂರು, ಬೆಳ್ಳಾಯರು, ಪಡುಪಣಂಬೂರು, ಕಲ್ಲಾಪು, ಕೆಂಚನಕೆರೆ ಶಿಮಂತೂರು ಬಳಕುಂಜೆ ಸಮೀಪದ ಕೊಲ್ಲೂರು ಪದವು ಶಾಂತಿಪಲ್ಕೆ ಸಂಕಲಕರಿಯ ಮುಂಡ್ಕೂರು ಬೋಳ ಕಜೆ ದಡ್ಡು ಪ್ರದೇಶಗಳನ್ನು ತಮ್ಮ ಬೇಟೆಗಾಗಿ ಮಾರ್ಗಸೂಚಿಯಾಗಿ ಕಂಡುಕೊಳ್ಳುತ್ತಿದೆ ಎಂದು ಹಿರಿಯರ ತರ್ಕ ಯಾಕೆಂದರೆ ಈ ಪ್ರದೇಶಗಳಲ್ಲಿ ಕಾಡು ಪ್ರದೇಶ ಅಥವ ಮರಗಿಡಗಳು ಯಥೇಷ್ಟವಾಗಿರುವುದರಿಂದ ಅವುಗಳಿಗೆ ಮಾನವರ ಕಣ್ಣು ತಪ್ಪಿಸಿ ಲೀಲಾಜಾಲವಾಗಿ ಆರಾಮವಾಗಿ ಅಡ್ಡಾಡುವ ನೆಲೆಯಾದಂತಿದೆ.
ಚಿರತೆಗಳು ದಿನವಿಡೀ ಎಲ್ಲಿಯೂ ತೆರಳದೆ ಕಾಲ ಕಳೆಯುತ್ತದೆ.ಮುಸ್ಸಂಜೆ ಮತ್ತು ರಾತ್ರಿ ಸಮಯದಲ್ಲಿ ಹೆಚ್ಚು ಚುರುಕಾಗಿ ಆಹಾರವರಸುತ್ತ ಸಾಗುತ್ತದೆ ಬೇಸಿಗೆ ಸಮಯದಲ್ಲಿ ಹುಲ್ಲುಗಾವಲಿನಲ್ಲಿ,ಜನವಸತಿ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತದೆ. ಅಲ್ಲಿ ಆಹಾರದ ಕೊರತೆ ಉಂಟಾದಾಗ ಮಾತ್ರ ಅವುಗಳು ನಾಡಿಗಿಳಿಯುತ್ತವೆ. ಹೀಗೆ ನಾಡಿಗೆ ಬರುವ ಚಿರತೆಗಳ ಮೊದಲ ಬೇಟೆಯೇ ಸುಲಭವಾಗಿ ಸಿಗುವ ನಾಯಿ ಮತ್ತಿತರ ಸಾಕುಪ್ರಾಣಿಗಳು ನಂತರ ಇತರ ಪ್ರಾಣಿಗಳ ಮೇಲೆ ದಾಳಿ ನಡೆಸುತ್ತವೆ. ಚಿರತೆಗಳು ನಿಖರವಾಗಿ ಅಡ್ಡಾಡುವ ಜಾಗ ತಿಳಿದರೆ ಅದಷ್ಟು ಬೇಗ ಹಿಡಿಯುವ ವ್ಯವಸ್ಥೆ ಮಾಡಬಹುದು. ಕಾಡು ನಾಡಾದಾಗ ಮಾತ್ರ ಇಂತಹ ಸಮಸ್ಯೆಗಳು ತಲೆದೋರುತ್ತವೆ. ಎನ್ನುತ್ತಾರೆ ಪ್ರಾಣಿತಜ್ಞರು.

ಒಟ್ಟಿನಲ್ಲಿ ಈ ಪರಿಸರಗಳ ಏಲ್ಲಾ ಜನರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನಸಾಮಾನ್ಯರ ಈ ಸಮಸ್ಯೆಗಳಿಗೆ ತುರ್ತು ಸ್ಪಂದನೆ ನೀಡಬೇಕಾಗಿದೆ ಅಲ್ಲದೆ ಜನರು ಊಹಾಪೋಹಗಳಿಗೆ ಎಡೆಕೊಡದೆ ಸುಳಿವು ಕಂಡಲ್ಲಿ ತಕ್ಷಣ ಸಂಬಂಧಿಸಿದ ಇಲಾಖೆಗೆ ತಿಳಿಸಬೇಕಾಗಿದೆ.

ಹಳೆಯಂಗಡಿ ಸುತ್ತಮುತ್ತ ತಲೆದೋರಿರುವ ಚಿರತೆ ಸಮಸ್ಯೆಯನ್ನು ಬಗೆಹರಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆಸುತ್ತಿದೆ. ದೂರು ಬಂದ ಕೂಡಲೇ ನಿರ್ದಿಷ್ಟ ಸ್ಥಳದಲ್ಲಿ ಬೋನನ್ನು ತಂದು ಇಡಲಾಗಿದೆ. ಆ ಭಾಗದಲ್ಲಿ ಚಿರತೆ ಓಡಾಟ ನಡೆಸದಿದ್ದರೆ ಮುಂದೆ ಜಾಗವನ್ನು ಬದಲಾಯಿಸಿ ಬೋನು ಇಡಲಾಗುವುದು. ಚಿರತೆ ಪ್ರಾಣಿಗಳ ಮೇಲೆ ಆಹಾರಕ್ಕಾಗಿ ದಾಳಿ ನಡೆಸುವ ಮೃಗವಾಗಿದ್ದು ಚಿರತೆ ಹಿಡಿಯಲು ಬೇರೆ ಅವಶ್ಯ ಕ್ರಮಗಳ ಬಗ್ಗೆಯೂ ಮುಂದಿನ ದಿನಗಳಲ್ಲಿ ಚಿಂತಿಸಲಾಗುವುದು. ಗ್ರಾಮಸ್ಥರು ಸಾಧ್ಯವಾದಷ್ಟು ಚಿರತೆ ಹಾವಳಿಯಿಂದ ತಪ್ಪಿಸಿಕೊಳ್ಳಲು ಸ್ವರಕ್ಷಣೆಯನ್ನು ಮಾಡಬೇಕಾಗಿದೆ 
ಪರಮೇಶ್ವರ,
ಅರಣ್ಯಾಧಿಕಾರಿ

 

Comments

comments

Comments are closed.

Read previous post:
OLYMPUS DIGITAL CAMERA
ಮೂಲ್ಕಿ ತಾಲ್ಲೂಕು ರಚನೆಗೆ ವಿಳಂಬ ; ಆಕ್ಷೇಪ

Narendra Kerekadu ಮೂಲ್ಕಿ; ಇಲ್ಲಿನ ಬಹುಕಾಲದ ಬೇಡಿಕೆಯಾದ ಮೂಲ್ಕಿ ತಾಲ್ಲೂಕು ರಚನೆಯ ಬಗ್ಗೆ ನಾಗರಿಕರು ವಿವಿಧ ರೀತಿಯಲ್ಲಿ ಹೋರಾಟ ನಡೆಸಿದಾಗ ಚುನಾವಣೆಯ ನಂತರ ಸರ್ಕಾರ ರಚನೆಯ ನಂತರ ವಿಶೇಷ...

Close