ದೊಡ್ಡ ಗಾತ್ರದ ಜಲ್ಲಿಕ್ರಷರ್ ವಿರುದ್ಧ ಆಕ್ರೋಶ

ಕಿನ್ನಿಗೋಳಿ : ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ ಸಂಜಯ್ ಎಂಬವರ ಕಲ್ಲಿಕೊರೆಗೆ ಕಳೆದ ಎರಡು ದಿನಗಳ ಹಿಂದೆ ಬೃಹತ್ ಗಾತ್ರದ ಮೊಬಲ್ ಕ್ರಷರ್ ಹೇರಿದ ವಾಹನವೊಂದು ಬಂದಾಗ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿ ವಾಹನ ನಿಲ್ಲಿಸಿದ್ದರಿಂದ ಗುರುವಾರ ಬೆಳಿಗ್ಗೆ ಪಂಚಾಯಿತಿ ಆಡಳಿತವು ಪಂಚಾಯಿತಿ ವ್ಯಾಪ್ತಿಯ ಕೋರೆ ಮಾಲಕರ ಹಾಗೂ ಸ್ಥಳೀಯ ಗ್ರಾಮಸ್ಥರ ತುರ್ತು ಸಭೆ ಕರೆದಿತ್ತು.
ಕಳೆದ ಹಲವಾರು ವರ್ಷಗಳಿಂದ ಐಕಳ ಗ್ರಾಮದಲ್ಲಿ 12 ಕಲ್ಲಿನ ಕೋರೆಗಳು ಸಣ್ಣ ಕ್ರಶರ್‌ಗಳನ್ನು ಬಳಸಿ ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸಿ ಸಣ್ಣ ಪ್ರಮಾಣದ ಸ್ಫೋಟ ನಡೆಸಿ ಜಲ್ಲಿ ಮಾಡಲಾಗುತ್ತಿತ್ತು. ಈಗ ಒಂದು ಕೋರೆಗೆ ದೊಡ್ಡ ಮೊಬಲ್ ಕ್ರಷರ್ ಯಂತ್ರ ಬಂದಿದ್ದು ನಿತ್ಯವೂ ಬೃಹತ್ ಪ್ರಮಾಣದಲ್ಲಿ ಲೋಡ್‌ಗಟ್ಟಲೆ ಜಲ್ಲಿ, ಕಲ್ಲು ತಯಾರಿಕೆ ನಡೆಯುವ ಸಂಭವವಿದ್ದು ಅಲ್ಲದೆ ನಿರಂತರ ಲಾರಿಗಳ ಸಂಚಾರದ ಒತ್ತಡದಿಂದ ರಸ್ತೆ ಸಂಪೂರ್ಣವಾಗಿ ಹದಗೆಡುತ್ತದೆ ಇದರಿಂದ ನಿವಾಸಿಗಳಿಗೆ ತೊಂದರೆಯ ಜೊತೆಗೆ ಆತಂಕ ಎದುರಾಗಿದೆ ದೊಡ್ಡ ಕ್ರಷರ್‌ನ ಆಗಮನದಿಂದ ಪರಿಸರಕ್ಕೆ ಹಾನಿಯಾಗುವುದನ್ನು ಮನಗಂಡ ಸ್ಥಳೀಯರು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು.
ಕೊನೆಗೆ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಣ್ಣ ಕೋರೆಗೆ ಪರವಾನಿಗೆ ಮಾತ್ರ ನೀಡಿದ್ದು, ಈ ವರೆಗೆ ದೊಡ್ಡ ಕ್ರಷರ್‌ಗೆ ಪರವಾನಿಗೆ ನೀಡಿಲ್ಲ. ಆದುದರಿಂದಿಂದ ಗ್ರಾಮಸ್ಥರ ಮನವಿ ಮೇರೆಗೆ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 12 ಕಲ್ಲಿನ ಕೋರೆಗಳಿಗೆ ಉದ್ದಿಮೆ ಪರವಾನಿಗೆಯನ್ನು ತತ್ಕಾಲಿಕ ನೆಲೆಯಲ್ಲಿ ತೆಡೆಹಿಡಿಯಲಾಗುವುದು ಎಂದು ಐಕಳ ಗ್ರಾಮ ಪಂಚಾಯತ್‌ನಲ್ಲಿ ನಡೆದ ವಿಶೇಷ ಸಭೆಯಲ್ಲಿ ನಿರ್ಣಯಿಸಲಾಯಿತು.
ಪ್ರಸ್ತುತ ಎಲ್ಲಾ ಕೋರೆಗಳಿಗೂ ಮುಂದಿನ ಮಾರ್ಚ್‌ವರೆಗೆ ಸಣ್ಣ ಜಲ್ಲಿ ಕ್ರಶರ್ ಪರವಾನಿಗೆ ಲೈಸೆನ್ಸ್ ಅವಧಿ ಇದ್ದರೂ ಅವರ ಅನುಮತಿ ಜನವರಿಯಲ್ಲಿಯೇ ಮೊಟಕುಗೊಳಿಸಿದರೆ ಪಂಚಾಯತ್ ವಿರುದ್ಧ ಅವರು ನ್ಯಾಯಾಲಯಕ್ಕೆ ಹೋಗಬಹುದು ಎಂಬ ಮಾತು ಸಹ ಸಭೆಯಲ್ಲಿ ಕೇಳಿ ಬಂದಿತು.

ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅದ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಿವಾಕರ ಚೌಟ, ಪಿ. ಡಿ. ಓ ಪ್ರೇಮ್ ಸಿಂಗ್, ಕಾರ್ಯದರ್ಶಿ ರವೀಂದ್ರ ಪೈ , ಮಾಜಿ ಅಧ್ಯಕ್ಷ ಯೋಗೀಶ್ ಕೋಟ್ಯಾನ್, ಗ್ರಾಮಸ್ಥರಾದ ನ್ಯಾಯವಾದಿ ಐಕಳ ಮುರಳೀಧರ ಶೆಟ್ಟಿ, ಸ್ವರಾಜ್ ಶೆಟ್ಟಿ , ಐಕಳ ದೇವಿ ಪ್ರಸಾದ್ ಶೆಟ್ಟಿ , ಕೃಷ್ಣ ಮಾರ್ಲ, ಐಕಳ ಜಯಪಾಲ ಶೆಟ್ಟಿ, ರಾಬರ್ಟ್ ರೋಸಾರಿಯೋ, ಕಲ್ಲಿನಕೋರೆಗಳ ಮಾಲೀಕರು ಹಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli 02011408 Kinnigoli 02011409 Kinnigoli 02011410 Kinnigoli 02011411

Comments

comments

Comments are closed.

Read previous post:
Kinnigoli 02011405
ಬೆಂಕಿಗೆ ಕ್ಯಾಂಟಿನ್ ಭಸ್ಮ

ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಮುಖ್ಯ ರಸ್ತೆಯಲ್ಲಿರುವ ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಪಕ್ಕದ ಕ್ಯಾಂಟಿನ್ ಹಾಗೂ ಬೇಕರಿಗೆ ಗುರುವಾರ ಮುಂಜಾನೆ 4ಗಂಟೆಯ ಹೊತ್ತಿಗೆ ಬೆಂಕಿ ತಗುಲಿ ಕ್ಯಾಂಟಿನ್...

Close