ಮೂಲ್ಕಿ ಪಿಸಿಆರ್ ಇಲ್ಲದೇ ಗಸ್ತಿಗೆ ತೊಡಕು…?

Narendra Kerekadu
ಮೂಲ್ಕಿ: ಕಳೆದ ಜೂನ್ ತಿಂಗಳಿನಿಂದ ಈವರೆಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿನ ವಿಶೇಷ ಗಸ್ತು ಪಡೆಯಾದ ಪೊಲೀಸ್ ಕಂಟ್ರೋಲ್ ರೂಮ್ (ಪಿಸಿಆರ್) ವಾಹನ ಇಲ್ಲದೇ ಮೂಲ್ಕಿ ವ್ಯಾಪ್ತಿಯಲ್ಲಿ ವಿಶೇಷ ಗಸ್ತು ನಡೆಸಲು ತೊಡಕಾಗಿದೆ ಎಂದು ಮೂಲ್ಕಿ ಪೊಲೀಸ್ ಮೂಲಗಳು ತಿಳಿಸಿದೆ.
ಮಂಗಳೂರು ಕಮಿಷನರೇಟ್ ಆದ ನಂತರ ವಿಶೇಷವಾಗಿ ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲಿ ಹಗಲು ರಾತ್ರಿ ಸಮಯದಲ್ಲಿ ಗಸ್ತು ತಿರುಗಲು ಬಳಸುತ್ತಿರುವ ಈ ಪಿಸಿಆರ್ ವಾಹನವನ್ನು ಮೂಲ್ಕಿ ಠಾಣಾ ವ್ಯಾಪ್ತಿಗೂ ಮಂಜೂರಾಗಿತ್ತು. ಅದರಂತೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ೬೬ ಮತ್ತು ರಾಜ್ಯ ಹೆದ್ದಾರಿಗಳ ನಡುವೆ ಸದಾ ಸಂಚರಿಸುತ್ತಾ ವಿಶೇಷ ಗಸ್ತನ್ನು ಸಹ ನೀಡಿತ್ತು.
ಮೂಲ್ಕಿಗೆ ನೀಡಿದ ಪಿಸಿಆರ್ ವಾಹನ ಕಳೆದ ಜೂನ್ 18ರಂದು ಬೆಳಿಗ್ಗೆ ರಾಜ್ಯದ ಗೃಹ ಮಂತ್ರಿಗಳ ಜಿಲ್ಲಾ ಪ್ರಥಮ ಭೇಟಿಯ ಸಂದರ್ಭದಲ್ಲಿ ಎಸ್ಕಾರ್ಟ್ ನೀಡಲು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬರುತ್ತಿದ್ದಾಗ ಪಣಂಬೂರು ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಬಡಿದು ಎದುರಿನಿಂದ ಬರುತ್ತಿದ್ದ ಸರಕು ತುಂಬಿದ ಲಾರಿಗೆ ಬಡಿದು ಪಿಸಿಆರ್ ವಾಹನ ಸಂಪೂರ್ಣವಾಗಿ ನುಜ್ಜುಗುಜ್ಜಾದರೆ ಅಪಘಾತದ ತೀವ್ರತೆಯಿಂದ ಲಾರಿಯೂ ಸಹ ರಸ್ತೆ ಬದಿಯ ಕಂದಕಕ್ಕೆ ಉರುಳಿತ್ತು ಅದನ್ನು ತೆಗೆಯಲು ಕೊನೆಗೆ ಕ್ರೇನನ್ನೇ ತರಬೇಕಾಯಿತು.
ಈ ಪಿಸಿಆರ್ ವಾಹನವನ್ನು ಚಲಾಯಿಸುತ್ತಿದ್ದ ಮೂಲ್ಕಿ ಪೊಲೀಸ್ ಸಿಬ್ಬಂದಿ ಮೋಹನ್‌ಕುಮಾರ್ ತೀವ್ರ ಗಾಯಗೊಂಡು ನಾಲ್ಕು ತಿಂಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆದರೆ ಅಪಘಾತಕ್ಕೀಡಾದ ಪಿಸಿಆರ್ ವಾಹನ ಇನ್ನೂ ಗ್ಯಾರೇಜಿನಲ್ಲಿಯೇ ಕೊಳೆಯುತ್ತಿದೆ.
ಅಪಘಾತ ನಡೆದು ಐದು ತಿಂಗಳಾದರು ಮೂಲ್ಕಿ ಠಾಣಾ ವ್ಯಾಪ್ತಿಗೆ ಪಿಸಿಆರ್‌ನ ಬಗ್ಗೆ ಪರ್ಯಾಯ ವ್ಯವಸ್ಥೆ ಆಗಿಲ್ಲ, ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚುವರಿ ಪಿಸಿಆರ್ ವಾಹನಗಳು ಇಲ್ಲದಿರುವುದರಿಂದ ಅಪಘಾತದಲ್ಲಿ ಜಖಂಗೊಂಡಿರುವ ಪಿಸಿಆರ್ ವಾಹನ ದುರಸ್ಥಿ ಆಗುವುದು ಕನಸಿನ ಮಾತು ಹೇಳುತ್ತಿರುವ ಪೊಲೀಸ್ ವಲಯ ಇದರಿಂದ ಮೂಲ್ಕಿ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರಿಗೆ ವಿಶೇಷ ಗಸ್ತು ನೀಡುವುದಕ್ಕೂ ತೊಡಕಾಗಿದೆ ಎಂದು ಹೇಳುತ್ತಾರೆ.
ಈಗ ಗಸ್ತಿಗಾಗಿ ಬಳಸುತ್ತಿರುವ ಸಬ್‌ಇನ್ಸ್‌ಪೆಕ್ಟರ್‌ರವರ ವಾಹನವು ಸಹ ತಿಂಗಳಿಗೆ ಹತ್ತು ಬಾರಿ ಗ್ಯಾರೇಜಿನತ್ತಲೇ ಸಾಗುತ್ತಿದ್ದು ಹಳೇ ಕಾಲದ ಈ ವಾಹನವು ಕೆಲವೊಮ್ಮೆ ದಾರಿ ಮಧ್ಯೆದಲ್ಲಿಯೇ ಕೆಟ್ಟು ನಿಂತ ಉದಾಹರಣೆಯೂ ಇದೆ. ಇನ್ನು ಇನ್ಸ್‌ಪೆಕ್ಟರ್‌ಗೆ ನೀಡಿರುವ ವಾಹನವು ಸುಸ್ಥಿತಿಯಲ್ಲಿದ್ದರು ಎಲ್ಲಕ್ಕೂ ಇದನ್ನೆ ಬಳಸಲಾಗುತ್ತಿದೆ ಕೆಲವೊಮ್ಮೆ ಮಂಗಳೂರಿಗೆ ಎರಡೂ ವಾಹನವು ತೆರಳಿದರೆ ಮೂಲ್ಕಿಯಲ್ಕಿ ವಾಹನಗಳೇ ಇಲ್ಲ.
ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿ, ಕಿನ್ನಿಗೋಳಿ ಪ್ರದೇಶದಲ್ಲಿ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿದ್ದ ಪ್ರಕರಣ, ಸಮಯ ಮೀರಿ ನಡೆಸುತ್ತಿರುವ ಕೋಳಿ ಅಂಕಗಳು, ಕಿನ್ನಿಗೋಳಿ ಪ್ರದೇಶದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ದಟ್ಟಣೆ, ಹೆದ್ದಾರಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಿಂದ ಸಂಭವಿಸುವ ಅಪಘಾತಗಳು, ಬಪ್ಪನಾಡು ಚೆಕ್ ಪೋಸ್ಟ್‌ನಲ್ಲಿ ಸಾಗುತ್ತಿರುವ ಅಕ್ರಮ ಗೋ ಸಾಗಾಟ, ಗೂಡಂಗಡಿಗಳಲ್ಲೂ ಸಿಗುವ ಮಧ್ಯದ ಬಾಟಲಿ, ಗುಡ್ಡೆ ಪ್ರದೇಶದಲ್ಲಿ ನಡೆಸುವ ಅಕ್ರಮ ಜೂಜಾಟ, ಗ್ರಾಮೀಣ ಭಾಗದಲ್ಲಿ ಕಂಡು ಬಂದಿರುವ ಚಿರತೆ ಹಾವಳಿಗೆ ಕಡಿವಾಣ ಹಾಕಲು ಜೊತೆಗೆ ಕ್ಷೇತ್ರದ ಶಾಸಕ ಹಾಗೂ ಸಚಿವರಾದ ಕೆ.ಅಭಯಚಂದ್ರ ಜೈನ್‌ರ ಸಹಿತ ಬಜಪೆ ವಿಮಾನ ನಿಲ್ಲಾಣಕ್ಕೆ ತೆರಳುವ ಇನ್ನಿತರ ವಿಶೇಷ ಪ್ರತಿನಿಧಿಗಳಿಗೆ ಎಸ್ಕಾರ್ಟ್ ಇವೆಲ್ಲಕ್ಕೂ ಪಿಸಿಆರ್ ವಾಹನದ ಅಗತ್ಯವಿದೆ.
ಕಳೆದ ತಿಂಗಳು ಮೂಲ್ಕಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಜಿಲ್ಲಾ ಆಯುಕ್ತ ಮನೀಷ್ ಖರ್ಬಿಕರ್‌ರವರಲ್ಲಿಯೂ ಈ ಬಗ್ಗೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯ್ಕ ಹಾಗೂ ಸಹ ನಿರೀಕ್ಷಕ ಸೋಮಯ್ಯರವರು ಮನವಿ ಮಾಡಿಕೊಂಡಿದ್ದು ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Kinnigoli 23111302 Kinnigoli 23111303 Kinnigoli 23111304

Comments

comments

Comments are closed.

Read previous post:
Kinnigoli 23111301
ಪಡುಪಣಂಬೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

Yogeesh Pavanje ಹಳೆಯಂಗಡಿ: ಶಾಲಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯುವುದರಿಂದ ಮಕ್ಕಳಿಗೆ ಎಳೆವೆಯಲ್ಲಿಯೆ ಪ್ರೋತ್ಸಾಹ ಸಿಕ್ಕಾಗ ಮೊಗ್ಗಗಾಗಿದ್ದ ಪ್ರತಿಭೆಗಳು ಹೂವಾಗಿ ಅರಳ ಬಲ್ಲದು ವಿಧ್ಯಾರ್ಥಿಗಳಿಗೆ ಹೆತ್ತವರಿಂದ...

Close